ಫೋಟೋ ನೋಡಿ ಫೇಕು ಎಂದವರಿಗೆ ಈ ಚಿತ್ರವೇ ಉತ್ತರ: ಕಿಚ್ಚನ ಸಂದರ್ಶನ

Published : Dec 21, 2018, 09:14 AM ISTUpdated : Dec 21, 2018, 10:46 AM IST
ಫೋಟೋ ನೋಡಿ ಫೇಕು ಎಂದವರಿಗೆ ಈ ಚಿತ್ರವೇ ಉತ್ತರ: ಕಿಚ್ಚನ ಸಂದರ್ಶನ

ಸಾರಾಂಶ

ಎರಡು ಬಿಗ್ ಬಜೆಟ್ ಚಿತ್ರಗಳಿಗೆ ಏಕಕಾಲದಲ್ಲಿ ಚಾಲನೆ ಕೊಟ್ಟಿರುವ ನಟ ಸುದೀಪ್, ತಮ್ಮ ಬಹು ನಿರೀಕ್ಷೆಯ ‘ಪೈಲ್ವಾನ್’ ಕುರಿತು ಮೊದಲ ಬಾರಿಗೆ ಮಾತನಾಡಿದ್ದಾರೆ. ಹೈದರಾಬಾದ್ ಸೆಟ್‌ನಿಂದಲೇ ಮಾತಿಗೆ ಸಿಕ್ಕ ಸುದೀಪ್, ‘ಪೈಲ್ವಾನ್’ ಚಿತ್ರದ ಹಲವು ಗುಟ್ಟುಗಳನ್ನು ಬಿಚ್ಚಿಟ್ಟಿದ್ದಾರೆ

ಜಿಮ್‌ಗೆ ಹೋಗುವಷ್ಟು ‘ಪೈಲ್ವಾನ್’ ಚಿತ್ರವನ್ನು ಗಂಬೀರವಾಗಿ ತೆಗೆದುಕೊಳ್ಳುವುದಕ್ಕೆ ಕಾರಣ?

ಚಿತ್ರಕತೆ ಕೇಳಿದಾಗಲೇ ನಾನು ಈ ಚಿತ್ರ ಯಾವ ರೀತಿ ಶ್ರಮ ಹಾಕಬೇಕೆಂದು ನಿರ್ಧರಿಸಿಕೊಂಡೆ. ಯಾಕೆಂದರೆ ಚಿತ್ರಕತೆ ನನ್ನ ಹಾಗೆ ಪ್ರೇರೇಪಿಸಿತು. ಅಲ್ಲದೆ ಇದು ಕ್ರೀಡೆಯನ್ನು ಆಧರಿಸಿರುವ ಸಿನಿಮಾ. ಸ್ಫೋರ್ಟ್ಸ್ ಅನ್ನೋದು ದೇಶದ ಗೌರವವನ್ನು ಎತ್ತಿಹಿಡಿಯುವ ಕ್ಷೇತ್ರ. ಅದರ ಬಗ್ಗೆ ಸಿನಿಮಾ ಮಾಡುವಾಗ ಲಘುವಾಗಿ ತೆಗೆದುಕೊಳ್ಳಬಾರದು. ಚಿತ್ರಕ್ಕೆ ಏನು ಬೇಕೋ ಅದನ್ನು ನೀಡಬೇಕು. ದೇಹ ದಂಡಿಸಿಕೊಳ್ಳಕ್ಕೆ ಜಿಮ್‌ಗೆ ಹೋದೆ. ಅಲ್ಲದೆ ನಾನು ಕಬೀರ್ ದುಹಾನ್‌ನ ಬೇರ್ ಬಾಡಿ ನೋಡಿ ಶಾಕ್ ಆದೆ. ಅವರಂತೆ ನಾನೂ ದೇಹ ಉರಿಗಟ್ಟಿಸಬೇಕೆಂದು ನಿರ್ಧರಿಸಿದೆ. ಜತೆಗೂ ಪಾತ್ರಕ್ಕೂ ಅದು ಬೇಕಿತ್ತು. ಹೀಗಾಗಿ 20 ವರ್ಷಗಳ ನಂತರ ಜಿಮ್ ಮುಖ ಮಾಡಿದೆ. ಎಲ್ಲಕ್ಕಿಂತ ಮುಖ್ಯವಾಗಿ ನಾನು ಮೊದಲ ಬಾರಿಗೆ ಕುಸ್ತಿ ಅಖಾಡದಲ್ಲಿ ಕಾಣಿಸಿಕೊಳ್ಳುತ್ತಿರುವ ಚಿತ್ರವಿದು.

