700 ಅಭಿಮಾನಿಗಳಿಗೆ ಯಶ್ ಯಾಕೆ ಪ್ರತ್ಯೇಕ ಸೆಲ್ಫಿ ಕೊಟ್ಟರು? ಕಾರಣ ಕೇಳಿದ್ರೆ ಮನಸ್ಸು ಕರಗುತ್ತೆ!

Published : Aug 15, 2026, 09:32 PM IST
Yash Fans

ಸಾರಾಂಶ

Yash 700 Fans Selfie: ಸಂದರ್ಶನವೊಂದರಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಒಂದೇ ಕಾರ್ಯಕ್ರಮದಲ್ಲಿ ಸುಮಾರು 700 ಅಭಿಮಾನಿಗಳಿಗೆ ಪ್ರತ್ಯೇಕವಾಗಿ ಸೆಲ್ಫಿ ನೀಡಿದ ಬಗ್ಗೆ ಪ್ರಶ್ನೆ ಕೇಳಲಾಗಿದೆ.

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಆಗಸ್ಟ್ 26ರಂದು ವಿಶ್ವದಾದ್ಯಂತ ತೆರೆಕಾಣಲು ಸಜ್ಜಾಗಿದೆ. ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ಚಿತ್ರದ ಪ್ರಚಾರದ ವೇಳೆ ಯಶ್ ನೀಡಿರುವ ಹೇಳಿಕೆಗಳು ಅಭಿಮಾನಿಗಳ ಗಮನ ಸೆಳೆಯುತ್ತಿವೆ. ಅದರಲ್ಲೂ ಅಭಿಮಾನಿಗಳೊಂದಿಗೆ ಯಶ್ ಹೊಂದಿರುವ ಬಾಂಧವ್ಯವನ್ನು ತೋರಿಸುವ ಸಂದರ್ಶನದ ವಿಡಿಯೋವೊಂದು ಇದೀಗ ವೈರಲ್ ಆಗಿದೆ.

700 ಅಭಿಮಾನಿಗಳಿಗೂ ಪ್ರತ್ಯೇಕ ಸೆಲ್ಫಿ!

ಸಂದರ್ಶನವೊಂದರಲ್ಲಿ ಯಶ್ ಅವರಿಗೆ ಒಂದೇ ಕಾರ್ಯಕ್ರಮದಲ್ಲಿ ಸುಮಾರು 700 ಅಭಿಮಾನಿಗಳಿಗೆ ಪ್ರತ್ಯೇಕವಾಗಿ ಸೆಲ್ಫಿ ನೀಡಿದ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಯಶ್, ಪ್ರತಿಯೊಬ್ಬ ಅಭಿಮಾನಿಗೂ ವೈಯಕ್ತಿಕವಾಗಿ ಒಂದು ಫೋಟೋ ನೀಡುವುದರ ಹಿಂದೆ ಒಂದು ಕಾರಣವಿದೆ ಎಂದು ಹೇಳಿದ್ದಾರೆ. ಅಭಿಮಾನಿಗಳೊಂದಿಗೆ ಗ್ರೂಪ್ ಫೋಟೋ ತೆಗೆಸಿಕೊಂಡರೆ, ನಂತರ ಅವರು ಆ ಫೋಟೋದಲ್ಲಿ ತಮ್ಮನ್ನು ಹುಡುಕಿಕೊಳ್ಳಬೇಕಾಗುತ್ತದೆ. ಆದರೆ ಪ್ರತ್ಯೇಕವಾಗಿ ತೆಗೆಸಿಕೊಳ್ಳುವ ಒಂದು ಸೆಲ್ಫಿ ಅವರಿಗೆ ಜೀವನಪೂರ್ತಿ ಉಳಿಸಿಕೊಳ್ಳಬಹುದಾದ ನೆನಪಾಗುತ್ತದೆ ಎಂಬುದು ಯಶ್ ಅವರ ಅಭಿಪ್ರಾಯ. “ಆ ಒಂದು ಫೋಟೋ ಅವರಿಗೆ ಜೀವಮಾನದ ನೆನಪಾಗಲಿದೆ. ಅವರು ಅದನ್ನು ತಮ್ಮೊಂದಿಗೆ ಇಟ್ಟುಕೊಳ್ಳುತ್ತಾರೆ. ಹಾಗಾಗಿ ಮುಂಜಾನೆಯಿಂದ ಸಂಜೆವರೆಗೂ ನಿಂತು ಸೆಲ್ಫಿ ಕೊಟ್ಟಿದ್ದೇನೆ,” ಎಂಬರ್ಥದಲ್ಲಿ ಯಶ್ ತಮ್ಮ ಅಭಿಮಾನಿಗಳ ಮೇಲಿನ ಪ್ರೀತಿಯನ್ನು ಹಂಚಿಕೊಂಡಿದ್ದಾರೆ.

