ವಿಲನ್‌ ಬಗ್ಗೆ ಗಲಾಟೆ ಮಾಡಿದ್ರೆ ತಾಯಾಣೆ ಥೇಟರ್‌ಗೆ ಬರಲ್ಲ!

Published : Oct 02, 2018, 07:45 AM IST
ವಿಲನ್‌ ಬಗ್ಗೆ ಗಲಾಟೆ ಮಾಡಿದ್ರೆ  ತಾಯಾಣೆ ಥೇಟರ್‌ಗೆ ಬರಲ್ಲ!

ಸಾರಾಂಶ

ವಿಲನ್‌ ಬಗ್ಗೆ ಗಲಾಟೆ ಮಾಡಿದ್ರೆ ತಾಯಾಣೆ ಥೇಟರ್‌ಗೆ ಬರಲ್ಲ!  ಚಿತ್ರಪ್ರೇಮಿಗಳು, ಅಭಿಮಾನಿಗಳಿಗೆ ಶಿವರಾಜಕುಮಾರ್‌ ಎಚ್ಚರಿಕೆ | ‘ವಿಲನ್‌’ ಅವ್ನಾ ಇವ್ನಾ ಎಂದು ಸೋಷಿಯಲ್‌ ಮೀಡಿಯಾದಲ್ಲಿ ವಿವಾದ ಸೃಷ್ಟಿಸಿದ್ದಕ್ಕೆ ಸಿಟ್ಟು | ಶಿವಣ್ಣ, ಸುದೀಪ್‌ ಅಭಿನಯದ ಬಹುನಿರೀಕ್ಷಿತ ಸಿನಿಮಾ 18ಕ್ಕೆ ಬಿಡುಗಡೆ

ಬೆಂಗಳೂರು (ಅ. 02): ಸಿನಿಮಾ ಅಂದ್ರೆ ಅದು ಸಿನಿಮಾವಷ್ಟೇ. ಅದನ್ನ ಸಿನಿಮಾ ರೂಪದಲ್ಲಿಯೇ ನೋಡಿ. ಅದು ಬಿಟ್ಟು ವಿಲನ್‌ ಅಥವಾ ಹೀರೋ ಹೋಲಿಕೆಯಲ್ಲಿ ಅವ್ನಾ, ಇವ್ನಾ ಅಂತೆಲ್ಲ ಗಲಾಟೆ ಮಾಡಿದ್ರೆ, ನನ್‌ ತಾಯಿ ಆಣೆಗೂ ನಾನು ಚಿತ್ರಮಂದಿರಕ್ಕೆ ಕಾಲಿಡೋದಿಲ್ಲ..!

ಚಿತ್ರಪ್ರೇಮಿಗಳು ಸೇರಿದಂತೆ ಅಪಾರ ಸಂಖ್ಯೆಯ ತಮ್ಮ ಅಭಿಮಾನಿಗಳಿಗೆ ನಟ ಶಿವರಾಜ್‌ ಕುಮಾರ್‌ ಹೀಗೆಂದು ಎಚ್ಚರಿಕೆ ನೀಡಿದ್ದಾರೆ. ಆ ಮೂಲಕ ‘ದಿ ವಿಲನ್‌’ ಚಿತ್ರದಲ್ಲಿನ ಸುದೀಪ್‌ ಮತ್ತು ತಮ್ಮ ಪಾತ್ರಗಳ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಅಭಿಮಾನಿಗಳು ಸೃಷ್ಟಿಸಿರುವ ವಿವಾದಕ್ಕೆ ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

‘ಯಾವುದೇ ಸಿನಿಮಾದಲ್ಲಿನ ಇಬ್ಬರ ನಟರ ಅಭಿನಯವನ್ನು ವೈಯಕ್ತಿಕ ಬದುಕಿಗೆ ಎಳೆತಂದು ಅನಗತ್ಯ ವಿವಾದ ಎಬ್ಬಿಸುವುದು ಸರಿಯಲ್ಲ. ಹಾಗೆ ಮಾಡಿದರೆ, ನಾನೆಂದಿಗೂ ಚಿತ್ರಮಂದಿರಕ್ಕೆ ಕಾಲಿಡುವುದಿಲ್ಲ. ಸಿನಿಮಾವನ್ನು ಸಿನಿಮಾದ ರೂಪದಲ್ಲಿಯೇ ನೋಡಿ. ಹಾಗೊಂದು ವೇಳೆ ಗಲಾಟೆ ಮಾಡುವುದಾದರೆ ತಾಯಿ ಮೇಲಾಣೆ, ನಾನು ಚಿತ್ರಮಂದಿರಕ್ಕೆ ಬಂದು ನಿಮ್ಮೊಂದಿಗೆ ಚಿತ್ರ ನೋಡುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು. ಹಾಗೆಯೇ ಅದಕ್ಕೆ ಅವಕಾಶ ಮಾಡಿಕೊಡಬೇಡಿ ಅಂತಲೂ ಕಿವಿ ಮಾತು ಹೇಳಿದರು.

