ಭಾನುವಾರ ಬಾಕ್ಸ್‌ಆಫೀಸ್ ಕೊಳ್ಳೆ ಹೊಡೆದ ಯಶ್ 'ರಾಮಾಯಣ'; ದೀಪಾವಳಿ ದಿನ ಅತಿಹೆಚ್ಚು ಗಳಿಕೆ ಮಾಡಿದ ಸಿನಿಮಾ! ಟೈಗರ್‌ 3 ದಾಖಲೆ ಉಡೀಸ್!

Published : Nov 09, 2026, 09:54 AM IST
Ramayana Movie

ಸಾರಾಂಶ

ರಣಬೀರ್‌ ಕಪೂರ್‌, ಯಶ್‌ ಮತ್ತು ಸಾಯಿ ಪಲ್ಲವಿ ಅಭಿನಯದ 'ರಾಮಾಯಣ' ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದು, ನಾಲ್ಕೇ ದಿನಗಳಲ್ಲಿ ₹238 ಕೋಟಿ ಗಳಿಸಿದೆ. ದೀಪಾವಳಿಯಂದು ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿ ಹೊರಹೊಮ್ಮುವ ಮೂಲಕ ಟೈಗರ್‌ 3 ಮತ್ತು ಆದಿಪುರುಷ್‌ ದಾಖಲೆಗಳನ್ನು ಮುರಿದಿದೆ.

ಮುಂಬೈ(ನ.09) Ramayana Box Office Collection Day 4: ರಣಬೀರ್‌ ಕಪೂರ್‌, ಯಶ್‌ ಮತ್ತು ಸಾಯಿ ಪಲ್ಲವಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ದೇಶೀಯ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಮುಂದುವರಿಸಿದೆ. ಬಿಡುಗಡೆಯಾದ ನಾಲ್ಕೇ ದಿನಗಳಲ್ಲಿ ಚಿತ್ರದ ಭಾರತದ ಗಳಿಕೆ ₹200 ಕೋಟಿ ಗಡಿ ದಾಟಿದೆ. ವಿಶೇಷವಾಗಿ ದೀಪಾವಳಿ ಹಬ್ಬದ ರಜೆ ಚಿತ್ರದ ಗಳಿಕೆಗೆ ದೊಡ್ಡ ಬಲ ನೀಡಿದ್ದು, ಈ ದಿನ ಸಿನಿಮಾ ತನ್ನ ವೃತ್ತಿಜೀವನದ ಗರಿಷ್ಠ ಏಕದಿನ ಗಳಿಕೆಯನ್ನು ದಾಖಲಿಸಿದೆ.

ಅಷ್ಟೇ ಅಲ್ಲ, ದೀಪಾವಳಿಯಂದು ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎಂಬ ದಾಖಲೆಯನ್ನೂ ‘ರಾಮಾಯಣ’ ತನ್ನದಾಗಿಸಿಕೊಂಡಿದೆ. ಈ ಮೂಲಕ ಸಲ್ಮಾನ್‌ ಖಾನ್‌ ಅಭಿನಯದ ‘ಟೈಗರ್‌ 3’ ಚಿತ್ರದ ದಾಖಲೆಯನ್ನು ಹಿಂದಿಕ್ಕಿದೆ. ನಾಲ್ಕು ದಿನಗಳ ಗಳಿಕೆಯೊಂದಿಗೆ ಪ್ರಭಾಸ್‌ ಅಭಿನಯದ ‘ಆದಿಪುರುಷ್‌’ ಸಿನಿಮಾದ ಮೊದಲ ನಾಲ್ಕು ದಿನಗಳ ಗಳಿಕೆಯನ್ನೂ ಮೀರಿಸಿದೆ.

