
ಹೈದರಾಬಾದ್ (ನ.07) ನಟಿ ರಶ್ಮಿಕಾ ಮಂದಣ್ಮ ಹಾಗೂ ವಿಜಯ್ ದೇವರಕೊಂಡ ಜೋಡಿ ಇತ್ತೀಚೆಗೆ ಕಾಫಿ ವಿಥ್ ಕರಣ್ ಶೋದಲ್ಲಿ ಆಡಿದ ಮಾತುಗಳಿಂದ ಭಾರಿ ವಿವಾದಕ್ಕೆ ಗುರಿಯಾಗಿದ್ದರು. ರಶ್ಮಿಕಾ ಹಾಗೂ ವಿಜಯ್ ಪ್ರೀತಿ, ಪ್ರೇಮ ನಿವೇದನೆ ಸೇರಿದಂತೆ ವೈಯುಕ್ತಿಕ ಬದುಕಿನ ಕುರಿತು ಆಡಿದ ಮಾತುಗಳಿಂದ ಟ್ರೋಲ್ ಎದುರಾಗಿತ್ತು. ಈ ವಿವಾದ ಬಳಿಕ ಬಹಿರಂಗವಾಗಿ ಎಲ್ಲೂ ಕಾಣಿಸಿಕೊಳ್ಳದ ಈ ಜೋಡಿ ಇದೀಗ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಜೊತೆಯಾಗಿ ಕಾಣಿಸಿಕೊಂಡಿದೆ. ಆದರೆ ವಿವಾದ ಬಳಿಕ ಮೊದಲ ಬಾರಿ ಕಾಣಿಸಿಕೊಂಡ ಈ ಜೋಡಿ ಮಾಸ್ಕ್ ಧರಿಸಿ ಮುಖ ಮರೆಮಾಚುವ ಪ್ರಯತ್ನ ಮಾಡಿತಾ ಅನ್ನೋ ಚರ್ಚೆಗಳು ಎದುರಾಗಿದೆ.
ವಿಮಾನ ನಿಲ್ದಾಣದಲ್ಲಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಜೋಡಿ, ಈ ಬಾರಿ ಮಾಸ್ಕ್ ಮತ್ತು ಕ್ಯಾಪ್ ಧರಿಸಿ ತಮ್ಮ ಮುಖವನ್ನು ಸಂಪೂರ್ಣವಾಗಿ ಮರೆಸಿಕೊಳ್ಳಲು ಪ್ರಯತ್ನಿಸಿದ್ದು ಹಲವರ ಗಮನಸೆಳೆದಿದೆ. ಮಾಧ್ಯಮಗಳ ಕ್ಯಾಮೆರಾ ಕಣ್ಣಿಗೆ ಬಿದ್ದ ಈ ಜೋಡಿಯ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಂದು ಸುತ್ತಿನ ಚರ್ಚೆ ಹುಟ್ಟು ಹಾಕಿದೆ. ಕಾಫಿ ವಿಥ್ ಕರಣ್ ಶೋ ಮೂಲಕ ವಿವಾದ ಹಾಗೂ ಟ್ರೋಲ್‌ಗೆ ಗುರಿಯಾದ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ಜೋಡಿ ಮಾಧ್ಯಮಗಳ ಪ್ರಶ್ನೆಗಳು, ಪಾಪರಾಜಿಗಳ ಕ್ಯಾಮೆರಾ ಕಣ್ಣಿನಿಂದ ದೂರ ಉಳಿಯಲು ಪ್ರಯತ್ನಿಸಿದೆ ಎಂಬ ಮಾತು ಕೇಳಿಬಂದಿದೆ.
ಕರಣ್ ಜೋಹರ್ (Karan Johar) ನಡೆಸಿಕೊಡುವ 'ಕಾಫಿ ವಿಥ್ ಕರಣ್' ಕಾರ್ಯಕ್ರಮದಲ್ಲಿ ನವದಂಪತಿಗಳಾಗಿ ಪಾಲ್ಗೊಂಡಿದ್ದ ಈ ಜೋಡಿ, ತಮ್ಮ ಪ್ರೇಮಕಥೆ, ಮದುವೆ ಪ್ರಪೋಸಲ್ ಕುರಿತು ಮುಕ್ತವಾಗಿ ವಿಷಯಗಳನ್ನು ಹಂಚಿಕೊಂಡಿದ್ದರು. ಈ ವೇಳೆ, ರಶ್ಮಿಕಾ ಮಂದಣ್ಣ ತಮ್ಮನ್ನು ಮದುವೆಯಾಗಲು ಸುಮಾರು ಒಂದು ವರ್ಷದ ಕಾಲ ಸತತವಾಗಿ ಕೇಳಿಕೊಳ್ಳುತ್ತಿದ್ದರು ಎಂದು ವಿಜಯ್ ಹೇಳಿದ್ದರು. ಇತ್ತ 100 ಬಾರಿ ಕೇಳಿದರೆ ಆಮೇಲೆ ಯೋಚಿಸೋಣ ಎಂದು ವಿಜಯ್ ದೇವರಕೊಂಡ ಹೇಳಿದ ಮಾತುಗಳು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿತ್ತು.
