ರಂಗಭೂಮಿಯಿಂದ ಬಂದ ಪ್ರತಿಭೆ ಚೈತ್ರಾ ಆಚಾರ್, ನಟನೆಯ ಮೊದಲ ಚಿತ್ರ ‘ಮಹಿರ’ ತೆರೆಗೆ ಬಂದಿದೆ. ಇದರ ಜತೆಗೆ ಮತ್ತೆರಡು ಚಿತ್ರಗಳು ಅವರ ಮುಂದಿದ್ದು, ತಮ್ಮ ಸಿನಿಮಾ ಯಾನದ ಬಗ್ಗೆ ಚೈತ್ರಾ ಆಡಿದ ಮಾತುಗಳು ಇಲ್ಲಿವೆ.
ನಿಮ್ಮ ಹಿನ್ನೆಲೆ ಏನು?
ನಾನು ಬೆಂಗಳೂರಿನ ಹುಡುಗಿ. ಎಂಎಸ್ ರಾಮಯ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಯೋಟೆಕ್ ವಿಭಾಗದ ಫೈನಲ್ ಇಯರ್ ಸ್ಟುಡೆಂಟ್. ನಮ್ಮ ಮನೆತನದಿಂದ ಯಾರೂ ಚಿತ್ರರಂಗದಲ್ಲಿ ಇಲ್ಲ. ನಮ್ಮದು ಶಿಕ್ಷಕರ ಕುಟುಂಬ. ನಮ್ಮ ತಾತನಿಂದ ಹಿಡಿದು ಇಲ್ಲಿವರೆಗೂ ಎಲ್ಲರೂ ಶಿಕ್ಷಕರಾಗಿದ್ದಾರೆ. ಇನ್ನೂ ನಮ್ಮ ತಾತ ರಂಗಭೂಮಿಯಲ್ಲಿದ್ದವರು.
undefined
ನಟನೆಯ ವಿಶ್ವಾಸ ಬಂದಿದ್ದು ಹೇಗೆ?
ಕಾಲೇಜಿನಲ್ಲಿ ಓದುಕೊಂಡೇ ರಂಗಭೂಮಿ ತಂಡಕ್ಕೆ ಸೇರಿಕೊಂಡೆ. ನಂತರ ನಾವೇ ಒಂದು ರಂಗತಂಡ ಕಟ್ಟಿ, ಹೊರಗಡೆ ನಾಟಕ ಪ್ರದದರ್ಶನ ನೀಡುವುದಕ್ಕೆ ಹೋಗುತ್ತಿದ್ವಿ. ರಂಗಭೂಮಿಯೇ ನನಗೆ ನಟನೆಯ ಬುನಾದಿ. ಓದು, ನಾಟಕ ಅಂತ ಓಡಾಡಿಕೊಂಡಿದ್ದ ನನಗೆ ಸಿನಿಮಾಗಳಲ್ಲಿ ನಟಿಸುವ ಅವಕಾಶವೂ ಬಂದಿದ್ದು ಆಕಸ್ಮಿಕ.
ನೀವು ಚಿತ್ರರಂಗಕ್ಕೆ ಬಂದಿದ್ದು ಹೇಗೆ?
ರಂಗಭೂಮಿಯಲ್ಲಿದ್ದಾಗಲೇ ಮಠ ಗುರುಪ್ರಸಾದ್ ಆಡಿಷನ್‌ಗೆ ಕರೆದಿದ್ದರು. ಅಲ್ಲಿ ಹೋಗಿ ಆಡಿಷನ್ ಕೊಟ್ಟೆ. ಅವರ ಹೊಸ ಚಿತ್ರ ‘ಅದೇಮಾ’ ಚಿತ್ರಕ್ಕೆ ನಾಯಕಿ ಆದೆ. ಸಾ ರಾ ಗೋವಿಂದು ಪುತ್ರ ಅನೂಪ್ ಇದರ ನಾಯಕ. ಈ ಚಿತ್ರದ ಶೂಟಿಂಗ್ ಒಂದು ಶೆಡ್ಯೂಲ್ ಮುಗಿಯುತ್ತಿದಂತೆಯೇ ‘ಮಹಿರ’ ಚಿತ್ರತಂಡದಿಂದ ಅವಕಾಶ ಬಂತು.
