
ಶ್ರೀರಸ್ತು ಶುಭಮಸ್ತು ಸೀರಿಯಲ್ ಇನ್ನೇನು ಮುಗಿಯುವ ಹಂತಕ್ಕೆ ಬಂದಿದೆ ಎಂದೇ ಅಂದುಕೊಳ್ಳಲಾಗಿತ್ತು. ಇದಕ್ಕೆ ಕಾರಣ, ಶಾರ್ವರಿಯೇ ಕೊಲೆಗಾತಿ ಎನ್ನುವ ವಿಷಯ ಒಬ್ಬೊಬ್ಬರಾಗಿ ಎಲ್ಲರಿಗೂ ತಿಳಿದಿದೆ. ವಿಷಯ ಗೊತ್ತಾಗುತ್ತಿದ್ದಂತೆಯೇ ಶಾರ್ವರಿ ತಪ್ಪಿಸಿಕೊಂಡಿದ್ದಾಳೆ. ಅವಳ ಹುಡುಕಾಟದಲ್ಲಿ ಕುಟುಂಬದವರು ಮುಂದಾಗಿದ್ದಾರೆ. ಅದೇ ಇನ್ನೊಂದೆಡೆ, ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ಕೋರ್ಟ್ ಸಮರ್ಥ್ನನ್ನು ನಿರಪರಾಧಿ ಎಂದು ತೀರ್ಪು ನೀಡಿದೆ. ತಪ್ಪಿಸಿಕೊಂಡಿರುವ ಶಾರ್ವರಿಯನ್ನು ಹುಡುಕುವಂತೆ ಕೋರ್ಟ್ ಪೊಲೀಸರಿಗೆ ಆದೇಶಿಸಿದೆ. ಅಬ್ಬಾ, ಅಂತೂ ಒಂದು ಸೀರಿಯಲ್ ಮುಗಿಸುತ್ತಾರೆ ಎಂದುಕೊಂಡಿದ್ದರು ಬಹುತೇಕ ವೀಕ್ಷಕರು. ಆದರೆ ಆದದ್ದೇ ಬೇರೆ. ಶಾರ್ವರಿ ಏನೋ ಸಿಕ್ಕಿಬಿಟ್ಟು, ಅವಳನ್ನು ಪೊಲೀಸರು ಅರೆಸ್ಟ್ ಮಾಡಿ ಜೈಲಿಗೆ ತಳ್ಳಿದರೆ ಅಲ್ಲಿಗೆ ಸೀರಿಯಲ್ ಮುಗಿಯತ್ತೆ ಎಂದುಕೊಂಡ ವೀಕ್ಷಕರ ಲೆಕ್ಕಾಚಾರ ತಲೆಕೆಳಗಾಗಿದೆ. ಏಕೆಂದ್ರೆ ಒಬ್ಬಳು ವಿಲನ್ ತಪ್ಪಿಸಿಕೊಂಡ ನಡುವೆಯೇ ಇನ್ನೊಬ್ಬ ವಿಲನ್ ಎಂಟ್ರಿ ಕೊಟ್ಟಿದ್ದಾಳೆ, ಅವಳೇ ಶಾರ್ವರಿ ಮಗಳು ನಿಧಿ.
ಹಾಗಿದ್ರೆ ಸೀರಿಯಲ್ ಮುಗಿಯೋದು ಯಾವಾಗ ಎನ್ನುವ ಪ್ರಶ್ನೆ ಈಗ ಬಹುತೇಕ ವೀಕ್ಷಕರನ್ನು ಕಾಡುತ್ತಿದೆ. ಇದಾಗಲೇ ಸೀರಿಯಲ್ 800 ಎಪಿಸೋಡ್ ಮುಗಿಸಿರೋ ಕಾರಣ, ಸೀತಾರಾಮದಂತೆ ಮುಗಿಸುತ್ತಾರೆಯೇ ಎಂದುಕೊಂಡರೆ ಅದು ಆಗಿರಲಿಲ್ಲ. ಆದ್ದರಿಂದ ಯಾವಾಗ ಮುಗಿಯತ್ತೆ ಎನ್ನುವ ಪ್ರಶ್ನೆ ಶ್ರೀರಸ್ತು ಶುಭಮಸ್ತು ತುಳಸಿ ಅರ್ಥಾತ್ ಸುಧಾರಾಣಿ ಅವರಿಗೆ ಕೇಳಲಾಗಿದೆ. ಸೀರಿಯಲ್ ಟಿಆರ್ಪಿ ಹೆಚ್ಚಿಗೆ ಇದ್ದಾಗ ಯಾವುದೇ ಕಾರಣಕ್ಕೂ ಸೀರಿಯಲ್ ಮುಗಿಸೋ ಛಾನ್ಸೇ ಇಲ್ಲ. ಏನಾದರೊಂದು ಟ್ವಿಸ್ಟ್ ತುರುಕಿ ತುರುಕಿ ಮತ್ತೊಂದಷ್ಟು ವರ್ಷ ಎಳೆಯುವುದು ಎಲ್ಲಾ ಭಾಷೆಗಳಲ್ಲಿಯೂ ನಡೆದುಕೊಂಡೇ ಬಂದಿದೆ. ಅದಕ್ಕೆ ಕನ್ನಡ ಸೀರಿಯಲ್ಗಳೂ ಹೊಸದೇನಲ್ಲ. ಇದೇ ಕಾರಣಕ್ಕೆ ನಿಧಿಯನ್ನು ವಿಲನ್ ಮಾಡಿ ಮತ್ತೆ ಸೀರಿಯಲ್ ಎಳೆಯಲಾಗಿದೆ.
