
ಉತ್ತಮ ಸಿನಿಮಾಗಳಿಗೆ ದೊಡ್ಡ ಬಜೆಟ್ ಬೇಕಿಲ್ಲ, ಆದರೆ ಗಳಿಕೆ ದೊಡ್ಡದಾಗಿರುತ್ತದೆ. ಹೀಗೆ ಕೇವಲ 2 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾದ ಸಿನಿಮಾ, ಸ್ಟಾರ್ ನಟರಿಲ್ಲ, ಅದ್ದೂರಿತನವಿಲ್ಲ, ಆದರೆ ಜನ ಮೆಚ್ಚಿಕೊಂಡಿದ್ದರು. ಪರಿಣಾಮ ಬರೋಬ್ಬರಿ 453 ಕೋಟಿ ರೂಪಾಯಿ ಬಾಚಿಕೊಂಡಿತು. ಇದೀಗ ಈ ಸಿನಿಮಾ ಒಟಿಟಿಗೆ ಲಗ್ಗೆ ಇಡುತ್ತಿದೆ. ಹಲವು ದಾಖಲೆ ಬರೆದ ನೀಮ್ ಕರೋಲಿ ಬಾಬನ ಜೀವನ ಆಧಾರಿತ ಹನುಮಾನ್ ಅಂಶ್ ಸಿನಿಮಾ ಇದೀಗ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ.
ಕೇವಲ 1.8 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾಗಿ ಬರೋಬ್ಬರಿ ₹453 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಹನುಮಾನ್ ಅಂಶ್ ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಬರೆದಿದೆ. ಥಿಯೇಟರ್‌ಗಳಲ್ಲಿ ಸತತ 91 ದಿನಗಳ ಕಾಲ ಪ್ರದರ್ಶನ ಕಂಡು ಭಾರಿ ಯಶಸ್ಸು ಗಳಿಸಿದ್ದ ಈ ಭಕ್ತಿಪ್ರಧಾನ ಬಯೋಪಿಕ್ ಚಿತ್ರದ ಅಧಿಕೃತ ಒಟಿಟಿ ಬಿಡುಗಡೆ (OTT Release Date) ದಿನಾಂಕವನ್ನು ಚಿತ್ರತಂಡ ಪ್ರಕಟಿಸಿದೆ. ವಿಶ್ವಪ್ರಸಿದ್ಧ ಸಂತ ನೀಮ್ ಕರೋಲಿ ಬಾಬಾ (Neem Karoli Baba) ಅವರ ಜೀವನ ಮತ್ತು ಆಧ್ಯಾತ್ಮಿಕ ಪಯಣವನ್ನು ಆಧರಿಸಿ ನಿರ್ಮಿಸಲಾದ ಈ ಸಿನಿಮಾ ನವೆಂಬರ್ 27, 2026 ರಿಂದ ಜನಪ್ರಿಯ ಒಟಿಟಿ ಪ್ಲಾಟ್‌ಫಾರ್ಮ್ ಆದ 'ಸೋನಿ ಲೈವ್ (Sony LIV) ಪ್ರಸಾರವಾಗಲಿದೆ.
ಡಾ. ವಿಶಾಲ್ ಚತುರ್ವೇದಿ ನಿರ್ದೇಶನದ 'ಹನುಮಾನ್ ಅಂಶ್' ಸಿನಿಮಾ 2026ರ ಅತ್ಯಂತ ಲಾಭದಾಯಕ ಬಾಲಿವುಡ್ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 'ಸಾಕ್ನಿಲ್ಕ್' ವರದಿಯ ಪ್ರಕಾರ, ಈ ಸಿನಿಮಾ ಭಾರತದಲ್ಲಿ ₹342.74 ಕೋಟಿ ನಿವ್ವಳ (Net) ಹಾಗೂ ₹404.41 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ. ಅತೀ ಕಡಿಮೆ ಬಜೆಟ್‌ನಲ್ಲಿ ಗರಿಷ್ಠ ಲಾಭ ಗಳಿಸಿದ ಸಿನಿಮಾ ಅನ್ನೋ ದಾಖಲೆ ಬರೆದಿದೆ. ಗ್ಲೋಬಲ್ ಬಾಕ್ಸಾಫೀಸ್‌ನಲ್ಲಿ (Worldwide Collections) ಬರೋಬ್ಬರಿ ₹453.21 ಕೋಟಿ ಗಳಿಕೆ ಕಂಡಿದೆ.
