
ನಿಮಗೆ ಕನ್ನಡ ಗೊತ್ತು ಎಂದಾದರೆ ‘ಯಾಕಣ್ಣ’ ಅಂತ ಹೇಳಿ ಹಾಸ್ಯ ಮಾಡುವ ಜನರು ಈ ವೀಡಿಯೋವನ್ನೂ ನೋಡಲೇಬೇಕು. ಯಾವುದೋ ಒಂದು ಅಮಾಯಕ ಹೆಣ್ಣಿನ ವೀಡಿಯೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ರಾತ್ರೋ ರಾತ್ರಿ ವೈರಲ್ ಆಗಿದ್ದು, ಇದೀಗ ಆಕೆಯ ಬಾಳೇ ಬೀದಿಗೆ ಬಂದಿದೆ! ಯಾರಿಗೆ ಹೇಳಿ ಕೊಳ್ಳುವುದು ಅವಳ ಕಷ್ಟವನ್ನು. ಮತ್ತದೇ ವೀಡಿಯೋ ಮೂಲಕ ತನ್ನ ಗೋಳನ್ನೂ ಹೇಳಿಕೊಂಡಿದ್ದಾಳೆ. ಕೇಳಿಸಿಕೊಳ್ಳಿ.
ಕೋಲ್ಕತ್ತಾದ ರಾನು ಮಂಡಲ್ ಎಂಬ ಭಿಕ್ಷುಕಿ ರೈಲ್ವೆ ಸ್ಟೇಷನ್‌ನಲ್ಲಿ ಹಾಡು ಹೇಳಿರುವುದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿ, ಬದುಕಿನ ದಿಕ್ಕನ್ನೇ ಬದಲಾಯಿಸಿತು. ಆದರೆ, ಈ ಹೆಣ್ಣು ಮಗಳು ತನ್ನ ಗಂಡನೊಂದಿಗೆ ಕೋಣೆಯೊಂದರಲ್ಲಿ ಕಾಣಬಾರದ ಸ್ಥಿತಿಯಲ್ಲಿ ಕಾಣಿಸಿಕೊಂಡ ವಿಡಿಯೋವನ್ನು ಹುಡುಗನೊಬ್ಬ ಸೆರೆ ಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದೇ ನೋಡಿ, ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಶೇರ್ ಆಯಿತು. ಈ ಹೆಣ್ಣಿನ ಬಾಳಿಗೆ ಈ ವೀಡಿಯೋ ಬೆಳಕಾಗಲಿಲ್ಲ. ಬದಲಾಗಿ, ಮುಳ್ಳಾಯಿತು. ಬಾಳು ಗೋಳಾಯಿತು, ಜೀವನ ಬೀದಿಗೆ ಬಂತು.
ಟ್ರೋಲ್ ಅಷ್ಟೇನಾ 'ಯಾಕಣ್ಣಾ?' ಜೀವವೊಂದು ಸಾಯುವುದು ಬೇಕೆನಣ್ಣ?
ಆ ಹೆಣ್ಣು ತನ್ನ ಪಾಡಿಗೆ ತಾನು ಬದುಕಲಿ ಬಿಡಿ... ಆಗಿದ್ದು ಆಗಿ ಹೋಯಿತು, ಆ ಅಮಾಯಕ, ಮುಗ್ಧ ಹೆಣ್ಣು ಮಗಳನ್ನು ತನ್ನ ಪಾಡಿಗೆ ತಾನು ಬದುಕಲು ಬಿಡಬಹುದಿತ್ತು. ಆದರೆ, ವಿಕೃತ ಮನಸ್ಸುಗಳು ಸುಮ್ಮನಿರಬೇಕಲ್ಲ? ಮತ್ತೆ ಆಕೆಗೆ ಎಣ್ಣೆ ಕುಡಿಸಿ, ಕುಣಿಸಿದರು. ಮಾತನಾಡಿಸಿದರು. ಅದನ್ನೂ ವೀಡಿಯೋ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದರು. ಅದನ್ನು ನೋಡಿದವರು ಮಜಾ ತೆಗೆದುಕೊಂಡರು. ಆದರೆ, ಆಕೆಯ ಜೀವನದಲ್ಲಿ ಮೇಲೆ ಈ ವೀಡಿಯೋ ಹೇಗೆ ಪರಿಣಾಮ ಬೀರಬಹುದು, ಸಮಾಜ ಆಕೆಯನ್ನು ಹೇಗೆ ನೋಡಿಕೊಳ್ಳಬಹುದು ಎಂಬುವುದು ನೆಟ್ಟಿಗರ ಗಮನಕ್ಕೇ ಬರಲಿಲ್ಲ. 'ನನಗೆ ಬದುಕಲು ಆಗುತ್ತಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ....' ಎನ್ನುವ ವೀಡಿಯೋ ಸಹ ವೈರಲ್ ಆಯಿತು. ಆದರೂ, ಯಾರ ಮನಸ್ಸೂ ಮರುಗಲಿಲ್ಲ. ಅವಳ ಸಹಾಯಕ್ಕೆ ಮುಂದಾಗಲಿಲ್ಲ.
