‘ಗೀತಾ’ಳಿಗೆ ಆ್ಯಂಗ್ರಿ ಯಂಗ್‌ಮ್ಯಾನ್‌ ಆದ ಗಣೇಶ್!

By Web DeskFirst Published Sep 13, 2019, 8:59 AM IST
Highlights

ಗಣೇಶ್‌ ಅವರ ‘ಗೀತಾ’ ಚಿತ್ರದ ಟ್ರೇಲರ್‌ ಈಗಷ್ಟೆಬಿಡುಗಡೆಯಾಗಿದೆ. ಸೆ.27 ಚಿತ್ರ ಬಿಡುಗಡೆಯಾಗಲಿದೆ. ಶಂಕರ್‌ನಾಗ್‌ ಲುಕ್ಕು, ಗೋಕಾಕ್‌ ಚಳವಳಿಯ ಕಾವು, ರೆಟ್ರೋ ಲವ್‌ ಸ್ಟೋರಿ, ಡಾ ರಾಜ್‌ಕುಮಾರ್‌ ನೆರಳು... ಹೀಗೆ ಸಾಕಷ್ಟುಅಂಶಗಳನ್ನು ಟ್ರೇಲರ್‌ ಮುಂದಿಟ್ಟಿದೆ. ಈ ಕುರಿತು ಮಾತುಕತೆ.

ಆರ್‌ ಕೇಶವಮೂರ್ತಿ

ಯಾವ ಕಾಲಘಟ್ಟದ ಕತೆ ಇದು?

ಎಂಭತ್ತರ ದಶಕದಲ್ಲಿ ನಡೆಯುವ ಕತೆ. ಇಲ್ಲಿನ ಪ್ರತಿಯೊಂದು ಅಂಶವೂ ಪ್ರತಿಯೊಬ್ಬ ಕನ್ನಡಿಗನಿಗೂ ನೇರವಾಗಿ ಸಂಬಂಧ ಪಡುತ್ತದೆ. ಅಂಥ ಅಂಶಗಳ ಸುತ್ತ ‘ಗೀತಾ’ ಸಿನಿಮಾ ಸಾಗುತ್ತದೆ.

ಆ ದಿನಗಳ ಹೋರಾಟದ ಸನ್ನಿವೇಶಗಳು ಈಗ ಯಾಕೆ?

ಗೋಕಾಕ್‌ ಚಳವಳಿ ಪ್ರತಿಯೊಬ್ಬ ಕನ್ನಡಿಗನ ಸ್ವಾಭಿಮಾನದ ಕಿಚ್ಚು ಹೆಚ್ಚಿಸಿದ ಹೋರಾಟ. ಈಗ ಎಲ್ಲಾ ಕಡೆ ಕನ್ನಡಿಗರಿಗೆ ಪ್ರಾಮುಖ್ಯತೆ ಕೊಡಿ ಎನ್ನುವ ಅಭಿಯಾನ ಶುರುವಾಗಿದೆ. ಹಿಂದಿ ಹೇರಿಕೆಯಿಂದ ವಿರುದ್ಧ ಹೋರಾಟದಿಂದ ಶುರುವಾಗಿ ಬ್ಯಾಂಕ್‌, ರೈಲ್ವೇ ಇಲಾಖೆ ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ಕನ್ನಡಿಗರನ್ನು ನೇಮಿಸಿ ಎನ್ನುವ ಕೂಗು ಹೆಚ್ಚಾಗಿದೆ. ಭಾಷೆಯ ಜಾಗೃತಿ, ಅದರ ಮೇಲಿನ ಅಭಿಮಾನ ಹಿಂದೆಗಿಂತ ಈಗ ಜಾಸ್ತಿ ಇದೆ. ಪ್ರಸ್ತುತ ನಡೆಯುತ್ತಿರುವ ಈ ಬೆಳವಣಿಗೆಗಳ ಬಗ್ಗೆ ನಮ್ಮ ‘ಗೀತಾ’ ಚಿತ್ರ ಮಾತಾಡುತ್ತದೆ.

ಕನ್ನಡಪರ ಹೋರಾಟಗಾರನಾದ ಗೋಲ್ಡನ್ ಸ್ಟಾರ್ ‘ಗೀತಾ’!

