ಲತಾ ಮಂಗೇಶ್ಕರ್ ಬಿಳಿ ಸೀರೆ ಮೇಲೆ ಬಿಸಿ ಟೀ ಚೆಲ್ಲಿದ್ದ SPB! 'ಕನ್ನಡ ಎಂದರೆ ಬಾಲುವಿನ ಮಾತು' ಆಗಿದ್ದರ ಹಿಂದಿನ ಕಥೆ

Published : Nov 05, 2026, 08:48 PM IST
SP Balasubrahmanyam

ಸಾರಾಂಶ

SP Balasubrahmanyam: ಕನ್ನಡ ಭಾಷೆಯೇ ಗೊತ್ತಿಲ್ಲದಿದ್ದ ಎಸ್‌ಪಿಬಿ 'ಕನ್ನಡ ಎಂದರೆ ಬಾಲುವಿನ ಮಾತು' ಎನ್ನುವ ಮಟ್ಟಿಗೆ ಬೆಳೆದಿದ್ದು ಹೇಗೆ? ಗಾನ ಕೋಗಿಲೆ ಲತಾ ಮಂಗೇಶ್ಕರ್ ಬಿಳಿ ಸೀರೆಯ ಮೇಲೆ ಬಿಸಿ ಟೀ ಚೆಲ್ಲಿದಾಗ ನಡೆದಿದ್ದೇನು? ಗಾನ ಗಂಧರ್ವ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ವೃತ್ತಿಜೀವನದ ಮರೆಯಲಾಗದ ಅಪರೂಪದ ಕಥೆ ಇಲ್ಲಿದೆ.

ಗಾನ ಗಂಧರ್ವ, ದಿವಂಗತ ಎಸ್.ಪಿ.ಬಾಲಸುಬ್ರಹ್ಮಣ್ಯಂ (SPB) ಅವರ ಅದ್ಭುತ ಗಾಯನ ಮತ್ತು ಸರಳ ವ್ಯಕ್ತಿತ್ವ ಇಂದಿಗೂ ಕೋಟ್ಯಂತರ ಸಂಗೀತ ಪ್ರೇಮಿಗಳ ಮನಸ್ಸಿನಲ್ಲಿ ಜೀವಂತ. ಭಾಷೆಯ ಗಡಿಗಳನ್ನು ಮೀರಿ ಸಾವಿರಾರು ಹಾಡುಗಳನ್ನು ಹಾಡಿರುವ ಎಸ್‌ಪಿಬಿ, ತಮ್ಮ ವೃತ್ತಿಜೀವನದ ಆರಂಭದಲ್ಲಿ ಕನ್ನಡ ಮತ್ತು ತಮಿಳು ಭಾಷೆಗಳನ್ನು ಕಲಿತ ರೋಚಕ ಹಾದಿ ಹಾಗೂ ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರ ಸೀರೆ ಮೇಲೆ ಬಿಸಿ ಟೀ ಚೆಲ್ಲಿದ ಮರೆಯಲಾಗದ ಘಟನೆಯನ್ನು ಈ ಹಿಂದೆ ಮೆಲುಕು ಹಾಕಿದ್ದರು. ಆ ಅಪರೂಪದ ನೆನಪುಗಳ ಮೆಲುಕು ಇಲ್ಲಿದೆ.

ಯಾವುದೇ ಭಾಷೆಯ ಹಾಡನ್ನು ಹಾಡುವಾಗ ಅಲ್ಲಿನ 'ಸ್ಲ್ಯಾಂಗ್' (ಉಚ್ಚಾರಣೆ) ಮತ್ತು ಶಬ್ದದ ಶೈಲಿ ಅತ್ಯಂತ ಮುಖ್ಯ. ಅದಕ್ಕಾಗಿ ವಿಶೇಷ ಪರಿಶ್ರಮ ಬೇಕು ಎಂದು ನಂಬಿದ್ದವರು ಮಹಾನ್ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ. ತೆಲುಗು ಮಾತೃಭಾಷೆಯಾಗಿದ್ದರೂ, ಕನ್ನಡದಲ್ಲಿ ಅವರು ಮಾತನಾಡುತ್ತಿದ್ದ ಸ್ಪಷ್ಟ ಕನ್ನಡ ಇಂದಿಗೂ ಕನ್ನಡಿಗರಿಗೆ ಅಚ್ಚುಮೆಚ್ಚು. ಆದರೆ, ಆರಂಭದ ದಿನಗಳಲ್ಲಿ ಅವರಿಗೆ ಕನ್ನಡ ಎಂಬ ಭಾಷೆಯಿದೆ ಎಂದೇ ತಿಳಿದಿರಲಿಲ್ಲವಂತೆ.

