
"ನೀನು ನನ್ನ ಪರ್ಸನಲ್ ಬಾಡಿಗಾರ್ಡ್, ನನ್ನ ಚಾಟ್‌ಜಿಪಿಟಿ, ನನ್ನ ಶೆಫ್, ಕ್ಯಾಲ್ಕುಲೇಟರ್, ಸ್ಟ್ರೆಸ್‌ಬಸ್ಟರ್, ಪೀಸ್, ಪರ್ಸನಲ್ ಫೋಟೋಗ್ರಾಫರ್, ಮೆಂಟರ್, ನನ್ನ ಡಿಜೆ, ಪರ್ಸನಲ್ ಡಾಕ್ಟರ್...ʼʼ ಹಾಗಂತ ನಟಿ ರಾಧಿಕಾ ಪಂಡಿತ್ ತನ್ನ ಇನ್‌ಸ್ಟಾಗ್ರಾಂನಲ್ಲಿ ಯಶ್‌ನ (Actor yash) ನಾನಾ ಫೋಟೋಗಳನ್ನು ಹಾಕಿ ಬರೆದುಕೊಂಡಿರುವುದು ಕುತೂಹಲ ಮೂಡಿಸಿದೆ. ಅಕ್ಕರೆ ಉಕ್ಕಿಸುವ ಹಾಗಿರುವ ಈ ಜೋಡಿಯಲ್ಲಿ ರಾಧಿಕಾ ಪಂಡಿತ್ ತನ್ನ ಗಂಡನ ಫೋಟೋ ಹಾಕಿ ಹೀಗೆಲ್ಲ ಬರೆದುಕೊಂಡಿರೋದಿಕ್ಕೆ ಕಾರಣ ಇದೆ- ನಿನ್ನೆ ಅವರ ಮದುವೆಯ 9ನೇ ಆನಿವರ್ಸರಿ.
ಈ ಸಂದರ್ಭದಲ್ಲಿ ಅವರು ತಮಗೆ ತಾವೇ ಒಂದು ಪ್ರಶ್ನೆ ಹಾಕಿಕೊಂಡಿದ್ದಾರೆ- "ನೀವ್ಯಾಕೆ ಪ್ರತಿಯೊಂದಕ್ಕೂ ಗಂಡನನ್ನು ಕರೀತೀರಿ?" ಅಂತ. ಇದು ರಾಧಿಕಾಳಿಗೇ ಮೂಡಿದ ಪ್ರಶ್ನೆಯೋ, ಅಥವಾ ಇತರರು ಕೇಳಿದ್ದೋ ಗೊತ್ತಿಲ್ಲ. ಅಂತೂ ಈ ಪ್ರಶ್ನೆಗೆ ರಾಧಿಕಾ ಪಂಡಿತ್ ಮೇಲಿನಂತೆ ಉತ್ತರ ಕೊಟ್ಟುಕೊಂಡಿದ್ದಾರೆ. ಹೀಗೆ ಸ್ಯಾಂಡಲ್‌ವುಡ್‌ನ ಕ್ಯೂಟೆಸ್ಟ್ ತಾರಾಜೋಡಿ ಯಶ್- ರಾಧಿಕಾ ಪಂಡಿತ್ 9ನೇ ವರ್ಷದ ಮದುವೆ ವಾರ್ಷಿಕೋತ್ಸವದ ಸಂಭ್ರಮ ಜರುಗಿದೆ.
ಇನ್ನೊಂದೆಡೆ ನಿನ್ನೆ ಬೆಳ್ಳಂಬೆಳಗ್ಗೆ ಟಾಕ್ಸಿಕ್ ಚಿತ್ರದ ಕುರಿತು ಯಶ್ ಬಿಗ್ ಅಪ್‌ಡೇಟ್ ಕೊಟ್ಟಿದ್ದರು. ಆ ಬಳಿಕ ತಮ್ಮ ಸ್ಪೆಷಲ್ ದಿನವನ್ನು ಜೀವನ ಸಂಗಾತಿ ಜೊತೆಗೆ ಕಳೆದಂತೆ ಕಾಣುತ್ತದೆ. ತಮ್ಮ ಜೀವನದ ಭಾಗವಾಗಿರುವ ಪರ್ಫೆಕ್ಟ್ ಫ್ಯಾಮಿಲಿ ಮ್ಯಾನ್ ಯಶ್ ಕುರಿತು ಇನ್‌ಸ್ಟಾಗ್ರಾಂನಲ್ಲಿ ರಾಧಿಕಾ ವಿಭಿನ್ನ ಫೋಟೋಗಳನ್ನು ಹಂಚಿಕೊಂಡು ಮದುವೆ ಆನಿವರ್ಸರಿಯ ಶುಭಾಶಯ ಕೋರಿದರು. ಯಾವಾಗಲೂ ಹಾಗೂ ಎಲ್ಲದಕ್ಕೂ ನೀವೇ ಉತ್ತರವಾಗಿರುತ್ತೀರಿ ಎಂದು ಯಶ್ ಜೊತೆಗಿನ ಪೋಟೋ ಹಂಚಿಕೊಂಡು ನನಗೆ ನೀನೇ ಸರ್ವಸ್ವ ಅನ್ನೋದನ್ನು ಹೇಳಿಕೊಂಡಿದ್ದಾರೆ ರಾಧಿಕಾ.
