ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ನಟಿ ರಾಧಾ ಭಗವತಿ ಹಾಗೂ ರಾಣವ್ ಗೌಡ ತಮ್ಮ ಮದುವೆಯ ಸುಂದರ ಕ್ಷಣಗಳು ಮತ್ತು ಮುಂದಿನ ವೃತ್ತಿಜೀವನದ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಮಾಧ್ಯಮದವರೊಂದಿಗೆ ತಮ್ಮ ಸಂತಸವನ್ನು ಹಂಚಿಕೊಂಡ ರಾಧಾ ಭಗವತಿ, ಮದುವೆ ಮಂಟಪದಲ್ಲಿ ನಡೆದ ಅತ್ಯಂತ ವಿಶೇಷ ಮತ್ತು ಭಾವುಕ ಕ್ಷಣವನ್ನೂ ಹಂಚಿಕೊಂಡಿದ್ದಾರೆ.
ತಮ್ಮ ಮದುವೆಯ ವಿಡಿಯೋದಲ್ಲಿ ಸೆರೆಯಾಗಿರುವ ತಾಳಿ ಕಟ್ಟುವ ಶುಭ ಘಳಿಗೆಯ ಬಗ್ಗೆ ಮಾತನಾಡಿದ ರಾಧಾ ಭಗವತಿ, "'ಕಟ್ಟಲಾ?' ಅಂತ ಪರ್ಮಿಷನ್ ತಗೊಂಡು ನನಗೆ ತಾಳಿ ಕಟ್ಟಿದ್ದು. ಆ ಕ್ಷಣವನ್ನು ನೆನೆಸಿಕೊಂಡರೆ ತುಂಬಾ ಖುಷಿಯಾಗುತ್ತದೆ. ಆ ಫೀಲ್ ಅನ್ನು ಮಾತಿನಲ್ಲಿ ಹೇಳಿಕೊಳ್ಳಲು ಅಥವಾ ಎಕ್ಸ್‌ಪ್ರೆಸ್ ಮಾಡಲು ಸಾಧ್ಯವೇ ಇಲ್ಲ. ನನಗೆ ತುಂಬಾ ಬ್ಲೆಸ್ಡ್ ಮತ್ತು ಹ್ಯಾಪಿ ಅನಿಸುತ್ತಿದೆ" ಎಂದು ಭಾವುಕರಾದರು. "ಈ ಒಂದು ದಿನಕ್ಕಾಗಿ ನಾವು ತುಂಬಾ ದಿನಗಳಿಂದ ಕಾಯುತ್ತಿದ್ದೆವು. ಇನ್ನೊಂದು ವಾರ ಇದೆ, ಐದು ದಿನ ಇದೆ, ನಾಲ್ಕು ದಿನ ಇದೆ ಎಂದು ದಿನ ಎಣಿಸುತ್ತಿದ್ದೆವು. ಆದರೆ ಆ ದಿನಗಳು ಎಷ್ಟು ವೇಗವಾಗಿ ಕಳೆದುಹೋದವು ಎಂಬುದೇ ಗೊತ್ತಾಗಲಿಲ್ಲ" ಎಂದು ಮದುವೆಯ ಸಂಭ್ರಮವನ್ನು ಹಂಚಿಕೊಂಡರು.
ತಮ್ಮ ಪತಿ ರಾಣವ್ ಗೌಡ ಕುರಿತು ಮಾತನಾಡಿದ ರಾಧಾ ಭಗವತಿ, "ನನಗೆ ರಾಣವ್ ಎಂದರೆ ತುಂಬಾನೇ ಇಷ್ಟ. ಎಲ್ಲರಿಗೂ ತಿಳಿದಿರುವಂತೆ ನಾನೇ ಮೊದಲು ಅವರಿಗೆ ಪ್ರಪೋಸ್ ಮಾಡಿದ್ದು. ಅದರಲ್ಲೇ ನಾನು ಅವರನ್ನು ಎಷ್ಟು ಪ್ರೀತಿಸುತ್ತಿದ್ದೇನೆ ಎಂಬುದು ನಿಮಗೆ ಗೊತ್ತಾಗುತ್ತದೆ. ಇದೇ ಪ್ರೀತಿ ಇನ್ಮುಂದೆಯೂ ಸದಾಕಾಲ, ಕೊನೆಯವರೆಗೂ ಹೀಗೆಯೇ ಇರುತ್ತದೆ" ಎಂದು ಪ್ರೀತಿಯಿಂದ ಹೇಳಿದರು.
