ಎರಡು ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಐದು ಭಾಷೆಗಳಲ್ಲಿ ತೆರೆ ಕಾಣುತ್ತಿದೆ. 1200 ಚಿತ್ರಮಂದಿರಗಳಲ್ಲಿ ಹಿಂದಿ ವರ್ಷನ್ ರಿಲೀಸ್ ಆಗದೆ.
ತಮಿಳು, ಮಲಯಾಳಂ, ತೆಲುಗು ಭಾಷೆಯವರೂ ಕಾಯುತ್ತಿದ್ದಾರೆ. ಕನ್ನಡದ ಎಲ್ಲ ದಾಖಲೆಗಳನ್ನು ಮುರಿದು ಮುನ್ನುಗ್ಗುವ ಚಿತ್ರವಾಗಿ ಕೆಜಿಎಫ್ ಮೂಡಿಬಂದಿದ್ದೆ...
ಹೀಗೆ ಪಟ್ಟಿ ಮಾಡುತ್ತಾ ಹೋಗಬಹುದು. ಕೆಜಿಎಫ್ ಗಡಿ ದಾಟಿದ ಚಿತ್ರ ಅನ್ನುವುದರಲ್ಲಿ ಅನುಮಾನವೇ ಇಲ್ಲ. ಒಂದು ಪುಟ್ಟ ಉದಾಹರಣೆ ಕೊಡುವುದಿದ್ದರೆ ಕರ್ನಾಟಕದ ಅನೇಕ ಹಳ್ಳಿಗಳ ಚಿತ್ರಮಂದಿರಗಳಲ್ಲಿ ಬಾಹುಬಲಿಯ ನಂತರ ಬಾಹುಬಲಿಗಿಂತ ದೊಡ್ಡ ಮೊತ್ತಕ್ಕೆ ಮಾರಾಟವಾದ ಸಿನಿಮಾ ಕೆಜಿಎಫ್.
ಹಾಗಿದ್ದರೆ ಕೆಜಿಎಫ್ ಸಾಧಿಸಿದ್ದೇನು? ಅದು ದಾಟಿದ ಗಡಿ ಯಾವುದು? ಯಶ್ ಹೇಳುವುದಿಷು
ಕೆಜಿಎಫ್ ಎಷ್ಟು ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ, ಎಷ್ಟು ಭಾಷೆಗಳಲ್ಲಿ ಪ್ರದರ್ಶನ ಕಾಣಲಿದೆ ಅನ್ನುವುದಕ್ಕಿಂತ ಮುಖ್ಯವಾದದ್ದು ಮತ್ತೊಂದಿದೆ. ಅದು ನಿಜವಾಗಿಯೂ ವಿಸ್ತಾರ ಮಾಡಿರುವುದು ಕನ್ನಡದ ಮಾರುಕಟ್ಟೆಯನ್ನು ಮಾತ್ರವಲ್ಲ, ನಮ್ಮ ಮನಸ್ಸಿನ ಗಡಿಗಳನ್ನೂ ಅದು ದಾಟಿದೆ. ನನಗೆ ಅದೇ ಸಂತೋಷ. ಒಂದು ಭಾಷೆಗಿರುವ ಶಕ್ತಿಯನ್ನು ಕೆಜಿಎಫ್ ತೋರಿಸಿಕೊಟ್ಟಿದೆ. ಕನ್ನಡ ಸಣ್ಣ ಮಾರುಕಟ್ಟೆ, ಅಲ್ಲಿಯ ಬಜೆಟ್ಟು ಸೀಮಿತ, ಕನ್ನಡದಲ್ಲಿ ದೊಡ್ಡ ಸಿನಿಮಾ ಬರುವುದಿಲ್ಲ, ಬಂದರೂ ಅದು ಕೇವಲ ಕನ್ನಡಕ್ಕಷ್ಟೇ ಸೀಮಿತ ಆಗಿರುತ್ತದೆ. ಕನ್ನಡ ಸಿನಿಮಾ ಇಂಡಿಯನ್ ಸಿನಿಮಾ ಅಲ್ಲ ಅನ್ನುವುದನ್ನೆಲ್ಲ ಹಿಮ್ಮೆಟ್ಟಿಸಿದ ಚಿತ್ರ ಕೆಜಿಎಫ್.
