
Ram Gopal Varma Reviews Ramayana: ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾವನ್ನು ಎರಡನೇ ಬಾರಿಗೆ ವೀಕ್ಷಿಸಿರುವ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (RGV), ಚಿತ್ರದ ಬಗ್ಗೆ ಸುದೀರ್ಘ ವಿಮರ್ಶೆ ಹಂಚಿಕೊಂಡಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ಹೊಸ ಮಾನದಂಡವನ್ನು ಪರಿಚಯಿಸಿರುವ ಸಿನಿಮಾ ಇದು ಎಂದು ಬಣ್ಣಿಸಿರುವ ಅವರು, ನವೆಂಬರ್ 5ರ ಬಳಿಕ ಬಿಡುಗಡೆಯಾಗುವ ಪ್ರತಿಯೊಂದು ಸಿನಿಮಾವನ್ನೂ ‘ರಾಮಾಯಣ’ ಚಿತ್ರದೊಂದಿಗೆ ಹೋಲಿಕೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ತಾವು ನಾಸ್ತಿಕರಾಗಿದ್ದು, ಭಕ್ತನ ದೃಷ್ಟಿಕೋನದಿಂದಲ್ಲ; ಒಬ್ಬ ಚಿತ್ರನಿರ್ಮಾಪಕ ಮತ್ತು ಸಿನಿಮಾ ಪ್ರೇಕ್ಷಕನಾಗಿ ಈ ವಿಮರ್ಶೆ ಮಾಡುತ್ತಿರುವುದಾಗಿ ರಾಮ್ ಗೋಪಾಲ್ ವರ್ಮಾ ಆರಂಭದಲ್ಲೇ ಸ್ಪಷ್ಟಪಡಿಸಿದ್ದಾರೆ. ಚಿತ್ರದ ಬೃಹತ್ ಪ್ರಮಾಣ ಮತ್ತು ಅದ್ಧೂರಿತನವನ್ನು ಒಪ್ಪಿಕೊಂಡರೂ, ಭಾವನಾತ್ಮಕ ಆಳವಿಲ್ಲ ಎಂದು ಟೀಕಿಸಿದವರ ಅಭಿಪ್ರಾಯಕ್ಕೂ ಅವರು ಪ್ರತಿಕ್ರಿಯಿಸಿದ್ದಾರೆ.
“ಇತರ ವಿಮರ್ಶಕರು ಚಿತ್ರದ ಬೃಹತ್ ಪ್ರಮಾಣವನ್ನು ಒಪ್ಪಿಕೊಳ್ಳುತ್ತಾರೆ. ಆದರೆ, ‘ಆತ್ಮವೇ ಇಲ್ಲ’ ಅಥವಾ ‘ಸಂಗೀತ ಇನ್ನಷ್ಟು ಚೆನ್ನಾಗಿರಬಹುದಿತ್ತು’ ಎಂಬ ಮಾತುಗಳ ಮೂಲಕ ತಮ್ಮ ಮೆಚ್ಚುಗೆಗೆ ಮಿತಿ ಹಾಕುತ್ತಾರೆ. ಆದರೆ, ಈ ಸಿನಿಮಾದ ಆತ್ಮ ಇರುವುದು ಅದರ ಬೃಹತ್ ಪ್ರಮಾಣದಲ್ಲೇ ಎಂಬುದನ್ನು ಅವರು ಅರ್ಥಮಾಡಿಕೊಳ್ಳುತ್ತಿಲ್ಲ. ಈ ಸಿನಿಮಾದ ನಿರ್ಮಾಣದ ಹಿಂದೆ ಇರುವ ಅದ್ಭುತ ಪ್ರತಿಭಾವಂತರು ಹೊಂದಿರುವ ಮಹತ್ವಾಕಾಂಕ್ಷೆಯಲ್ಲೇ ಭಾವನಾತ್ಮಕ ಶಕ್ತಿ ಅಡಗಿದೆ” ಎಂದು ಅವರು ಬುಧವಾರ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ರಾಮ್ ಗೋಪಾಲ್ ವರ್ಮಾ ಅವರ ವಿಮರ್ಶೆಯ ಪ್ರಮುಖ ಅಂಶವಾಗಿದ್ದು, ಯಶ್ ನಿರ್ವಹಿಸಿರುವ ರಾವಣನ ಪಾತ್ರ. ಸಹ ನಿರ್ದೇಶಕರೊಬ್ಬರು ಮತ್ತೊಬ್ಬ ನಟನ ಅಭಿನಯವನ್ನು ಹೊಗಳುವ ಸಾಮಾನ್ಯ ಮಟ್ಟವನ್ನು ಮೀರಿದ ರೀತಿಯಲ್ಲಿ ಅವರು ಯಶ್ ಅವರ ಅಭಿನಯವನ್ನು ಕೊಂಡಾಡಿದ್ದಾರೆ. “ಯಶ್ ಅವರ ರಾವಣ ಈ ವರ್ಷದ ಅತ್ಯುತ್ತಮ ಅಭಿನಯವಷ್ಟೇ ಅಲ್ಲ, ಹಲವು ದಶಕಗಳಲ್ಲೇ ಅತ್ಯುತ್ತಮವಾದದ್ದು. ನಾನು ಸಿನಿಮಾ ನೋಡಲು ಆರಂಭಿಸಿದಾಗಿನಿಂದ ಇಷ್ಟು ವಿದ್ಯುತ್ ಸಂಚಲನ ಮೂಡಿಸುವ ಪರಿಣಾಮ ಬೀರಿದ ಮತ್ತೊಂದು ಅಭಿನಯವನ್ನು ನೆನಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ” ಎಂದು ರಾಮ್ ಗೋಪಾಲ್ ವರ್ಮಾ ಬರೆದಿದ್ದಾರೆ.
ಚಿತ್ರಕಥೆಗಾರ ಶ್ರೀಧರ್ ರಾಘವನ್ ಅವರು ರಾವಣನ ಪಾತ್ರವನ್ನು ರೂಪಿಸಿರುವ ರೀತಿಯನ್ನೂ ಅವರು ಮೆಚ್ಚಿಕೊಂಡಿದ್ದಾರೆ. ರಾವಣನನ್ನು ಸಾಮಾನ್ಯ ಖಳನಾಯಕನಂತೆ ತೋರಿಸದೆ, ತಪಸ್ಸು, ಬುದ್ಧಿವಂತಿಕೆ ಮತ್ತು ಯಾರಿಗೂ ತಲೆಬಾಗದ ಸ್ವಭಾವದ ಮೂಲಕ ತನ್ನ ಶಕ್ತಿಯನ್ನು ಗಳಿಸಿದ ವ್ಯಕ್ತಿಯಾಗಿ ಚಿತ್ರಿಸಲಾಗಿದೆ ಎಂದು ಹೇಳಿದ್ದಾರೆ. ವಿಶೇಷವಾಗಿ, ಸೀತೆಯನ್ನು ಅಪಹರಿಸುವ ನಿರ್ಧಾರ ಕೈಗೊಳ್ಳುವ ಮೊದಲು ರಾವಣ ತನ್ನ ಹತ್ತು ತಲೆಗಳೊಂದಿಗೆ ಚರ್ಚಿಸುವ ದೃಶ್ಯವನ್ನು ಅವರು ಅದ್ಭುತವೆಂದು ಬಣ್ಣಿಸಿದ್ದಾರೆ. ಆ ದೃಶ್ಯದಲ್ಲಿ “ಸ್ಫಟಿಕದಷ್ಟು ಸ್ಪಷ್ಟವಾದ ನಿರ್ಧಾರ ಮತ್ತು ರಾಕ್ಷಸ ಶಕ್ತಿಯ ಸಂಯೋಜನೆ” ಇದೆ. ಜೊತೆಗೆ, “ಆಯಸ್ಕಾಂತದಂತಹ ನಿಖರತೆ”ಯನ್ನು ಕಾಣಬಹುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
“ಯಶ್ ಈ ಸಿನಿಮಾದಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ ಎಂದು ಹೇಳುವ ಪ್ರತಿಯೊಂದು ವಿಮರ್ಶೆಯೂ ಸರಿಯಾಗಿದೆ. ಆದರೆ, ಅವರ ಪಾತ್ರದ ನಿರ್ವಹಣೆಯಿಂದ ರಾವಣನೇ ರಾಮನ ಸುತ್ತಲಿನ ಗುರುತ್ವಾಕರ್ಷಣೆಯ ಕೇಂದ್ರವಾಗಿ ಕಾಣುತ್ತಾನೆ ಎಂಬ ದೊಡ್ಡ ಸಂಗತಿಯನ್ನು ಹಲವರು ಗಮನಿಸಿಲ್ಲ. ಸರಳವಾಗಿ ಹೇಳುವುದಾದರೆ, ರಾವಣನಿಲ್ಲದೆ ರಾಮನಿಲ್ಲ” ಎಂದು ಆರ್ಜಿವಿ ಅಭಿಪ್ರಾಯಪಟ್ಟಿದ್ದಾರೆ.
