
ಸಾವಿನ ದವಡೆಯಿಂದ ಪಾರಾಗಿದ್ದ ಸೈಫ್ ಅಲಿ ಖಾನ್; ಅಂದು ನಡೆದಿದ್ದ ಭೀಕರ ಚಾಕು ದಾಳಿಯ ಬಗ್ಗೆ ಕರಾಳ ಸತ್ಯಗಳಿವು!
ಬಾಲಿವುಡ್‌ನ 'ಪಟೌಡಿ ನವಾಬ' ಸೈಫ್ ಅಲಿ ಖಾನ್ (Saif Ali Khan) ಅಂದರೇನೇ ಅದೊಂದು 'ರಾಯಲ್ ಫ್ಯಾಮಿಲಿ ದೊರೆ. ಅವರ ಸಿನಿಮಾಗಳು ಎಷ್ಟು ಸದ್ದು ಮಾಡುತ್ತವೆಯೋ, ಅವರ ವೈಯಕ್ತಿಕ ಜೀವನದ ಕಥೆಗಳು ಅಷ್ಟೇ ಕುತೂಹಲಕಾರಿಯಾಗಿರುತ್ತವೆ. ಆದರೆ ಇತ್ತೀಚೆಗೆ ಸೈಫ್ ಹಂಚಿಕೊಂಡ ಒಂದು ಕರಾಳ ಘಟನೆ ಇಡೀ ಸಿನಿರಂಗವನ್ನೇ ನಡುಗಿಸಿದೆ. ಬೆಳ್ಳಿತೆರೆಯ ಮೇಲೆ ವಿಲನ್ ಮೆಟ್ಟಿನಿಲ್ಲುವ ಸೈಫ್, ನಿಜ ಜೀವನದಲ್ಲಿ ಒಮ್ಮೆ ಸಾವಿನ ದವಡೆಯಿಂದ ಅದೃಷ್ಟ ಎಂಬಂತೆ ಪಾರಾಗಿದ್ದರಂತೆ! ತಮ್ಮ ಮೇಲೆ ನಡೆದ ಭೀಕರ ಚಾಕು ದಾಳಿಯ ಬಗ್ಗೆ ಸೈಫ್ ಬಿಚ್ಚಿಟ್ಟಿರುವ ಸಂಗತಿಗಳು ಈಗ ವೈರಲ್ ಆಗುತ್ತಿವೆ.
ಮಧ್ಯರಾತ್ರಿ ನಡೆದಿದ್ದ ಆ ಭಯಾನಕ ಘಟನೆ:
ಬಾಲಿವುಡ್ ನಟ ಸೈಫ್ ಅಲಿ ಖಾನ್ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಕಳೆದ ವರ್ಷ ಜನವರಿಯಲ್ಲಿ ನಡೆದ ಆ ಕರಾಳ ರಾತ್ರಿಯ ಬಗ್ಗೆ ನೆನಪಿಸಿಕೊಂಡು ಹೇಳಿಕೊಂಡಿದ್ದಾರೆ. ಅಂದು ಸೈಫ್ ಮನೆಯಲ್ಲಿ ಎಲ್ಲರೂ ಗಾಢ ನಿದ್ರೆಯಲ್ಲಿದ್ದಾಗ, ಅಪರಿಚಿತ ವ್ಯಕ್ತಿಯೊಬ್ಬ ಬಾತ್‌ರೂಮ್ ಕಿಟಕಿ ಮೂಲಕ ಮನೆಯೊಳಗೆ ನುಗ್ಗಿದ್ದ. ಆತ ನೇರವಾಗಿ ಸೈಫ್ ಅವರ ಪುಟ್ಟ ಮಗ ಜೆಹ್ ಮಲಗಿದ್ದ ಕೋಣೆಗೆ ತೆರಳಿದ್ದ. ಇದನ್ನು ಕಂಡ ನ್ಯಾನಿ ತಕ್ಷಣ ಸೈಫ್‌ಗೆ ಎಚ್ಚರಿಕೆ ನೀಡಿದ್ದರು. ಮಗನಿಗೆ ಅಪಾಯವಿದೆ ಎಂದು ತಿಳಿಯುತ್ತಿದ್ದಂತೆಯೇ ಸೈಫ್ ಅತ್ತ ಓಡಿ ಹೋಗಿದ್ದರು.