ಚಿತ್ರಕ್ಕಾಗಿ ನಿಮ್ಮ ದೈಹಿಕ ತಯಾರಿ ಹೇಗಿತ್ತು? ಇದಕ್ಕಾಗಿ ಪ್ರತಿ ದಿನದ ಲೈಫ್ ಸ್ಟೈಲ್ ಬದಲಿಸಿಕೊಂಡ್ರಾ?

ಹಾಗೆ ನೋಡಿದರೆ ಸಿನಿಮಾ ಹೊರತಾಗಿಯೂ ರೆಗ್ಯೂಲರ್ ಜಿಮ್ಗೆ ಹೋಗೋಣ ಅಂದುಕೊಂಡು ತರಬೇತುದಾರನ ಜತೆ ಮಾತನಾಡಿದ ಮರು ದಿನವೇ ತಪ್ಪಿಸಿಕೊಂಡಿದ್ದೂ ಇದೆ. ಆದರೆ, ಪೈಲ್ವಾನ್ ಚಿತ್ರಕ್ಕೆ ಸಿಕ್ಸ್ ಪ್ಯಾಕ್ ಮಾಡಲೇ ಬೇಕು ಎಂದಾಗ ತರಬೇತುದಾರನಿಂದ ತಪ್ಪಿಸಿಕೊಳ್ಳಕ್ಕೆ ಆಗಲಿಲ್ಲ. ಪ್ರತಿ ದಿನ ಬೆಳಗ್ಗೆ 4 ಯಿಂದ 6.30ರ ವರೆಗೂ ಜಿಮ್. ಮತ್ತೆ ಸಂಜೆ 5.30ಕ್ಕೆ ಈಜುವ ಜತೆ ವರ್ಕ್‌ಔಟ್ ಮಾಡಬೇಕಿತ್ತು. ಮಿತ ಆಹಾರ ಬೇರೆ. ಪ್ರತಿ ದಿನ ನಾಲ್ಕು ಗಂಟೆ ಹೀಗೆ ವರ್ಕ್‌ಔಟ್‌ಗಾಗಿಯೇ ಮೀಸಲಿಟ್ಟೆ. ಚಿತ್ರೀಕರಣ ಶುರುವಾದ ಮೇಲೂ ಸೆಟ್‌ಗೆ ಜಿಮ್ ಟ್ರೈನರ್ ಬರುತ್ತಿದ್ದರು. 6.30ಕ್ಕೆ ಜಿಮ್ ಮುಗಿಸಿಕೊಂಡ ಅರ್ಧ ಗಂಟೆಯಲ್ಲಿ ಶೂಟಿಂಗ್ ಸೆಟ್‌ಗೆ ಹೋಗಿದ್ದ ಉದಾಹರಣೆಗಳಿವೆ. ಸಹಜವಾಗಿ ದಿನಚರಿ ಬದಲಾಯಿಸಿಕೊಳ್ಳಬೇಕಿತ್ತು. ರಾತ್ರಿ ಬೇಗ ಮಲಗಿ, ಬೆಳಗ್ಗಿನ ಜಾವ ಬೇಗ ಎದ್ದೇಳಬೇಕಿತ್ತು. ಹೀಗೆ ಏಳೆಂಟು ತಿಂಗಳು ತಯಾರಿ ಮಾಡಿಕೊಂಡೆ.

