
ಬೆಂಗಳೂರು (ಸೆ. 12): ಕಟ್ಟಪ್ಪ ಬಾಹುಬಲಿಯನ್ನು ಯಾಕೆ ಕೊಂದ ಎನ್ನುವ ಪ್ರಶ್ನೆಗೆ ಉತ್ತರವಾದ್ರು ಇತ್ತು? ಆದರೆ, ಈ ಸಿನಿಮಾ ಯಾವಾಗ ಬಿಡುಗಡೆಯಾಗುತ್ತದೆಂಬುದು ಮಾತ್ರ ಸದ್ಯಕ್ಕೆ ಉತ್ತರ ಸಿಗದ ಪ್ರಶ್ನೆಯಾಗಿಯೇ ಉಳಿದುಕೊಂಡಿದೆ.
ಈ ಮಾತುಗಳು ಕೇಳಿ ಬರುತ್ತಿರುವುದು ‘ಕುರುಕ್ಷೇತ್ರ’ ಚಿತ್ರದ ಸುತ್ತ. ಚಿತ್ರ ಸೆಟ್ಟೇರಿ, ಚಿತ್ರೀಕರಣ ಮುಗಿದು ಇನ್ನೇನು ಬಿಡುಗಡೆಯ ಹಂತದಲ್ಲಿರುವ ಈ ಚಿತ್ರದ ಬಗ್ಗೆ ಸಾಕಷ್ಟು ಸುದ್ದಿಗಳು ಸುಳಿದಾಡುತ್ತಿವೆ. ಈ ಪೈಕಿ ಸಿನಿಮಾ ಬಿಡುಗಡೆ ಮಾಡುವುದಕ್ಕೆ ನಿರ್ಮಾಪಕ ಮುನಿರತ್ನ ಅವರಿಗೆ ಆಸಕ್ತಿ ಇಲ್ಲ, ಚಿತ್ರದಲ್ಲಿ ತಮ್ಮ ಪಾತ್ರದ ಅವಧಿಯನ್ನು ಕಡಿತ ಮಾಡಿದ್ದಾರೆಂದು ದರ್ಶನ್ ಮುನಿಸಿಕೊಂಡಿದ್ದಾರೆ, ನಿಖಿಲ್ ಡಬ್ಬಿಂಗ್ ಮಾಡುವುದಕ್ಕೆ ಬರುತ್ತಿಲ್ಲ, ಈ ಚಿತ್ರಕ್ಕೆ ಒಬ್ಬರಲ್ಲ ನಿರ್ದೇಶಕರು, ಎಲ್ಲರಿಗೂ ಹೆಸರು ಬೇಕು ಪಾಪ- ಹೀಗೆ ಹತ್ತು ಹಲವು ಗಾಸಿಪ್‌ಗಳು.
ಈಗ ಅದಕ್ಕೆಲ್ಲಾ ಖುದ್ದು ನಿರ್ಮಾಪಕ ಮುನಿರತ್ನ ಉತ್ತರ ನೀಡಿದ್ದಾರೆ.
1. ಚಿತ್ರದಲ್ಲಿ ಪಾತ್ರದ ಅವಧಿ ಬಗ್ಗೆ ಯಾರಲ್ಲೂ ಮನಸ್ತಾಪವಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಯಾರ ಪಾತ್ರ ಎಷ್ಟಿರಬೇಕೆಂಬುದು ಕತೆ ನಿರ್ಧರಿಸುತ್ತದೆ. ಹೀಗಾಗಿ ಯಾರೋ ಒಬ್ಬರನ್ನು ಕಡೆಗಣಿಸಿ ಮತ್ತೊಬ್ಬರಿಗೆ ಪ್ರಾಮುಖ್ಯತೆ ಕೊಡುವ ಅಗತ್ಯ ನಮಗೂ ಇಲ್ಲ. ಕುರುಕ್ಷೇತ್ರ ಚಿತ್ರದಲ್ಲಿ ಎಲ್ಲರದ್ದು ಮಹತ್ವದ ಪಾತ್ರವಿದೆ.
2. ದರ್ಶನ್ ಮನಸ್ತಾಪ ಮಾಡಿಕೊಂಡಿದ್ದಾರೆ ಎಂಬುದಾಗಲಿ, ನಿಖಿಲ್ ಡಬ್ಬಿಂಗ್ ಮಾಡುವುದಕ್ಕೆ ಬರುತ್ತಿಲ್ಲ ಎನ್ನುವುದರಲ್ಲಿ ಯಾವ ಸತ್ಯವೂ ಇಲ್ಲ. ಯಾಕೆಂದರೆ ಡಬ್ಬಿಂಗ್ ಮಾಡುವುದಕ್ಕೆ ನಿಖಿಲ್ ರೆಡಿ ಇದ್ದಾರೆ. ಈಗಾಗಲೇ ಬಹುತೇಕ ಮುಗಿಸಿದ್ದೇವೆ. ದರ್ಶನ್ ಮನಸ್ತಾಪ ಮಾಡಿಕೊಂಡಿದ್ದಾರೆಂಬುದು ಸತ್ಯಕ್ಕೆ ದೂರವಾದ ಮಾತು.
