‘ಪ್ರೀತಿಸಿ ಮದುವೆಯಾದ ಮೇಲೆಯೇ ನೈಜ ಬಣ್ಣ ಗೊತ್ತಾಗಿದ್ದು’: ಮದುವೆಯ ಕರಾಳ ದಿನ ನೆನೆದು ಕಣ್ಣೀರಿಟ್ಟ ನಟಿ ಉಮಾಶ್ರೀ

Published : Nov 11, 2026, 01:33 PM IST
umashree recalls painful married life after love marriage

ಸಾರಾಂಶ

ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ತಮ್ಮ ಬದುಕಿನ ಹಲವು ಮರೆಯಲಾಗದ ಘಟನೆಗಳನ್ನು ಉಮಾಶ್ರೀ ಹಂಚಿಕೊಂಡಿದ್ದಾರೆ. ತಮ್ಮ ಬಾಲ್ಯ, ಮದುವೆ, ನಟನೆ, ರಾಜಕೀಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಕಷ್ಟಗಳನ್ನೇ ಮೆಟ್ಟಿಲಾಗಿಸಿಕೊಂಡು ಬದುಕಿನಲ್ಲಿ ಸಾಧನೆಯ ಶಿಖರವೇರಿದವರು ನಟಿ ಹಾಗೂ ರಾಜಕಾರಣಿ ಉಮಾಶ್ರೀ. ಬಾಲ್ಯದಲ್ಲೇ ತಾಯಿಯನ್ನು ಕಳೆದುಕೊಂಡ ನೋವು, ಸಾಕು ತಾಯಿಯ ಪ್ರೀತಿ, ಬಡತನ, ಚಿಕ್ಕ ವಯಸ್ಸಿನಲ್ಲೇ ಮದುವೆ, ವೈವಾಹಿಕ ಜೀವನದಲ್ಲಿ ಎದುರಾದ ಸವಾಲುಗಳು… ಹೀಗೆ ಬದುಕಿನ ಒಂದೊಂದು ಹಂತದಲ್ಲೂ ಹಲವು ಸಂಕಷ್ಟಗಳನ್ನು ಎದುರಿಸಿದ ಅವರು ಇಂದು ಗುರುತಿಸಿಕೊಂಡಿರುವ ಸಾಧಕಿ.

ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ತಮ್ಮ ಬದುಕಿನ ಹಲವು ಮರೆಯಲಾಗದ ಘಟನೆಗಳನ್ನು ಉಮಾಶ್ರೀ ಹಂಚಿಕೊಂಡಿದ್ದಾರೆ. ತಮ್ಮ ಬಾಲ್ಯ, ಮದುವೆ, ನಟನೆಯ ಆರಂಭ, ರಾಜಕೀಯ ಪ್ರವೇಶ ಹಾಗೂ ಜೀವನದ ಕಹಿ ಅನುಭವಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಎಂಟು ತಿಂಗಳ ಮಗುವಾಗಿದ್ದಾಗಲೇ ತಾಯಿಯನ್ನು ಕಳೆದುಕೊಂಡರು

ಉಮಾಶ್ರೀ ಅವರ ಬದುಕಿನ ಹೋರಾಟ ಹುಟ್ಟಿನಿಂದಲೇ ಆರಂಭವಾಗಿತ್ತು. ಕೇವಲ ಎಂಟು ತಿಂಗಳ ಮಗುವಾಗಿದ್ದಾಗಲೇ ಅವರು ತಾಯಿಯನ್ನು ಕಳೆದುಕೊಂಡರು. ಬಳಿಕ ಮಕ್ಕಳಿಲ್ಲದ ಸಾಕು ತಾಯಿ ಅವರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ಪ್ರೀತಿಯಿಂದ ಬೆಳೆಸಿದರು. ಸುಮಾರು 15-16 ವರ್ಷಗಳವರೆಗೆ ಸಾಕು ತಾಯಿಯ ಆರೈಕೆಯಲ್ಲೇ ಬೆಳೆದ ಉಮಾಶ್ರೀ. ಓದಿನಲ್ಲಿ ಆಸಕ್ತಿ ತೋರದ ಉಮಾಶ್ರೀ, ಪಿಯುಸಿ ಹಂತದಲ್ಲೇ ವಿದ್ಯಾಭ್ಯಾಸ ನಿಲ್ಲಿಸಿ ಮದುವೆಯಾದರು. ಸಾಕು ತಾಯಿ ತಮ್ಮನ್ನು ಪ್ರೀತಿಯಿಂದ ಬೆಳೆಸಿದ್ದರೂ, ಅವರ ಕನಸಿನಂತೆ ಬದುಕಲು ಸಾಧ್ಯವಾಗಲಿಲ್ಲ ಎಂಬ ನೋವು ಇಂದಿಗೂ ಕಾಡುತ್ತದೆ ಎಂದು ಹೇಳಿದ್ದಾರೆ.

