
ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ರಣಬೀರ್ ಕಪೂರ್, ಸಾಯಿ ಪಲ್ಲವಿ, ಯಶ್ ಮತ್ತು ಸನ್ನಿ ಡಿಯೋಲ್ ಪ್ರಮುಖ ಪಾತ್ರಗಳಲ್ಲಿರುವ ಈ ಚಿತ್ರ, ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು. ಈ ಸಿನಿಮಾ ದೀಪಾವಳಿಗೆ ತೆರೆಗೆ ಬರಲಿದೆ ಎಂದು ಮೊದಲು ಹೇಳಲಾಗಿತ್ತು. ಆದರೆ, ಈಗ ಬಂದಿರುವ ಹೊಸ ವರದಿ ಪ್ರಕಾರ, ನಿರ್ಮಾಪಕರು ಚಿತ್ರದ ಬಿಡುಗಡೆ ದಿನಾಂಕವನ್ನು ಬದಲಿಸಲು ಯೋಚಿಸುತ್ತಿದ್ದಾರಂತೆ. ಅಂದರೆ, ದೀಪಾವಳಿಗಿಂತ ಮುಂಚೆಯೇ 'ರಾಮಾಯಣ' ತೆರೆಗೆ ಬರುವ ಸಾಧ್ಯತೆ ಇದೆ.
ಯಾಕೆ ಬದಲಾಯ್ತು ಯಶ್ ಚಿತ್ರದ ರಿಲೀಸ್ ಡೇಟ್?
ಬಾಲಿವುಡ್ ಹಂಗಾಮಾ ವರದಿ ಪ್ರಕಾರ, 4000 ಕೋಟಿ ಬಜೆಟ್‌ನ ಈ ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ದೀಪಾವಳಿಗೂ ಮುನ್ನವೇ ಸಿನಿಮಾ ಒಂದು ಹಂತದ ಯಶಸ್ಸು ಕಾಣಬೇಕು ಎಂದು ಬಯಸಿದ್ದಾರೆ. ಚಿತ್ರದ ಬಗ್ಗೆ ಎಲ್ಲೆಡೆ ಉತ್ತಮ ಮಾತುಗಳು ಹರಡಿದರೆ, ಹಬ್ಬದ ರಜೆಯಲ್ಲಿ ಅಂದರೆ ಎರಡನೇ ವಾರದಲ್ಲಿ ಕಲೆಕ್ಷನ್ ಮತ್ತಷ್ಟು ಹೆಚ್ಚಾಗುತ್ತದೆ ಎಂಬುದು ಅವರ ಲೆಕ್ಕಾಚಾರ. ಮೊದಲ ವಾರಕ್ಕಿಂತ ಎರಡನೇ ವಾರದಲ್ಲಿ ಹೆಚ್ಚು ಗಳಿಕೆ ಮಾಡಿ, ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಬರೆಯುವುದು ಅವರ ಗುರಿ.
ಸಿನಿಮಾವನ್ನು ಒಂದು ವಾರ ಮುಂಚಿತವಾಗಿ ರಿಲೀಸ್ ಮಾಡುವ ಬಗ್ಗೆ ಮಾತುಕತೆ ನಡೆಯುತ್ತಿದ್ದು, ಶೀಘ್ರದಲ್ಲೇ ಅಂತಿಮ ನಿರ್ಧಾರ ಹೊರಬೀಳಲಿದೆ. 'ರಾಮಾಯಣ' ಚಿತ್ರದ ವಿತರಣಾ ಒಪ್ಪಂದಗಳು ಅಂತಿಮವಾದ ನಂತರ, ನಿರ್ಮಾಪಕರು ಹೊಸ ಬಿಡುಗಡೆ ದಿನಾಂಕವನ್ನು ಘೋಷಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಾಧ್ಯಮ ವರದಿಗಳ ಪ್ರಕಾರ, 'ರಾಮಾಯಣ' 2026ರ ಅಕ್ಟೋಬರ್ 30 ರಂದು ಬಿಡುಗಡೆಯಾಗಬಹುದು. ಅಂದಹಾಗೆ, ಈ ವರ್ಷದ ಆರಂಭದಲ್ಲಿ ಚಿತ್ರತಂಡ ರಣಬೀರ್ ಕಪೂರ್ ಅವರ ರಾಮನ ಅವತಾರದ ಪ್ರೋಮೋವನ್ನು ಬಿಡುಗಡೆ ಮಾಡಿತ್ತು. ಇದಕ್ಕೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈಗ ಎಲ್ಲರೂ ಟ್ರೇಲರ್‌ಗಾಗಿ ಕಾಯುತ್ತಿದ್ದಾರೆ.
ನಿರ್ದೇಶಕ ನಿತೇಶ್ ತಿವಾರಿ ಅವರ 'ರಾಮಾಯಣ' ಎರಡು ಭಾಗಗಳಲ್ಲಿ ತಯಾರಾಗುತ್ತಿದೆ. ಇದರ ಮೊದಲ ಭಾಗ 2026ರಲ್ಲಿ ಮತ್ತು ಮುಂದಿನ ಭಾಗ 2027ರಲ್ಲಿ ಬಿಡುಗಡೆಯಾಗಲಿದೆ. ನಮಿತ್ ಮಲ್ಹೋತ್ರಾ ಈ ಚಿತ್ರದ ನಿರ್ಮಾಪಕರು. 4000 ಕೋಟಿ ಬಜೆಟ್‌ನ ಈ ಸಿನಿಮಾದಲ್ಲಿ ರಣಬೀರ್ ಕಪೂರ್ ಜೊತೆಗೆ ಸಾಯಿ ಪಲ್ಲವಿ, ಸನ್ನಿ ಡಿಯೋಲ್, ಯಶ್, ರವಿ ದುಬೆ, ರಕುಲ್ ಪ್ರೀತ್ ಸಿಂಗ್, ಅರುಣ್ ಗೋವಿಲ್, ಲಾರಾ ದತ್ತಾ, ವಿವೇಕ್ ಒಬೆರಾಯ್, ಅಮಿತಾಭ್ ಬಚ್ಚನ್, ಇಂದಿರಾ ಕೃಷ್ಣನ್, ಕಾಜಲ್ ಅಗರ್ವಾಲ್, ಮೋಹಿತ್ ರೈನಾ, ಕುನಾಲ್ ಕಪೂರ್ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ.
ರಣಬೀರ್ ಕಪೂರ್ ಶ್ರೀರಾಮನ ಪಾತ್ರದಲ್ಲಿದ್ದರೆ, ಸಾಯಿ ಪಲ್ಲವಿ ಸೀತೆಯ ಪಾತ್ರ ನಿರ್ವಹಿಸುತ್ತಿದ್ದಾರೆ. ಇನ್ನು, ರಾಕಿಂಗ್ ಸ್ಟಾರ್ ಯಶ್ ಲಂಕಾಧಿಪತಿ ರಾವಣನಾಗಿ ಮತ್ತು ರವಿ ದುಬೆ ಲಕ್ಷ್ಮಣನಾಗಿ ಕಾಣಿಸಿಕೊಳ್ಳಲಿದ್ದಾರೆ. ಸನ್ನಿ ಡಿಯೋಲ್ ಹನುಮಂತನ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.