ಈ ಚಿತ್ರದ ಆಶಯ ಏನು?

ಕನ್ನಡವನ್ನು ನಾವು ಬೆಳೆಸುತ್ತಿದ್ದೇವೆ. ಕನ್ನಡವನ್ನು ನಾವು ಎಲ್ಲಿಗೋ ತೆಗೆದುಕೊಂಡು ಹೋಗುತ್ತಿದ್ದೇವೆ. ನಮ್ಮ ಚಿತ್ರದ ಮೂಲಕ ಕನ್ನಡ ಭಾಷೆ ಬೇರೆ ಭಾಷಿಕರ ಮಾರುಕಟ್ಟೆಯಲ್ಲಿ ಬೆಳೆಯುತ್ತಿದೆ... ಹೀಗೆ ಹೇಳುವುದನ್ನು ಕೇಳಿದ್ದೇವೆ. ನಿಜ ಹೇಳಬೇಕು ಅಂದರೆ ಕನ್ನಡವನ್ನು ನಾವು ಬೆಳೆಸಲ್ಲ. ಅದೇ ನಮ್ಮನ್ನು ಬೆಳೆಸುತ್ತದೆ. ಕನ್ನಡ ಭಾಷೆಯನ್ನು ನಾವು ಕಾಪಾಡಬೇಕು. ಅದೇ ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ ಎಂಬುದೇ ಈ ಚಿತ್ರದ ಅಶಯ.

ಇಂಥ ಕತೆಗೆ ‘ಗೀತಾ’ ಎನ್ನುವ ಹೆಸರು ಯಾಕೆ?

ಒಂದು ಕಡೆಯ ಭಾಷೆಯ ನೆರಳಿನಲ್ಲಿ ಸ್ವಾಭಿಮಾನದ ಕಿಚ್ಚಿನ ಹೋರಾಟ ನಡೆಯುತ್ತಿದ್ದರೆ ಅದೇ ಕನ್ನಡ, ಮತ್ತೊಂದಡೆ ಒಂದು ಮುದ್ದಾದ ಪ್ರೇಮ ಕತೆಯೂ ತೆರೆದುಕೊಳ್ಳುತ್ತದೆ. ಶಂಕರ್‌ನಾಗ್‌ ನಟನೆಯಲ್ಲಿ ಬಂದ ‘ಗೀತಾ’ ಸಿನಿಮಾ ಮರೆಯಲಾಗದು. ಆ ಕಾಲದ ಎವರ್‌ಗ್ರೀನ್‌ ಪ್ರೇಮ ಕತೆಯ ಚಿತ್ರದ ಹೆಸರು ನಮ್ಮ ಚಿತ್ರಕ್ಕೂ ಸೂಕ್ತ. ಯಾಕೆಂದರೆ ಇಲ್ಲೂ ಭಾಷೆಯ ಹೋರಾಟದಲ್ಲಿ ಒಂದು ಭಾವನಾತ್ಮಕವಾದ ಲವ್‌ ಸ್ಟೋರಿ ಇದೆ.

ಆ ದಿನಗಳ ‘ಗೀತಾ’ ಛಾಯೆ ಇಲ್ಲೂ ಉಂಟಾ?

ಕತೆಯಾಗಿ ಇದಕ್ಕೂ ಅದಕ್ಕೂ ಸಂಬಂಧವಿಲ್ಲ. ಆದರೆ, ನಮ್ಮ ಚಿತ್ರದಲ್ಲಿ ‘ಗೀತಾ ನನ್ನ ಗೀತಾ’ ಹಾಡನ್ನು ಬಳಸಿಕೊಂಡಿದ್ದೇವೆ. ಅದೇ ಟ್ಯೂನ್‌ನಲ್ಲಿ ಎರಡು ಬಾರಿ ಈ ಹಾಡು ಚಿತ್ರದಲ್ಲಿ ಬರುತ್ತದೆ. ಇದರ ಹೊರತಾಗಿ ಶಂಕರ್‌ನಾಗ್‌ ಅವರ ‘ಗೀತಾ’ ಚಿತ್ರಕ್ಕೂ ನಮ್ಮ ‘ಗೀತಾ’ಗೂ ಯಾವ ಸಂಬಂಧವಿಲ್ಲ.

