15ನೇ ವಯಸ್ಸಿನಲ್ಲೇ ಕೂದಲು, ಹುಬ್ಬಿನ ಬಗ್ಗೆ ಕೇಳಿಬಂದಿತ್ತು ಟೀಕೆ! ನಿತ್ಯಾ ಮೆನನ್ ತೆಗೆದುಕೊಂಡ ನಿರ್ಧಾರವೇನು?

Published : Nov 21, 2026, 03:16 PM IST
Nithya Menen

ಸಾರಾಂಶ

Nithya Menen Interview: ದಕ್ಷಿಣ ಭಾರತದ ಬಹುಭಾಷಾ ನಟಿಯಾಗಿ ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಬೆಂಗಳೂರಿನ ಪ್ರತಿಭೆ ನಿತ್ಯಾ ಮೆನನ್, ನಾಯಕಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದೇ ಕನ್ನಡ ಚಿತ್ರರಂಗದ ಮೂಲಕ. 'ಸೆವೆನ್ ಓ' ಕ್ಲಾಕ್'ನಿಂದ 'ಮೈನಾ', 'ಕೋಟಿಗೊಬ್ಬ 2' ವರೆಗೆ ಕನ್ನಡಿಗರ ಮನಗೆದ್ದ ಅವರ ಸಿನಿಪಯಣದ ಚಿಕ್ಕ ನೋಟ ಇಲ್ಲಿದೆ.

ಕನ್ನಡದ 'ಮೈನಾ', 'ಜೋಶ್', 'ಕೋಟಿಗೊಬ್ಬ 2' ಸೇರಿದಂತೆ ದಕ್ಷಿಣ ಭಾರತದ ಹಲವು ಭಾಷೆಗಳಲ್ಲಿ ತಮ್ಮ ಸಹಜ ಅಭಿನಯದ ಮೂಲಕ ಕೋಟ್ಯಂತರ ಅಭಿಮಾನಿಗಳ ಮನಗೆದ್ದಿರುವ ನಟಿ ನಿತ್ಯಾ ಮೆನನ್, ಸಮಾಜದ ಸೌಂದರ್ಯದ ಮಾನದಂಡಗಳು ಹಾಗೂ ಟ್ರೆಂಡ್‌ಗಳ ಕುರಿತು ಆಡಿರುವ ಸ್ಫೂರ್ತಿದಾಯಕ ಮಾತುಗಳು ಇದೀಗ ಗಮನ ಸೆಳೆಯುತ್ತಿವೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಅವರಿಗೆ, "ಈ ಜಗತ್ತು ನಮಗೆ ಕೆಲವು ಲೋಕಜ್ಞಾನದ ಪಾಠಗಳನ್ನು ಕಲಿಸುತ್ತದೆ. ಅವು ತಲೆಯೊಳಗೆ ಹೊಕ್ಕ ನಂತರ ನಾವು ಅಂದುಕೊಂಡಂತೆ ಬದುಕಲು ಸಾಧ್ಯವಾಗುತ್ತದೋ ಇಲ್ಲವೋ ಗೊತ್ತಿಲ್ಲ. ಇವೆಲ್ಲವನ್ನೂ ಮೀರಿ ನಮಗೆ ಇಷ್ಟವಾದಂತೆ ಬದುಕುವುದು ಹೇಗೆ?" ಎಂಬ ಪ್ರಶ್ನೆ ಎದುರಾಯಿತು.

ಈ ಪ್ರಶ್ನೆಗೆ ಮನಬಿಚ್ಚಿ ಉತ್ತರಿಸಿದ ನಿತ್ಯಾ ಮೆನನ್, "ನನಗೆ ಬೇರೆ ದಾರಿಯೇ ಇಲ್ಲ. ನಾನು ಇರುವುದೇ ಹೀಗೆ, ನಾನು ನಾನಾಗಿಯೇ ಇರಬೇಕು. ನಾನು ಬದುಕಲು ಸಾಧ್ಯವಿರುವುದೇ ಹೀಗೆ" ಎಂದು ಸ್ಪಷ್ಟವಾಗಿ ಹೇಳಿದರು.