ಕೋಣೆಯೊಳಗೆ ಸೈಫ್ ಮತ್ತು ಆ ಅಪರಿಚಿತನ ನಡುವೆ ಭೀಕರ ಹೋರಾಟ ನಡೆಯಿತು. "ನಾನು ಲೈಟ್ ಹಾಕದೆ ಆತನನ್ನು ತಡೆಯಲು ಹೋದದ್ದು ದೊಡ್ಡ ತಪ್ಪಾಯಿತು. ಆತ ನನ್ನನ್ನು ಕೊಲ್ಲುವ ಉದ್ದೇಶದಿಂದಲೇ ಚಾಕುವಿನಿಂದ ಸತತವಾಗಿ ಇರಿದಿದ್ದ," ಎಂದು ಸೈಫ್ ಆ ನೋವಿನ ಕ್ಷಣವನ್ನು ವಿವರಿಸಿದ್ದಾರೆ. ಈ ಸಂಘರ್ಷದ ನಡುವೆ ಪುಟ್ಟ ಮಗ ಜೆಹ್‌ಗೂ ಚಿಕ್ಕಪುಟ್ಟ ಗಾಯಗಳಾದವು. 'ನೆಲದ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ನನಗೆ ನಾನು ಬದುಕುಳಿಯುವ ಬಗ್ಗೆ ಯಾವುದೇ ಭರವಸೆ ಇರಲಿಲ್ಲ' ಎಂದಿದ್ದಾರೆ.
ಆಗ ಪುಟ್ಟ ಮಗ ಜೆಹ್ ತನ್ನ ತಂದೆಯ ಬಳಿ ಬಂದು, "ಅಪ್ಪಾ, ನೀವು ಸಾಯುತ್ತೀರಾ?" ಎಂದು ಅಳುತ್ತಾ ಕೇಳಿದ ಪ್ರಶ್ನೆ ಸೈಫ್ ಅವರ ಎದೆಯನ್ನು ಸೀಳಿದಂತಿತ್ತು. ತನ್ನ ಮಗನಿಗಾಗಿ ಬದುಕಲೇಬೇಕು ಎಂಬ ಛಲ ಸೈಫ್ ಅವರಲ್ಲಿ ಮೂಡಿದ್ದೇ ಆಗ! ಆಸ್ಪತ್ರೆಗೆ ಹೋಗುವಾಗ ಸೈಫ್ ಧರಿಸಿದ್ದ ಪೈಜಾಮ ಸಂಪೂರ್ಣವಾಗಿ ರಕ್ತದಿಂದ ನೆನೆದುಹೋಗಿತ್ತು.
ಹಲವು ದಿನಗಳ ಚಿಕಿತ್ಸೆಯ ನಂತರ ಸೈಫ್ ಚೇತರಿಸಿಕೊಂಡರು. ಆದರೆ ಆ ದಾಳಿಕೋರನನ್ನು ಏನು ಮಾಡಬೇಕು ಎಂಬ ಪ್ರಶ್ನೆ ಎದುರಾದಾಗ ಸೈಫ್ ತೆಗೆದುಕೊಂಡ ನಿರ್ಧಾರ ಎಲ್ಲರನ್ನೂ ಅಚ್ಚರಿಗೊಳಿಸಿದೆ. "ಆತ ನನ್ನನ್ನು ಕೊಲ್ಲಲು ಬಂದಿದ್ದನ್ನು ನೆನಪಿಸಿಕೊಂಡಾಗ ಕ್ಷಮಿಸಲು ಸಾಧ್ಯವೇ ಇರಲಿಲ್ಲ. ಆದರೆ ನನ್ನ ಕುಟುಂಬದೊಂದಿಗೆ ಚರ್ಚಿಸಿದ ನಂತರ, ದ್ವೇಷಕ್ಕಿಂತ ಕ್ಷಮೆ ದೊಡ್ಡದು ಎಂದು ಭಾವಿಸಿ ಆತನನ್ನು ಬಿಟ್ಟುಬಿಡಲು ನಿರ್ಧರಿಸಿದೆವು," ಎಂದು ಸೈಫ್ ಹೇಳಿದ್ದಾರೆ.
ಸಿನಿಮಾಗಳಲ್ಲಿ ಆಕ್ಷನ್ ಹೀರೋ ಆಗಿ ಕಾಣಿಸಿಕೊಳ್ಳುವ ಸೈಫ್ ಅಲಿ ಖಾನ್, ನಿಜ ಜೀವನದಲ್ಲೂ ಅಪ್ರತಿಮ ಧೈರ್ಯ ಮತ್ತು ಉದಾತ್ತ ಗುಣವನ್ನು ಹೊಂದಿದ್ದಾರೆ ಎಂಬುದು ಈ ಘಟನೆಯಿಂದ ಸಾಬೀತಾಗಿದೆ. ಸದ್ಯ ಈ ಸುದ್ದಿ ಕೇಳಿ ಅವರ ಅಭಿಮಾನಿಗಳು ಬೆಚ್ಚಿಬಿದ್ದಿದ್ದು, "ನಮ್ಮ ನವಾಬ ನಿಜಕ್ಕೂ ರಿಯಲ್ ಲೈಫ್ ಹೀರೋ" ಎಂದು ಕೊಂಡಾಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.