ರಣಬೀರ್ ಕಪೂರ್ ನಿರ್ವಹಿಸಿರುವ ರಾಮನ ಪಾತ್ರದ ಬಗ್ಗೆ ವ್ಯಕ್ತವಾಗಿರುವ ಟೀಕೆಗಳಿಗೂ ರಾಮ್ ಗೋಪಾಲ್ ವರ್ಮಾ ಉತ್ತರಿಸಿದ್ದಾರೆ. ರಣಬೀರ್ ಅವರ ಅಭಿನಯದಲ್ಲಿ ಭಾವನೆಗಳ ಅಭಿವ್ಯಕ್ತಿ ಕಡಿಮೆ ಇದೆ ಮತ್ತು ಒಂದೇ ರೀತಿಯ ಮುಖಭಾವ ಕಾಣಿಸುತ್ತದೆ ಎಂಬ ಟೀಕೆಗಳನ್ನು ಅವರು ಒಪ್ಪಿಲ್ಲ. “ರಣಬೀರ್ ನಿರಂತರವಾಗಿ ಭಾವನೆಗಳನ್ನು ವ್ಯಕ್ತಪಡಿಸಬೇಕು ಎಂದು ಬಯಸುವ ವಿಮರ್ಶಕರು ರಾಮನ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳುತ್ತಿಲ್ಲ. ರಾಮನ ವ್ಯಕ್ತಿತ್ವವನ್ನು ಅವರು ಏನನ್ನು ವ್ಯಕ್ತಪಡಿಸುತ್ತಾರೆ ಎಂಬುದಕ್ಕಿಂತ, ಏನನ್ನು ತಮ್ಮೊಳಗೆ ತಡೆಹಿಡಿಯುತ್ತಾರೆ ಎಂಬುದೇ ನಿರ್ಧರಿಸುತ್ತದೆ. ಅವರು ಅಂತಿಮವಾಗಿ ಕಾರ್ಯಪ್ರವೃತ್ತರಾದಾಗ, ಅವರ ಬಾಣಗಳು ಮಾತ್ರ ಗುರಿ ತಲುಪುವುದಿಲ್ಲ; ಅದಕ್ಕಿಂತ ಹೆಚ್ಚಾಗಿ ಅವರ ತತ್ವಗಳು ಮತ್ತು ಮೌಲ್ಯಗಳು ಎದುರಾಳಿಯನ್ನು ಭೇದಿಸುತ್ತವೆ” ಎಂದು ಬರೆದಿದ್ದಾರೆ.
ನಿರ್ದೇಶಕ ನಿತೇಶ್ ತಿವಾರಿ ಮತ್ತು ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ಭಾರತೀಯ ಚಿತ್ರರಂಗದಲ್ಲಿ ಈ ಹಿಂದೆ ಯಾರೂ ಪ್ರಯತ್ನಿಸದ ಅಥವಾ ಕಲ್ಪಿಸಿಕೊಳ್ಳದ ಸಾಧನೆಯನ್ನು ಮಾಡಿದ್ದಾರೆ ಎಂದು ಆರ್ಜಿವಿ ಹೇಳಿದ್ದಾರೆ. ಚಿತ್ರರಂಗದ ನಿರಾಳ ಮನೋಭಾವಕ್ಕೆ ಸವಾಲು ಹಾಕಿರುವ ನಮಿತ್ ಮಲ್ಹೋತ್ರಾ, ಇಚ್ಛಾಶಕ್ತಿ ಇದ್ದರೆ ಏನೆಲ್ಲ ಸಾಧಿಸಬಹುದು ಎಂಬುದನ್ನು ಈ ಸಿನಿಮಾ ತೋರಿಸಿಕೊಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚಿತ್ರದ ಕೆಲವು ಪ್ರಮುಖ ದೃಶ್ಯಗಳನ್ನೂ ಅವರು ವಿಶೇಷವಾಗಿ ಉಲ್ಲೇಖಿಸಿದ್ದಾರೆ. ಆರಂಭದಲ್ಲಿನ ಬ್ರಹ್ಮಾಂಡದ ಯುದ್ಧದ ದೃಶ್ಯ, ರಾವಣನ ಹತ್ತು ತಲೆಗಳು ಕೇವಲ ತಂತ್ರಜ್ಞಾನದ ಕಸರತ್ತಾಗಿ ಕಾಣಿಸದೆ ಆತನ ಆಂತರಿಕ ಸಂಘರ್ಷದ ಜೀವಂತ ಅಭಿವ್ಯಕ್ತಿಯಾಗಿ ಮೂಡಿಬಂದಿರುವ ರೀತಿ ಹಾಗೂ ಕ್ಲೈಮ್ಯಾಕ್ಸ್ನ ಜಟಾಯು ದೃಶ್ಯವನ್ನು ಅವರು ಪ್ರಶಂಸಿಸಿದ್ದಾರೆ. ವಿಶೇಷವಾಗಿ ಜಟಾಯು ದೃಶ್ಯವನ್ನು “ಉಸಿರು ಬಿಗಿಹಿಡಿಯುವಂತಹದ್ದು” ಎಂದು ಬಣ್ಣಿಸಿದ್ದಾರೆ. ಇವು ಕೇವಲ ವಿಸುವಲ್ ಎಫೆಕ್ಟ್ ಮಾತ್ರವಲ್ಲ; ಭಾರತೀಯ ಸಿನಿಮಾದ ಭವಿಷ್ಯದ ಬೆಳಕನ್ನು ತೋರಿಸುವ ಬ್ರಹ್ಮಾಂಡದ ಮಟ್ಟದ ಘಟನೆಗಳು ಎಂದು ಅವರು ಬರೆದಿದ್ದಾರೆ.
ಹ್ಯಾನ್ಸ್ ಝಿಮ್ಮರ್ ಮತ್ತು ಎ.ಆರ್. ರೆಹಮಾನ್ ಸಂಯೋಜಿಸಿರುವ ಹಿನ್ನೆಲೆ ಸಂಗೀತದ ಬಗ್ಗೆಯೂ ಆರ್ಜಿವಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಂಗೀತವು ನಿರೀಕ್ಷಿತ ಮಟ್ಟದಲ್ಲಿಲ್ಲ ಅಥವಾ ಕೇವಲ ದೃಶ್ಯಗಳಿಗೆ ಪೂರಕವಾಗಿದೆ ಎಂದು ಹೇಳಿದ ಪ್ರೇಕ್ಷಕರ ಟೀಕೆಗೆ ಅವರು ಪ್ರತಿಕ್ರಿಯಿಸಿದ್ದಾರೆ. “ಅವರ ಸಂಗೀತ ದೃಶ್ಯಗಳೊಂದಿಗೆ ಸ್ಪರ್ಧಿಸಲು ಪ್ರಯತ್ನಿಸಲಿಲ್ಲ; ಬದಲಾಗಿ ಅವುಗಳೊಂದಿಗೆ ಸಹಜವಾಗಿ ಬೆರೆತು ಹರಿಯಿತು. ಸಂಗೀತವು ಭಕ್ತಿಯನ್ನು ಹೊಸದಾಗಿ ರೂಪಿಸಲು ಪ್ರಯತ್ನಿಸುವುದಿಲ್ಲ. ಈಗಾಗಲೇ ಇರುವ ಭಾವನಾತ್ಮಕ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಮುಖ್ಯವಾಗಿ, ಪಾತ್ರಗಳು ತೆಗೆದುಕೊಳ್ಳುವ ನಿರ್ಧಾರಗಳನ್ನು ಸ್ಪಷ್ಟವಾಗಿ ಗುರುತಿಸುವಂತೆ ಮಾಡುತ್ತದೆ” ಎಂದು ಅವರು ವಿವರಿಸಿದ್ದಾರೆ.
