
'ರಾಮಾಯಣ' ಸಿನಿಮಾದ ಟ್ರೇಲರ್ ನೋಡಿ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಂಬಿಕೆ ಬರುವಂತಹ ಅದ್ಭುತ ಜಗತ್ತನ್ನು ಸೃಷ್ಟಿಸಿದ್ದಕ್ಕೆ ಇಡೀ ತಂಡವನ್ನು ಕೊಂಡಾಡಿದ್ದಾರೆ. ರಾಮನಾಗಿ ರಣಬೀರ್ ಕಪೂರ್ ದೈವತ್ವವನ್ನು ತೋರಿಸಿದರೆ, ರಾವಣನಾಗಿ ಯಶ್ ತಮ್ಮ ನಟನೆಯಿಂದ ಬೆರಗುಗೊಳಿಸಿದ್ದಾರೆ. ಕನ್ನಡಿಗರಾದ ನಮಗೆಲ್ಲಾ ಹೆಮ್ಮೆ ತಂದಿದ್ದಾರೆ ಎಂದು ಹೇಳಿದ್ದಾರೆ.
ನಟ-ನಿರ್ದೇಶಕ ರಿಷಬ್ ಶೆಟ್ಟಿ, ರಣಬೀರ್ ಕಪೂರ್ ಮತ್ತು ಯಶ್ ನಟನೆಯ 'ರಾಮಾಯಣ' ಸಿನಿಮಾವನ್ನು ಹಾಡಿ ಹೊಗಳಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂನಲ್ಲಿ ಈ ಬಗ್ಗೆ ಸುದೀರ್ಘ ಪೋಸ್ಟ್ ಹಾಕಿರುವ ಅವರು, ನಿರ್ದೇಶಕ ನಿತೇಶ್ ತಿವಾರಿ, ನಿರ್ಮಾಪಕ ನಮಿತ್ ಮಲ್ಹೋತ್ರಾ ಹಾಗೂ ಪ್ರಮುಖ ನಟರಾದ ರಣಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ಮತ್ತು ರವಿ ದುಬೆ ಸೇರಿದಂತೆ ಇಡೀ ತಂಡಕ್ಕೆ ಮೆಚ್ಚುಗೆ ತಿಳಿಸಿದ್ದಾರೆ.
"ನಮ್ಮ ಪುರಾಣಗಳ ಕಥೆ ಮತ್ತು ಪಾತ್ರಗಳ ಮೂಲಕ ಜನರನ್ನು ಒಪ್ಪಿಸುವುದು ಸುಲಭವಲ್ಲ. ನಾವೆಲ್ಲರೂ ಈ ಕಥೆಗಳನ್ನು ಕೇಳುತ್ತಾ ಬೆಳೆದಿದ್ದೇವೆ. ಪ್ರತಿಯೊಬ್ಬರಿಗೂ ಈ ಬಗ್ಗೆ ತಮ್ಮದೇ ಆದ ಕಲ್ಪನೆ ಇರುತ್ತದೆ. ಇಂತಹ ಅದ್ಭುತ ಹಾಗೂ ನಂಬಿಕೆ ಬರುವಂತಹ ಜಗತ್ತನ್ನು ಸೃಷ್ಟಿಸಿದ ಇಡೀ ತಂಡಕ್ಕೆ ನನ್ನ ಹ್ಯಾಟ್ಸ್ ಆಫ್. ನಿತೇಶ್ ತಿವಾರಿ, ನಮೀತ್ ಮಲ್ಹೋತ್ರ ನಿಮಗೊಂದು ಸಲಾಂ" ಎಂದು ರಿಷಬ್ ಬರೆದುಕೊಂಡಿದ್ದಾರೆ.
ನಟರ ಅದ್ಭುತ ಅಭಿನಯ ಮತ್ತು ಎ.ಆರ್. ರೆಹಮಾನ್ ಹಾಗೂ ಹ್ಯಾನ್ಸ್ ಜಿಮ್ಮರ್ ಅವರ ಸಂಗೀತವನ್ನು ಹೊಗಳಿದ 'ಕಾಂತಾರ' ಸ್ಟಾರ್, "ಇಂತಹ ಐಕಾನಿಕ್ ಪಾತ್ರಗಳನ್ನು ಮಾಡುವಾಗ ಒಬ್ಬ ನಟನ ಮೇಲಿರುವ ಒತ್ತಡವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಪ್ರತಿಯೊಬ್ಬ ನಟರೂ ಆ ಜವಾಬ್ದಾರಿಯನ್ನು ಅರಿತು ಅದ್ಭುತವಾಗಿ ನಟಿಸಿದ್ದಾರೆ. ರವಿ ದುಬೆ, ಸಾಯಿ ಪಲ್ಲವಿ, ರಕುಲ್ ಪ್ರೀತ್, ಎ.ಆರ್.ರೆಹಮಾನ್, ಹ್ಯಾನ್ಸ್ ಜಿಮ್ಮರ್ ನಿಮ್ಮ ಸಂಗೀತವು ಪ್ರತಿಯೊಂದು ಭಾವನೆಗೂ ಜೀವ ತುಂಬಿದೆ. ಎಂತಹ ಅದ್ಭುತ ಸಂಗೀತ," ಎಂದು ಸೇರಿಸಿದ್ದಾರೆ.
