
ನಟಿ ಮೌನಿ ರಾಯ್ ಜೊತೆಗಿನ ವಿಚ್ಛೇದನದ ನಂತರ ಹಬ್ಬಿದ್ದ ಹಲವು ವದಂತಿಗಳಿಗೆ ಅವರ ಮಾಜಿ ಪತಿ ಸೂರಜ್ ನಂಬಿಯಾರ್ ತೆರೆ ಎಳೆದಿದ್ದಾರೆ. ಮೌನಿ 100 ಕೋಟಿ ಜೀವನಾಂಶ ಕೇಳಿದ್ದಾರೆ, ನಟಿ ದಿಶಾ ಪಟಾನಿ ಜೊತೆ ಸಂಬಂಧ ಹೊಂದಿದ್ದಾರೆ ಎನ್ನುವ ಸುದ್ದಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸೂರಜ್ ಸ್ಪಷ್ಟಪಡಿಸಿದ್ದಾರೆ. ಉದ್ಯಮಿ ಸೂರಜ್ ನಂಬಿಯಾರ್ ಜೊತೆಗಿನ ವಿಚ್ಛೇದನದ ನಂತರ, ನಟಿ ಮೌನಿ ರಾಯ್ ಅವರು ಬಾಲಿವುಡ್ ನಟಿ ದಿಶಾ ಪಟಾನಿ ಜೊತೆ ಸಲಿಂಗ ಸಂಬಂಧ ಹೊಂದಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಅಷ್ಟೇ ಅಲ್ಲ, ಮೌನಿ ಜೀವನಾಂಶವಾಗಿ 100 ಕೋಟಿ ರೂಪಾಯಿ ಕೇಳಿದ್ದಾರೆ ಎಂಬ ವದಂತಿಯೂ ಹಬ್ಬಿತ್ತು. ಆದರೆ, ಈ ಎಲ್ಲಾ ಆರೋಪಗಳನ್ನು ಸೂರಜ್ ನಂಬಿಯಾರ್ ತಳ್ಳಿಹಾಕಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿರುವ ಸೂರಜ್, ಯಾರ ಹೆಸರನ್ನೂ ನೇರವಾಗಿ ಪ್ರಸ್ತಾಪಿಸದೆ ಸ್ಪಷ್ಟನೆ ನೀಡಿದ್ದಾರೆ. "ನಾವಿಬ್ಬರೂ ಪರಸ್ಪರ ಗೌರವದಿಂದ, ಯಾವುದೇ ಮೂರನೇ ವ್ಯಕ್ತಿಯ ಹಸ್ತಕ್ಷೇಪವಿಲ್ಲದೆ ಬೇರೆಯಾಗಿದ್ದೇವೆ. ಈಗ ಹಬ್ಬುತ್ತಿರುವ ಸುದ್ದಿಗಳೆಲ್ಲವೂ ಕಟ್ಟುಕಥೆ. ಮೌನಿ ಯಾವುದೇ ಜೀವನಾಂಶ ಕೇಳಿಲ್ಲ. ನಮ್ಮ ವಿಚ್ಛೇದನದ ಬಗ್ಗೆ ನಾವು ನೀಡಿದ್ದ ಜಂಟಿ ಹೇಳಿಕೆಯಲ್ಲೇ ಎಲ್ಲವನ್ನೂ ತಿಳಿಸಿದ್ದೇವೆ" ಎಂದು ಅವರು ಹೇಳಿದ್ದಾರೆ.
