
ಕನ್ನಡದ ಕಂಟೆಂಟ್ ಸಿನಿಮಾ ‘ಪ್ರೇಮದ ಊರಲಿ’ ಬಾಲಿವುಡ್‌ಗೂ ಕಾಲಿಡುವುದಕ್ಕೆ ಸಜ್ಜಾಗುತ್ತಿದೆ. ಈಗಾಗಲೇ ಚಿತ್ರಕ್ಕೆ ಹಿಂದಿ ಡಬ್ಬಿಂಗ್ ಭರದಿಂದ ಸಾಗಿದ್ದು, ಹಿಂದಿ ಸೇರಿದಂತೆ ಉತ್ತರ ಭಾರತದ ಭಾಷೆಯಲ್ಲಿ ಈ ಚಿತ್ರವನ್ನು ವಿತರಣೆ ಮಾಡಲು ಮುಂದೆ ಬಂದಿರುವುದು ಖ್ಯಾತ ನಿರ್ಮಾಪಕ ಹಾಗೂ ವಿತರಕ ಅನಿಲ್ ತಡಾನಿ. ಇವರು ಈಗಾಗಲೇ ‘ಕೆಜಿಎಫ್’ ಹಾಗೂ ‘ಪುಷ್ಪ’ ಮುಂತಾದ ದಕ್ಷಿಣ ಭಾರತೀಯ ಬಿಗ್ ಬಜೆಟ್ ಚಿತ್ರಗಳನ್ನು ಬಾಲಿವುಡ್‌ನಲ್ಲಿ ಅದ್ದೂರಿಯಾಗಿ ಬಿಡುಗಡೆ ಮಾಡಿದವರು. ಈಗ ಹೊಸಬರ, ಹೊಸ ರೀತಿಯ ಕತೆಯಾಗಿರುವ ‘ಪ್ರೇಮದ ಊರಲಿ’ ಚಿತ್ರದ ವಿರಣೆಗೆ ಜೊತೆಯಾಗಿದ್ದಾರೆ.
ತೆಲುಗಿನಲ್ಲೂ ಭರ್ಜರಿ ಓಪನಿಂಗ್
ಮನೋಜ್ ಕುಮಾರ್ ಪಿ ನಿರ್ದೇಶಿಸಿ, ಶ್ರೀ ರಾಮ್, ತಪಸ್ವಿನಿ ಪೂಣಚ್ಚ, ರಂಗಾಯಣ ರಘು, ರಮಿಕಾ ಶಿವು ಮುಂತಾದವರು ನಟಿಸಿರುವ ಈ ಚಿತ್ರವು ಈಗಾಗಲೇ ತೆಲುಗಿನಲ್ಲಿ ‘ಪ್ರಮನೆ ಊರಿಲೋ’ ಹೆಸರಿನಲ್ಲಿ ತೆರೆಕಂಡಿದೆ. ಅಕ್ಟೋಬರ್ 2ರಂದು ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಬಿಡುಗಡೆ ಆಗಿರುವ ಈ ಚಿತ್ರಕ್ಕೆ ಮೆಚ್ಚುಗೆ ಮಾತುಗಳು ಕೇಳಿ ಬರುತ್ತಿವೆ.
ತಮಿಳು, ಮಲಯಾಳಂಗೂ ಡಬ್
ಈ ನಡುವೆ ಈ ಚಿತ್ರವನ್ನು ತಮಿಳು ಹಾಗೂ ಮಲಯಾಳಂ ಭಾಷೆಗೂ ಡಬ್ ಮಾಡುವ ತಯಾರಿಗಳು ನಡೆಯುತ್ತಿವೆ. ಆ ಮೂಲಕ ಅಪ್ಪಟಕನ್ನಡ ಸಿನಿಮಾ ಆಗಿ ಮೂಡಿ ಬಂದು, ಕತೆಯಿಂದಲೇ ಎಲ್ಲರ ಗಮನ ಸೆಳೆಯುತ್ತಿರುವ ‘ಪ್ರೇಮದ ಊರಲಿ’ ನಿಜವಾದ ಪ್ಯಾನ್ ಇಂಡಿಯಾ ಸಿನಿಮಾ ಆಗಲು ಹೊರಟಿದೆ. ಅಂದಹಾಗೆ 2022ರಲ್ಲಿ ‘ಕಾಂತಾರ’ ಚಿತ್ರ ಕೂಡ ಇದೇ ರೀತಿ ಮೊದಲು ಕನ್ನಡದಲ್ಲಿ ಮಾತ್ರ ಬಿಡುಗಡೆ ಆಗಿ, ಅದರ ಯಶಸ್ಸಿನಿಂದ ಬೇರೆ ಬೇರೆ ಭಾಷೆಗಳಿಗೆ ಕಾಲಿಟ್ಟಿತು. ಈಗ ಅದೇ ಜೋಶ್‌ನಲ್ಲಿ ‘ಪ್ರೇಮದ ಊರಲಿ’ ಚಿತ್ರವೂ ಇದೆ.