ಗೀತಾ ಚಿತ್ರಕ್ಕೆ U/A ಸರ್ಟಿಫಿಕೆಟ್‌!

ಲೆಜಂಡರಿ ಹೀರೋ ಇಮೇಜ್‌ ಬಳಸಿದ್ದೀರಿ ಎನ್ನುವವರಿಗೆ ಏನು ಹೇಳುತ್ತೀರಿ?

ಕರ್ನಾಟಕ ಹಾಗೂ ಕನ್ನಡಿಗರು ಎಂದಾಗ ನಮ್ಮೆದರು ಒಂದಿಷ್ಟುದಿಗ್ಗಜರು ಬರುತ್ತಾರೆ. ಹಾಗೆ ಗೋಕಾಕ್‌ ಚಳವಳಿ, ಡಾ ರಾಜ್‌ಕುಮಾರ್‌, ನಾಡಿನ ಸಾಹಿತಿಗಳು, ಕನ್ನಡತನದ ತೇರು ಹೊತ್ತು ನಾವು, ನಮ್ಮದು ಎಂದು ಕೂಗಿದ ಪ್ರತಿಯೊಬ್ಬ ಕನ್ನಡಿಗರ ಹೋರಾಟದ ಕಿಡಿಯ ಕತೆ ಈ ಚಿತ್ರದಲ್ಲಿನ ನನ್ನ ಲುಕ್‌ ಹಾಗೂ ಹೆಸರು ನೋಡಿ ನಾವು ಶಂಕರ್‌ನಾಗ್‌ ಅವರನ್ನು ಬಳಸಿಕೊಂಡಿದ್ದೇವೆ ಎಂದುಕೊಳ್ಳಬೇಡಿ. ಸಿನಿಮಾ ನೋಡಿ. ನಿಜ ಏನೂ ಅಂತ ಗೊತ್ತಾಗುತ್ತದೆ.

ಈ ಸಿನಿಮಾ ನಿಮ್ಮ ಒಡ್ಡಿದ ಸವಾಲು ಏನು?

ಮೇಕಿಂಗ್‌ ವಿಚಾರಕ್ಕೆ ಬಂದಾಗ ತುಂಬಾ ಶ್ರಮಪಡಬೇಕಾಯಿತು. ಆಗಿನ ಕಾಲದ ಪತ್ರಿಕಗಳು, ಜಾಹೀರಾತು, ಆಗ ಬಿಡುಗಡೆಯಾಗಿದ್ದ ಸಿನಿಮಾಗಳ ಪೋಸ್ಟರ್‌, ಉಡುಗೆ- ತೊಡುಗೆ, ವಾಹನಗಳು ಹೀಗೆ ಎಲ್ಲವನ್ನೂ ಮರು ಸೃಷ್ಟಿಸಬೇಕಿತ್ತು. ಜತೆಗೆ ಗೋಕಾಕ್‌ ಚಳವಳಿಯ ವರ್ಜಿನಲ್‌ ಪುಟೇಜ್‌ ಅನ್ನು ಬಿಗ್‌ ಸ್ಕ್ರೀನ್‌ಗೆ ಅಳವಡಿಸ, ಇಡೀ ಕತೆಗೆ 80ರ ದಶಕದ ನೆರಳು ಕೊಡಬೇಕಿತ್ತು. ಈ ವಿಚಾರದಲ್ಲಿ ಕಲಾವಿಭಾಗ, ಛಾಯಾಗ್ರಾಹ ಶ್ರೀಶ ಕೂದುವಳ್ಳಿ, ತಾಂತ್ರಿಕ ತಂಡದ ಶ್ರಮ ದೊಡ್ಡದು. ನಿರ್ದೇಶಕ ವಿಜಯ್‌ ನಾಗೇಂದ್ರ ಅವರು ಎರಡು ವರ್ಷ ಈ ಕತೆಗಾಗಿ ನಡೆಸಿದ ಅಧ್ಯಯನ, ಸಂಗ್ರಹಿಸಿದ ಮಾಹಿತಿಗಳದ್ದೇ ದಡ್ಡ ಪಯಣ.

