ಬಂಡೀಪುರ ಕಾಡಿನಲ್ಲಿ ರಜನಿ, ಅಕ್ಷಯ್‌ ಏನು ಶೂಟಿಂಗ್‌ ಮಾಡಿದ್ರು?

By Suvarna NewsFirst Published Jan 30, 2020, 4:20 PM IST
Highlights

ಬಂಡೀಪುರದ ಹುಲಿ ರಕ್ಷಿತಾರಣ್ಯದಲ್ಲಿ ಡಿಸ್ಕವರಿ ಚಾನೆಲ್‌ನಲ್ಲಿ ಪ್ರಸಾರವಾಗೋ ಮ್ಯಾನ್‌ ವರ್ಸಸ್ ವೈಲ್ಡ್‌ ಎನ್ನುವ ಹೆಸರಿನ ಕಾರ್ಯಕ್ರಮದ ಶೂಟಿಂಗ್‌‌ ಮೂರು ದಿನಗಳಿಂದ ನಡೀತಾ ಇದೆ. ಅದರಲ್ಲಿ ಕಾರ್ಯಕ್ರಮದ ಮುಖ್ಯ ಆಂಕರ್‌ ಬೇರ್‌ ಗ್ರಿಲ್ಸ್‌ ಭಾಗವಹಿಸಿದಾನೆ. ಅವನ ಜೊತೆಗೆ ಕಾಣಿಸಿಕೊಂಡವರು ನಮ್ಮ ದಕ್ಷಿಣ ಭಾರತದ ಸೂಪರ್‌ ಸ್ಟಾರ್‌ ರಜನಿಕಾಂತ್‌ ಹಾಗೂ ಬಾಲಿವುಡ್‌ನ ಸೂಪರ್‌ಸ್ಟಾರ್‌ ಅಕ್ಷಯ್‌ಕುಮಾರ್‌.

ಬಂಡೀಪುರದ ಹುಲಿ ರಕ್ಷಿತಾರಣ್ಯದಲ್ಲಿ ಡಿಸ್ಕವರಿ ಚಾನೆಲ್‌ನಲ್ಲಿ ಪ್ರಸಾರವಾಗೋ ಮ್ಯಾನ್‌ ವರ್ಸಸ್ ವೈಲ್ಡ್‌ ಎನ್ನುವ ಹೆಸರಿನ ಕಾರ್ಯಕ್ರಮದ ಶೂಟಿಂಗ್‌‌ ಮೂರು ದಿನಗಳಿಂದ ನಡೀತಾ ಇದೆ. ಅದರಲ್ಲಿ ಕಾರ್ಯಕ್ರಮದ ಮುಖ್ಯ ಆಂಕರ್‌ ಬೇರ್‌ ಗ್ರಿಲ್ಸ್‌ ಭಾಗವಹಿಸಿದಾನೆ. ಅವನ ಜೊತೆಗೆ ಕಾಣಿಸಿಕೊಂಡವರು ನಮ್ಮ ದಕ್ಷಿಣ ಭಾರತದ ಸೂಪರ್‌ ಸ್ಟಾರ್‌ ರಜನಿಕಾಂತ್‌ ಹಾಗೂ ಬಾಲಿವುಡ್‌ನ ಸೂಪರ್‌ಸ್ಟಾರ್‌ ಅಕ್ಷಯ್‌ಕುಮಾರ್‌. ರಜನಿ ಶೂಟಿಂಗ್‌ ವೇಳೆಗೆ ಅವರಿಗೆ ಸಣ್ಣಪುಟ್ಟ ಗಾಯಗಳಾದವು ಎಂಬ ಸುದ್ದಿಯೂ ಬಂತು. ಮ್ಯಾನ್‌ ವರ್ಸಸ್‌ ವೈಲ್ಡ್‌ ಕಾರ್ಯಕ್ರಮ ಕಳೆದ ಸಾರಿ ಜಿಮ್‌ ಕಾರ್ಬೆಟ್‌ ನ್ಯಾಷನಲ್‌ ಪಾರ್ಕಿನಲ್ಲಿ ಶೂಟ್‌ ಆಗಿತ್ತು. ಅದರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಗವಹಿಸಿದ್ರು. ಅದು ಪಾಪ್ಯುಲರ್‌ ಆಗಿತ್ತು. ಈ ಸಾರಿ ರಜನಿ ಮತ್ತು ಅಕ್ಷಯ್‌ ಭಾರತದಲ್ಲಿ ಹೊಂದಿರುವ ಜನಪ್ರಿಯತೆಯನ್ನು ಎನ್‌ಕ್ಯಾಶ್‌ ಮಾಡಿಕೊಂಡು, ಇಲ್ಲಿ ಈ ಕಾರ್ಯಕ್ರಮದ ಟಿಆರ್‌ಪಿಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳೋದು ಈ ಕಾರ್ಯಕ್ರಮದ ಆಯೋಜಕರ ಉದ್ದೇಶ.