ನಿಮ್ಮ ಸಿಕ್ಸ್ ಪ್ಯಾಕ್ ಬಾಡಿ ನೋಡಿ ಕೆಲವರು ಫೇಕ್ ಅಂದಿದ್ದು ಯಾಕೆ?

ಈ ರೀತಿ ಮಾತಾಡೋರಿಗೆ, ಟ್ರೋಲ್ ಮಾಡೋರಿಗೆಲ್ಲ ನಾನು ಉತ್ತರ ಹೇಳಿಕೊಂಡು ಕೂರಕ್ಕೆ ಆಗಲ್ಲ. ನನಗಿಂತ ನನ್ನ ಕೆಲಸ ಮಾತನಾಡಬೇಕು ಎನ್ನುವ ಕಾರಣಕ್ಕೇ ಕುಸ್ತಿ ಆಡುವ ದೃಶ್ಯಗಳ ಫೋಟೋಗಳನ್ನೇ ಕೊಟ್ಟಿದ್ದೇನೆ. ಇದನ್ನೂ ನೋಡಿದ ಮೇಲೂ ಫೇಕು ಎಂದವರ ಕಪಾಳ ಮುಟ್ಟಿ ನೋಡಿಕೊಳ್ಳುವಂತಹ ಸಿನಿಮಾ ಕೊಡುತ್ತೇವೆ. ಆ ನಂಬಿಕೆ ‘ಪೈಲ್ವಾನ್’ ಮೇಲೆ ನನಗಿದೆ.

ಬಜೆಟ್ ವಿಚಾರದಲ್ಲಿ ಪೈಲ್ವಾನ್ ಮಿತಿ ಮೀರಿದೆ ಎನ್ನುವ ಮಾತುಗಳಿವೆ? ನಿಜಕ್ಕೂ ನಿಮ್ಮ ಚಿತ್ರದ ಬಜೆಟ್ ಎಷ್ಟು?

ಇದು ಸಿನಿಮಾ. ಯಾವುದನ್ನೂ ಲೆಕ್ಕ ಹಾಕಿಕೊಂಡು ಮಾಡಕ್ಕೆ ಆಗಲ್ಲ. ಮೊದಲು ಇಂತಿಷ್ಟು ಬಜೆಟ್ ಅಂದುಕೊಂಡು ಶುರು ಮಾಡುತ್ತೇವೆ. ಮುಂದೆ ಅದು ದುಪ್ಪಟ್ಟಾಗುತ್ತದೆ. ಅದು ಚಿತ್ರಕತೆ ಮತ್ತು ನಿರ್ದೇಶಕರ ಕಲ್ಪನೆಯನ್ನು ಆಧರಿಸಿರುತ್ತದೆ. ಬಾಲಿವುಡ್ ನಿಂದ ಸುನೀಲ್ ಶೆಟ್ಟಿ, ಕಬೀರ್ ದುಹಾನ್‌ಸಿಂಗ್ ಅವರನ್ನು ಕರೆದುಕೊಂಡು ಬರಲಾಯಿತು. ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಗಳಿಗೂ ಈ ಚಿತ್ರವನ್ನು ತೆಗೆದುಕೊಂಡು ಹೋಗುವ ನಿರ್ಧಾರ ಮಾಡಲಾಯಿತು. 20ಕ್ಕೂ ಹೆಚ್ಚು ಸೆಟ್‌ಗಳನ್ನು ಹಾಕಿದ್ದೇವೆ. ಹೀಗಾಗಿ ಬಜೆಟ್ ಅಂದುಕೊಂಡಿದ್ದಕ್ಕಿಂತ ಜಾಸ್ತಿ ಆಗುತ್ತಿದೆ. 45 ಕೋಟಿ ವೆಚ್ಚ ಸಿನಿಮಾ ಎಂದು ಅಂದಾಜಿಸಿದ್ದೇವೆ.ಹಾಗಂತ ನಾವು ಬಜೆಟ್ ಪ್ರದರ್ಶನ ಮಾಡಕ್ಕೆ ಈ ಸಿನಿಮಾ
ಮಾಡುತ್ತಿಲ್ಲ