ಕನ್ನಡದಲ್ಲಿ ಕಲೆಕ್ಷನ್ ಕಿಂಗ್
ಕನ್ನಡದಲ್ಲಿ ‘ಪ್ರೇಮದ ಊರಲಿ’ ಪ್ರೇಕ್ಷಕರ ಮುಂದೆ ಬಂದು ಇಂದಿಗೆ (ಅ.5) 11 ದಿನಗಳಾಗುತ್ತಿವೆ. ಎರಡನೇ ವಾರಕ್ಕೆ ಕಾಲಿಟ್ಟಿರುವ ಈ ಚಿತ್ರವು ಸದ್ಯ 500ಕ್ಕೂ ಹೆಚ್ಚು ಶೋಗಳು ಹೌಸ್‌ಫುಲ್ ಪ್ರದರ್ಶನ ಕಾಣುತ್ತಿವೆ. ಹಾಗೆ ನೋಡಿದರೆ ಬಿಡುಗಡೆಯಾದ ಮೊದಲೆರಡ್ಮೂರು ದಿನಗಳಲ್ಲಿ ನೀರಸವಾಗಿ ಸಾಗುತ್ತಿದ್ದ ಚಿತ್ರಕ್ಕೆ ನಾಲ್ಕನೇ ದಿನದಿಂದ ಬಾಯಿಂದ ಬಾಯಿಗೆ ಸಿನಿಮಾ ಪ್ರಾಚರ ಪಡೆದುಕೊಂಡು, ಕೇವಲ 13 ಲಕ್ಷ ಗಳಿಕೆಯ ಗಡಿಯಲ್ಲಿದ್ದ ಚಿತ್ರವು, ಈಗಾಗಲೇ 9.82 ಕೋಟಿ ಗಳಿಕೆ ಮಾಡಿದೆ. ಸದ್ಯದಲ್ಲೇ 10 ಕೋಟಿ ಗಳಿಕೆ ಮಾಡುವ ನಿರೀಕ್ಷೆಯೂ ಇದೆ. ವಿಶೇಷ ಎಂದರೆ ಅ.2ರ ಗಾಂಧಿ ಜಯಂತಿ ದಿನವೊಂದರಲ್ಲಿ 3.46 ಕೋಟಿ ಗಳಿಕೆ ಮಾಡಿ ಅಚ್ಚರಿ ದಾಖಲೆ ಮಾಡಿದೆ.
ಸಿನಿಮಾ ಚೆನ್ನಾಗಿದೆ ಎನ್ನುವ ಬಾಯಿ ಮಾತಿನ ಪ್ರಚಾರದಲ್ಲೇ ಸದ್ದು ಮಾಡುವ ಹೊತ್ತಿಗೆ ಈ ಚಿತ್ರಕ್ಕೆ ವರವಾಗಿ ಪರಿಣಮಿಸಿದ್ದು ಅ.2 ರಜೆ ಜೊತೆಗೆ ಶನಿವಾರ ಮತ್ತು ಭಾನುವಾರ ದಿನಗಳು. ವರವಾಗಿ ಪರಿಣಮಿಸಿದ ಮೂರು ದಿನಗಳ ರಜೆಯ ಕಾರಣಕ್ಕೆ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬಂದು ‘ಪ್ರೇಮದ ಊರಲಿ’ ಚಿತ್ರಕ್ಕೆ ಜೈ ಎನ್ನುವಂತಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.