ಇದೀಗ ಮತ್ತದೇ ನೋವು ತೋಡಿಕೊಂಡ ಆ ಯಾಕಣ್ಣಾ ಹೆಣ್ಣು ಮಗಳಿನ ಮತ್ತೊಂದು ವೀಡಿಯೋ ವೈರಲ್ ಆಗಿದೆ. ‘ನನ್ನ ಬಾಯಿಗೆ ಮಣ್ಣು ಹಾಕಿದ್ರಲಣ್ಣ. ನಾನು ಕಣ್ಣೀರಲ್ಲಿ ಗೋಳಾಡುವುದನ್ನು ವೀಡಿಯೋ ಹಾಕ್ತಾರಲ್ಲಣ್ಣ, ಅವರಿಗೂ ಅಕ್ಕ ತೆಂಗಿ ಇಲ್ವಾ? ಪ್ರಪಂಚದಲ್ಲಿ ಎಲ್ಲರೂ ಮಾಡುವುದನ್ನೇ ನಾನೂ ಮಾಡಿದ್ದೀನಿ. ಆದರೆ, ಯಾವುದೇ ತಪ್ಪು ಮಾಡಿಲ್ಲಣ್ಣ ನಾನು. ಪ್ರಪಂಚ ಉದ್ಧಾರ ಆಗೋಕೆ ಹೆಣ್ಣು ಬೇಕು. ಅವರ ಕಣ್ಣಲ್ಲಿ ನೀರು ಹಾಕಿಸಬಾರದು. ಇಷ್ಟೆಲ್ಲಾ ಆದ್ಮೇಲೆ ನಾನೆಲ್ಲಿ ಹೋಗ್ಲಣ್ಣ ಇವತ್ತಿನ ದಿನದಲ್ಲಿ?ನನಗೂ ಒಬ್ಬ ಮಗಳಿದ್ದಾಳೆ. ಅವಳ ಜೀವನವನ್ನೂ ಹಾಳ್ಮಾಡಬೇಡಿ....’ ಎಂದು ಬೇಡಿ ಕೊಂಡಿದ್ದಾಳೆ.
ಈ ವೀಡಿಯೋ ಮಾಡಲು ಮನಸ್ಸು ಮಾಡುತ್ತಿರುವವರಾದರೂ, ಅವಳ ಜೀವನಕ್ಕೊಂದು ದಾರಿ ಮಾಡಿ ಕೊಡಲು ಮುಂದಾಗಲಿ. ಆಕೆ ಎಲ್ಲಿದ್ದಾಳೋ ಗೊತ್ತಿಲ್ಲ, ಬಾಳಿಗೊಂದು ದಾರಿ ಸಿಗಲಿ. ಸಾಕು, ಇಂಥ ಮುಗ್ಧ ಹೆಣ್ಣು ಮಕ್ಕಳನ್ನು ತಮ್ಮ ತೀಟೆ ತೀರಿಸಿಕೊಳ್ಳುವ ಮನಃಸ್ಥಿತಿ ಕೊನೆಯಾಗಲಿ ಎಂಬುವುದೇ ಸುವರ್ಣನ್ಯೂಸ್.ಕಾಮ್ ಕಳಕಳಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.