ಯಶ್ 2004ರಲ್ಲಿ ತಮ್ಮ ಕಾಲೇಜು ವಿದ್ಯಾಭ್ಯಾಸದ ಜೊತೆಗೆ ರಂಗಭೂಮಿಯಲ್ಲಿ ಗುರುತಿಸಿಕೊಂಡಿದ್ದರು. ಉತ್ತರಾಯಣ ಎಂಬ ಧಾರಾವಾಹಿ ಮೂಲಕ ಕಿರುತೆರೆ ಪ್ರವೇಶಿಸಿದರು. 2005ರಲ್ಲಿ ನಂದ ಗೋಕುಲ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡರು. ಈ ಒಂದು ಅವಕಾಶ ತಮ್ಮ ಜೀವನದ ಮಹತ್ವದ ಘಟ್ಟ ಆಗಲಿದೆ ಎಂಬುದು ಬಹುಶಃ ಯಶ್ ಅವರಿಗೆ ಅಂದು ತಿಳಿರಲಿಕ್ಕಿಲ್ಲ. ಇದೇ ನಂದ ಗೋಕುಲ ಧಾರಾವಾಹಿ ಮೂಲಕ ಯಶ್ ಮತ್ತು ರಾಧಿಕಾ ಪಂಡಿತ್ ಪರಿಚಿತರಾದರು. ಹೀಗೆ ಇಬ್ಬರೂ ಕಿರುತೆರೆಯಲ್ಲಿ ಒಟ್ಟಿಗೆ ಕೆಲಸ ಮಾಡೋ ಮೂಲಕ ಸ್ನೇಹಿತರಾದರು. ಕಿರುತೆರೆಯಲ್ಲಿ ಒಟ್ಟಿಗೆ ನಟಿಸುತ್ತಿದ್ದ ಯಶ್ ಮತ್ತು ರಾಧಿಕಾ, 2008ರಲ್ಲಿ ರೊಮ್ಯಾಂಟಿಕ್ ಡ್ರಾಮಾ 'ಮೊಗ್ಗಿನ ಮನಸು' (ಲೀಡ್ ರೋಲ್ನ ಮೊದಲ ಪ್ರಾಜೆಕ್ಟ್) ಸಿನಿಮಾ ಮೂಲಕ ಕನ್ನಡ ಬೆಳ್ಳಿತೆರೆ ಪ್ರವೇಶಿಸಿದರು. ನಂತರ ಹಲವು ಚಿತ್ರಗಳಲ್ಲಿ ತೆರೆ ಹಂಚಿಕೊಳ್ಳುವ ಮೂಲಕ ಸ್ಯಾಂಡಲ್‌ವುಡ್‌ನ ಹಿಟ್ ಜೋಡಿ ಎಂದೇ ಫೇಮಸ್ ಆಯ್ತು.
ಸಂತು ಸ್ಟ್ರೇಟ್ ಫಾರ್ವರ್ಡ್, ಮಿಸ್ಟರ್ ಆ್ಯಂಡ್ ಮಿಸೆಸ್ ರಾಮಚಾರಿ, ಡ್ರಾಮಾ. ಯಶ್ ನಾಯಕ ನಟನಾಗಿ, ರಾಧಿಕಾ ಪಂಡಿತ್ ನಾಯಕಿಯಾಗಿ ನಟಿಸಿದ ಮೊದಲ ಚಿತ್ರ 'ಮೊಗ್ಗಿನ ಮನಸ್ಸು' (2008) ಇಬ್ಬರ ವೃತ್ತಿಜೀವನದಲ್ಲೂ ಮೈಲಿಗಲ್ಲು ಅಂತಲೇ ಹೇಳಬಹುದು. ಯಶ್ ಮತ್ತು ರಾಧಿಕಾ ಪಂಡಿತ್ 7 ವರ್ಷಗಳ ಕಾಲ ಪ್ರೀತಿಯಲ್ಲಿದ್ದ ಬಳಿಕ ಗೋವಾದ ಕಡಲ ತೀರದಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡರು. ಅಲ್ಲಿವರೆಗೆ ತಮ್ಮ ಪ್ರೀತಿಯನ್ನು ಗುಟ್ಟಾಗಿ ಇಡುವಲ್ಲಿ ಯಶಸ್ವಿಯಾಗಿದ್ದರು. ನಂತರ, 2016 ಡಿಸೆಂಬರ್ 9ರಂದು ಬೆಂಗಳೂರಿನ ತಾಜ್ ವೆಸ್ಟ್ ಎಂಡ್ನಲ್ಲಿ ಅದ್ದೂರಿಯಾಗಿ ಹಸೆಮಣೆ ಏರಿದರು. ಈ ಮಾದರಿ ದಂಪತಿಗೆ ಐರಾ ಮತ್ತು ಯಥರ್ವ್ ಎನ್ನುವ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. 9ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ಯಶ್ ರಾಧಿಕಾಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.