
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಬಿಡುಗಡೆಗೂ ಮುನ್ನವೇ ಭಾರಿ ಕುತೂಹಲ ಮೂಡಿಸಿದೆ. ಚಿತ್ರದಲ್ಲಿ ಗಂಗಾ ಎಂಬ ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಲೇಡಿ ಸೂಪರ್‌ಸ್ಟಾರ್ ನಯನತಾರಾ, ಆರಂಭದಲ್ಲಿ ಈ ಸಿನಿಮಾದ ಭಾಗವಾಗಲು ಅಷ್ಟೊಂದು ಉತ್ಸುಕರಾಗಿರಲಿಲ್ಲವಂತೆ. ಅಷ್ಟೇ ಅಲ್ಲ, ಮೊದಲಿಗೆ ‘ಟಾಕ್ಸಿಕ್’ ಸಿನಿಮಾಗೆ ನಯನತಾರಾ ನೋ ಎಂದಿದ್ದರಂತೆ. ಆದರೆ ನಿರ್ದೇಶಕಿ ಗೀತು ಮೋಹನ್‌ದಾಸ್ ಹಾಗೂ ಪಾತ್ರದ ಬಗ್ಗೆ ಅವರಿಗಿದ್ದ ವಿಭಿನ್ನ ದೃಷ್ಟಿಕೋನವೇ ಕೊನೆಗೆ ನಯನತಾರಾ ಅವರ ಮನಸ್ಸು ಬದಲಿಸಿತಂತೆ.
‘ಟಾಕ್ಸಿಕ್’ಗೆ ನಯನತಾರಾ ಮೊದಲು ಹೇಳಿದ್ದು ‘ನೋ’!
‘ಟಾಕ್ಸಿಕ್’ನಲ್ಲಿ ನಯನತಾರಾ, ಯಶ್ ನಿರ್ವಹಿಸಿರುವ ರಾಯಾ ಪಾತ್ರದ ಕಥೆಯೊಂದಿಗೆ ನಿಕಟವಾಗಿ ಬೆಸೆದುಕೊಂಡಿರುವ ಗಂಗಾ ಎಂಬ ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ನಯನತಾರಾ ಮಾತ್ರವಲ್ಲದೆ ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಹಾಗೂ ರುಕ್ಮಿಣಿ ವಸಂತ್ ಸೇರಿದಂತೆ ದೊಡ್ಡ ಮಹಿಳಾ ತಾರಾಬಳಗವೇ ಇದೆ. ಹೀಗಾಗಿ ಸಿನಿಮಾ ಆರಂಭಿಕ ಹಂತದಲ್ಲೇ ಸಾಕಷ್ಟು ಗಮನ ಸೆಳೆದಿತ್ತು. ಆದರೆ ಈ ಪ್ರಾಜೆಕ್ಟ್ ಬಗ್ಗೆ ನಯನತಾರಾ ತಕ್ಷಣವೇ ಒಪ್ಪಿಗೆ ಸೂಚಿಸಿರಲಿಲ್ಲ. ಪಾತ್ರ ಹಾಗೂ ಸಿನಿಮಾವನ್ನು ನಿರ್ದೇಶಕಿ ಗೀತು ಮೋಹನ್‌ದಾಸ್ ಯಾವ ರೀತಿಯಲ್ಲಿ ರೂಪಿಸಲು ಮುಂದಾಗಿದ್ದಾರೆ ಎಂಬುದನ್ನು ಅರಿತ ಬಳಿಕವಷ್ಟೇ ನಟಿ ತಮ್ಮ ನಿರ್ಧಾರ ಬದಲಿಸಿಕೊಂಡಿದ್ದಾರೆ.
ಗೀತು ಮೋಹನ್‌ದಾಸ್ ಮಾತಿಗೆ ನಯನತಾರಾ ಒಪ್ಪಿದ್ರು!
ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ನಯನತಾರಾ, ತಾವು ‘ಟಾಕ್ಸಿಕ್’ಗೆ ಒಪ್ಪಿಕೊಳ್ಳಲು ಸಿನಿಮಾದ ಹಿಂದಿರುವ ತಂಡವೇ ಪ್ರಮುಖ ಕಾರಣ ಎಂದು ಹೇಳಿದ್ದಾರೆ. ಅದರಲ್ಲೂ ಯಶ್ ಮತ್ತು ಗೀತು ಮೋಹನ್‌ದಾಸ್ ತಮ್ಮ ನಿರ್ಧಾರದ ಮೇಲೆ ದೊಡ್ಡ ಪ್ರಭಾವ ಬೀರಿದ್ದಾರೆ ಎಂದು ತಿಳಿಸಿದ್ದಾರೆ. ಗೀತು ಅವರು ಗಂಗಾ ಪಾತ್ರವನ್ನು ಯಾವ ರೀತಿಯಲ್ಲಿ ನೋಡಿದ್ದಾರೆ ಹಾಗೂ ಆ ಪಾತ್ರದ ಪಯಣವನ್ನು ಹೇಗೆ ಕಟ್ಟಿಕೊಡಲು ಬಯಸಿದ್ದಾರೆ ಎಂಬುದು ನಯನತಾರಾ ಅವರಿಗೆ ಇಷ್ಟವಾಗಿದ್ದು, ಅದೇ ಕಾರಣಕ್ಕೆ ಕೊನೆಗೆ ಸಿನಿಮಾದ ಭಾಗವಾಗಲು ಒಪ್ಪಿಕೊಂಡಿದ್ದಾರೆ.
ಯಶ್ ಸಮರ್ಪಣೆಗೆ ನಯನತಾರಾ ಫಿದಾ!
ಯಶ್ ಅವರ ಸಿನಿಮಾ ಮೇಲಿನ ಸಮರ್ಪಣೆಯ ಬಗ್ಗೆಯೂ ನಯನತಾರಾ ಮುಕ್ತಕಂಠದಿಂದ ಮಾತನಾಡಿದ್ದಾರೆ. “ಯಶ್ ಅವರಷ್ಟು ಕಷ್ಟಪಟ್ಟು ಕೆಲಸ ಮಾಡುವ ನಟನನ್ನು ನಾನು ಇದುವರೆಗೆ ನೋಡಿಲ್ಲ” ಎಂದು ಹೇಳಿರುವ ನಯನತಾರಾ, ‘ಟಾಕ್ಸಿಕ್’ಗಾಗಿ ಯಶ್ ತೋರಿದ ಶ್ರಮವನ್ನು ವಿಶೇಷವಾಗಿ ಕೊಂಡಾಡಿದ್ದಾರೆ. ಯಶ್ ತಮ್ಮ ಪಾತ್ರದ ಅಭಿನಯಕ್ಕೆ ಮಾತ್ರ ಸೀಮಿತರಾಗಿರದೆ, ಇಡೀ ಸಿನಿಮಾದ ಗುಣಮಟ್ಟದ ಬಗ್ಗೆ ಕಾಳಜಿ ವಹಿಸುತ್ತಿದ್ದರು. ನಿರ್ಮಾಪಕರಾಗಿಯೂ ತಂಡದ ಪ್ರತಿಯೊಬ್ಬರನ್ನೂ ಪ್ರೋತ್ಸಾಹಿಸುತ್ತಿದ್ದರು ಎಂದು ನಯನತಾರಾ ಹೇಳಿದ್ದಾರೆ. ಅಷ್ಟೇ ಅಲ್ಲ, ಸಿನಿಮಾ ಕೆಲಸದ ನಡುವೆ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರಿಗೂ ಯಶ್ ಸಂಪೂರ್ಣ ಬೆಂಬಲ ನೀಡಿದ್ದರು ಎಂದು ನಟಿ ತಿಳಿಸಿದ್ದಾರೆ. ಸಿನಿಮಾ ಮೇಲಿನ ಅವರ ಕಮಿಟ್‌ಮೆಂಟ್ ಕುಟುಂಬ ಮತ್ತು ಮಕ್ಕಳೊಂದಿಗೆ ಕಳೆಯುವ ಸಮಯದ ಮೇಲೂ ಪರಿಣಾಮ ಬೀರಿತ್ತು ಎಂದು ನಯನತಾರಾ ಹೇಳಿದ್ದಾರೆ.