ಇಡೀ ಸಿನಿಮಾ ಗೋಕಾಕ್‌ ಚಳವಳಿಯ ಸುತ್ತ ಸಾಗುತ್ತದೆಯೇ?

ಎರಡುವರೆ ಗಂಟೆಯ ಚಿತ್ರದಲ್ಲಿ 1 ಗಂಟೆ ಗೋಕಾಕ್‌ ಚಳವಳಿ ಕತೆ ಬರುತ್ತದೆ. ಮೊದಲು ಐದಾರು ನಿಮಿಷಕ್ಕೆ ಈ ಚಳವಳಿಯ ಭಾಗ ಬಂದು ಹೋಗಲಿ ಅಂದುಕೊಂಡು ಕತೆ ಮಾಡಿದ್ದು. ಆದರೆ, ಮಾಡ್ತಾ ಹೋದಾಗ ಸಿನಿಮಾ ಮುಕ್ಕಾಲು ಭಾಗ ಕತೆ ಈ ಚಳವಳಿಯ ಹಿನ್ನೆಲೆಯಲ್ಲಿ ಹೇಳಿದರೆ ಹೇಗೆ ಎನ್ನುವ ಯೋಚನೆ ಬಂತು. ಹೀಗಾಗಿ ಮೊದಲ ಭಾಗ ಗೋಕಾಕ್‌ ಚಳವಳಿ, ಅಲ್ಲಿ ಹುಟ್ಟಿಕೊಳ್ಳುವ ಪ್ರೀತಿ, ಆ ಪ್ರೀತಿ ಕತೆಯೂ ಇದೆ.

’ಗೀತಾ’ ಚಿತ್ರಕ್ಕೆ ಡಬ್ಬಿಂಗ್ ಮಾಡಿದ ಗೋಲ್ಡನ್ ಪುತ್ರ

ಈ ಚಿತ್ರದ ಮೂಲಕ ಏನು ಹೇಳಕ್ಕೆ ಹೊರಟಿದ್ದೀರಿ?

ನಾವು ಇಲ್ಲಿ ಯಾರಿಗೂ ಏನನ್ನೂ ಹೇಳಕ್ಕೋ, ಬೋಧನೆ ಮಾಡಕ್ಕೋ ಹೋಗಿಲ್ಲ. ಗೋಕಾಕ್‌ ಚಳವಳಿಗೆ ಡಾ ರಾಜ್‌ಕುಮಾರ್‌ ಪ್ರವೇಶ ಆದ ಮೇಲೆ ನಡೆದ ಒಂದು ಚಾರಿತ್ರಿಕತೆಯ ಪುಟಗಳನ್ನು ಈಗಿನ ಜನರೇಷನ್‌ಗೆ ಸಿನಿಮಾದಲ್ಲಿ ತೋರಿಸುತ್ತಿದ್ದೇವೆ. ನಾವು ಕೇಳಿದ ಅಥವಾ ನೋಡಿದ ಒಂದು ಕಾಲಘಟ್ಟದ, ಕನ್ನಡಿಗರಿಗೇ ಸಂಬಂಧಿಸಿದ ಚರಿತ್ರೆಯನ್ನು ಈಗ ನೋಡಿದರೆ ಹೇಗಿರುತ್ತದೆ ಎನ್ನುವ ಕುತೂಹಲ ಇದ್ದವರಿಗೆ ಈ ಸಿನಿಮಾ ಮತ್ತಷ್ಟುಹತ್ತಿರವಾಗುತ್ತದೆ.

ಇಲ್ಲಿ ನಿಮ್ಮ ಪಾತ್ರದ ಚಹರೆ ಹೇಗಿರುತ್ತದೆ?