‘ಬ್ಯುಸಿ ಶೆಡ್ಯೂಲ್ ಇದ್ದರೂ ಅಭಿಮಾನಿಗಳಿಗಾಗಿ ಸಮಯ ಕೊಡುತ್ತೇನೆ’

ಸ್ಟಾರ್ ನಟನಾಗಿ ಬ್ಯುಸಿ ಶೆಡ್ಯೂಲ್ ಇದ್ದರೂ ಅಭಿಮಾನಿಗಳನ್ನು ನಿರ್ಲಕ್ಷಿಸಬಾರದು ಎಂಬ ಮನೋಭಾವ ತಮ್ಮಲ್ಲಿದೆ ಎಂದು ಯಶ್ ಹೇಳಿದ್ದಾರೆ. ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಎಲ್ಲವನ್ನೂ ನಿಭಾಯಿಸಲು ಪ್ರಯತ್ನಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ. ಇದೇ ವೇಳೆ ಸಂದರ್ಶನದ ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು, “ಇಂದೂ ಸೆಲ್ಫಿ ಕೊಡುತ್ತೀರಾ?” ಎಂದು ಯಶ್ ಅವರನ್ನು ಕೇಳಿದ್ದಾರೆ. ಅದಕ್ಕೂ ಸಮ್ಮತಿಸಿದ ನಟ, ಅಲ್ಲಿದ್ದ ಅಭಿಮಾನಿಗಳೊಂದಿಗೆ ಸೆಲ್ಫಿ ತೆಗೆಸಿಕೊಂಡಿದ್ದಾರೆ. ಈ ಸರಳ ನಡೆಗೆ ಅಭಿಮಾನಿಗಳು ಫಿದಾ ಆಗಿದ್ದು, ದೊಡ್ಡ ಸ್ಟಾರ್‌ಡಮ್‌ ತಲುಪಿದರೂ ಯಶ್ ಅವರಲ್ಲಿರುವ ಸರಳತೆ ಬದಲಾಗಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

‘ಟಾಕ್ಸಿಕ್’ನಲ್ಲಿ ಜೆನ್‌-ಝೀ ವಿಚಾರಗಳೂ ಇವೆಯಂತೆ!

ಇನ್ನು ‘ಟಾಕ್ಸಿಕ್’ ಸಿನಿಮಾದ ಕಥೆಯ ಬಗ್ಗೆ ಮಾತನಾಡಿರುವ ಯಶ್, ಚಿತ್ರದಲ್ಲಿ ಜೆನ್‌-ಝೀ ಪೀಳಿಗೆಯ ಆಲೋಚನೆಗಳು, ಪ್ರಶ್ನೆಗಳು ಮತ್ತು ಹಿರಿಯರೊಂದಿಗಿನ ಅವರ ಸಂಬಂಧ ಪ್ರಮುಖವಾಗಿ ಕಾಣಿಸಿಕೊಳ್ಳಲಿದೆ ಎಂದು ಹೇಳಿದ್ದಾರೆ. ಮುಂದಿನ ಪೀಳಿಗೆ ಹಿಂದಿನ ಪೀಳಿಗೆಗಿಂತ ಉತ್ತಮವಾಗಿರಬಹುದು. ಆದರೆ ಪ್ರತಿಯೊಂದು ಪೀಳಿಗೆಗೂ ತಮ್ಮದೇ ಆದ ಸಮಯ ಮತ್ತು ಜವಾಬ್ದಾರಿ ಇರುತ್ತದೆ ಎಂಬ ಅಭಿಪ್ರಾಯವನ್ನು ಯಶ್ ವ್ಯಕ್ತಪಡಿಸಿದ್ದಾರೆ.