ನಾಲ್ಕು ದಿನಗಳಲ್ಲಿ ₹238.85 ಕೋಟಿ ಗಳಿಕೆ

‘ರಾಮಾಯಣ’ ಸಿನಿಮಾ ಮೊದಲ ದಿನವೇ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್‌ ಪ್ರದರ್ಶನ ಕಂಡಿತ್ತು. ಬಿಡುಗಡೆಯ ದಿನವಾದ ಗುರುವಾರ ಭಾರತದಲ್ಲಿ ₹64.85 ಕೋಟಿ ನಿವ್ವಳ (ನೆಟ್‌) ಗಳಿಕೆ ದಾಖಲಿಸಿತ್ತು. ಚಿತ್ರದ ಬೃಹತ್‌ ತಯಾರಿಕೆ ಮತ್ತು ನಿರೀಕ್ಷೆಗೆ ಹೋಲಿಸಿದರೆ ಈ ಆರಂಭ ಸ್ವಲ್ಪ ಕಡಿಮೆ ಎನಿಸಿದ್ದರೂ, ಬಾಲಿವುಡ್‌ ಇತಿಹಾಸದಲ್ಲಿ ನಾಲ್ಕನೇ ಅತಿ ದೊಡ್ಡ ಓಪನಿಂಗ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಶುಕ್ರವಾರ ಚಿತ್ರದ ಗಳಿಕೆ ಕೊಂಚ ಇಳಿಕೆಯಾಗಿದ್ದು, ₹48 ಕೋಟಿ ನಿವ್ವಳ ಆದಾಯ ಗಳಿಸಿತ್ತು. ಆದರೆ ಶನಿವಾರ ಮತ್ತೆ ಚೇತರಿಸಿಕೊಂಡ ಸಿನಿಮಾ, ಒಂದೇ ದಿನದಲ್ಲಿ ಸುಮಾರು ₹70 ಕೋಟಿ ನಿವ್ವಳ ಗಳಿಕೆ ದಾಖಲಿಸಿತು. ಇದರಿಂದ ಮೊದಲ ಮೂರು ದಿನಗಳ ಭಾರತದ ಒಟ್ಟು ನಿವ್ವಳ ಗಳಿಕೆ ₹183 ಕೋಟಿ ತಲುಪಿತ್ತು.

ಭಾನುವಾರ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ದೇಶದ ಕೆಲವು ಭಾಗಗಳಲ್ಲಿ ಚಿತ್ರಮಂದಿರಗಳಿಗೆ ಪ್ರೇಕ್ಷಕರ ಆಗಮನ ಕಡಿಮೆಯಾಗಿದ್ದರೂ, ‘ರಾಮಾಯಣ’ ಉತ್ತಮ ಗಳಿಕೆ ಮಾಡಿತು. ಭಾನುವಾರ ಭಾರತದಲ್ಲಿ ₹56.15 ಕೋಟಿ ನಿವ್ವಳ ಆದಾಯ ಗಳಿಸಿದ ಚಿತ್ರ, ಕೇವಲ ನಾಲ್ಕು ದಿನಗಳಲ್ಲಿ ₹200 ಕೋಟಿ ಗಡಿ ದಾಟಿತು. ಈ ಮೂಲಕ ಚಿತ್ರದ ನಾಲ್ಕು ದಿನಗಳ ಒಟ್ಟು ದೇಶೀಯ ನಿವ್ವಳ ಗಳಿಕೆ ₹238.85 ಕೋಟಿಗೆ ತಲುಪಿದೆ. ಆದರೆ, ಚಿತ್ರದ ಗಳಿಕೆಯಲ್ಲಿ ಹಿಂದಿ ಅವತರಣಿಕೆಯ ಕೊಡುಗೆ ದೊಡ್ಡದಾಗಿದೆ ಎಂಬುದು ಗಮನಾರ್ಹ. ರಾವಣನ ಪಾತ್ರದಲ್ಲಿ ಯಶ್‌ ನಟಿಸಿದ್ದರೂ, ಕನ್ನಡ ಅವತರಣಿಕೆ ಮಾತ್ರ ನಿರೀಕ್ಷಿತ ವೇಗ ಪಡೆದುಕೊಂಡಿಲ್ಲ. ಮೊದಲ ದಿನವೇ ಕೇವಲ ₹7.50 ಕೋಟಿ ಗಳಿಸಿದ್ದ ಕನ್ನಡ ಆವೃತ್ತಿ, ನಂತರದ ದಿನಗಳಲ್ಲೂ ಹೆಚ್ಚಿನ ಚೇತರಿಕೆ ಕಂಡಿಲ್ಲ. ಇನ್ನುಳಿದ ಭಾಷೆಗಳ ಪೈಕಿ ತೆಲುಗು ಆವೃತ್ತಿ ಉತ್ತಮ ಪ್ರದರ್ಶನ ನೀಡಿದ್ದರೆ, ಮಲಯಾಳಂ ಮತ್ತು ತಮಿಳು ಆವೃತ್ತಿಗಳ ಗಳಿಕೆ ತುಲನಾತ್ಮಕವಾಗಿ ಕಡಿಮೆಯಾಗಿದೆ.