ಚಿತ್ರಕ್ಕೆ ಸುನೀಲ್ ಶೆಟ್ಟಿ ಅಗತ್ಯವಿತ್ತೆ? ಇಲ್ಲಿ ಅವರ ಪಾತ್ರವೇನು? 

ಸುನೀಲ್ ಶೆಟ್ಟಿ ನಮ್ಮ ಕನ್ನಡದವರು. ಅಲ್ಲದೆ ಅವರಿಗೆ ಕನ್ನಡ ಚಿತ್ರದಲ್ಲಿ ನಟಿಸಬೇಕೆಂಬ ಆಸೆ ಇತ್ತು. ನಮ್ಮ ಚಿತ್ರದಲ್ಲೂ ಅವರಿಗೆ ಸೂಕ್ತವಾದ ಪಾತ್ರ ಇತ್ತು. ಹೀಗಾಗಿ ನಾವೇ ಹೋಗಿ ಅಪ್ರೋಚ್ ಮಾಡಿದಾಗ ಒಪ್ಪಿಕೊಂಡು ಬಂದಿದ್ದಾರೆ. ನಮ್ಮ ತಂಡದಲ್ಲಿರುವ ದೊಡ್ಡ ಸ್ಟಾರ್ ಸುನೀಲ್ ಶೆಟ್ಟಿ. ಇಲ್ಲಿ ಅವರು ಸರ್ಕಾರ ಎನ್ನುವ ಪಾತ್ರವನ್ನು ಮಾಡುತ್ತಿದ್ದಾರೆ.

ಪೈಲ್ವಾನ್ ಬೇರೆ ಭಾಷೆಗಳಿಗೂ ಹೋಗುವ ಪ್ಲಾನ್ ಮೊದಲೇ ಇತ್ತಾ ಅಥವಾ ಟ್ರೆಂಡ್‌ಗಾಗಿ ಹುಟ್ಟಿಕೊಂಡ ಯೋಚನೆನಾ?

ನಾನು ಮತ್ತು ನನ್ನ ಸಿನಿಮಾಗಳು ಬೇರೆ ಭಾಷೆಗಳಿಗೆ ತಲುಪಿ ತುಂಬಾ ದಿನಗಳಾಗಿವೆ. ಬಾಲಿವುಡ್‌ನಲ್ಲಿ ಅಮಿತಾಬ್ ಬಚ್ಚನ್ ಜತೆ ‘ರಣ್’ ಮಾಡಿದಾಗಲೇ ಗುರುತಿಸಿಕೊಂಡೆ. ರಾಮ್‌ಗೋಪಾಲ್ ವರ್ಮಾ ಅವರ ‘ಫೂಂಕ್’ ಚಿತ್ರದಲ್ಲಿ ನಟಿಸಿದಾಗ, ತೆಲುಗಿನ ‘ಬಾಹುಬಲಿ’, ತಮಿಳಿನ ‘ಪುಲಿ’ ಚಿತ್ರಗಳು ಈ ಸುದೀಪ್‌ನನ್ನು ಬೇರೆ ಭಾಷೆಗಳಿಗೆ ಪರಿಚಯಿಸಿ ತುಂಬಾ ವರ್ಷಗಳಾಗಿವೆ. ‘ಈಗ’ ಚಿತ್ರದ ನಂತರ ಕನ್ನಡದ ನಟನೊಬ್ಬನ ಮಾರುಕಟ್ಟೆ ಯಾವ ಮಟ್ಟಕ್ಕೆ ಬೆಳೆಯಿತು
ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಮಲ್ಟಿ ಲಾಗ್ವೇಜ್‌ಗೆ ಹೋಗೋ ಟ್ರೆಂಡ್ ಈಗಿನದ್ದಲ್ಲ. ಹಳೆಯದು. ಅದನ್ನು ‘ಪೈಲ್ವಾನ್’ ಮೂಲಕ ಮತ್ತಷ್ಟು ದೊಡ್ಡ ಮಟ್ಟದಲ್ಲಿ ಮುಂದುವರಿಸಿದ್ದೇನೆ. 