ಪೋಸ್ಟರ್ ನೋಡಿ ತಮಿಳು ಕಲಿತೆ

ತಮ್ಮ ಭಾಷಾ ಕಲಿಕೆಯ ದಿನಗಳನ್ನು ನೆನಪಿಸಿಕೊಂಡಿದ್ದ ಎಸ್‌ಪಿಬಿ, "ನಾನು ಹಾಡಿದ ಎರಡನೇ ಹಾಡು ಕನ್ನಡ. ಮೊದಲ ಹಾಡನ್ನು ರೆಕಾರ್ಡ್ ಮಾಡುವಾಗ ಸಂಗೀತ ನಿರ್ದೇಶಕ ರಂಗಾರಾವ್ ಅವರು ಅದನ್ನು ಕೇಳಿ 'ನಾನು ನಿನ್ನ ಬಳಿ ಕನ್ನಡದಲ್ಲಿ ಹಾಡಿಸುತ್ತೇನೆ' ಅಂದರು. ನಿಜ ಹೇಳಬೇಕೆಂದರೆ ಕನ್ನಡ ಎನ್ನುವ ಭಾಷೆ ಒಂದಿದೆ ಎಂದೇ ನನಗೆ ಆಗಷ್ಟೇ ಗೊತ್ತಾಗಿದ್ದು! ಕನ್ನಡ ಹೇಗಿರುತ್ತದೆ ಎಂದೂ ತಿಳಿದಿರಲಿಲ್ಲ. ಆಗ ಒಬ್ಬ ಕವಿ ಬಂದು ಏನೂ ತೊಂದರೆಯಿಲ್ಲ, ಇದು ತೆಲುಗಿಗೆ ಹತ್ತಿರವಿರುತ್ತದೆ ಎಂದು ತೆಲುಗಿನಲ್ಲೇ ಸಾಹಿತ್ಯವನ್ನು ಬರೆದುಕೊಟ್ಟು ಹಾಡಿಸಿದರು. ಆದರೆ ನಂತರದ ದಿನಗಳಲ್ಲಿ ನಾನು ನಡೆಸಿಕೊಟ್ಟ ಕಾರ್ಯಕ್ರಮಗಳಿಂದಾಗಿ ಜನರು 'ಕನ್ನಡ ಎಂದರೆ ಬಾಲುವಿನ ಮಾತೇ ಕನ್ನಡ' ಎನ್ನುವಷ್ಟರ ಮಟ್ಟಿಗೆ ಪ್ರೀತಿ ನೀಡಿದರು" ಎಂದು ಸ್ಮರಿಸಿದ್ದರು.

ಇನ್ನು ತಮಿಳು ಚಿತ್ರರಂಗಕ್ಕೆ ಹೋದಾಗ, ಖ್ಯಾತ ಸಂಗೀತ ನಿರ್ದೇಶಕ ಎಂ.ಎಸ್. ವಿಶ್ವನಾಥನ್ ಅವರು ಎಸ್‌ಪಿಬಿಗೆ ನೇರ ಸವಾಲು ಹಾಕಿದ್ದರಂತೆ. "ನಿನ್ನ ಹಾಡು ಚೆನ್ನಾಗಿದೆ, ಆದರೆ ತಮಿಳು ಉಚ್ಚಾರಣೆ ಸರಿಯಿಲ್ಲ. ಓದಲು ಬರದಿದ್ದರೂ ಪರವಾಗಿಲ್ಲ, ತಮಿಳು ಚೆನ್ನಾಗಿ ಮಾತನಾಡಲು ಕಲಿತು ಬಾ, ಆಮೇಲೆ ಅವಕಾಶ ನೀಡುತ್ತೇನೆ" ಎಂದಿದ್ದರು. ದೊಡ್ಡ ನಿರ್ದೇಶಕರ ಮಾತನ್ನು ಗಂಭೀರವಾಗಿ ಪರಿಗಣಿಸಿದ ಬಾಲು, ಬೀದಿಗಳಲ್ಲಿ ಅಂಟಿಸುತ್ತಿದ್ದ ಸಿನಿಮಾ ಪೋಸ್ಟರ್‌ಗಳನ್ನು ಓದಿ ಓದಿಯೇ ತಮಿಳು ಕಲಿತುಕೊಂಡಿದ್ದರಂತೆ!