ರಣಬೀರ್ ಕಪೂರ್ ಅವರ ನಟನೆಯು 'ರಾಮನ ದೈವತ್ವ ಮತ್ತು ಪ್ರಭಾವಳಿಯನ್ನು ನಿಜವಾಗಿಯೂ ಅನುಭವಿಸುವಂತೆ ಮಾಡಿತು' ಎಂದು ರಿಷಬ್ ಹೇಳಿದ್ದಾರೆ. ಇನ್ನು ರಾವಣನಾಗಿ ಯಶ್ ಅವರನ್ನು ನೋಡಿ ಬೆರಗಾದೆ ಎಂದಿದ್ದಾರೆ. "ರಣಬೀರ್ ಕಪೂರ್ ಸಹೋದರ, ನೀವು ರಾಮನ ದೈವತ್ವವನ್ನು ನಮಗೆ ನಿಜವಾಗಿಯೂ ಅನುಭವಿಸುವಂತೆ ಮಾಡಿದ್ದೀರಿ. ಯಶ್ ಸರ್, ನಿಮ್ಮ ಪ್ರತಿಯೊಂದು ಶಾಟ್ ನೋಡುವಾಗಲೂ ನನ್ನ ಕಣ್ಣುಗಳು ದೊಡ್ಡದಾಗುತ್ತಿದ್ದವು. ಆ ಪಾತ್ರಕ್ಕೆ ಬೇರೆ ಯಾರೂ ನ್ಯಾಯ ಒದಗಿಸಲು ಸಾಧ್ಯವಿರಲಿಲ್ಲವೇನೋ. ನಿಮ್ಮ ಅದ್ಭುತ ನಟನೆಯ ಬಗ್ಗೆ ಹೇಳಲು ಪದಗಳು ಸಾಲುತ್ತಿಲ್ಲ. ಆದರೆ ಒಂದು ಮಾತು, ಒಬ್ಬ ಕನ್ನಡಿಗನಾಗಿ ನೀವು ನಮಗೆ ಯಾವಾಗಲೂ ಹೆಮ್ಮೆ ತಂದಿದ್ದೀರಿ" ಎಂದು ಅವರು ಹೇಳಿದ್ದಾರೆ.
'ರಾಮಾಯಣ: ಭಾಗ 1' ಟ್ರೇಲರ್ ಬಿಡುಗಡೆ
ದಿನದ ಆರಂಭದಲ್ಲಿ, ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ 'ರಾಮಾಯಣ: ಭಾಗ 1' ಸಿನಿಮಾದ ಟ್ರೇಲರ್ ಅನ್ನು ಬ್ರಹ್ಮ ಮುಹೂರ್ತದಲ್ಲಿ ಬಿಡುಗಡೆ ಮಾಡಲಾಗಿದೆ. ಯಶ್ ಅಭಿನಯದ ರಾವಣನ ಪಾತ್ರದ ಪರಿಚಯದೊಂದಿಗೆ ಟ್ರೇಲರ್ ಆರಂಭವಾಗುತ್ತದೆ. ಕತ್ತಲೆಯಿಂದ ಹೊರಬರುವ ರಾವಣ, ಭವ್ಯವಾದ ಅರಮನೆಗೆ ಏರಿ ಮೂರು ಲೋಕಗಳಿಗೂ ತಾನೇ ಅಧಿಪತಿ ಎಂದು ಘೋಷಿಸುತ್ತಾನೆ. ಕತ್ತಲೆ ಆವರಿಸುತ್ತಿದ್ದಂತೆ, ವಿಷ್ಣುವು ಭೂಮಿಯ ಮೇಲೆ ರಾಜಕುಮಾರ ರಾಮನಾಗಿ ಮರುಜನ್ಮ ಪಡೆಯುತ್ತಾನೆ. ಅರುಣ್ ಗೋವಿಲ್ ಅವರು ರಾಜ ದಶರಥನ ಪಾತ್ರದಲ್ಲಿದ್ದು, ತಮ್ಮ ಜನರಿಗೆ ರಾಮನನ್ನು ಪರಿಚಯಿಸುತ್ತಾರೆ. ಚಿನ್ನದ ಅಯೋಧ್ಯೆಯ ಭವ್ಯ ದೃಶ್ಯಗಳ ನಂತರ, ಸಾಯಿ ಪಲ್ಲವಿ ನಿರ್ವಹಿಸಿದ ಸೀತೆಯೊಂದಿಗೆ ರಾಮನ ವಿವಾಹದ ದೃಶ್ಯ ಬರುತ್ತದೆ.
