
ಮುಂಬೈ (ಜೂ.29): ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಮತ್ತು ನಟ ವೀರ್ ದಾಸ್ (Vir Das) ಅಭಿನಯದ 2014 ರ ‘ರಿವಾಲ್ವರ್ ರಾಣಿ’ (Revolver Rani) ಚಿತ್ರದ ಸನ್ನಿವೇಶವೊಂದರ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಕಿಸ್ಸಿಂಗ್ ಸೀನ್ ಒಂದರಲ್ಲಿ ಕಂಗನಾ ರಣಾವತ್ ಅವರು ವೀರ್ ದಾಸ್ ಅವರ ತುಟಿಗೆ ಗಾಯವಾಗುವಂತೆ ಕಚ್ಚಿದ್ದರು ಎಂಬ ಹಳೆಯ ವದಂತಿ ಮತ್ತೆ ವೈರಲ್ ಆಗಿತ್ತು. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿರುವ ವೀರ್ ದಾಸ್, ಈ ಸುದ್ದಿಯನ್ನು ಸಂಪೂರ್ಣ ಸುಳ್ಳು ಎಂದು ತಳ್ಳಿಹಾಕಿದ್ದಾರೆ. ವೀರ್ ದಾಸ್ ಅವರ ಈ ಸ್ಪಷ್ಟನೆಗೆ ಕಂಗನಾ ರಣಾವತ್ ಕೂಡ ಧನ್ಯವಾದ ಅರ್ಪಿಸಿದ್ದಾರೆ.
ಸೋಶಿಯಲ್ ಮೀಡಿಯಾ 'X' ನಲ್ಲಿ ಅಭಿಮಾನಿಯೊಬ್ಬರು ಪತ್ರಕರ್ತರೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ, "ವೀರ್ ದಾಸ್ ಯಾವಾಗಲೂ ಎಲ್ಲದಕ್ಕೂ ಧ್ವನಿ ಎತ್ತುತ್ತಾರೆ. ಆದರೆ ಈ ಪತ್ರಕರ್ತರ ಹೇಳಿಕೆಗೆ ಯಾಕೆ ಸುಮ್ಮನಿದ್ದಾರೆ? ಆಕೆ ಹೇಳುತ್ತಿರುವುದು ನಿಜವೇ?" ಎಂದು ಪ್ರಶ್ನಿಸಿದ್ದರು.
ಇದಕ್ಕೆ ಉತ್ತರಿಸಿದ ವೀರ್ ದಾಸ್, "ಸ್ಪಷ್ಟವಾಗಿ ಹೇಳಬೇಕೆಂದರೆ, ಈ ಕಥೆ ಸಂಪೂರ್ಣ ಕಾಲ್ಪನಿಕ (Pure Fiction). ಕಂಗನಾ ಸೆಟ್‌ನಲ್ಲಿ ಅತ್ಯಂತ ವೃತ್ತಿಪರ ನಟಿಯಾಗಿದ್ದರು (Complete Professional) ಮತ್ತು ಅವರು ಅದ್ಭುತ ಕಲಾವಿದೆ ಎಂಬುದನ್ನು ನಾನು ಇಂದಿಗೂ ಒಪ್ಪಿಕೊಳ್ಳುತ್ತೇನೆ. ಅವರ ವಿರುದ್ಧ ಈ ರೀತಿಯ ಅಪಪ್ರಚಾರ ಮಾಡುವುದು ತಪ್ಪು. ಹೌದು, ಕೆಲವು ವರ್ಷಗಳ ನಂತರ ನನ್ನ ಕಾಮಿಡಿಗೆ ಅವರು ನನ್ನನ್ನು ಭಯೋತ್ಪಾದಕ ಎಂದು ಕರೆದಿದ್ದು ನಿಜ, ಆದರೆ ಶೂಟಿಂಗ್ ಸೆಟ್‌ನಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ" ಎಂದು ಕಂಗನಾ ಪರ ನಿಂತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ಸುದ್ದಿಯ ಪ್ರಕಾರ, 'ರಿವಾಲ್ವರ್ ರಾಣಿ' ಚಿತ್ರದ ಕಿಸ್ಸಿಂಗ್ ಸೀನ್ ಚಿತ್ರೀಕರಣ ಮುಗಿದು ನಿರ್ದೇಶಕರು 'ಕಟ್' ಎಂದರೂ ಕಂಗನಾ ವೀರ್ ದಾಸ್ ಅವರನ್ನು ಮುತ್ತಿಡುವುದನ್ನು ನಿಲ್ಲಿಸಿರಲಿಲ್ಲ. ಈ ವೇಳೆ ವೀರ್ ದಾಸ್ ಅವರ ತುಟಿಗಳಿಂದ ರಕ್ತ ಬರುವಂತೆ ಗಾಯವಾಗಿತ್ತು ಎಂದು ಪತ್ರಕರ್ತರೊಬ್ಬರು ಹೇಳಿಕೆ ನೀಡಿದ್ದರು. ಇದೇ ರೀತಿಯ ಪೋಸ್ಟ್‌ಗಳು 2023 ರಲ್ಲೂ ವೈರಲ್ ಆಗಿದ್ದವು. ಆಗ ಕಂಗನಾ ಇನ್‌ಸ್ಟಾಗ್ರಾಮ್‌ನಲ್ಲಿ ತಮಾಷೆ ಮಾಡುತ್ತಾ, "ಹೃತಿಕ್ ರೋಷನ್ ಆದ ಮೇಲೆ, ಈಗ ನಾನು ಬಡ ವೀರ್ ದಾಸ್ ಅವರ ಮಾನಭಂಗ ಮಾಡಿದ್ದೇನಾ? ಇದೆಲ್ಲಾ ಯಾವಾಗ ನಡೀತು?" ಎಂದು ನಗುವ ಎಮೋಜಿಗಳೊಂದಿಗೆ ಬರೆದುಕೊಂಡಿದ್ದರು.
