Yash as Ravana: ಸಾಮಾನ್ಯವಾಗಿ ಸಿನಿಮಾಗಳಲ್ಲಿ ವಿಲನ್ ಎಂದರೆ ವಿಕಾರ ಮುಖ, ಚಪ್ಪಟೆ ಮೂಗು ಇರಬೇಕು ಎಂಬ ಕಲ್ಪನೆಯಿದೆ. ಆದರೆ, ಇಡೀ ದೇಶವೇ ಮೆಚ್ಚಿದ ಹ್ಯಾಂಡ್ಸಮ್ ನಟ ರಾಕಿಂಗ್ ಸ್ಟಾರ್ ಯಶ್ 'ರಾಮಾಯಣ'ದಲ್ಲಿ ರಾವಣನಾಗಿದ್ದು ಏಕೆ? ರಾವಣ ಕೇವಲ ದುಷ್ಟನಲ್ಲ, ಅವನಲ್ಲಿದ್ದ ನೂರಾರು ಮುಖಗಳೇನು? ಬುದ್ಧಿ, ಶಕ್ತಿ ಎಲ್ಲವೂ ಇದ್ದ ರಾವಣ ವಿನಾಶದ ಹಾದಿ ಹಿಡಿದಿದ್ದೇಕೆ? ಎಂಬುದನ್ನು ಸದ್ಗುರು ಅವರು ರೋಚಕವಾಗಿ ವಿವರಿಸಿದ್ದಾರೆ.
ಸಿನಿಮಾಗಳಲ್ಲಿ ಸದಾ ವಿಲನ್ಗಳಿಗೆ ಚಪ್ಪಟೆ ಮೂಗು, ಒರಟು ಮುಖ ತೋರಿಸುವ ಸಂಪ್ರದಾಯವಿದೆ. ಆದರೆ ಯಶ್ ಅತ್ಯಂತ ಸುಂದರ ಮತ್ತು ಅದ್ಭುತ ನಟ. ರಾವಣ ಕೇವಲ ಒಬ್ಬ ಸಾಮಾನ್ಯ ರಾಕ್ಷಸನಲ್ಲ, ಆತ ಮಹಾನ್ ವಿದ್ವಾಂಸ, ಶಿವಭಕ್ತ, ಸುಂದರ ಲಂಕೆಯನ್ನು ಕಟ್ಟಿದ ಸಮರ್ಥ ರಾಜ. ಆತನ ಪಾತ್ರದಲ್ಲಿ ಹಲವು ಭಾವಗಳಿರುವುದರಿಂದಲೇ ಯಶ್ ಅವರಂತಹ ಸೂಪರ್ಸ್ಟಾರ್ ಈ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ.
ರಾವಣನಿಗೆ ಎಲ್ಲವೂ ಇತ್ತು, ಆದರೆ ಅತಿಯಾದ ದುರಾಸೆ ಇತ್ತು. ಆತ ಕೈಲಾಸಕ್ಕೆ ಹೋಗಿ ಶಿವನನ್ನು ಮೆಚ್ಚಿಸಿ ವರ ಕೇಳುವ ಸಂದರ್ಭ ಬಂದಾಗ, "ನನಗೆ ನಿನ್ನ ಪತ್ನಿ ಪಾರ್ವತಿಯೇ ಬೇಕು" ಎಂದು ಕೇಳಿಬಿಡುತ್ತಾನೆ! ಕೊಟ್ಟ ಮಾತಿಗೆ ಬದ್ಧನಾದ ಶಿವ "ಸರಿ, ಕರೆದುಕೊಂಡು ಹೋಗು" ಎನ್ನುತ್ತಾನೆ.
ರಾವಣ ತನ್ನನ್ನು ಕರೆದೊಯ್ಯಲು ಬರುತ್ತಿರುವುದನ್ನು ಕಂಡ ಪಾರ್ವತಿ ದೇವಿ, ಅಲ್ಲಿದ್ದ ಒಂದು ಕಪ್ಪೆಯನ್ನು (ಸಂಸ್ಕೃತದಲ್ಲಿ ಕಪ್ಪೆಗೆ 'ಮಂಡೂಕ' ಎನ್ನಲಾಗುತ್ತದೆ) ಸುಂದರ ಹೆಣ್ಣನ್ನಾಗಿ ಪರಿವರ್ತಿಸುತ್ತಾಳೆ. ಅದೇ ಮಂಡೋದರಿ. ರಾವಣ ಅವಳನ್ನೇ ಪಾರ್ವತಿ ಎಂದು ತಿಳಿದು ಲಂಕೆಗೆ ಕರೆತಂದು ಮದುವೆಯಾಗುತ್ತಾನೆ. ಮಂಡೋದರಿ ಅತ್ಯಂತ ಜ್ಞಾನಿಯಾಗಿದ್ದಳು. ಸೀತೆಯನ್ನು ಅಪಹರಿಸಿದಾಗ, "ಸೀತೆಯನ್ನು ಗೌರವದಿಂದ ವಾಪಸ್ ಕೊಟ್ಟುಬಿಡು, ಇದು ನಿನ್ನ ವಿನಾಶಕ್ಕೆ ಕಾರಣವಾಗುತ್ತದೆ" ಎಂದು ಎಚ್ಚರಿಸಿದ್ದರೂ ರಾವಣ ತನ್ನ ಅಹಂಕಾರದಿಂದ ಆಕೆಯ ಮಾತನ್ನು ಕೇಳಲಿಲ್ಲ.
ರಾವಣನಿಗೆ ಅಪ್ರತಿಮ ಬುದ್ಧಿಶಕ್ತಿ, ಜ್ಞಾನ, ಅಸಾಧಾರಣ ಬಲ ಎಲ್ಲವೂ ಇತ್ತು. ಆದರೆ ಅವನ ಬಳಿ "ಸಮತೋಲನ" (Balance) ಇರಲಿಲ್ಲ. ತಾನೇ ಜಗತ್ತಿನ "ಸೂಪರ್ಮ್ಯಾನ್" ಎಂಬ ಅಹಂಕಾರ ಆತನನ್ನು ಆವರಿಸಿತ್ತು. ಮನುಷ್ಯನಲ್ಲಿ ಎಷ್ಟೇ ಪ್ರತಿಭೆ ಮತ್ತು ಬುದ್ಧಿವಂತಿಕೆ ಇದ್ದರೂ, ಜೀವನದಲ್ಲಿ ಸಮತೋಲನ ಇಲ್ಲದಿದ್ದರೆ ಆತನ ಬುದ್ಧಿಯೇ ಆತನ ವಿನಾಶಕ್ಕೆ ಕಾರಣವಾಗುತ್ತದೆ ಎಂಬುದಕ್ಕೆ ರಾವಣನೇ ಸಾಕ್ಷಿ.
ರಾಮ ರಾವಣನಷ್ಟು ದೈಹಿಕವಾಗಿ ಬಲಿಷ್ಠನಾಗಿರಲಿಲ್ಲ ಅಥವಾ ರಾವಣನಷ್ಟು ಮಾಯಾವಿ ಕಲೆಗಳನ್ನು ಕಲಿತಿರಲಿಲ್ಲ. ಆದರೆ ರಾಮನಲ್ಲಿ "ಪರಿಪೂರ್ಣ ಸಮತೋಲನ ಮತ್ತು ಶಾಂತತೆ" ಇತ್ತು. ಅದಕ್ಕಾಗಿಯೇ ಶಾಂತ ಸ್ವಭಾವದ ರಾಮ ಅಂತಿಮವಾಗಿ ಜಯಶಾಲಿಯಾದನು.
ಹಬ್ಬದ ವಾತಾವರಣ ಶುರು
ಪ್ರೇಕ್ಷಕರ ಬಹುದಿನಗಳ ಕಾಯುವಿಕೆಗೆ ಕೊನೆಗೂ ತೆರೆಬಿದ್ದಿದೆ! ಜಗತ್ತಿನಾದ್ಯಂತ ಭಾರಿ ನಿರೀಕ್ಷೆ ಹುಟ್ಟುಹಾಕಿದ್ದ ದೃಶ್ಯವೈಭವ 'ರಾಮಾಯಣ' ಸಿನಿಮಾ ಅಂತೂ ವಿಶ್ವದಾದ್ಯಂತ ಗ್ರ್ಯಾಂಡ್ ಎಂಟ್ರಿ ಕೊಟ್ಟಿದೆ. ಶ್ರೀರಾಮನಾಗಿ ರಣಬೀರ್ ಕಪೂರ್, ದಶಕಂಠ ರಾವಣನಾಗಿ ನಮ್ಮ ರಾಕಿಂಗ್ ಸ್ಟಾರ್ ಯಶ್ ಮುಖಾಮುಖಿಯಾಗಿರೋ ಈ ಬಿಗ್ ಬಜೆಟ್ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಮುಗಿಬಿದ್ದಿದ್ದು, ಮೊದಲ ಶೋನಿಂದಲೇ ಚಿತ್ರಮಂದಿರಗಳಲ್ಲಿ ಹಬ್ಬದ ವಾತಾವರಣ ಶುರುವಾಗಿದೆ. ನಿರೀಕ್ಷೆಯಂತೆಯೇ ಚಿತ್ರಕ್ಕೆ ವಿಶ್ವದಾದ್ಯಂತ ದಾಖಲೆಯ ಮೆಗಾ ಓಪನಿಂಗ್ ಸಿಕ್ಕಿದೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.