ಈ ಸಿನಿಮಾದ ಕಥೆ ನೀಮ್ ಕರೋಲಿ ಬಾಬಾ ಅವರ ಬಾಲ್ಯದ ದಿನಗಳು ಹಾಗೂ ದೇವರನ್ನು ಹುಡುಕ ಹೊರಡುವ 'ಲಕ್ಷ್ಮೀನಾರಾಯಣ್' ಎಂಬ ಬಾಲಕನ ಆಧ್ಯಾತ್ಮಿಕ ರೂಪಾಂತರವನ್ನು ಆಧರಿಸಿದೆ. ಭಕ್ತಿ, ನಂಬಿಕೆ ಮತ್ತು ಮಾನವೀಯ ಮೌಲ್ಯಗಳ ಸುತ್ತ ಹೆಣೆದಿರುವ ಈ ಕಥೆ ಸಿನೆಮಾ ಪ್ರಿಯರ ಮನಗೆದ್ದಿತ್ತು. ಆದರೆ, ಚಿತ್ರವು ಭಾರಿ ಯಶಸ್ಸು ಗಳಿಸಿದ ಬೆನ್ನಲ್ಲೇ ನಿರ್ಮಾಪಕರ ನಡುವೆ ಹಕ್ಕುಗಳು (Rights), ವಿತರಣೆ ಮತ್ತು ಲಾಭದ ಹಂಚಿಕೆಯ ವಿಷಯದಲ್ಲಿ ಭಿನ್ನಾಭಿಪ್ರಾಯ ಹಾಗೂ ವಿವಾದಗಳು ಎದ್ದಿದ್ದವು. ಹನುಮಾನ್ ಅಂಶ್ ಯಶಸ್ಸಿನ ಬೆನ್ನಲ್ಲೇ ಸೀಕ್ವೆಲ್ ಸಿನಿಮಾ ನಿರ್ಮಾಣ ಮಾಡಲು ಚಿತ್ರತಂಡ ಮುಂದಾಗಿದೆ. ಆದರೆ ಟೈಟಲ್ ರೈಟ್ಸ್ ಸೇರಿದಂತೆ ಇತರ ಕಾಪಿ ರೈಟ್ಸ್ ವಿವಾದಿಂದ ಹನುಮಾನ್ ಅಂಶ್ 2 ಸಿನಿಮಾಗೆ ಸದ್ಯಕ್ಕೆ ಬ್ರೇಕ್ ಬಿದ್ದಿದೆ.
ಈ ಎಲ್ಲಾ ಗೊಂದಲಗಳ ನಡುವೆಯೂ ಇದೀಗ ಸಿನಿಮಾ ಸೈಲೆಂಟ್ ಆಗಿ ಸೋನಿ ಲಿವ್‌ನಲ್ಲಿ ಡಿಜಿಟಲ್ ಪ್ರಸಾರಕ್ಕೆ ದಿನಾಂಕ ನಿಗದಿಪಡಿಸಿಕೊಂಡಿದೆ. ಥಿಯೇಟರ್‌ನಲ್ಲಿ ಸಿನಿಮಾ ವೀಕ್ಷಿಸಲು ಸಾಧ್ಯವಾಗದಿದ್ದ ಚಲನಚಿತ್ರ ಪ್ರೇಮಿಗಳಿಗೆ ನವೆಂಬರ್ 27 ರಿಂದ ಮನೆಯಲ್ಲೇ ಕುಳಿತು 'ಹನುಮಾನ್ ಅಂಶ' ಚಿತ್ರವನ್ನು ಕಣ್ಣುಂಬಿಕೊಳ್ಳುವ ಅವಕಾಶ ಸಿಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.