ಹಲವು ವರ್ಷಗಳ ಹಿಂದೆ ವೀರ್ ದಾಸ್ ಅವರ "ಐ ಕಮ್ ಫ್ರಮ್ ಟೂ ಇಂಡಿಯಾಸ್" (I come from two Indias) ಎಂಬ ವಿಡಿಯೋ ವೈರಲ್ ಆಗಿತ್ತು. ಅದರಲ್ಲಿ ಅವರು, "ಭಾರತದಲ್ಲಿ ಪುರುಷರು ಹಗಲಿನಲ್ಲಿ ಮಹಿಳೆಯರನ್ನು ದೇವತೆಯಂತೆ ಪೂಜಿಸುತ್ತಾರೆ ಮತ್ತು ರಾತ್ರಿಯಲ್ಲಿ ಗ್ಯಾಂಗ್ ರೇಪ್ ಮಾಡುತ್ತಾರೆ" ಎಂದು ಹೇಳಿದ್ದರು.
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಕಂಗನಾ, "ಎಲ್ಲಾ ಭಾರತೀಯ ಪುರುಷರನ್ನು ಅತ್ಯಾಚಾರಿಗಳು ಎಂದು ಬಿಂಬಿಸುವುದು ಜಾಗತಿಕ ಮಟ್ಟದಲ್ಲಿ ಭಾರತೀಯರ ಮೇಲಿನ ಜನಾಂಗೀಯ ನಿಂದನೆಗೆ ಕಾರಣವಾಗುತ್ತದೆ. ಇಡೀ ಜನಾಂಗವನ್ನು ಗುರಿಯಾಗಿಸಿಕೊಂಡು ಮಾಡುವ ಇಂತಹ ಸೃಜನಶೀಲ ಕೆಲಸಗಳು 'ಮೃದು ಭಯೋತ್ಪಾದನೆ' (Soft Terrorism) ಇದ್ದಂತೆ. ಇಂತಹ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು" ಎಂದು ವೀರ್ ದಾಸ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.
2014 ರಲ್ಲಿ ಕಂಗನಾ ಅವರ ಸೂಪರ್ ಹಿಟ್ ಚಿತ್ರ 'ಕ್ವೀನ್' ಬಿಡುಗಡೆಯಾದ ಬೆನ್ನಲ್ಲೇ 'ರಿವಾಲ್ವರ್ ರಾಣಿ' ಸಿನಿಮಾ ತೆರೆಕಂಡಿತ್ತು. 'ಕ್ವೀನ್' ಚಿತ್ರದಲ್ಲಿ ಮುಗ್ಧ ಹುಡುಗಿಯಾಗಿ ನಟಿಸಿದ್ದ ಕಂಗನಾ, ಈ ಚಿತ್ರದಲ್ಲಿ ಭ್ರಷ್ಟ ರಾಜಕಾರಣಿ ಅಲ್ಕಾ ಸಿಂಗ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ವೀರ್ ದಾಸ್ ಆಕೆಯ ಬಾಯ್‌ಫ್ರೆಂಡ್ ಪಾತ್ರ ಮಾಡಿದ್ದರು. ಚಂಬಲ್ ಕಣಿವೆಯ ಹಿನ್ನೆಲೆಯಲ್ಲಿ ಮೂಡಿಬಂದಿದ್ದ ಈ ಚಿತ್ರವನ್ನು ನಿರ್ದೇಶಕ ಸಾಯಿ ಕಬೀರ್ ನಿರ್ದೇಶಿಸಿದ್ದರು. ಪ್ರಸ್ತುತ ವೀರ್ ದಾಸ್ ಬೆಂಬಲಕ್ಕೆ ನಿಂತಿದ್ದಕ್ಕೆ ಕಂಗನಾ ಅವರಿಗೆ ಥ್ಯಾಂಕ್ಸ್ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.