ಮೊದಲ ಸಿನಿಮಾ ನಿಮಗೆ ಕೊಟ್ಟಅನುಭವ ಏನು?
ಮೊದಲು ಒಪ್ಪಿಕೊಂಡಿದ್ದು ‘ಅದೇಮಾ’. ಇನ್ನೂ ಚಿತ್ರೀಕರಣದಲ್ಲಿದೆ. ‘ಮಹಿರ’ ನನ್ನ ಇಮೇಜ್ ಮತ್ತು ಆಸಕ್ತಿಗೆ ತಕ್ಕಂತೆ ಸಿಕ್ಕ ಸಿನಿಮಾ. ನೀವೇ ನೋಡಿದಂತೆ ಇಡೀ ಕತೆ ನನ್ನ ಮತ್ತು ನನ್ನ ತಾಯಿ ಪಾತ್ರದ ಸುತ್ತ ತಿರುಗುತ್ತದೆ. ನಟನೆಗೂ ಮಹತ್ವ ಇರುವ ಪಾತ್ರ. ಮೊದಲ ಹಂತದಲ್ಲೇ ಕ್ರೈಮ್ ಥ್ರಿಲ್ಲರ್ ಚಿತ್ರದಲ್ಲಿ ನಟಿಸಿದ ಖುಷಿ ನನ್ನದು. ಸಿನಿಮಾ ನೋಡಿದವರು ಒಳ್ಳೆಯ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ರಂಗಭೂಮಿಯಿಂದ ಚಿತ್ರರಂಗಕ್ಕೆ ಬಂದಿದ್ದಕ್ಕೂ ಸಾರ್ಥಕವಾಯಿತು ಎನ್ನುವ ಭಾವನೆ ‘ಮಹಿರ’ ಸಿನಿಮಾ ಕೊಟ್ಟಿದೆ.
ನಿಮಗೆ ಯಾವ ರೀತಿಯ ಪಾತ್ರಗಳು ಇಷ್ಟ?
ಯಾವುದೇ ರೀತಿಯ ಪಾತ್ರಕ್ಕೂ ನಾನು ಜೀವ ಕೊಡಬಲ್ಲೆ ಎಂಬುದು ರಂಗಭೂಮಿ ನನಗೆ ಕಲಿಸಿಕೊಟ್ಟಪಾಠ. ಕತೆ ಮತ್ತು ಪಾತ್ರ ಬೇಡಿದರೆ ಬೋಲ್ಡ್ ಆಗಿ ನಟಿಸಬಲ್ಲೆ. 50 ವರ್ಷ ಮುದುಕಿ ಪಾತ್ರ ಮಾಡಿ ಅಂದಗ್ರೂ ಮಾಡುವೆ. ಆದರೆ, ಎಕ್ಸ್‌ಪೋಸ್, ಕಿಸ್ಸಿಂಗ್ ದೃಶ್ಯಗಳು ಇದ್ದರೆ ಮಾಡಲ್ಲ.
ಲಂಡನ್‌ನಿಂದ ಬಂದು ಕನ್ನಡ ಸಿನಿಮಾ ನಿರ್ಮಾಣ ಮಾಡಿದ ಟೆಕ್ಕಿ!
ಬೇರೆ ಯಾವುದಾದರೂ ಚಿತ್ರ ಒಪ್ಪಿಕೊಂಡಿದ್ದೀರಾ?
ಹೌದು, ರಾಜ್ ಬಿ ಶೆಟ್ಟಿಜತೆ ‘ರಾಮನ ಅವತಾರ’ ಚಿತ್ರಕ್ಕೆ ನಾನೂ ಕೂಡ ನಾಯಕಿ. ನನ್ನ ಜತೆ ಪ್ರಣೀತಾ ಕೂಡ ಇದ್ದಾರೆ. ಇಲ್ಲೂ ಕೂಡ ಒಳ್ಳೆಯ ಪಾತ್ರ ಇರುವ ಸಿನಿಮಾ.
-- ಆರ್ ಕೇಶವಮೂರ್ತಿ