3. ಇದು ದೊಡ್ಡ ಸಿನಿಮಾ. ದೊಡ್ಡ ಚಿತ್ರದಲ್ಲಿ ಎಲ್ಲರೂ ಕೆಲಸ ಮಾಡಿದ್ದಾರೆ. ನಿರ್ದೇಶನ ವಿಭಾಗ ಕೂಡ ಹಾಗೆ. ಹಾಗಂತ ಇಲ್ಲಿ ನಿರ್ದೇಶಕ ನಾಗಣ್ಣ ಅವರನ್ನು ನಾವು ಯಾವ ಕಾರಣಕ್ಕೂ ದೂರ ಮಾಡಿಲ್ಲ. ‘ಕುರುಕ್ಷೇತ್ರ’ ಅವರ ನಿರ್ದೇಶನದ ಚಿತ್ರ. ನಿರ್ದೇಶಕರಾಗಿ ಅವರ ಕೆಲಸ ಅವರು ಮಾಡಿಕೊಟ್ಟಿದ್ದಾರೆ. ಉಳಿದಿರೋದು ತಂತ್ರಜ್ಞರ ಕಾರ್ಯ. ಅದು ನಡೆಯಬೇಕು.
4. ಇಡೀ ಚಿತ್ರಕ್ಕೆ ನಾವು ಅಂದುಕೊಂಡಂತೆ ಸಿಜಿ ವರ್ಕ್ ಬರುತ್ತಿಲ್ಲ. ಪದೇ ಪದೇ ರೀ ವರ್ಕ್ ಮಾಡುತ್ತಿದ್ದೇವೆ. ಚೆನ್ನೈ ಹಾಗೂ ಹೈದರಾಬಾದ್‌ನಲ್ಲಿ ಸಿಜಿ ಕೆಲಸ ನಡೆಯುತ್ತಿಲ್ಲ. ಒಮ್ಮೆ ಮಾಡಿ ಮುಗಿಸಿದ್ದ ಸಿಜಿ ಕೆಲಸ ನನಗೆ ಇಷ್ಟವಾಗಲಿಲ್ಲ. ಕುರುಕ್ಷೇತ್ರ ಬಿಡುಗಡೆ ತಡವಾಗುತ್ತಿರುವುದಕ್ಕೆ ಇದೇ ದೊಡ್ಡ ಕಾರಣ. ಒಬ್ಬ ನಿರ್ಮಾಪಕನಾಗಿ ನನಗೇ ಖುಷಿ ಕೊಡುವಷ್ಟು ಕೆಲಸ ಮಾಡುವವರೆಗೂ ಈ ಚಿತ್ರವನ್ನು ನಾನು ತೆರೆಗೆ ತರಲ್ಲ. ಇದರ ನಡುವೆ ಬೇರೆ ಯಾವ ಚಿತ್ರಗಳು ತೆರೆಗೆ ಬಂದರೂ ನಾನು ಆ ಬಗ್ಗೆ ಯೋಚಿಸಲ್ಲ.
5. ನಾನು ರಾಜಕಾರಣಿಯೂ ಹೌದು. ಸಿನಿಮಾ ನಿರ್ಮಾಪಕನೂ ಹೌದು. ಹಾಗಂತ ನಾನೇ ಪ್ರೀತಿಯಿಂದ ನಿರ್ಮಿಸಿದ್ದ ಚಿತ್ರವನ್ನು ತೆರೆಗೆ ತರುವಲ್ಲಿ ಆಸಕ್ತಿ ತೋರುತ್ತಿಲ್ಲ ಎನ್ನುವ ಮಾತುಗಳಿದ್ದರೆ ಆ ಬಗ್ಗೆ ನಾನು ಏನು ಹೇಳಲಿ? ಕೋಟಿ ಕೋಟಿ ಖರ್ಚು ಮಾಡಿ ಸಿನಿಮಾ ಮಾಡಿದ್ದ ಡಬ್ಬಾದಲ್ಲಿಟ್ಟು ಪೂಜೆ ಮಾಡಕ್ಕಲ್ಲ. ಜನಕ್ಕೆ ತೋರಿಸಬೇಕು. ಅದನ್ನು ಯಾವ ಕ್ವಾಲಿಟಿಯಲ್ಲಿ ತೋರಿಸಬೇಕೋ ಎನ್ನುವ ಕನಸು ನನಗಿದೆ. ಅದು ಈಡೇರುವ ತನಕ ಕುರುಕ್ಷೇತ್ರ ತೆರೆ ಮೇಲೆ ಬರಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.