ಲತಾಜಿ ಬಿಳಿ ಸೀರೆ ಮೇಲೆ ಟೀ ಚೆಲ್ಲಿದ್ದ ಆ ದಿನ

ಹಿಂದಿ ಚಿತ್ರರಂಗದ ದಂತಕಥೆ ಲತಾ ಮಂಗೇಶ್ಕರ್ ಅವರೊಂದಿಗಿನ ಮೊದಲ ಭೇಟಿಯ ಕ್ಷಣವನ್ನು ಎಸ್‌ಪಿಬಿ ಅತ್ಯಂತ ರೋಚಕವಾಗಿ ಹಂಚಿಕೊಂಡಿದ್ದರು. "ಅದು 'ಏಕ್ ದುಜೆ ಕೆ ಲಿಯೆ' ಚಿತ್ರದ 'ತೇರೆ ಮೇರೆ ಬೀಚ್ ಮೇ' ಹಾಡಿನ ರೆಕಾರ್ಡಿಂಗ್ ಸಮಯ. ಲಕ್ಷ್ಮೀಕಾಂತ್-ಪ್ಯಾರೇಲಾಲ್ ಸಂಗೀತ ನಿರ್ದೇಶನ. ಲತಾಜಿ ಹಾಡುತ್ತಿರುವಾಗ ನಡುವೆ ನಾನು 'ನೀ ರೊಂಬಾ ನಲ್ಲಾ ಪಾಡ್ರೆ' (ನೀವು ತುಂಬಾ ಚೆನ್ನಾಗಿ ಹಾಡುತ್ತೀರಾ) ಎಂಬ ತಮಿಳು ಡೈಲಾಗ್ ಹೇಳಬೇಕಿತ್ತು. ಸಾಕ್ಷಾತ್ ಲತಾ ಮಂಗೇಶ್ಕರ್ ಅವರ ಹಾಡಿಗೆ ನಾನೊಬ್ಬ ಸರ್ಟಿಫಿಕೇಟ್ ಕೊಡಬೇಕಿತ್ತಲ್ಲ ಎಂಬ ಭಯ ನನ್ನಲ್ಲಿತ್ತು.

ಅವರು ಸ್ಟುಡಿಯೋಗೆ ಬಂದಾಗ ನೂರಕ್ಕೂ ಹೆಚ್ಚು ವಾದ್ಯವೃಂದದವರು ಹಾಗೂ ಸಂಗೀತ ನಿರ್ದೇಶಕರು ಗೌರವದಿಂದ ಎದ್ದು ನಿಂತರು. ನಾನು ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದೆ. ನಂತರ ವಾಯ್ಸ್ ಬೂತ್‌ನಲ್ಲಿ ಕುಳಿತು ಅವರು ಹಾಡನ್ನು ಕಲಿಯುತ್ತಿದ್ದರು, ನಾನು ಡೈಲಾಗ್ ಹೇಳಲು ಸಿದ್ಧನಾಗುತ್ತಿದ್ದೆ. ಅಷ್ಟರಲ್ಲಿ ನಮಗೆ ಟೀ ತಂದುಕೊಟ್ಟರು. ನಾನು ತೀವ್ರ ಗದ್ಗದಿತನಾಗಿದ್ದೆ, ಭಯದಲ್ಲಿ ಕೈಗಳು ನಡುಗುತ್ತಿದ್ದವು. ಲತಾಜಿ ಯಾವಾಗಲೂ ಶುಭ್ರ ಬಿಳಿ ಸೀರೆಯನ್ನೇ ಉಡುತ್ತಿದ್ದರು ಎಂಬುದು ಎಲ್ಲರಿಗೂ ಗೊತ್ತು. ನನ್ನ ಕೈ ನಡುಗಿ ಆ ಬಿಸಿ ಟೀಯನ್ನು ಅವರ ಸೀರೆಯ ಮೇಲೆಯೇ ಚೆಲ್ಲಿಬಿಟ್ಟೆ!