ಯುವಜನರು ತಮ್ಮ ಹಿರಿಯರನ್ನು ನೋಡಿ ಕೇಳುವ ಪ್ರಶ್ನೆಗಳು-“ನೀವು ಹೀಗೆ ಯಾಕೆ ಮಾಡುತ್ತೀರಿ?”, “ನಮ್ಮೊಂದಿಗೆ ಹೀಗೆ ಯಾಕೆ ವರ್ತಿಸುತ್ತೀರಿ?” ಎಂಬಂತಹ ವಿಚಾರಗಳ ಸುತ್ತಲೂ ಸಿನಿಮಾದ ಕೆಲವು ಅಂಶಗಳು ಸಾಗಲಿವೆ ಎಂದು ಅವರು ತಿಳಿಸಿದ್ದಾರೆ. ಹೀಗಾಗಿ ‘ಟಾಕ್ಸಿಕ್’ ಕೇವಲ ಆ್ಯಕ್ಷನ್ ಮತ್ತು ಅದ್ಧೂರಿ ದೃಶ್ಯಗಳ ಸಿನಿಮಾ ಮಾತ್ರವಲ್ಲದೆ, ಇಂದಿನ ಯುವಜನರ ಆಲೋಚನೆಗಳು ಮತ್ತು ಸಮಾಜದೊಂದಿಗಿನ ಅವರ ಸಂಘರ್ಷವನ್ನೂ ಸ್ಪರ್ಶಿಸಲಿದೆ ಎಂಬ ಕುತೂಹಲ ಮೂಡಿದೆ.

ಗೀತು ಮೋಹನ್‌ದಾಸ್ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ

ಬಹು ಪ್ರಶಸ್ತಿ ವಿಜೇತ ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ‘ಟಾಕ್ಸಿಕ್’ಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಚಿತ್ರದ ಕಥೆಯಲ್ಲಿ ಯಶ್ ಕೂಡ ಸೃಜನಾತ್ಮಕವಾಗಿ ಕೈಜೋಡಿಸಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸಿರುವ ಈ ಬಿಗ್‌ಬಜೆಟ್ ಸಿನಿಮಾದಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಮತ್ತು ತಾರಾ ಸುತಾರಿಯಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಆಗಸ್ಟ್ 26ರಂದು ಸಿನಿಮಾ ವಿಶ್ವದಾದ್ಯಂತ ಚಿತ್ರಮಂದಿರಗಳಿಗೆ ಬರಲಿದೆ. ಆದರೆ ಸಿನಿಮಾ ಬಿಡುಗಡೆಗೂ ಮುನ್ನವೇ ಯಶ್ ಅವರ ಅಭಿಮಾನಿಗಳ ಮೇಲಿನ ಪ್ರೀತಿ, ‘ಟಾಕ್ಸಿಕ್’ನಲ್ಲಿರುವ ಜೆನ್‌-ಝೀ ಕಥಾಹಂದರ ಮತ್ತು ಚಿತ್ರದ ಭರ್ಜರಿ ತಾರಾಗಣ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

‘ತಲ’ ಅಜಿತ್‌ಗೆ ಏನಾಯ್ತು? ಬರೋಬ್ಬರಿ 42 ಕೆಜಿ ತೂಕ ಇಳಿಸಿಕೊಂಡಿದ್ದೇಕೆ? ಅಭಿಮಾನಿಗಳಿಗೆ ಶಾಕ್!
ಜ್ಯೇಷ್ಠವರ್ಧನ್ ಗ್ರಾಂಡ್ ಎಂಟ್ರಿ.. ವಿಷ್ಣುವರ್ಧನ್ ಮೊಮ್ಮಗ, ಅನಿರುದ್ದ್ ಮಗನ ಸಿನಿಮಾ ಶೀಘ್ರದಲ್ಲೇ ಶುರು!