
ಬೆಂಗಳೂರು: ನಟ ಯಶ್ ಅವರು ಸದ್ಯ ರಾಮಾಯಣ ಸಿನಿಮಾ (Ramayana Movie) ಹವಾ ಸೃಷ್ಟಿಸುತ್ತಿದ್ದಾರೆ. ಇದೇ ವೇಳೆ ಇವರ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಯಶ್ ಫ್ಯಾನ್ಸ್‌ಗೆ ಇದು ಸಕತ್ ಖುಷಿ ಕೊಟ್ಟಿದೆ. ಅದೇನೆಂದರೆ, 2011ರಲ್ಲಿ ಬಿಡುಗಡೆಯಾಗಿದ್ದ ಯಶ್ ನಟನೆಯ ಕಿರಾತಕ ಸಿನಿಮಾದ ಸೀಕ್ವೆಲ್ ಮಾಡುವ ಆಸೆ ವ್ಯಕ್ತಪಡಿಸಿದ್ದಾರೆ ಯಶ್. ರಾಮಾಯಣ ಸಿನಿಮಾದ ಪ್ರಚಾರದ ಸಂದರ್ಶನದಲ್ಲಿ, ಈ ವಿಷಯವನ್ನು ಖುದ್ದು ನಟ ಯಶ್ ಅವರೇ ರಿವೀಲ್ ಮಾಡಿದ್ಧಾರೆ. ಈ ಸಂದರ್ಶನದಲ್ಲಿ, ನಿರೂಪಕಿ ಯಾವ ಪಾತ್ರಕ್ಕೆ ಪ್ರಿಕ್ವೆಲ್ ಅಥವಾ ಸ್ಪಿನ್ ಆಫ್ ಬರಬೇಕು ಅಂತ ಕೇಳಿದಾಗ, ಸಾಯಿ ಪಲ್ಲವಿ ಗಾರ್ಗಿ ಹೆಸರು ಹೇಳಿದರೆ, ಯಶ್ ಕಿರಾತಕ ಹೆಸರು ಹೇಳಿದ್ದಾರೆ.
"ನಾನು ಕಿರಾತಕ ಸಿನಿಮಾ ಮಾಡಿದ್ದೆ. ವಾಸ್ತವವಾಗಿ ಅದರ ಸೀಕ್ವೆಲ್ ಮಾಡಬೇಕು ಎಂದುಕೊಂಡಿದ್ದೆ. ಅದಕ್ಕಾಗಿ ಸ್ಕ್ರಿಪ್ಟ್ ಕೂಡ ಬರೆದಿದ್ದೆವು ಮತ್ತು ಚಿತ್ರೀಕರಣವನ್ನೂ ಆರಂಭಿಸಿದ್ದೆವು. ಅದನ್ನು ಮಾಡಲು ನನಗೆ ತುಂಬಾ ಇಷ್ಟ. ಅದು ನನ್ನ ಹೃದಯಕ್ಕೆ ತುಂಬಾ ಹತ್ತಿರವಾದ ಸಿನಿಮಾ" ಎಂದು ಉತ್ತರಿಸಿದ್ದಾರೆ. ಪ್ರದೀಪ್ ರಾಜ್ ಅವರ ನಿರ್ದೇಶನದ ಕಿರಾತಕ ಸಿನಿಮಾದಲ್ಲಿ, ಯಶ್ ಜೊತೆ, ಓವಿಯಾ, ಟಿ. ಎಸ್. ನಾಗಾಭರಣ, ತಾರಾ, ಸಂಕೇತ್ ಕಾಶಿ, ಡೇನಿಯಲ್ ಬಾಲಾಜಿ, ಚಿಕ್ಕಣ್ಣ ಮುಂತಾದವರು ನಟಿಸಿದ್ದರು. ಚಿತ್ರವು ಎರಡು ನೆರೆಯ ವೈರಿ ಗ್ರಾಮಗಳ ನಡುವಿನ ದ್ವೇಷ ಮತ್ತು ಯುವಕ-ಯುವತಿಯ ಪ್ರೇಮಕಥೆಯನ್ನು ಆಧರಿಸಿದೆ.
‘ಕಿರಾತಕ’ ಚಿತ್ರದ ಸೀಕ್ವೆಲ್ ಯೋಜನೆ ಈಗಾಗಲೇ ಶುರುವಾಗಿ ಅರ್ಧಕ್ಕೆ ನಿಂತಿರುವುದರಿಂದ, ಮುಂದಿನ ದಿನಗಳಲ್ಲಿ ಈ ಪ್ರಾಜೆಕ್ಟ್ ಮತ್ತೆ ಕೈಗೆತ್ತಿಕೊಳ್ಳುತ್ತದೆಯೇ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಯಶ್ ಅವರ ಮನದ ಆಸೆಯಂತೆ ‘ಕಿರಾತಕ-2’ ಮತ್ತೆ ಸೆಟ್ಟೇರಲಿ ಎಂದು ಸಿನಿಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ. ಯಶ್ ಅವರು ಈ ವಿಷಯದ ಬಗ್ಗೆ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ಕುತೂಹಲ ಮೂಡಿದೆ.
ಇನ್ನು ಈ ಸಿನಿಮಾದ ಕುರಿತು ಹೇಳುವುದಾದರೆ, ಯಶ್ ಅವರಿಗೆ ಬ್ರೇಕ್ ಕೊಟ್ಟ ಸಿನಿಮಾಗಳಲ್ಲಿ ಇದು ಕೂಡ ಒಂದು. ಕೆಜಿಎಫ್ ಚಾಪ್ಟರ್ 1' ಚಿತ್ರೀಕರಣ ಮುಗಿದ ಬೆನ್ನಲ್ಲೇ 2018ರಲ್ಲಿ ನಿರ್ದೇಶಕ ಅನಿಲ್ ಕುಮಾರ್ ನಿರ್ದೇಶನದಲ್ಲಿ 'ಮೈ ನೇಮ್ ಇಸ್ ಕಿರಾತಕ' ಹೆಸರಿನಲ್ಲಿ ಸಿನಿಮಾ ಆರಂಭವಾಗಿತ್ತು. ಯಶ್ ತಮ್ಮ ಉದ್ದನೆಯ ಗಡ್ಡಕ್ಕೆ ಕತ್ತರಿ ಹಾಕಿ ಸುಮಾರು 20 ದಿನಗಳ ಕಾಲ ಚಿತ್ರೀಕರಣದಲ್ಲೂ ಭಾಗವಹಿಸಿದ್ದರು.
ಆದರೆ 'ಕೆಜಿಎಫ್ 1' ದೇಶಾದ್ಯಂತ ಐತಿಹಾಸಿಕ ಯಶಸ್ಸು ಕಂಡು, 'ಕೆಜಿಎಫ್ 2' ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾದ ಕಾರಣ ಯಶ್ ಈ ಸಿನಿಮಾವನ್ನು ತಾತ್ಕಾಲಿಕವಾಗಿ ಮುಂದೂಡಿದ್ದರು. ಈಗ ಅದನ್ನು ಮುಂದುವರೆಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.