ದೀಪಾವಳಿಯಂದು ‘ಟೈಗರ್‌ 3’ ದಾಖಲೆಯನ್ನು ಮುರಿದ ‘ರಾಮಾಯಣ’

ದೀಪಾವಳಿ ವಾರಾಂತ್ಯದಲ್ಲಿ ಹಲವು ದೊಡ್ಡ ಸಿನಿಮಾಗಳು ಬಿಡುಗಡೆಯಾಗಿದ್ದರೂ, ಹಬ್ಬದ ದಿನವೇ ಚಿತ್ರಮಂದಿರಗಳಿಗೆ ಬರುವ ಸಿನಿಮಾಗಳ ಸಂಖ್ಯೆ ಕಡಿಮೆ. ಹಬ್ಬದ ನಂತರದ ದಿನಗಳಲ್ಲಿ ಹೆಚ್ಚಿನ ಪ್ರೇಕ್ಷಕರನ್ನು ಸೆಳೆಯುವ ಉದ್ದೇಶದಿಂದ ಬಹುತೇಕ ಚಿತ್ರತಂಡಗಳು ದೀಪಾವಳಿಗೆ ಮುನ್ನ ಅಥವಾ ನಂತರ ಸಿನಿಮಾ ಬಿಡುಗಡೆ ಮಾಡಲು ಆದ್ಯತೆ ನೀಡುತ್ತವೆ.

ಆದರೆ, ‘ರಾಮಾಯಣ’ ನವೆಂಬರ್‌ 5ರಂದು, ದೀಪಾವಳಿಗೆ ಮೂರು ದಿನ ಮುನ್ನ ಬಿಡುಗಡೆಯಾಗಿತ್ತು. ಹೀಗಾಗಿ ಚಿತ್ರದ ಮೊದಲ ಭಾನುವಾರವೇ ದೀಪಾವಳಿ ಹಬ್ಬದ ದಿನವಾಗಿತ್ತು. ಈ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡ ಸಿನಿಮಾ, ಭಾನುವಾರ ರಾತ್ರಿ 9 ಗಂಟೆಯ ವೇಳೆಗೆ ದೀಪಾವಳಿಯಂದು ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರದ ದಾಖಲೆಯನ್ನು ತನ್ನದಾಗಿಸಿಕೊಂಡಿತು. 2023ರ ದೀಪಾವಳಿ ದಿನದಂದು ಬಿಡುಗಡೆಯಾಗಿದ್ದ ಸಲ್ಮಾನ್‌ ಖಾನ್‌ ಅಭಿನಯದ ‘ಟೈಗರ್‌ 3’ ಭಾರತದಲ್ಲಿ ₹44.50 ಕೋಟಿ ನಿವ್ವಳ ಗಳಿಕೆ ದಾಖಲಿಸಿತ್ತು. ಇದೀಗ ‘ರಾಮಾಯಣ’ ಈ ದಾಖಲೆಯನ್ನು ಹಿಂದಿಕ್ಕಿ ಹೊಸ ಇತಿಹಾಸ ನಿರ್ಮಿಸಿದೆ.

‘ಆದಿಪುರುಷ್‌’ ಚಿತ್ರದ ಮೊದಲ 4 ದಿನಗಳ ಗಳಿಕೆಯನ್ನೂ ಮೀರಿಸಿದ ರಾಮಾಯಣ

ಬಿಡುಗಡೆಯ ಮೊದಲ ದಿನವೇ ‘ರಾಮಾಯಣ’ ಬಾಲಿವುಡ್‌ನ ಹಲವು ಬ್ಲಾಕ್‌ಬಸ್ಟರ್‌ ಸಿನಿಮಾಗಳ ಆರಂಭಿಕ ಗಳಿಕೆಯನ್ನು ಹಿಂದಿಕ್ಕಿತ್ತು. ‘ಪಠಾಣ್‌’ (₹57 ಕೋಟಿ), ‘ಅನಿಮಲ್‌’ (₹63 ಕೋಟಿ) ಮತ್ತು ‘ದೃಶ್ಯಂ 2’ (₹62 ಕೋಟಿ) ಚಿತ್ರಗಳ ಮೊದಲ ದಿನದ ಗಳಿಕೆಯನ್ನು ಮೀರಿಸಿತ್ತು. ಆದರೆ, ರಾಮಾಯಣ ಮಹಾಕಾವ್ಯ ಆಧರಿಸಿ ಈ ಹಿಂದೆ ತೆರೆಕಂಡಿದ್ದ ಪ್ರಭಾಸ್‌ ಅಭಿನಯದ ‘ಆದಿಪುರುಷ್‌’ ಚಿತ್ರದ ದಾಖಲೆಯನ್ನು ಮಾತ್ರ ಆರಂಭದಲ್ಲಿ ಮುರಿಯಲು ಸಾಧ್ಯವಾಗಿರಲಿಲ್ಲ. ‘ಆದಿಪುರುಷ್‌’ ಮೊದಲ ದಿನವೇ ₹86.75 ಕೋಟಿ ಗಳಿಸಿತ್ತು.