ಸಾಮಾಜಿಕ ಜಾಲತಾಣಗಳಲ್ಲಿ ವಿಜಯ್ ದೇವರಕೊಂಡ ಅವರ ವರ್ತನೆಯನ್ನು ‘ರೆಡ್ ಫ್ಲ್ಯಾಗ್’ (Red Flag) ಮತ್ತು ಅಹಂಕಾರದ ನಡವಳಿಕೆ ಎಂದು ಕರೆಯಲಾಗಿತ್ತು. ರಶ್ಮಿಕಾ ಅವರನ್ನು ‘ಕ್ರಿಂಜ್’ (Cringey) ಎಂದು ಟ್ರೋಲ್ ಮಾಡಲಾಗಿತ್ತು. ಇದೇ ವೇಳೆ ಇತರ ಕೆಲ ವಿಚಾರಗಳ ಕುರಿತು, ಒಂದೇ ಘಟನೆಯ ಭಿನ್ನ ಮಾತುಗಳು ಸೇರಿದಂತೆ ಹಲವು ವಿಚಾರಗಳು ಟ್ರೋಲ್ ಆಗಿತ್ತು.
ನೆಟ್ಟಿಗರ ಹಾಗೂ ಸೋಷಿಯಲ್ ಮೀಡಿಯಾ ಖಾತೆಗಳ ತೀವ್ರ ಟ್ರೋಲಿಂಗ್ ಬೆನ್ನಲ್ಲೇ, ರಶ್ಮಿಕಾ ಮಂದಣ್ಣ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುದೀರ್ಘ ಪೋಸ್ಟ್ ಬರೆದು ತಮ್ಮ ಪತಿಯ ಪರವಾಗಿ ನಿಂತಿದ್ದರು. "ನಾನು ನನ್ನ ಗಂಡನನ್ನು ಹುಚ್ಚಾಗಿ ಪ್ರೀತಿಸುತ್ತೇನೆ, ಇದರಲ್ಲಿ ತಪ್ಪೇನಿದೆ? ಸಂಕಷ್ಟದ ದಿನಗಳಲ್ಲಿ ವಿಜಯ್ ನನಗಾಗಿ ನಿಂತಿದ್ದರು" ಎಂದು ಬರೆದು ತಮಗೆ ಧೈರ್ಯ ತುಂಬಿದ್ದರು. ಮತ್ತೊಂದೆಡೆ ವಿಜಯ್ ದೇವರಕೊಂಡ ಕೂಡ ಅತ್ಯಂತ ಕಟು ಪದಗಳಿಂದ ಟ್ರೋಲರ್‌ಗಳಿಗೆ ತಿರುಗೇಟು ನೀಡಿದ್ದರು.
ಇದೀಗ ಈ ಸಕಲ ಹೈಡ್ರಾಮಾಗಳ ಬಳಿಕ, ಏರ್‌ಪೋರ್ಟ್‌ನಲ್ಲಿ ಪ್ರತ್ಯಕ್ಷರಾದ ವಿಜಯ್ ಹಾಗೂ ರಶ್ಮಿಕಾ ಮುಖಕ್ಕೆ ಮಾಸ್ಕ್ ಧರಿಸಿ ವಿಮಾನ ಹತ್ತಿದ್ದರು. ಅಭಿಮಾನಿಗಳತ್ತ ನೋಡದೆ, ಮಾಧ್ಯಮಗಳಿಂದ ದೂರ ಉಳಿದು ಬೇಗನೆ ವಿಮಾನ ನಿಲ್ದಾಣದ ಒಳಕ್ಕೆ ತೆರಳಿದ್ದಾರೆ. ಈ ವಿಡಿಯೋ ಇದೀಗ ಭಾರಿ ಚರ್ಚೆ ಹುಟ್ಟು ಹಾಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.