ಚಿತ್ರದ ದೀರ್ಘ ಅವಧಿಯ ಬಗ್ಗೆಯೂ ಕೇಳಿಬಂದಿರುವ ಟೀಕೆಗಳನ್ನು ರಾಮ್ ಗೋಪಾಲ್ ವರ್ಮಾ ಸಮರ್ಥಿಸಿಕೊಂಡಿದ್ದಾರೆ. ಕಥೆಯ ಮಹತ್ವ ಮತ್ತು ಅದರಲ್ಲಿನ ಸಂಘರ್ಷದ ತೀವ್ರತೆಯನ್ನು ಪ್ರೇಕ್ಷಕರಿಗೆ ಮನವರಿಕೆ ಮಾಡಿಕೊಡಲು ಚಿತ್ರದ ಅವಧಿ ಅಗತ್ಯವಾಗಿದೆ ಎಂಬುದು ಅವರ ಅಭಿಪ್ರಾಯ. ರಾಮನ ವನವಾಸದ ಕಥೆಯನ್ನು ಕೆಲವೇ ಪ್ರಮುಖ ದೃಶ್ಯಗಳಿರುವ ಸಂಕ್ಷಿಪ್ತ ರೂಪಕ್ಕೆ ಇಳಿಸಿ, ರಾವಣನ ಪಾತ್ರವನ್ನು ಮಾತ್ರ ಸಂಪೂರ್ಣವಾಗಿ ಕಟ್ಟಿಕೊಟ್ಟಿದ್ದರೆ, ಇವರಿಬ್ಬರ ನಡುವಿನ ಸಂಘರ್ಷ ಅನಿವಾರ್ಯವಾಗಿ ಹೇಗೆ ರೂಪುಗೊಳ್ಳುತ್ತದೆ ಎಂಬ ಅಂಶಕ್ಕೆ ಧಕ್ಕೆಯಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.
ಕಥೆಯ ನೈತಿಕ ಮೌಲ್ಯಗಳನ್ನು ಕಡಿಮೆ ಮಾಡದೆ, ಅದನ್ನು ಸಾಮಾನ್ಯ ಮಸಾಲಾ ಆ್ಯಕ್ಷನ್ ಸಿನಿಮಾವಾಗಿ ಪರಿವರ್ತಿಸಲು ನಿರಾಕರಿಸಿದ ನಿತೇಶ್ ತಿವಾರಿ ಅವರ ನಿರ್ಧಾರವನ್ನೂ ಆರ್ಜಿವಿ ಶ್ಲಾಘಿಸಿದ್ದಾರೆ. ಇದೇ ಕಾರಣಕ್ಕೆ ಈ ಸಿನಿಮಾ ಕುಟುಂಬದ ಪ್ರೇಕ್ಷಕರು, ಯುವಜನರು, Gen Z ವೀಕ್ಷಕರು ಹಾಗೂ ಸಣ್ಣ ಪಟ್ಟಣಗಳ ಚಿತ್ರಮಂದಿರಗಳಲ್ಲಿ ಮುಂಭಾಗದ ಆಸನಗಳಲ್ಲಿ ಕುಳಿತು ಸಿನಿಮಾ ನೋಡುವವರಿಗೂ ಇಷ್ಟವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕೊನೆಯಲ್ಲಿ ‘ರಾಮಾಯಣ ಪಾರ್ಟ್ 1’ ಚಿತ್ರವನ್ನು ಜಾಗತಿಕ ಸಿನಿಮಾಗಳ ಮಟ್ಟದಲ್ಲಿ ಇರಿಸಿರುವ ರಾಮ್ ಗೋಪಾಲ್ ವರ್ಮಾ, ದೊಡ್ಡ ಬಜೆಟ್ನ ಅಂತಾರಾಷ್ಟ್ರೀಯ ಸಿನಿಮಾಗಳಿಗಿಂತಲೂ ಮೇಲ್ಮಟ್ಟದಲ್ಲಿ ನಿಲ್ಲಬಲ್ಲ ಮೊದಲ ಭಾರತೀಯ ನಿರ್ಮಾಣ ಇದು ಎಂದು ಹೇಳಿದ್ದಾರೆ. “ನವೆಂಬರ್ 5ರ ಬಳಿಕ ನಿರ್ಮಾಣವಾಗುವ ಪ್ರತಿಯೊಂದು ಸಿನಿಮಾವನ್ನೂ ಈಗ ‘ರಾಮಾಯಣ’ ಚಿತ್ರದೊಂದಿಗೆ ಹೋಲಿಕೆ ಮಾಡಲಾಗುತ್ತದೆ. ಮತ್ತು ‘ರಾಮಾಯಣ ಪಾರ್ಟ್ 1’ ಅನ್ನು ಮೀರಿಸುವ ಏಕೈಕ ಸಿನಿಮಾ ‘ರಾಮಾಯಣ ಪಾರ್ಟ್ 2’ ಮಾತ್ರ” ಎಂದು ಅವರು ತಮ್ಮ ವಿಮರ್ಶೆಯನ್ನು ಮುಕ್ತಾಯಗೊಳಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.