ವಿನಯಾ ಪ್ರಕಾಶ್‌ಗೆ ’ವಿಷ್ಣುವರ್ಧನ್’ ರಾಷ್ಟ್ರೀಯ ಪ್ರಶಸ್ತಿ

By Web DeskFirst Published 12, Sep 2018, 12:02 PM IST
Highlights

ಇದೇ ತಿಂಗಳ 18 ಕ್ಕೆ ವಿಷ್ಣವರ್ಧನ್ ಹುಟ್ಟುಹಬ್ಬ | ಹಿರಿಯ ನಟಿ ವಿನಯಾ ಪ್ರಕಾಶ್‌ಗೆ ವಿಷ್ಣವರ್ಧನ್ ಪ್ರಶಸ್ತಿ |  ಸೆ. 16 ರಿಂದ 18 ವರೆಗೆ ಮೂರು ದಿನಗಳ ಕಾಲ ಡಾ. ವಿಷ್ಣುವರ್ಧನ್ ರಾಷ್ಟ್ರೀಯ
ಉತ್ಸವ ಆಯೋಜನೆ

ಬೆಂಗಳೂರು (ಸೆ. 12): ಇದೇ ತಿಂಗಳ 18 ಕ್ಕೆ ಹಿರಿಯ ನಟ ದಿ.ಡಾ.ವಿಷ್ಣುವರ್ಧನ್ ಅವರ 69 ನೇ ಹುಟ್ಟು ಹಬ್ಬ. ಈ ಹಿನ್ನೆಲೆಯಲ್ಲಿ ಡಾ. ವಿಷ್ಣು ಸೇನಾ ಸಮಿತಿಯು ಸೆ.16 ರಿಂದ 18 ವರೆಗೆ ಮೂರು ದಿನಗಳ ಕಾಲ ನಗರದಲ್ಲಿ ಡಾ. ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವ ಆಯೋಜಿಸಿದ್ದು, ಪ್ರತಿ ವರ್ಷ ನೀಡುವ ಡಾ. ವಿಷ್ಣುವರ್ಧನ್ ರಾಷ್ಟ್ರೀಯ ಪ್ರಶಸ್ತಿಯನ್ನು ಈ ಬಾರಿ ಹಿರಿಯ ನಟಿ ವಿನಯಾ ಪ್ರಕಾಶ್ ಅವರಿಗೆ ಘೋಷಿಸಿದೆ.

ಮೂರು ದಿನಗಳ ಉತ್ಸವದ ಕಡೆಯ ದಿನವಾದ ಸೆ.18 ರಂದು ನಡೆಯುವ ಡಾ. ವಿಷ್ಣುವರ್ಧನ್ ಜಯಂತಿ ಆಚರಣೆಯಲ್ಲಿ ವಿನಯಾ ಪ್ರಕಾಶ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ, ಸಚಿವರಾದ ಕೃಷ್ಣೇ ಭೈರೇಗೌಡ, ಡಾ. ಜಯಮಾಲ ಹಾಗೂ ಶಾಸಕರಾದ ಸುರೇಶ್ ಕುಮಾರ್ ಸಮಾರಂಭದಲ್ಲಿ ಭಾಗವಹಿಸುತ್ತಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ವಿನಯಾ ಪ್ರಕಾಶ್ ಅವರು ಸಲ್ಲಿಸಿದ ಅಮೂಲ್ಯ ಸೇವೆಯನ್ನು ಪರಿಗಣಿಸಿ, ಪ್ರಶಸ್ತಿ ಘೋಷಿಸಲಾಗಿದೆ. ತಜ್ಞರ ಆಯ್ಕೆ ಸಮಿತಿ ಅವರ ಹೆಸರನ್ನು ಅಂತಿಮಗೊಳಿಸಿದೆ ಎಂದು ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ತಿಳಿಸಿದ್ದಾರೆ.

1988 ರಲ್ಲಿ ಹೆಸರಾಂತ ನಿರ್ದೇಶಕ ಜಿ.ವಿ. ಅಯ್ಯರ್ ನಿರ್ದೇಶನದ ‘ಮಧ್ವಾಚಾರ್ಯ’ ಚಿತ್ರದಲ್ಲಿನ ಸಣ್ಣ ಪಾತ್ರದೊಂದಿಗೆ ಬೆಳ್ಳಿತೆರೆಗೆ ಕಾಲಿಟ್ಟ ನಟಿ ವಿನಯಾ ಪ್ರಕಾಶ್, ಹಲವು ಯಶಸ್ವಿ ಸಿನಿಮಾಗಳಿಗೆ ನಾಯಕಿ ಆದ ಖ್ಯಾತಿ ಪಡೆದವರು.

ಅಲ್ಲಿಂದ ತೆಲುಗು, ತಮಿಳು, ತುಳು ಹಾಗೂ ಮಲಯಾಳಂ ಭಾಷೆಯ ಸಿನಿಮಾಗಳಲ್ಲೂ ಅಭಿನಯಿಸಿ ಬಹು ಭಾಷೆ ನಟಿ ಎನಿಸಿಕೊಂಡವರು. ನಟನೆಯ ಜತೆಗೆ ನಿರ್ದೇಶಕಿ ಆಗಿಯೂ ಗುರುತಿಸಿಕೊಂಡಿದ್ದಾರೆ. ಸಿನಿಮಾದ ಹಾಗೆ ಕಿರುತೆರೆಯಲ್ಲೂ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ.  

Last Updated 19, Sep 2018, 9:23 AM IST