ತಮ್ಮ ಕಾಲೇಜು ದಿನಗಳನ್ನು ನೆನಪಿಸಿಕೊಂಡ ಅವರು, "ನಾನು 15-16 ವರ್ಷದವಳಿದ್ದಾಗ ಈಗ ಇರುವಂತೆ ಗುಂಗುರು ಕೂದಲು ದೊಡ್ಡ ಟ್ರೆಂಡ್ ಆಗಿರಲಿಲ್ಲ. ನನ್ನ ಕೂದಲನ್ನು ನೋಡಿ ಜನ ನಕಾರಾತ್ಮಕವಾಗಿ ಮಾತನಾಡುತ್ತಿದ್ದರು. 'ಏಯ್, ಇದೇನು ಉಬ್ಬಿಕೊಂಡಂತಿದೆ, ಕೂದಲು ನೇರ ಮಾಡಿಸಬಹುದಲ್ವಾ? ಹುಬ್ಬುಗಳು ಯಾಕೆ ಇಷ್ಟು ದಪ್ಪವಾಗಿವೆ, ಸ್ವಲ್ಪ ತೆಳ್ಳಗೆ ಮಾಡಿಸಿ' ಎಂದೆಲ್ಲಾ ಹೇಳುತ್ತಿದ್ದರು. ಅದೆಲ್ಲವೂ ಆಗಿನ ಟ್ರೆಂಡ್‌ಗಳಾಗಿದ್ದವು" ಎಂದರು.

ದೇವರು ಕೊಟ್ಟ ರೂಪವನ್ನು ಬದಲಿಸಲಿಲ್ಲ

ಆದರೆ ಇಂತಹ ಮಾತುಗಳಿಗೆ ತಾವು ಎಂದಿಗೂ ಮಣಿಯಲಿಲ್ಲ ಎಂದಿರುವ ನಿತ್ಯಾ ಮೆನನ್, "ಆಗ ನನಗೆ ಕೇವಲ 15 ವರ್ಷ ವಯಸ್ಸಾಗಿದ್ದರೂ, 'ಹೌದಲ್ವಾ, ಎಲ್ಲರಂತೆ ನಾನೂ ಕೂದಲು ನೇರ ಮಾಡಿಸಿಬಿಡೋಣ' ಎಂದು ಎಂದಿಗೂ ಯೋಚಿಸಲಿಲ್ಲ. ಬದಲಾಗಿ, 'ಇದು ನನ್ನ ತಲೆ, ಇದು ದೇವರು ನನಗೆ ಕೊಟ್ಟಿರುವುದು. ಇದನ್ನು ನಾವು ಹೇಗೆ ನಿಭಾಯಿಸುವುದು?' ಎಂದು ಆಲೋಚಿಸಿದೆ. ಹೀಗಾಗಿ, ಸಹಜವಾಗಿಯೇ ಇದ್ದುಕೊಂಡು ಅದು ಚೆನ್ನಾಗಿ ಕಾಣುವಂತೆ ಮಾಡುವ ದಾರಿಯನ್ನು ನಾನು ಕಂಡುಕೊಂಡೆ" ಎಂದು ತಿಳಿಸಿದರು.

