
ಪ್ರಪಂಚದಲ್ಲಿ ನೋಡುವುದಕ್ಕೆ ಒಂದೇ ರೀತಿ ಕಾಣುವ 7 ಜನ ಇರ್ತಾರಂತೆ ಇನ್ಸ್ಟಾಗ್ರಾಮ್‌ಗೆ ಹೋದರೆ ನೀವು ಸೆಲೆಬ್ರಿಟಿಗಳ ಪಡಿಯಚ್ಚಿನಂತೆ ಕಾಣುವ ಹಲವು ಇನ್‌ಫ್ಲುಯೆನ್ಸರ್‌ಗಳನ್ನು ನೋಡಬಹುದು, ಐಶ್ವರ್ಯಾ ರೈ, ಕರೀನಾ ಕಪೂರ್, ದಕ್ಷಿಣದ ಪ್ರಸಿದ್ಧ ನಟಿ ಸೌಂದರ್ಯ, ಶ್ರೀದೇವಿ ಅವರಂತೆ ಕಾಣುವ ಯುವತಿಯರು ಇದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇವರಿಗೆ ಸಾಕಷ್ಟು ಫಾಲೋವರ್ಸ್‌ಗಳಿದ್ದು, ಅನೇಕರು ಅವರನ್ನೇ ನೋಡಿದಂತಾಯಿತು ಎಂದು ಕಾಮೆಂಟ್ ಮಾಡ್ತಾರೆ. ಪ್ರಧಾನಿ ನರೇಂದ್ರ ಮೋದಿಯಂತೆ ಕಾಣುವ ವ್ಯಕ್ತಿಯೂ ಸಾಕಷ್ಟು ಪ್ರಸಿದ್ಧಿ ಪಡೆದಿರುವುದನ್ನು ನೀವು ನೋಡಬಹುದು. ಇದೆಲ್ಲಾ ಯಾಕೆ ಅಂತೀರಾ ಕ್ರಿಕೆಟ್ ಗಾಡ್ ಸಚಿನ್ ತೆಂಡೂಲ್ಕರ್ ಇವತ್ತು ತಮ್ಮಂತೆ ಕಾಣುವ ವ್ಯಕ್ತಿಯೊಬ್ಬರನ್ನು ಕರೆಸಿ ತಮ್ಮ ಆತ್ಮೀಯ ಸ್ನೇಹಿತರಿಗೆ ಏಪ್ರಿಲ್ ಫೂಲ್ ಮಾಡಿದ್ದಾರೆ.
ಹೌದು ಇವತ್ತು ಏಪ್ರಿಲ್ 1, ಇದನ್ನು ಮೂರ್ಖರ ದಿನವೆಂದೇ ಪರಿಗಣಿಸಲಾಗುತ್ತದೆ. ಈ ದಿನ ಅನೇಕರು ಸ್ನೇಹಿತರಿಗೆ, ಆತ್ಮೀಯರಿಗೆ ಫೂಲ್ ಮಾಡುವುದನ್ನು ನೋಡಿರಬಹುದು. ಅದೇ ರೀತಿ ಈ ಏಪ್ರಿಲ್ ಫೂಲ್ ದಿನವನ್ನು ಸಚಿನ್ ತೆಂಡೂಲ್ಕರ್ ಕೂಡ ಎಲ್ಲರಂತೆ ಖುಷಿಯಿಂದ ಆಚರಿಸಿ ತಮ್ಮ ಆತ್ಮೀಯ ಸ್ನೇಹಿತನಿಗೆ ಫ್ರಾಂಕ್ ಮಾಡಿ ತಮಾಷೆ ನೋಡಿದ್ದಾರೆ. ಈ ವೀಡಿಯೋವನ್ನು ಸ್ವತಃ ಸಚಿನ್ ತೆಂಡೂಲ್ಕರ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ನೀವು ಅವರಿಗೆ ತಮಾಷೆ ಮಾಡದೇ ಹೋದರೆ ಅವರು ನಿಮಗೆ ನಿಜವಾಗಿಯೂ ಸ್ನೇಹಿತರೇ ಎಂದು ಬರೆದು ವಿಡಿಯೋವನ್ನು ಸಚಿನ್ ತೆಂಡೂಲ್ಕರ್ ಪೋಸ್ಟ್ ಮಾಡಿದ್ದಾರೆ. ವೀಡಿಯೋದಲ್ಲಿ ಸಚಿನ್ ತೆಂಡೂಲ್ಕರ್ ತಮ್ಮ ಸ್ನೇಹಿತನಿಗೆ ಫ್ರಾಂಕ್ ಮಾಡೋದಕ್ಕಾಗಿ ಸೆಟ್ಟಿಂಗ್ ಮಾಡೋದನ್ನು ಕಾಣಬಹುದಾಗಿದೆ.