ಹಿಂದಿಯಲ್ಲಿ ಈಗಾಗಲೇ ಕುಸ್ತಿ ಸಿನಿಮಾಗಳು ಬಂದಿವೆ. ನಿಮ್ಮ ಕುಸ್ತಿ ಚಿತ್ರವನ್ನು ಹೇಗೆ ಸ್ವೀಕರಿಸುತ್ತಾರೆ?

ಯಾರೋ ಒಬ್ಬರು ಪ್ರೇಮ ಕತೆಯ ಚಿತ್ರ ಮಾಡಿದ್ದಾರೆ ಅಂದ ಮಾತ್ರಕ್ಕೆ ನಾನೂ ಮಾಡದೆ ಇರಕ್ಕೆ ಆಗುತ್ತದೆಯೇ? ಹಿಂದಿಯಲ್ಲಿ ದಂಗಲ್, ಸುಲ್ತಾನ್ ಬಂದಿರಬಹುದು. ಅಲ್ಲಿದ್ದಿದ್ದು ಅಮೀರ್ ಖಾನ್, ಸಲ್ಮಾನ್ ಖಾನ್. ಹಾಗೆ ನೋಡಿದರೆ ಈ ಎರಡೂ ಕುಸ್ತಿ ಚಿತ್ರಗಳೇ. ಎರಡನ್ನೂ ಜನ ನೋಡಿದರು. ಹಾಗೆ ‘ಪೈಲ್ವಾನ್’ನಲ್ಲಿ ಇರೋದು ಕನ್ನಡದ ಸುದೀಪ್. ಇದು ನನ್ನ ಕುಸ್ತಿ. ಜತೆಗೆ ಕುಸ್ತಿ ಅನ್ನೋದು ಯೂನಿವರ್ಸೆಲ್ ಕಾನ್ಸೆಪ್ಟ್. ಎಲ್ಲರು ತೆಗೆದುಕೊಳ್ಳುತ್ತಾರೆಂಬ ನಂಬಿಕೆ ಇದೆ

ಸರಿ, ಪೈಲ್ವಾನ್ ಯಾವ ರೀತಿಯ ಕತೆ? ಈ ಚಿತ್ರದ ಕತೆ ಹೇಗೆ ಭಿನ್ನ ಎನ್ನುತ್ತೀರಿ?