ಎರಡನೇ ಮತ್ತು ಮೂರನೇ ದಿನವೂ ‘ರಾಮಾಯಣ’ ಈ ದಾಖಲೆಯನ್ನು ಹಿಂದಿಕ್ಕಲು ಸಾಧ್ಯವಾಗಿರಲಿಲ್ಲ. ಆದರೆ, ದೀಪಾವಳಿ ರಜೆ ಸೇರಿದಂತೆ ಸಿಕ್ಕ ವಿಸ್ತೃತ ವಾರಾಂತ್ಯದ ಲಾಭ ಪಡೆದುಕೊಂಡ ಸಿನಿಮಾ, ನಾಲ್ಕನೇ ದಿನದ ಅಂತ್ಯಕ್ಕೆ ‘ಆದಿಪುರುಷ್‌’ ಚಿತ್ರದ ಮೊದಲ ನಾಲ್ಕು ದಿನಗಳ ಗಳಿಕೆಯನ್ನು ಮೀರಿಸಿದೆ. ‘ಆದಿಪುರುಷ್‌’ ಭಾರತದಲ್ಲಿ ಮೊದಲ ನಾಲ್ಕು ದಿನಗಳಲ್ಲಿ ₹237 ಕೋಟಿ ನಿವ್ವಳ ಗಳಿಕೆ ಮಾಡಿತ್ತು. ಭಾನುವಾರದ ಗಳಿಕೆಯೊಂದಿಗೆ ‘ರಾಮಾಯಣ’ ಈ ಮೊತ್ತವನ್ನು ದಾಟಿದೆ.

ಎರಡು ಭಾಗಗಳಲ್ಲಿ ತೆರೆಕಾಣಲಿದೆ ‘ರಾಮಾಯಣ’

ನಮಿತ್‌ ಮಲ್ಹೋತ್ರಾ ಅವರ ಪ್ರೈಮ್‌ ಫೋಕಸ್‌ ಸ್ಟುಡಿಯೋಸ್‌, ಡಿಎನ್‌ಇಜಿ (DNEG) ಮತ್ತು ಯಶ್‌ ಅವರ ಮಾನ್‌ಸ್ಟರ್‌ ಮೈಂಡ್‌ ಕ್ರಿಯೇಷನ್ಸ್‌ ಸಹಯೋಗದಲ್ಲಿ ‘ರಾಮಾಯಣ’ ಸಿನಿಮಾ ನಿರ್ಮಾಣವಾಗುತ್ತಿದೆ. ಎರಡು ಭಾಗಗಳಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡಲು ಯೋಜಿಸಲಾಗಿದೆ. ಚಿತ್ರದಲ್ಲಿ ರಣಬೀರ್‌ ಕಪೂರ್‌ ಶ್ರೀರಾಮನ ಪಾತ್ರದಲ್ಲಿ, ಸಾಯಿ ಪಲ್ಲವಿ ಸೀತೆಯಾಗಿ, ಯಶ್‌ ರಾವಣನಾಗಿ ಹಾಗೂ ರವಿ ದುಬೆ ಲಕ್ಷ್ಮಣನ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಮೊದಲ ಭಾಗವು 2026ರ ನವೆಂಬರ್‌ 5ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಎರಡನೇ ಭಾಗವನ್ನು 2028ರ ದೀಪಾವಳಿ ಸಂದರ್ಭದಲ್ಲಿ ತೆರೆಗೆ ತರಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

RAMAYANA: ವಿಶ್ವದಲ್ಲಿ 4 ದಿನದಲ್ಲೇ ಇಷ್ಟೊಂದು ಗಳಿಸಿ ಕಮಾಲ್ ಮಾಡಿದ್ದು ಹೇಗೆ ರಾಮಾಯಣ?
BBK 13: ಹೊಲಸು ಮಾತುಗಳಿಂದ ಹೋಗಿದ್ದ ಮಂಜ, ಮನೆಯೊಳಗೆ ಬರ್ತಿದ್ದಂತೆ ಗಲೀಜು ಮಾಡಿದ!