ಮೂಲಭೂತವಾಗಿ ಅದು ಮನಸ್ಥಿತಿಯನ್ನು ಬದಲಾಯಿಸಿದ ಸಿನಿಮಾ. ಧೈರ್ಯ ತುಂಬಬಲ್ಲ ಸಿನಿಮಾ. ಗಡಿಯಾಚೆ ಹೋಗಿ ನಮ್ಮ ಬಾವುಟ ಹಾರಿಸಲು ಸಾಧ್ಯವೇ? ಬೇರೆ ಭಾಷೆಗಳಲ್ಲಿ ನಮ್ಮನ್ನು ಸ್ವೀಕರಿಸುತ್ತಾರಾ? ನಮಗೂ ಅವರಿಗೂ ಹೊಂದಾಣಿಕೆ ಆಗುತ್ತದಾ? ನಮ್ಮ ಸಿನಿಮಾಗಳು ಅವರಿಗೆ ರುಚಿಸುತ್ತವೆಯಾ?- ಇಂಥ ಪ್ರಶ್ನೆಗಳನ್ನೆಲ್ಲ ಕೆಜಿಎಫ್ ಉತ್ತರಿಸಿದೆ. ಕನ್ನಡದಲ್ಲೂ ತಂತ್ರಜ್ಞರಿದ್ದಾರೆ, ಒಳ್ಳೆಯ ಕತೆಯಿದೆ, ಅವರನ್ನು ಗೌರವದಿಂದ ನೋಡಿರಿ, ಕೆಲಸ ಗೊತ್ತಿದ್ದವರು ಮಾಡಿರುವ ಸಿನಿಮಾವನ್ನು ಗೌರವಿಸಿಯೇ ಗೌರವಿಸುತ್ತಾರೆ ಅನ್ನುವುದನ್ನು ತೋರಿಸಿಕೊಡುವುದು ಮುಖ್ಯವಾಗಿತ್ತು. ಅದನ್ನು ಕೆಜಿಎಫ್ ಮಾಡಿದೆ. ಆ ಮಟ್ಟಿಗೆ ನಾನು ಸಿನಿಮಾ ಗೆಲ್ಲುವ ಮೊದಲೇ ಗೆದ್ದಿದ್ದೇನೆ. ಸಿನಿಮಾ ದೊಡ್ಡ ಮೊತ್ತ ಕಲೆಕ್ಟ್ ಮಾಡಬಹುದು. ಅದು ನನ್ನನ್ನು ಅಷ್ಟೇನೂ ಎಕ್ಸೈಟ್ ಮಾಡುವುದಿಲ್ಲ.
ಈ ಸಿನಿಮಾವನ್ನು ಆಗಲೇ ಜನ ಗೆಲ್ಲಿಸಿದ್ದಾರೆ. ಇದು ನಮ್ಮ ಸಿನಿಮಾ ಎಂಬಂತೆ ಪ್ರೀತಿಸಿದ್ದಾರೆ. ನಮ್ಮ ರಾಜ್ಯದ ಜನತೆ, ಮಾಧ್ಯಮ ಇದರ ಬೆನ್ನಿಗೆ ನಿಂತಿದ್ದಾರೆ. ಹೊಸತನಕ್ಕೆ ಈ ಸಿನಿಮಾ ನಾಂದಿ ಹಾಡುತ್ತದೆ ಎಂಬ ಅವರ ನಂಬಿಕೆ ಸುಳ್ಳಾಗುವುದಿಲ್ಲ ಎಂಬ ಭರವಸೆಯನ್ನು ಚಿತ್ರ ಕೊಡಲಿದೆ.
ಕೆಜಿಎಫ್ ಚಿತ್ರದ ಪ್ರೀಮಿಯರ್ ಷೋ ಇಲ್ಲ. ಅದನ್ನು ಆರ್ಗನೈಸ್ ಮಾಡುವುದಕ್ಕೆ ಪುರುಸೊತ್ತಿಲ್ಲದಷ್ಟು ಯಶ್ ಬಿಜಿಯಾಗಿದ್ದಾರೆ. ಅವರ ಪ್ರಕಾರ ಕೆಜಿಎಫ್ ಅನ್ನುವ ಪದಕ್ಕೆ ಹೊಸ ಅರ್ಥ ಸಿಕ್ಕಿದೆ. ಅದೀಗ ಕನ್ನಡ ಗೋಲ್ಡ್ ಫೀಲ್ಡ್. ಕನ್ನಡ ಎಂಬ ಬಂಗಾರದ ಗಣಿ!