ನನ್ನ ಪಾತ್ರದ ಹೆಸರು ಶಂಕರ್‌. ಇಲ್ಲಿವರೆಗೂ ಮೆಲೋಡಿ ಅಥವಾ ಮಾಸ್‌ ಕತೆಯ ಚಿತ್ರಗಳನ್ನೇ ಹೆಚ್ಚಾಗಿ ಮಾಡಿಕೊಂಡು ಬಂದೆ. ಆದರೆ, ಮೊದಲ ಬಾರಿಗೆ ನೈಜ ಐತಿಹಾಸಿಕ ಘಟನೆಗಳಿಗೆ ನಾಯಕ ಆಗುತ್ತಿದ್ದೇನೆ. ಹ್ಯಾಂಗ್ರಿ ಯಂಗ್‌ ಮ್ಯಾನ್‌ ಇಮೇಜ್‌ ನೀಡುವ ಪಾತ್ರ. ಜತೆಗೆ ಅಂದಿನಿಂದ ಇಂದಿನ ತನಕ ಕನ್ನಡಕ್ಕೆ ಧ್ವನಿ ಎತ್ತಿದ, ಮುಂದೆಯೂ ಕನ್ನಡ ಎಂದು ಹೆಮ್ಮೆಯಿಂದ ಮಾತನಾಡುವ ಲಕ್ಷಾಂತರ ಕನ್ನಡಿಗರಲ್ಲಿ ನಾನೂ ಒಬ್ಬ ಅನಿಸುತ್ತದೆ. ಹೀಗಾಗಿ ಪ್ರತಿಯೊಬ್ಬರಿಗೂ ಕನೆಕ್ಟ್ ಆಗುವಂತಿದೆ.

ಈ ಚಿತ್ರದ ಯಾವ ಅಂಶ ನಿಮಗೆ ಮೊದಲು ಕನೆಕ್ಟ್ ಆಯಿತು?

ಗೋಕಾಕ್‌ ಚಳವಳಿಯೇ ನನಗೆ ಇಲ್ಲಿ ಕನೆಕ್ಟ್ ಆಗಿದ್ದು. ನಿರ್ದೇಶಕ ವಿಜಯ್‌ ನಾಗೇಂದ್ರ ಬಂದು, ಗೋಕಾಕ್‌ ಚಳವಳಿಯ ಹಿನ್ನೆಲೆಯಲ್ಲಿ ಒಂದು ಪ್ರೇಮ ಕತೆಯನ್ನು ನಿಮ್ಮ ಮೂಲಕ ಹೇಳುವ ಪ್ರಯತ್ನ ಎಂದಾಗ ನನಗೆ ಗೋಕಾಕ್‌ ಎನ್ನುವ ಆ ಪದವೇ ರೋಮಾಂಚನವಾಯಿತು. ನಾವು ಕೇಳಿದ, ಓದಿದ ಚಳವಳಿಗೆ ನಾನೇ ಹೀರೋ ಎನ್ನುವುದೇ ನನಗೆ ಥ್ರಿಲ್ಲಿಂಗ್‌ ಅನಿಸಿ ಈ ಸಿನಿಮಾ ಒಪ್ಪಿಕೊಂಡೆ.

ನೀವು ಇಲ್ಲಿ ನಿರ್ಮಾಣದ ಸಾರಥಿಯೂ ಹೌದು?

ನಿರ್ಮಾಪಕ ಸೈಯದ್‌ ಸಲಾಂ ಜತೆ ಸೇರಿ ನಿರ್ಮಿಸಿರುವ ಚಿತ್ರವಾಗಿದ್ದರೂ ನಿರ್ಮಾಣದ ಕೆಲಸಗಳು ಶಿಲ್ಪಾ ಗಣೇಶ್‌ ಅವರೇ ನೋಡಿಕೊಂಡಿದ್ದು. ನಾನು ಇಲ್ಲಿ ನಾಯಕ ಮಾತ್ರ. ಶಿಲ್ಪಾ ಹಾಗೂ ಸೈಯದ್‌ ಸಲಾಂ ಅವರು ಚಿತ್ರಕ್ಕೆ ಬೇಕಾದದ್ದನ್ನು ಕೊಟ್ಟು ಸಿನಿಮಾ ಇಷ್ಟುಅದ್ದೂರಿಯಾಗಿ ಬರುವುದಕ್ಕೆ ಕಾರಣವಾಯಿತು. ಹೀಗಾಗಿ ನಿರ್ಮಾಣದ ಕ್ರೆಡಿಟ್ಟು ಇವರಿಬ್ಬರಿಗೆ ಸೇರಬೇಕು.

click me!