ಮದುವೆಯ ಬಳಿಕ ವೃತ್ತಿಜೀವನದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ಇಷ್ಟು ದಿನ ನಮ್ಮಿಬ್ಬರ ಕೆರಿಯರ್ ಹೇಗೆ ನಡೆಯುತ್ತಿತ್ತೋ, ಮುಂದೆಯೂ ಹಾಗೆಯೇ ಮುಂದುವರಿಯುತ್ತದೆ. ಇಬ್ಬರೂ ಸಿನಿಮಾಗಳು, ಪ್ರಾಜೆಕ್ಟ್‌ಗಳು ಹಾಗೂ ಮೀಡಿಯಾ ಕೆಲಸಗಳನ್ನು ಮಾಡುತ್ತೇವೆ. ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಆದರೆ ಒಂದೇ ಒಂದು ಬದಲಾವಣೆ ಏನೆಂದರೆ, ಈಗ ನಾವಿಬ್ಬರೂ ಸಿಂಗಲ್ ಅಲ್ಲ! ಮೊದಲು ಶೂಟಿಂಗ್‌ಗೆ ಬೇರೆ ಬೇರೆ ಮನೆಯಿಂದ ಹೋಗುತ್ತಿದ್ದೆವು, ಇನ್ಮುಂದೆ ಒಂದೇ ಮನೆಯಿಂದ ಹೋಗುತ್ತೇವೆ ಅಷ್ಟೇ" ಎಂದು ನಗುತ್ತಲೇ ತಿಳಿಸಿದರು.
ಕೊನೆಯಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ರಾಧಾ ಭಗವತಿ, "ದೇವರ ಆಶೀರ್ವಾದ ಮತ್ತು ನಿಮ್ಮೆಲ್ಲರ ಪ್ರೀತಿ ನಮ್ಮ ಮೇಲೆ ಯಾವಾಗಲೂ ಇರುತ್ತದೆ ಎಂಬ ನಂಬಿಕೆಯಿದೆ. ನಾನು ಮಾಡುವ ಪ್ರತಿಯೊಂದು ಪ್ರಾಜೆಕ್ಟ್ ಹಾಗೂ ಪಾತ್ರವನ್ನೂ ದಯವಿಟ್ಟು ಹರಸಿ, ಬೆಂಬಲಿಸಿ" ಎಂದು ಮನವಿ ಮಾಡಿದರು.
ಇಬ್ಬರೂ ಒಂದೇ ವೃತ್ತಿಕ್ಷೇತ್ರದಲ್ಲಿರುವುದರಿಂದ ಶೂಟಿಂಗ್‌ಗೆ ತಡವಾಗುವುದು ಅಥವಾ ಎರಡು-ಮೂರು ದಿನ ಮನೆಯಿಂದ ದೂರ ಇರುವುದರ ಬಗ್ಗೆ ಪರಸ್ಪರ ಅರ್ಥಮಾಡಿಕೊಳ್ಳುವುದು ಸುಲಭವಾಗಿದೆ ಎಂದು ಈ ಜೋಡಿ ಹಂಚಿಕೊಂಡಿದೆ. "ನಾನು ಇವತ್ತು ಲೇಟ್ ಆಗಿ ಬರ್ತೀನಿ ಎಂದರೆ ಯಾಕೆ ಎಂದು ಪ್ರಶ್ನೆ ಮಾಡುವುದಿಲ್ಲ, ಬದಲಾಗಿ ಎಷ್ಟೊತ್ತಿಗೆ ಬರ್ತೀಯಾ ಎಂದು ಮಾತ್ರ ಕೇಳುತ್ತಾರೆ. ಪ್ರೊಫೆಷನ್ ಹೇಗಿರುತ್ತದೆ ಎಂಬುದು ಇಬ್ಬರಿಗೂ ತಿಳಿದಿರುವುದರಿಂದ ಆ ವಿಚಾರದಲ್ಲಿ ಪ್ರಶ್ನಿಸುವುದಾಗಲಿ, ಜಗಳ ಮಾಡುವುದಾಗಲಿ ಖಂಡಿತ ಇಲ್ಲ. ಪ್ರತಿಯೊಂದರಲ್ಲೂ ಅಡ್ವಾಂಟೇಜ್ ಮತ್ತು ಡಿಸ್‌ಅಡ್ವಾಂಟೇಜ್ ಇರುತ್ತದೆ; ಆದರೆ ಅಡ್ವಾಂಟೇಜ್ ಅನ್ನು ಎಂಜಾಯ್ ಮಾಡಿಕೊಂಡು, ಡಿಸ್‌ಅಡ್ವಾಂಟೇಜ್ ಅನ್ನು ಆದಷ್ಟು ನಿರ್ಲಕ್ಷಿಸಿ ಮುಂದೆ ಸಾಗುತ್ತೇವೆ" ಎಂದು ತಿಳಿಸಿದರು.