ನಾನು ಇಲ್ಲಿ ಬಾಕ್ಸರ್ ಪಾತ್ರ ಮಾಡುತ್ತಿದ್ದೇನೆ. ಹಾಗಂತ ಇದು ನಗರ ಕೇಂದ್ರಿತ ಕ್ರೀಡಾ ಚಿತ್ರ ಎಂದುಕೊಳ್ಳಬೇಡಿ. ಯಾಕೆಂದರೆ ಈ ಬಾಕ್ಸರ್ ಹುಟ್ಟಿಕೊಂಡಿದ್ದೇ ಉತ್ತರ ಕರ್ನಾಟಕದ ಕುಸ್ತಿ ಅಖಾಡದಲ್ಲಿ. ಮಣ್ಣಿನ ಕುಸ್ತಿ ಆಖಾಡದ ಪೈಲ್ವಾನ್ಗೂ, ಚಿತ್ರದ ಮುಖ್ಯ ತಿರುವಿನಲ್ಲಿ ಬರುವ ಬಾಕ್ಸರ್‌ಗೂ ಏನು ನಂಟು ಎಂಬುದು ಚಿತ್ರದ ಕತೆ. ಕುಸ್ತಿ ಮತ್ತು ಬಾಕ್ಸಿಂಗ್ ಅನ್ನು ಒಳಗೊಂಡಿರುವ ಅಪ್ಪಟ ಮಣ್ಣಿನ ಪ್ರೇಮ ಕತೆ ಇಲ್ಲಿದೆ. ಜತೆಗೆ ಕನ್ನಡದಲ್ಲಿ ಇಂತಹ ಕ್ರೀಡೆಯನ್ನು ಆಧರಿಸಿ ಸಿನಿಮಾ ಬಂದಿಲ್ಲ. ಆ ಕಾರಣಕ್ಕೆ ನನಗೆ ಭಿನ್ನವಾಗಿ ಕಾಣುತ್ತಿದೆ.

ಯಾವ ನಂಬಿಕೆ ಮೇಲೆ ನೀವು ಕೃಷ್ಣ ಅವರ ಚಿತ್ರವನ್ನು ಒಪ್ಪಿಕೊಂಡಿದ್ದು?

ಕೃಷ್ಣ ಹೇಳಿದ ಕತೆಯಿಂದಲೇ ನಾನು ಅವರ ಮೇಲೆ ನಂಬಿಕೆ ಇಡುವಂತೆ ಮಾಡಿತು. ಹೆಬ್ಬುಲಿ ನೋಡಿದವರಿಗೆ ಈ ಪ್ರಶ್ನೆ ಹುಟ್ಟಿಕೊಳ್ಳಲ್ಲ. ಕೃಷ್ಣ ಅವರ ಪ್ರತಿಭೆ ಮತ್ತು ಅವರ ನಿರ್ದೇಶನದ ತಾಕತ್ತು ಒಬ್ಬ ನಟನಾಗಿ ನನಗೆ ಗೊತ್ತಿದೆ.

ನೀವೇ ಏಕಕಾಲಕ್ಕೆ ಶುರು ಮಾಡಿರುವ ಚಿತ್ರಗಳ ಪೈಕಿ ಯಾವುದು ಮೊದಲು?

ಕೃಷ್ಣ ನಿರ್ದೇಶನದ ‘ಪೈಲ್ವಾನ್’ ಫೆಬ್ರವರಿ ತಿಂಗಳಲ್ಲಿ ತೆರೆಗೆ ಬರಲಿದೆ. ಆ ನಂತರ ಶಿವಕಾರ್ತಿಕ್ ನಿರ್ದೇಶನದ ‘ಕೋಟಿಗೊಬ್ಬ ೩’ ಚಿತ್ರ ತೆರೆಗೆ ಬರಲಿದೆ. ಅದರ ಚಿತ್ರೀಕರಣ ಕೂಡ ಬಾಕಿ ಇದೆ. ಹೀಗಾಗಿ ಯಾವ ತಿಂಗಳು ಎಂಬುದು ನಿರ್ಧರಿಸಿಲ್ಲ. 

ಪುಸ್ತಕ ಬರೀತಾರ ಕಿಚ್ಚ

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

45 Movie Trailer Release: ಚೆಲುವೆಯ ನೋಟ ಚೆನ್ನ..ಸಿನಿಮಾ ನೋಡಲೇಬೇಕು ಎಂದು ಸೈಕ್‌ ಮಾಡಿದ ಕಾರಣಗಳಿವು!
The Devil Movie ಶೋಗೆ ಚಪ್ಪಲಿ ಹಾಕ್ಬೇಡ ಅಂತ ಮಗ ವಿನೀಶ್‌ಗೆ ಹೇಳೋಕೆ ಕಾರಣವಿದೆ: Vijayalakshmi Darshan