ಮಹಿಳಾ ಪಾತ್ರಗಳ ವಿಚಾರದಲ್ಲೂ ‘ಟಾಕ್ಸಿಕ್’ ಚರ್ಚೆ
‘ಟಾಕ್ಸಿಕ್’ ಸಿನಿಮಾ ಮಹಿಳಾ ಪಾತ್ರಗಳು, ಲೈಂಗಿಕತೆ ಹಾಗೂ ಸಮ್ಮತಿಯಂತಹ ವಿಚಾರಗಳನ್ನು ವಿಭಿನ್ನವಾಗಿ ತೋರಿಸಿರುವ ಕಾರಣವೂ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಜೂನ್‌ನಲ್ಲಿ ಚಿತ್ರದ ಮೊದಲ ಟೀಸರ್ ಬಿಡುಗಡೆಯಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಮಹಿಳಾ ಪಾತ್ರಗಳನ್ನು ವಸ್ತುವಿನಂತೆ ತೋರಿಸಲಾಗಿದೆ ಎಂದು ಟೀಕಿಸಿದ್ದರು. ಈ ಚರ್ಚೆಗೆ ನಿರ್ದೇಶಕಿ ಗೀತು ಮೋಹನ್‌ದಾಸ್ ಇನ್‌ಸ್ಟಾಗ್ರಾಂ ಸ್ಟೋರಿಯ ಮೂಲಕ ಪ್ರತಿಕ್ರಿಯಿಸಿದಂತೆಯೂ ಆಗಿತ್ತು. ಚಿತ್ರದಲ್ಲಿ ಮಹಿಳೆಯರ ಆಸೆ, ಸಮ್ಮತಿ ಮತ್ತು ವ್ಯವಸ್ಥೆಯನ್ನು ಮಹಿಳೆಯರೇ ಹೇಗೆ ನಿಭಾಯಿಸುತ್ತಾರೆ ಎಂಬ ವಿಚಾರಗಳಿವೆ ಎಂಬ ಅರ್ಥದಲ್ಲಿ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು.
ಗೀತು ಮೋಹನ್‌ದಾಸ್‌ಗೆ ರಾಮ್ ಗೋಪಾಲ್ ವರ್ಮಾ ಮೆಚ್ಚುಗೆ
‘ಟಾಕ್ಸಿಕ್’ ಟ್ರೇಲರ್ ಬಿಡುಗಡೆಯಾದ ಬಳಿಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೂಡ ಗೀತು ಮೋಹನ್‌ದಾಸ್ ಅವರ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ. ಮಹಿಳಾ ಸಬಲೀಕರಣದ ಪ್ರತೀಕ ಎಂದು ಗೀತು ಅವರನ್ನು ಕೊಂಡಾಡಿರುವ ಅವರು, ಸಿನಿಮಾದಲ್ಲಿ ಅವರು ರೂಪಿಸಿರುವ ಕೆಲವು ದೃಶ್ಯಗಳನ್ನು ನೋಡಿ ತಾನೇ ಅಚ್ಚರಿಗೊಂಡಿದ್ದಾಗಿ ಹೇಳಿದ್ದಾರೆ.
1980ರ ದಶಕದ ಗೋವಾ ಹಿನ್ನೆಲೆಯಲ್ಲೇ ‘ಟಾಕ್ಸಿಕ್’ ಕಥೆ ಸಾಗುತ್ತದೆ. ಪ್ರವಾಸಿಗರ ಸ್ವರ್ಗದಂತೆ ಕಾಣುವ ಗೋವಾದ ಮತ್ತೊಂದು ಮುಖದಲ್ಲಿ ನಡೆಯುವ ಅಪರಾಧ, ವಂಚನೆ ಹಾಗೂ ಡ್ರಗ್ ಕಾರ್ಟೆಲ್ ಸುತ್ತ ಸಿನಿಮಾ ಸಾಗಲಿದೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ್ ಮತ್ತು ಯಶ್ ನಿರ್ಮಿಸಿದ್ದಾರೆ. ಸಿನಿಮಾ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಚಿತ್ರೀಕರಣಗೊಂಡಿದ್ದು, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಡಬ್ ಆಗಿ ಬಿಡುಗಡೆಯಾಗಲಿದೆ.
ಒಟ್ಟಿನಲ್ಲಿ, ಮೊದಲು ‘ನೋ’ ಎಂದಿದ್ದ ನಯನತಾರಾ ಕೊನೆಗೆ ‘ಟಾಕ್ಸಿಕ್’ಗೆ ಗ್ರೀನ್ ಸಿಗ್ನಲ್ ನೀಡಲು ಗೀತು ಮೋಹನ್‌ದಾಸ್ ಅವರ ಪಾತ್ರದ ಕುರಿತ ದೃಷ್ಟಿಕೋನ ಮತ್ತು ಯಶ್ ಅವರ ಸಮರ್ಪಣೆಯೇ ಪ್ರಮುಖ ಕಾರಣವಾಗಿರುವುದು ಇದೀಗ ಬಹಿರಂಗವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.