
ತಮ್ಮ ದೇಹದ ತೂಕದ ಬಗ್ಗೆ ವರ್ಷಗಳಿಂದ ಎದುರಿಸಿದ ಬಾಡಿ ಶೇಮಿಂಗ್ ಹಾಗೂ ಸೈಬರ್ ಟ್ರೋಲ್‌ಗಳ ಬಗ್ಗೆ ನಟಿ ಮೃಣಾಲ್ ಠಾಕೂರ್ ಮಾತನಾಡಿದ್ದಾರೆ. ಈ ಕಷ್ಟದ ಸಮಯದಲ್ಲಿ ನಟ ಅಕ್ಷಯ್ ಕುಮಾರ್ ನೀಡಿದ ಸಲಹೆ ತನ್ನಲ್ಲಿ ಆತ್ಮವಿಶ್ವಾಸ ಹೆಚ್ಚಿಸಿತು ಎಂದು ಅವರು ಹೇಳಿಕೊಂಡಿದ್ದಾರೆ. ದುಲ್ಕರ್ ಸಲ್ಮಾನ್ ಜೊತೆ 'ಸೀತಾ ರಾಮಂ' ಚಿತ್ರದಲ್ಲಿ ನಟಿಸಿ ಕನ್ನಡಿಗರಿಗೂ ಅಚ್ಚುಮೆಚ್ಚಿನ ನಟಿಯಾಗಿರುವ ಮೃಣಾಲ್ ಠಾಕೂರ್, ಇದೀಗ ತಮ್ಮ ವೃತ್ತಿ ಬದುಕಿನ ಆರಂಭದ ದಿನಗಳ ಕಷ್ಟವನ್ನು ಹಂಚಿಕೊಂಡಿದ್ದಾರೆ.
ತಮ್ಮ ದೇಹದ ತೂಕದ ವಿಚಾರವಾಗಿ ವರ್ಷಗಳಿಂದ ಎದುರಿಸಿದ ಬಾಡಿ ಶೇಮಿಂಗ್ ಮತ್ತು ಸೈಬರ್ ದಾಳಿಗಳ ಬಗ್ಗೆ ಅವರು ಸಂದರ್ಶನವೊಂದರಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ನೀಡಿದ ಸಲಹೆ ನನಗೆ ಸಾಕಷ್ಟು ಆತ್ಮವಿಶ್ವಾಸ ನೀಡಿತು ಮತ್ತು ದೇಹದ ಬಗೆಗಿನ ಕೀಳರಿಮೆಯನ್ನು ಹೋಗಲಾಡಿಸಲು ಸಹಾಯ ಮಾಡಿತು ಎಂದು ಮೃಣಾಲ್ ಹೇಳಿದ್ದಾರೆ.
"ಅತ್ತುಕೊಂಡೇ ಮಲಗಿದ ದಿನಗಳಿದ್ದವು. ಬೆಳಿಗ್ಗೆ ಎದ್ದಾಗ ಕಣ್ಣುಗಳು ಊದಿಕೊಂಡಿರುತ್ತಿದ್ದವು. ನನ್ನ ಮೇಲೆ ನನಗೇ ಬೆಲೆ ಇಲ್ಲದಂತಹ ದಿನಗಳವು. ಆಗ ನಾನು ಅಕ್ಷಯ್ ಕುಮಾರ್ ಸರ್ ಅವರನ್ನು ಭೇಟಿಯಾಗಿದ್ದೆ. ಅವರು ಹೇಳಿದ ಮಾತು ತುಂಬಾ ಸುಂದರವಾಗಿತ್ತು. 'ನೀನು ನಿನ್ನನ್ನು ಈಗಿರುವಂತೆಯೇ ಒಪ್ಪಿಕೊಂಡಿರೋದು ನನಗೆ ತುಂಬಾ ಖುಷಿ ಕೊಟ್ಟಿದೆ. ನಿನ್ನ ಸುತ್ತಲಿನ ಸಾವಿರಾರು ಮಾತುಗಳಿಗೆ ತಲೆಕೆಡಿಸಿಕೊಳ್ಳದೆ, ನಿನಗೆ ಸರಿ ಅನಿಸಿದ್ದನ್ನು ಮಾಡುತ್ತಿರುವುದು ಗ್ರೇಟ್' ಅಂದಿದ್ದರು.
ಜೊತೆಗೆ, 'ಒಂದು ವೇಳೆ ಪಾತ್ರಕ್ಕಾಗಿ ತೂಕ ಇಳಿಸಬೇಕಾಗಿ ಬಂದರೆ, ಅದರಲ್ಲಿ ತಪ್ಪೇನಿಲ್ಲ' ಅಂತಾನೂ ಹೇಳಿದ್ದರು," ಎಂದು ಮೃಣಾಲ್ ಠಾಕೂರ್ ವಿವರಿಸಿದ್ದಾರೆ. ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮೃಣಾಲ್ ನಟನೆಯ 'ಡಕಿಯೋಟ್: ಎ ಲವ್ ಸ್ಟೋರಿ' ಇತ್ತೀಚೆಗೆ ತೆರೆಕಂಡ ಚಿತ್ರವಾಗಿದೆ. ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾದ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.