ಸಚಿನ್ ಅವರಂತೆಯೇ ಕಾಣುವ ಬಲ್ವೀರ್ ದರ್ಶನ್ ಚಂದ್ ಅವರು ಸೋಫಾದಲ್ಲಿ ಕುಳಿತಿದ್ದಾರೆ. ಇದೇ ವೇಳೆ ಸಚಿನ್ ಸ್ನೇಹಿತ ಅದು ಸಚಿನ್ ಎಂದೇ ಭಾವಿಸಿ ಅವರನ್ನು ಹಿಂದಿನಿಂದ ಬಂದು ಗಟ್ಟಿಯಾಗಿ ತಬ್ಬಿಕೊಂಡಿದ್ದಾರೆ. ಸಚಿನ್ ಪಾತ್ರಧಾರಿಯಾಗಿರುವ ದರ್ಶನ್ ಚಂದ್, ತಬ್ಬಿಕೊಂಡಿದ್ದಕ್ಕೆ ಸಚಿನ್ ಸ್ನೇಹಿತನನ್ನು ಟೀಕಿಸಿ ವಾಗ್ದಾಳಿ ನಡೆಸುತ್ತಾರೆ. ಈ ವೇಳೆ ಸಚಿನ್ ಸ್ನೇಹಿತ, ಅದೂ ತನ್ನ ಗೆಳೆಯನಲ್ಲ ಎಂದು ತಿಳಿದು ಆಘಾತದ ಜೊತೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಜೊತೆಗೆ ಮುಜುಗರದಿಂದ ತಲೆ ಮೇಲೆ ಕೈ ಹೊತ್ತಿದ್ದಾರೆ. ಅಲ್ಲದೇ ಕ್ಷಮೆ ಕೇಳಿದ್ದಾರೆ. ಈ ವೇಳೆ ಸಚಿನ್ ಎಂಟ್ರಿ ಕೊಟ್ಟಿದ್ದು, ತಾವು ಮಾಡಿದ ಕುಚೇಷ್ಟೆಯನ್ನು ಬಹಿರಂಗಪಡಿಸಿ ಸ್ನೇಹಿತನನ್ನು ತಬ್ಬಿಕೊಂಡು ನಕ್ಕಿದ್ದಾರೆ. ಸಚಿನ್ ಹಾಸ್ಯಪ್ರವೃತ್ತಿಯನ್ನು ಹೊಂದಿದ್ದು, ಕ್ರಿಕೆಟ್ ಆಡುವ ಸಮಯದಲ್ಲಿ ಕೂಡ ಅವರು ಸಹ ಆಟಗಾರರ ಜೊತೆ ತಮಾಷೆ ಮಾಡುವುದಕ್ಕೆ ಫೇಮಸ್ ಆಗಿದ್ದರು. ವೀಡಿಯೋ ನೋಡಿದ ಅನೇಕರು ಸಚಿನ್ ತುಂಟಾಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸ್ವಲ್ಪ ರೆಕಾರ್ಡ್ ಮಾಡಿ ಅಂತ ಫೋನ್ ಕೊಟ್ಟು ಹೈಕೋರ್ಟ್ ಮುಂದೆಯೇ ವಾಹನಗಳಿಗೆ ಬೆಂಕಿ ಹಚ್ಚಿದ ಮಹಿಳೆ
ಇದನ್ನೂ ಓದಿ: ಹಾಸನ : ಮದುವೆ ಮಾಡಿಸಲಿಲ್ಲ ಎಂದು ಹೆತ್ತಮ್ಮನನ್ನೇ ಕೊಂದ ಪಾಪಿ ಮಗ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.