ಅದಿರಲಿ, ನಿಜಕ್ಕೂ ಬಂಡೀಪುರದಲ್ಲಿ ನಡೀತಿರೋ ಶೂಟಿಂಗ್‌ ಆದ್ರೂ ಏನು? ಪರಿಸರಪ್ರೇಮಿಗಳು ಈ ಶೂಟಿಂಗ್ ಅನ್ನು ವಿರೋಧಿಸಿದಾರೆ. ತರಗೆಲೆ ಬೀಳೋ ಈ ಒಣ ಸೀಸನ್‌ನಲ್ಲಿ ಶೂಟಿಂಗ್‌ ನಡೆಸಿದ್ರೆ ಕಾಳ್ಗಿಚ್ಚು ಬೀಳೋ ಸಂಭವ ಇದೆ ಎಂಬುದು ಇವರ ಆತಂಕ. ಇವರ ಆತಂಕದಲ್ಲಿ ನಿಜವಿದೆ. ಆದ್ರೆ ಅರಣ್ಯ ಇಲಾಖೆ ಅದನ್ನೆಲ್ಲ ಗಮನಿಸಿದೆ. ಹೀಗಾಗಿ ಈ ಬಾರಿ ಶೂಟಿಂಗ್‌ಗೆ ಸ್ಟ್ರಿಕ್ಟ್‌ ಆಗ ಗೈಡ್ಲೈನ್‌ಗಳನ್ನು ಹಾಕಿದೆ. ಈ ಮೊದಲು ಇಲ್ಲಿ ಯಾರಿಗೂ ಶೂಟಿಂಗ್‌ಗೆ ಅವಕಾಶ ಕೊಡ್ತಿರಲಿಲ್ಲ. ಅಣ್ಣಾವ್ರ ಒಂದು ಫಿಲಂ ಶೂಟ್‌ ಮಾಡಿದ್ದೇ ಕೊನೆ. ಈಗ ತುಂಬ ಮೇಲಿನಿಂದ ಇನ್‌ಫ್ಲುಯೆನ್ಸ್‌ ಮಾಡಿಸಿರೋದರಿಂದ ಈ ಶೂಟಿಂಗ್‌ ನಡೀತಿದೆಯಂತೆ. ಈ ಕಾರ್ಯಕ್ರಮವನ್ನು ಜನ ನೋಡೋದರಿಂದ, ಬಂಡಿಪುರ ಅರಣ್ಯಕ್ಕೆ ಸಹಾಯಧನ ಬರೋದು ಹೆಚ್ಚಾಗಬಹುದು, ಅರಣ್ಯ ಸಂರಕ್ಷಣೆಗೆ ಸಹಾಯ ಆಗಬಹುದು ಎಂಬುದು ಅರಣ್ಯ ಇಲಾಖೆಯವರ ಆಶಯ.

 

ಬಂಡೀಪುರದಲ್ಲಿ ಮ್ಯಾನ್‌ vs ವೈಲ್ಡ್‌ ಶೂಟಿಂಗ್‌, ನಟ ರಜನಿಗೆ ಗಾಯ!

 