ತಮ್ಮ ಅನುಭವ ಹಂಚಿಕೊಂಡ ರಾಣವ್ ಗೌಡ, "ಮೊದಲಾದರೆ ಕಷ್ಟ, ಲಾಭ ಅಥವಾ ನಷ್ಟ ಏನೇ ಬಂದರೂ ನಾನು ಒಬ್ಬನೇ ಇದ್ದೆ. ಆದರೆ ಈಗ ಇನ್ನೊಬ್ಬರು ಜೀವನಕ್ಕೆ ಸೇರಿರುವುದರಿಂದ ಲಾಭವಾದರೂ ಅವರಿಗಾಗುತ್ತದೆ, ನಷ್ಟವಾದರೂ ಅವರಿಗಾಗುತ್ತದೆ. ಹೀಗಾಗಿ ಪ್ರತಿಯೊಂದನ್ನೂ ಯೋಚಿಸಬೇಕಾಗುತ್ತದೆ. ಆದರೆ ದೊಡ್ಡ ಅಡ್ವಾಂಟೇಜ್ ಏನೆಂದರೆ, ಕಷ್ಟ ಬಂದಾಗ ಹಂಚಿಕೊಳ್ಳಲು ಜೊತೆಗೆ ಇನ್ನೊಬ್ಬರು ಇದ್ದಾರೆ ಎಂಬ ಧೈರ್ಯ ಸಿಗುತ್ತದೆ" ಎಂದು ಹೇಳಿದರು.
ದಾಂಪತ್ಯ ಜೀವನದ ಕುರಿತು ಮಾತನಾಡಿದ ಅವರು, "ಇದುವರೆಗೂ ಹಿರಿಯರಿಂದ ಮದುವೆಯ ಬಗ್ಗೆ ಥಿಯರಿಟಿಕಲ್ ಆಗಿ ಕೇಳಿದ್ದೆವು ಮತ್ತು ನೋಡಿದ್ದೆವು. ಈಗ ಅದನ್ನು ಪ್ರಾಕ್ಟಿಕಲ್ ಆಗಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅದು ಅರೇಂಜ್ ಮ್ಯಾರೇಜ್ ಆಗಿರಲಿ ಅಥವಾ ಲವ್ ಮ್ಯಾರೇಜ್ ಆಗಿರಲಿ, ಮದುವೆ ಎಂದರೆ ಅಡ್ಜಸ್ಟ್ಮೆಂಟ್ (ಹೊಂದಾಣಿಕೆ), ಕೈಂಡ್‌ನೆಸ್ (ದಯೆ) ಮತ್ತು ಸ್ಯಾಕ್ರಿಫೈಸ್ (ತ್ಯಾಗ) ಇವೆಲ್ಲದರ ಮಿಶ್ರಣ" ಎಂದು ದಾಂಪತ್ಯದ ಮಹತ್ವವನ್ನು ಸುಂದರವಾಗಿ ವಿವರಿಸಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.