ಈರುಳ್ಳಿಯ ಪದರದಂತೆ ಬದುಕು

ತಮ್ಮ ಜೀವನದ ದೃಷ್ಟಿಕೋನವನ್ನು ವಿವರಿಸಿದ ನಿತ್ಯಾ, "ಕೃತಕವಾಗಿ ಇರಲು ನನಗೆ ಬರುವುದೂ ಇಲ್ಲ, ಹಾಗೆ ಇರಲು ನನಗೆ ಇಷ್ಟವೂ ಇಲ್ಲ. ಜೀವನದ ಸಂಪೂರ್ಣ ಉದ್ದೇಶವೇ ಹೆಚ್ಚು ಹೆಚ್ಚು ನೈಜವಾಗಿ ಬದಲಾಗುತ್ತಾ ಹೋಗುವುದು. ಒಂದು ಈರುಳ್ಳಿಯ ಪದರಗಳನ್ನು ಒಂದೊಂದಾಗಿ ಕಳಚುತ್ತಾ ಹೋದಂತೆ, ನಮ್ಮ ಮೇಲಿರುವ ಅನಗತ್ಯ ಪದರಗಳನ್ನು ಕಳಚಿ ಒಳಗಿನ ಮೂಲಸತ್ವವನ್ನು ತಲುಪುವುದೇ ಜೀವನದ ನಿಜವಾದ ಗುರಿ. ಹೀಗಿರುವಾಗ, ನಮ್ಮ ಮೇಲೆ ಇನ್ನಷ್ಟು ಅನಗತ್ಯ ಪದರಗಳನ್ನು ಹೇರಿಕೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ" ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಯುವಜನತೆಗೆ ಪ್ರೇರಣೆಯ ಮಾತು

ಇಂದಿನ ಸೋಷಿಯಲ್ ಮೀಡಿಯಾ ಮತ್ತು ಫಿಲ್ಟರ್ ಯುಗದಲ್ಲಿ ಬಾಹ್ಯ ಸೌಂದರ್ಯದ ಒತ್ತಡಕ್ಕೆ ಒಳಗಾಗಿ ತಮ್ಮ ನೈಸರ್ಗಿಕ ರೂಪವನ್ನು ಬದಲಿಸಿಕೊಳ್ಳಲು ಮುಂದಾಗುವ ಅನೇಕರಿಗೆ ನಿತ್ಯಾ ಮೆನನ್ ಅವರ ಈ ಮಾತುಗಳು ಆತ್ಮವಿಶ್ವಾಸ ತುಂಬುವಂತಿವೆ. ತಾವು ಇರುವಂತೆಯೇ ತಮ್ಮನ್ನು ಪ್ರೀತಿಸುವುದು ಮತ್ತು ಟ್ರೆಂಡ್‌ಗಳ ಹಿಂದೆ ಬೀಳದೆ ಸಹಜವಾಗಿರುವುದೇ ನಿಜವಾದ ಸೌಂದರ್ಯ ಎಂಬ ಸಂದೇಶವನ್ನು ಅವರ ಮಾತುಗಳು ಸಾರುತ್ತಿವೆ.

ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದ ನಿತ್ಯಾ ಮೆನನ್ ಅವರು 2006ರಲ್ಲಿ 'ಸೆವೆನ್ ಓ' ಕ್ಲಾಕ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಆ ಬಳಿಕ 'ಜೋಶ್', 'ಐದೊಂದ್ಲ ಐದು', ನಾಗಶೇಖರ್ ನಿರ್ದೇಶನದ ಬ್ಲಾಕ್‌ಬಸ್ಟರ್ 'ಮೈನಾ' ಹಾಗೂ ಕಿಚ್ಚ ಸುದೀಪ್ ಜೊತೆಗಿನ 'ಕೋಟಿಗೊಬ್ಬ 2' ಚಿತ್ರಗಳಲ್ಲಿ ನಟಿಸಿ ಕನ್ನಡಿಗರ ಅಚ್ಚುಮೆಚ್ಚಿನ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆ ನೋವಿನಿಂದ ಇನ್ನೂ ಚೇತರಿಸಿಕೊಳ್ಳುತ್ತಿದ್ದೇನೆ: ಕಣ್ಣೀರಿನಲ್ಲೇ ಸತ್ಯ ಬಿಚ್ಚಿಟ್ಟ ರಾಮ್ ಚರಣ್ ಪತ್ನಿ
ಜಗದೀಶನ ಗಂಡಸ್ತನ ಪ್ರಶ್ನಿಸಿದ್ದ ಮಂಜನ ಬೆವರಿಳಿಸಿದ ಕಿಚ್ಚ ಸುದೀಪ್; ಗಾನವಿಗೆ ಢವ ಢವ