ಮ್ಯಾನ್‌ ವರ್ಸಸ್‌ ವೈಲ್ಡ್‌ ಕಾರ್ಯಕ್ರಮ ನಿಜಕ್ಕೂ ಇರೋದು ಪರಿಸರ ಸಂರಕ್ಷಣೆಯೆ ಬಗೆಗೆ ಅಲ್ಲವೇ ಅಲ್ಲ. ಅದು ಇರೋದು, ದಟ್ಟ ಕಾಡಿನಲ್ಲಿ ಮನುಷ್ಯ ಸಿಕ್ಕಿಹಾಕಿಕೊಂಡರೆ, ಅಲ್ಲಿಂದ ಪಾರಾಗಿ ಹೇಗೆ ಹೊರಗೆ ಬರಬಹುದು ಅನ್ನುವ ಕಾನ್‌ಸೆಪ್ಟ್‌ ಮೇಲೆ. ಈ ಕಾರ್ಯಕ್ರಮದ ಪ್ರಧಾನ ಸೂತ್ರಧಾರ ಬೇರ್‌ ಗ್ರಿಲ್ಸ್‌, ಇಂಥ ನಾನಾ ಐಡಿಯಾಗಳನ್ನು ಮಾಡ್ತಾನೆ. ಅಮೆಜಾನ್‌ ಅರಣ್ಯದಲ್ಲಿ ಸಿಕ್ಕಿಹಾಕಿಕೊಂಡರೆ ಇದ್ದಲ್ಲೇ ಬೆಂಕಿ ಹಾಕಿ, ಹೊಗೆ ಕಾಣಿಸಿಕೊಳ್ಳುವಂತೆ ಮಾಡಿ, ಹೆಲಿಕಾಪ್ಟರ್‌ ಮೂಲಕ ಪಾರಾಗಬಹುದು ಅನ್ನುವಂಥ ಡಬ್ಬಾ ಐಡಿಯಾಗಳನ್ನೆಲ್ಲ ಈತ ಹೇಳಿಕೊಡ್ತಾನೆ. ಕಳೆದ ಸಾರಿ ಮೋದಿಯವರ ಡ್ರೆಸ್‌ನ ಇಸ್ತ್ರಿ ಕೂಡ ಹಾಳಾಗದಂತೆ ಈತ ಕಾಡಿನಲ್ಲಿ ಕರೆದೊಯ್ದಿದ್ದ. ಅಂದರೆ ಈ ಕಾರ್ಯಕ್ರಮದ ಆಶಯ ಅರಣ್ಯ ಅಥವಾ ವನ್ಯಮೃಗಗಳ ರಕ್ಷಣೆಯಲ್ಲ. ಮನುಷ್ಯನ ರಕ್ಷಣೆ ಮಾತ್ರ. ಮರಗಿಡ ಕತ್ತರಿಸಿ ಈಟಿ ಮಾಡಿಕೊಳ್ಳುವುದು, ಕಲ್ಲು ತಿಕ್ಕಿ ಬೆಂಕಿ ಬರಿಸುವುದು ಮುಂತಾದ ಹಳೇ ಐಡಿಯಾಗಳೆಲ್ಲ ಇವನ ಬಳಿ ಇವೆ.

 

ಬಂಡೀಪುರಕ್ಕೆ ನಟ ಅಕ್ಷಯ್‌ ಕುಮಾರ್‌ ಆಗಮನ!

 

ಇರಲಿ, ಸದ್ಯ ಬಂಡಿಪುರದಲ್ಲಿ ನಡೆದಿರುವ ಶೂಟಿಂಗ್‌ನಲ್ಲಿ ಅರಣ್ಯದಿಂದ ಹೊರಗೆ ಬರುವುದು ಹೇಗೆ ಎಂಬ ಬಗ್ಗೆ ಯಾವ ಐಡಿಯಾವೂ ಇಲ್ಲವಂತೆ. ಅಲ್ಲಿ ಬರೋ ರಜನಿಕಾಂತ್‌ ಹಾಗೂ ಅಕ್ಷಯ್‌ಕುಮಾರ್‌, ಮರಗಳ ನಡುವೆ ನಿಂತು, ಈ ಪರಿಸರ ಎಷ್ಟು ಚೆನ್ನಾಗಿದೆ, ಇದನ್ನು ಯಾಕೆ ಉಳಿಸಿಕೊಳ್ಳಬೇಕು ಅನ್ನುವ ಬಗ್ಗೆ ಭಾಷಣ ಮಾಡುತ್ತಾರೆ. ಬಂಡಿಪುರ ಕಾಡಿನಲ್ಲಿ ಮನುಷ್ಯನಿಗೆ ಅಪಾಯ ಮಾಡಬಲ್ಲ ಅಪಾಯಕಾರಿ ಪ್ರಾಣಿ ಅಂದೆ ಒಂಟಿ ಸಲಗ ಮಾತ್ರ. ಅದರ ದೃಷ್ಟಿಗೆ ಬಿದ್ದರೆ ಏನ್‌ ಮಾಡ್ಬೇಕು, ತಪ್ಪಿಸಿಕೊಳ್ಳೋ ಬಗೆ ಹೇಗೆ ಎಂಬುದನ್ನು ಶೂಟಿಂಗ್‌ ಮಾಡಲಾಗಿದೆಯಂತೆ. ಈ ಶೂಟಿಂಗ್‌ನಲ್ಲಿ ಮಾತ್ರ ನಿಜವಾದ ಯಾವ ಕಾಡಿನ ಪ್ರಾಣಿಯನ್ನೂ ಬಳಸಲಾಗಿಲ್ಲ. ಅರಣ್ಯಕ್ಕೆ ಯಾವುದೇ ಹಾನಿ ಮಾಡಲಾಗಿಲ್ಲ ಅಂತಾರೆ ಹೆಸರು ಹೇಳಲು ಇಚ್ಛಿಸದ ಅರಣ್ಯಾಧಿಕಾರಿಗಳು. ಮೂರು ದಿನಗಳ ಶೂಟಿಂಗ್‌ಗೆ ಹತ್ತು ಲಕ್ಷ ರೂಪಾಯಿಗಳಷ್ಟು ಶುಲ್ಕವನ್ನೂ ಕಟ್ಟಿಸಿಕೊಳ್ಳಲಾಗಿದೆಯಂತೆ.

 

click me!