ತನ್ನ ಮಲತಾಯಿ ಕೈಕೇಯಿಯ ಬೇಡಿಕೆಯನ್ನು ರಾಮ ಒಪ್ಪಿಕೊಳ್ಳುವುದರೊಂದಿಗೆ ಕಥೆಯು ಭಾವನಾತ್ಮಕ ತಿರುವು ಪಡೆಯುತ್ತದೆ. ರವಿ ದುಬೆ ನಿರ್ವಹಿಸಿದ ತನ್ನ ಸಹೋದರ ಲಕ್ಷ್ಮಣನೊಂದಿಗೆ 14 ವರ್ಷಗಳ ವನವಾಸಕ್ಕೆ ಹೊರಡುತ್ತಾನೆ. ರಕುಲ್ ಪ್ರೀತ್ ನಿರ್ವಹಿಸಿದ ಶೂರ್ಪನಖಿಯೊಂದಿಗಿನ ಸಂಘರ್ಷ, ಸೀತೆಯ ಅಪಹರಣದಂತಹ ಮಹಾಕಾವ್ಯದ ಪ್ರಮುಖ ಕ್ಷಣಗಳ ಝಲಕ್ ಅನ್ನು ಟ್ರೇಲರ್ ನೀಡುತ್ತದೆ. ಬೃಹತ್ ಸೇನೆಗಳು, ಪೌರಾಣಿಕ ಜೀವಿಗಳು ಮತ್ತು ತೀವ್ರವಾದ ಕತ್ತಿವರಸೆಯೊಂದಿಗೆ ದೊಡ್ಡ ಪ್ರಮಾಣದ ಯುದ್ಧದತ್ತ ಕಥೆ ಸಾಗುತ್ತದೆ. ಖ್ಯಾತ ಸಂಗೀತ ಸಂಯೋಜಕ ಎ.ಆರ್. ರೆಹಮಾನ್ ಮತ್ತು ಹಾಲಿವುಡ್ ಸಂಯೋಜಕ ಹ್ಯಾನ್ಸ್ ಜಿಮ್ಮರ್ ಅವರ ಜುಗಲ್ಬಂದಿ ಈ ಸಿನಿಮಾದ ಸಂಗೀತದ ಮತ್ತೊಂದು ಪ್ರಮುಖ ಹೈಲೈಟ್ ಆಗಿದೆ.
ಈ ಚಿತ್ರದಲ್ಲಿ ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ, ಯಶ್ ರಾವಣನಾಗಿ, ಸನ್ನಿ ಡಿಯೋಲ್ ಹನುಮಂತನಾಗಿ ಮತ್ತು ರವಿ ದುಬೆ ಲಕ್ಷ್ಮಣನಾಗಿ ನಟಿಸಿದ್ದಾರೆ. ಹ್ಯಾನ್ಸ್ ಜಿಮ್ಮರ್ ಮತ್ತು ಎ.ಆರ್. ರೆಹಮಾನ್ ಸಂಗೀತ ಸಂಯೋಜಿಸಿದ್ದಾರೆ. 'ರಾಮಾಯಣ: ಭಾಗ 1' ಸಿನಿಮಾ 2026ರ ದೀಪಾವಳಿ ಹಬ್ಬದಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದರ ಎರಡನೇ ಭಾಗವು 2027ರ ದೀಪಾವಳಿಗೆ ತೆರೆಗೆ ಬರುವ ನಿರೀಕ್ಷೆಯಿದೆ.
It’s not easy to convince people with the stories and characters of our epics. We have all grown up listening to them, and each of us carries our own imagination of these timeless legends. Hats off to the team for creating such an incredibly convincing world. @niteshtiwari22… pic.twitter.com/mLrLuUZqoi
— Rishab Shetty (@shetty_rishab) July 30, 2026
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.