ಈ ಬಗ್ಗೆ ಎಫ್ಡಿಎಫ್ಎಸ್ ಯೂಟ್ಯೂಬ್ ಚಾನೆಲ್ನಲ್ಲಿ ನಟಿ ಸುಧಾರಾಣಿಯವರಿಗೆ ಈ ಬಗ್ಗೆ ಕೇಳಿದಾಗ ಅವರು ಜಾಣತನದ ಉತ್ತರ ಕೊಟ್ಟಿದ್ದಾರೆ. ಈ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಅದನ್ನು ಡಿಸೈಡ್ ಮಾಡುವವರು ಚಾನೆಲ್ನವರು ಎಂದಿದ್ದಾರೆ. ಹಾಗೆ ನೋಡಿದರೆ, ಸೀರಿಯಲ್ ಯಾವಾಗ ಮುಗಿಸಬೇಕು ಎನ್ನುವ ನಿರ್ಧಾರ ಮಾಡುವುದು ಆಯಾ ಸೀರಿಯಲ್ ಬರ್ತಿರೋ ಚಾನೆಲ್ನವರೇ ಎನ್ನುವುದು ಸತ್ಯವೇ. ಸೀರಿಯಲ್ ಯಾವಾಗ ಮುಗಿಸಬೇಕು ಎನ್ನುವುದು ನಿರ್ದೇಶಕರ ಕೈಯಲ್ಲಿಯೂ ಇರುವುದಿಲ್ಲ. ಟಿಆರ್ಪಿ ಹೆಚ್ಚು ಇದ್ದರೆ ಸೀರಿಯಲ್ ಅನ್ನು ಹೇಗಾದರೂ ಮಾಡಿ, ಏನಾದರೂ ತುರುಕಿ ಚ್ಯೂಯಿಂಗ್ ಗಮ್ನಂತೆ ಎಳೆಯುವ ಅನಿವಾರ್ಯತೆ ಕಥೆ ಬರೆಯುವವರಿಗೆ, ನಿರ್ದೇಶಕರಿಗೆ ಇದ್ದೇ ಇರುತ್ತದೆ. ಆದ್ದರಿಂದ ನಟ-ನಟಿಯರಿಗೂ ಈ ಬಗ್ಗೆ ತಿಳಿದಿರುವುದಿಲ್ಲ.
ಸೀತಾರಾಮ ಸೀರಿಯಲ್ನಲ್ಲಿ ಸಿಹಿಯ ಪಾತ್ರ ಸಾಯಿಸುತ್ತಿದ್ದಂತೆಯೇ ಟಿಆರ್ಪಿ ಕಡಿಮೆಯಾಗಿ, ಟೈಮಿಂಗ್ ಬದಲಾಯಿತು. ಕೊನೆಗೆ ಸೀರಿಯಲ್ ಮುಗಿಸಬೇಕಾಯಿತು. ಆದರೆ ಒಂದೊಳ್ಳೇ ರೀತಿಯಲ್ಲಿಯೇ ಅದನ್ನು ಮುಗಿಸಿದರು. ಅದೇ ರೀತಿ ಶ್ರೀರಸ್ತು ಶುಭಮಸ್ತುವನ್ನೂ ಒಳ್ಳೆಯ ರೀತಿಯಲ್ಲಿ ಮುಗಿಸಲಾಗುತ್ತಿದೆ ಎಂದುಕೊಳ್ಳುವಾಗಲೇ ಒಳ್ಳೆಯವಳಾಗಿದ್ದ ನಿಧಿಯನ್ನು ವಿಲನ್ ಮಾಡಲಾಗಿದೆ. ಇದನ್ನೇ ಸುಧಾರಾಣಿ ಹೇಳಿದ್ದು, ತಮಗೆ ಇದರ ಬಗ್ಗೆ ತಿಳಿದಿರುವುದಿಲ್ಲ ಎಂದಿದ್ದಾರೆ. ಇದೇ ವೇಳೆ, ಈ ಸೀರಿಯಲ್ ಅನ್ನು ಕೆಲವರು ಕೆಲವು ರೀತಿಯಲ್ಲಿ ಸ್ವೀಕರಿಸುತ್ತಾ ಇದ್ದಾರೆ. ಹಲವರು ಶ್ಲಾಘನೆ ವ್ಯಕ್ತಪಡಿಸಿದರೆ, ಕೆಲವರು ನೆಗೆಟಿವ್ ಕಮೆಂಟ್ ಕೂಡ ಮಾಡುವುದು ಇದೆ. ಇವೆರಡನ್ನೂ ತಾವು ಸಮನಾಗಿ ಸ್ವೀಕರಿಸುವುದಾಗಿ ನಟಿ ಹೇಳಿದ್ದಾರೆ. ಬಣ್ಣದ ಲೋಕಕ್ಕೆ ಬಂದು 40 ವರ್ಷ ಆದರೂ ತಾವು ಕಲಿಯುವುದು ಇನ್ನೂ ಇದೆ, ಸೀರಿಯಲ್ ಜಾಗದಲ್ಲಿಯೂ ಪ್ರತಿದಿನವೂ ಹೊಸತನ್ನು ಕಲಿಯುತ್ತಿರುವುದಾಗಿ ತಿಳಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.