ಸೋಮವಾರ ‘ದಿ ವಿಲನ್‌’ ಚಿತ್ರತಂಡ ಕರೆದಿದ್ದ ಬಿಡುಗಡೆ ಪೂರ್ವ ಮೊದಲ ಪತ್ರಿಕಾಗೋಷ್ಠಿಯಲ್ಲಿ ಶಿವರಾಜ್‌ ಕುಮಾರ್‌ ಚಿತ್ರದಲ್ಲಿನ ತಮ್ಮ ಪಾತ್ರದ ಕುರಿತು ಮಾತನಾಡುತ್ತಲೇ ಅಭಿಮಾನಿಗಳು ಸೃಷ್ಟಿಸಿರುವ ವಿವಾದಕ್ಕೆ ಪ್ರತಿಕ್ರಿಯಿಸಿದರು.

‘ಚಿತ್ರದ ಟೀಸರ್‌ ಹೊರಬಂದ ನಂತರ ಆಗುತ್ತಿರುವ ಬೆಳವಣಿಗೆಗಳನ್ನು ನಾನು ಗಮನಿಸುತ್ತಾ ಬಂದಿದ್ದೇನೆ. ಇಬ್ಬರು ನಟರ ಅಭಿಮಾನಿಗಳು ಎಂದು ಹೇಳಿಕೊಳ್ಳುತ್ತಿರುವವರು ಸೋಷಿಯಲ್‌ ಮೀಡಿಯಾದಲ್ಲಿ ವಿಲನ್‌ ಅವ್ನಾ ಇವ್ನಾ ಅಂತೆಲ್ಲ ಅನಗತ್ಯ ವಿವಾದ ಸೃಷ್ಟಿಸಿದ್ದಾರೆ. ಅಲ್ಲಿಂದ ಅದು ಮಾಧ್ಯಮಗಳಿಗೂ ಚಾಚಿಕೊಂಡಿದೆ. ಇಬ್ಬರ ಫೋಟೋಗಳನ್ನು ಹಾಕಿ, ವಿಲನ್‌ ಅವ್ನಾ ಇವ್ನಾ ಅಂತೆಲ್ಲ ಬಿಂಬಿಸುತ್ತಿರುವುದು ನನಗೆ ಬೇಸರ ತಂದಿದೆ. ಅಭಿಮಾನಿಗಳು ಹೀಗೆಲ್ಲ ಮಾಡುವುದು ಸರಿಯಲ್ಲ. ಹಾಗೆ ಮಾಡುವುದಾದರೆ ಅಭಿಮಾನಿಗಳ ಜತೆಗೆ ನಾನು ಸಿನಿಮಾ ನೋಡುವುದನ್ನೇ ನಿಲ್ಲಿಸಬೇಕಾಗುತ್ತದೆ ’ಎಂದರು.

ಶಿವರಾಜ್‌ಕುಮಾರ್‌ ಹಾಗೂ ಸುದೀಪ್‌ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ದಿ ವಿಲನ್‌’ ಅಕ್ಟೋಬರ್‌ 18ಕ್ಕೆ ತೆರೆಗೆ ಬರಲಿದೆ. ಅಕ್ಟೋಬರ್‌ 11ರಿಂದಲೇ ಮುಂಗಡ ಟಿಕೆಟ್‌ ಬುಕ್ಕಿಂಗ್‌ ಶುರುವಾಗಲಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಗಿಲ್ಲಿ ನಟನನ್ನು ಕೈಬಿಟ್ಟು ಗೋಲ್ಡ್ ಬೆನ್ನುಬಿದ್ದ ಬಿಗ್ ಬಾಸ್ ಡಾಗ್ ಸತೀಶ್!
ಗಡದ್ದಾಗಿ ನಲ್ಲಿಮೂಳೆ ತಿಂದು ಬಿಗ್‌ಬಾಸ್‌ ಮನೆಯಲ್ಲೇ ನಿದ್ರೆಗೆ ಜಾರಿ ಗಿಲ್ಲಿ ನಟ!