ಆ ಕ್ಷಣ ನನ್ನ ಎದೆ ಧಸಕ್ ಎಂದಿತು. ಬಾಲು ಸುಬ್ರಹ್ಮಣ್ಯಂ, ಹಿಂದಿ ಚಿತ್ರರಂಗದಲ್ಲಿ ನಿನಗೆ ಇದು ಮೊದಲ ದಿನ ಮತ್ತು ಕೊನೆಯ ದಿನ. ರೆಕಾರ್ಡಿಂಗ್ ಕ್ಯಾನ್ಸಲ್ ಆಗಿ ನಿನ್ನನ್ನು ಹೊರದಬ್ಬುತ್ತಾರೆ ಎಂದುಕೊಂಡೆ. ಆದರೆ ಲತಾಜಿ ಕಿಂಚಿತ್ತೂ ಕೋಪಗೊಳ್ಳದೆ, ಮುಗುಳ್ನಕ್ಕು ಬಹುತ್ ಅಚ್ಛಾ ಶಗುನ್ ಹೇ ಬಾಲುಜಿ (ಇದು ತುಂಬಾ ಒಳ್ಳೆಯ ಶಕುನ ಬಾಲು ಅವರೇ) ಎಂದರು! ಬಿಳಿ ಬಟ್ಟೆಯ ಮೇಲೆ ಕಾಫಿ ಅಥವಾ ಟೀ ಚೆಲ್ಲಿದರೆ ಅದು ಶುಭ ಶಕುನವಂತೆ! ಅವರ ಆ ದೊಡ್ಡ ಗುಣ ನೋಡಿ ನಾನು ನಿರಾಳನಾದೆ. ನಂತರದ ದಿನಗಳಲ್ಲಿ ಹೀಗೆ ಶುಭ ಶಕುನವಾಗುವುದಾದರೆ ನಾನು ಪ್ರತಿ ರೆಕಾರ್ಡಿಂಗ್‌ನಲ್ಲೂ ನಿಮ್ಮ ಸೀರೆ ಮೇಲೆ ಕಾಫಿ ಚೆಲ್ಲುತ್ತಿದ್ದೆ ಎಂದು ಲತಾಜಿ ಜೊತೆ ತಮಾಷೆ ಮಾಡುತ್ತಿದ್ದೆ" ಎಂದು ಎಸ್‌ಪಿಬಿ ಆ ದಿನಗಳನ್ನು ಮೆಲುಕು ಹಾಕಿದ್ದರು.

ಭಾಷೆಯ ಮೇಲಿನ ನಿಷ್ಠೆ ಮತ್ತು ಹಿರಿಯ ಕಲಾವಿದರ ಮೇಲಿನ ವಿನಯವೇ ಎಸ್‌ಪಿಬಿ ಅವರನ್ನು ಭಾರತೀಯ ಸಂಗೀತ ಲೋಕದ ಅಜರಾಮರ ಗಾಯಕನನ್ನಾಗಿ ರೂಪಿಸಿತು ಎಂಬುದಕ್ಕೆ ಈ ಘಟನೆಗಳೇ ಸಾಕ್ಷಿ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

‘ನಿಜವಾದ ಪ್ರೀತಿ ಬೇಕು, ಒಳ್ಳೆಯ ಹುಡುಗನಿದ್ದರೆ ಇನ್‌ಸ್ಟಾಗ್ರಾಂಗೆ ಮೆಸೇಜ್ ಮಾಡಿ’: ಹುಚ್ಚ ನಟಿ ಓಪನ್ ಆಫರ್!
ನಟ ಸೂರ್ಯ ಸಿನಿಮಾವನ್ನು 3 ಬಾರಿ ರಿಜೆಕ್ಟ್ ಮಾಡಿದ ನಾಯಕಿ ಯಾರು ಗೊತ್ತಾ? ಕಾರಣ ಇಲ್ಲಿದೆ