"ನಮ್ಮ ವಿಚ್ಛೇದನದ ಬಗ್ಗೆ ಹಬ್ಬುತ್ತಿರುವ ಆಧಾರರಹಿತ ವರದಿಗಳು ದುರುದ್ದೇಶದಿಂದ ಕೂಡಿವೆ. ನಾನು ಕೆಲವು ಸತ್ಯಗಳನ್ನು ಸ್ಪಷ್ಟಪಡಿಸುತ್ತೇನೆ. ಇಲ್ಲಿ ಯಾವುದೇ ಜೀವನಾಂಶದ ಪ್ರಶ್ನೆಯೇ ಇಲ್ಲ. ಯಾವುದೇ ಜಗಳಗಳಿಲ್ಲ. ನಮ್ಮಿಬ್ಬರ ನಡುವೆ ಮೂರನೇ ವ್ಯಕ್ತಿ ಯಾರೂ ಬಂದಿಲ್ಲ. ನಾನೂ ಮತ್ತು ಮೌನಿ ಪರಸ್ಪರ ಗೌರವದಿಂದ ಬೇರೆಯಾಗಲು ನಿರ್ಧರಿಸಿದ್ದೇವೆ. ಇದೇ ಸತ್ಯ. ಉಳಿದಂತೆ ವರದಿಯಾಗುತ್ತಿರುವ ಎಲ್ಲವೂ ಕಟ್ಟುಕಥೆ. ಕೆಲವೊಮ್ಮೆ, ಇಬ್ಬರು ವ್ಯಕ್ತಿಗಳ ಘನತೆಗೆ ಧಕ್ಕೆ ತರುವ ಉದ್ದೇಶಪೂರ್ವಕ ಪ್ರಯತ್ನವಿದು. ದಯವಿಟ್ಟು ನಮ್ಮನ್ನು ನೆಮ್ಮದಿಯಾಗಿರಲು ಬಿಡಿ ಎಂದು ಮಾತ್ರ ಕೇಳಿಕೊಳ್ಳುತ್ತೇನೆ. ನಮ್ಮಿಬ್ಬರ ಬಗ್ಗೆ ಅಥವಾ ಯಾವುದೇ ಮೂರನೇ ವ್ಯಕ್ತಿಯ ಬಗ್ಗೆ ಹಬ್ಬುತ್ತಿರುವ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ಈ ವಿಷಯಕ್ಕೆ ಸಂಬಂಧವೇ ಇಲ್ಲದ ನಮ್ಮ ಮುಗ್ಧ ಸ್ನೇಹಿತರನ್ನು ಎಳೆದು ತರುವುದು ಸರಿಯಲ್ಲ" ಎಂದು ಸೂರಜ್ ಹೇಳಿದ್ದಾರೆ.
"ಈ ಕಷ್ಟದ ಸಮಯದಲ್ಲಿ ನಾನೂ ಮತ್ತು ಮೌನಿ ಇಬ್ಬರೂ ಘನತೆಯಿಂದ ನಡೆದುಕೊಂಡಿದ್ದೇವೆ. ಮಾಧ್ಯಮಗಳೂ ಅದನ್ನೇ ಪಾಲಿಸಲಿ ಎಂದು ನಾವು ನಿರೀಕ್ಷಿಸುತ್ತೇವೆ. ಮಾಧ್ಯಮಗಳು ಇಲ್ಲಸಲ್ಲದ ಕಥೆಗಳನ್ನು ಸೃಷ್ಟಿಸಲು ಪ್ರಯತ್ನಿಸಿವೆ. ಯಾವುದೇ ಪರಿಶೀಲನೆ ಇಲ್ಲದೆ ಈ ವರದಿಗಳನ್ನು ಪ್ರಕಟಿಸಲಾಗಿದೆ, ಇದು ಅನ್ಯಾಯ. ಉದ್ದೇಶಪೂರ್ವಕ ಸುಳ್ಳು ಸುದ್ದಿಗಳ ವಿರುದ್ಧ ಮೌನವಾಗಿರಲು ನಾನು ಸಿದ್ಧನಿಲ್ಲ. ಅದಕ್ಕಾಗಿಯೇ ಈ ಸ್ಪಷ್ಟನೆ ನೀಡುತ್ತಿದ್ದೇನೆ. ನಮ್ಮ ಜಂಟಿ ಹೇಳಿಕೆಯಲ್ಲಿ ಹೇಳಬೇಕಾದ ಎಲ್ಲವನ್ನೂ ಹೇಳಿದ್ದೇವೆ. ದಯವಿಟ್ಟು ಎಲ್ಲರೂ ಅದನ್ನು ಗೌರವಿಸಿ, ನಾವಿಬ್ಬರೂ ಶಾಂತಿಯುತವಾಗಿ ಮುಂದುವರೆಯಲು ಅವಕಾಶ ಮಾಡಿಕೊಡಿ. ಧನ್ಯವಾದಗಳು" ಎಂದು ಸೂರಜ್ ಬರೆದುಕೊಂಡಿದ್ದಾರೆ.
ದೀರ್ಘಕಾಲದ ಪ್ರೀತಿಗೆ ಮನ್ನಣೆ ನೀಡಿ ನಟಿ ಮೌನಿ ರಾಯ್ ಮತ್ತು ಉದ್ಯಮಿ ಸೂರಜ್ ನಂಬಿಯಾರ್ 2022ರಲ್ಲಿ ಗೋವಾದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮಲಯಾಳಿ ಸಂಪ್ರದಾಯದಂತೆ ಮೊದಲು ಮದುವೆ ನಡೆದಿತ್ತು. ಈ ಸಮಾರಂಭದಲ್ಲಿ ಹಲವು ಬಾಲಿವುಡ್ ಸ್ನೇಹಿತರು ಭಾಗವಹಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.