16-17ನೇ ವಯಸ್ಸಿನಲ್ಲೇ ಪ್ರೀತಿ, ಮದುವೆ

ಚಿಕ್ಕ ವಯಸ್ಸಿನಲ್ಲೇ ಪ್ರೀತಿಯಲ್ಲಿ ಬಿದ್ದ ಉಮಾಶ್ರೀ, ಮನೆಯವರ ವಿರೋಧದ ನಡುವೆಯೂ ತಾವು ಇಷ್ಟಪಟ್ಟ ವ್ಯಕ್ತಿಯನ್ನೇ ಮದುವೆಯಾದರು. ಆದರೆ ಮದುವೆಯ ನಂತರ ಪತಿಯ ಕೆಲವು ಗುಣಗಳು ಹಾಗೂ ಅಭ್ಯಾಸಗಳು ತಮಗೆ ತಿಳಿದವು ಎಂದು ಅವರು ಹೇಳಿದ್ದಾರೆ. "ಹುಡುಗರು ಹುಡುಗಿಯರನ್ನು ಬಹಳ ಚೆನ್ನಾಗಿ ನಂಬಿಸುತ್ತಾರೆ" ಎಂದು ನಗುತ್ತಲೇ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಸಂಬಂಧದಲ್ಲಿ ನಂಬಿಕೆ ಕಳೆದುಕೊಂಡ ಬಳಿಕ ಮತ್ತೆ ಹಿಂದಿರುಗಿ ನೋಡುವುದಿಲ್ಲ ಎಂಬ ತಮ್ಮ ಸ್ವಭಾವವನ್ನೂ ಅವರು ವಿವರಿಸಿದ್ದಾರೆ. ಆದರೆ ಯಾರೊಂದಿಗಾದರೂ ಆತ್ಮೀಯತೆ ಕಡಿಮೆಯಾದರೂ ಅವರನ್ನು ಗೌರವಿಸುವುದನ್ನು ಮಾತ್ರ ನಿಲ್ಲಿಸುವುದಿಲ್ಲ ಎಂದಿದ್ದಾರೆ.

50 ರೂಪಾಯಿಗೆ ನಾಟಕದಲ್ಲಿ ಅಭಿನಯ!

ಉಮಾಶ್ರೀ ಅವರ ಬದುಕಿಗೆ ಹೊಸ ತಿರುವು ನೀಡಿದ್ದು ರಂಗಭೂಮಿ. ವೈವಾಹಿಕ ಜೀವನದಲ್ಲಿ ಎದುರಾದ ಸಮಸ್ಯೆಗಳ ಬಳಿಕ ತಾಯಿ ಮನೆಗೆ ಮರಳಿದ ಅವರು, ಮಕ್ಕಳ ಜವಾಬ್ದಾರಿಯನ್ನೂ ಹೊತ್ತು ಬದುಕು ಕಟ್ಟಿಕೊಳ್ಳಬೇಕಾಯಿತು. ಇದೇ ಸಂದರ್ಭದಲ್ಲಿ ಹಳೆಯ ಸ್ನೇಹಿತೆ ಪುಷ್ಪ ಅವರನ್ನು ಭೇಟಿಯಾದರು. ಆಕೆ ರಂಗಭೂಮಿಯಲ್ಲಿ ಕೆಲಸ ಮಾಡುತ್ತಿದ್ದಳು. ಉಮಾಶ್ರೀ ಅವರಿಗೂ ನಾಟಕಗಳಲ್ಲಿ ಅಭಿನಯಿಸುವಂತೆ ಆಹ್ವಾನ ನೀಡಿದಳು. ಹೀಗೆ ನಾಟಕದ ಮೂಲಕ ವೃತ್ತಿಜೀವನ ಆರಂಭಿಸಿದ ಉಮಾಶ್ರೀ, ಆರಂಭದಲ್ಲಿ ಒಂದು ಗಂಟೆ ನಾಟಕದಲ್ಲಿ ಅಭಿನಯಿಸಿದ್ದಕ್ಕೆ 50 ರೂಪಾಯಿ ಸಂಭಾವನೆ ಪಡೆಯುತ್ತಿದ್ದರು. ಆ 50 ರೂಪಾಯಿ ಕೂಡ ಅವರಿಗೆ ದೊಡ್ಡ ಮೊತ್ತವಾಗಿತ್ತು. ನಂತರ ಹಳ್ಳಿಗಳ ಪೌರಾಣಿಕ ನಾಟಕಗಳಲ್ಲಿ ರುಕ್ಮಿಣಿ, ಉತ್ತರೆಯಂತಹ ಪಾತ್ರಗಳನ್ನು ನಿರ್ವಹಿಸಿ ಜನಪ್ರಿಯತೆ ಗಳಿಸಿದರು.

ನಾಟಕಗಳಲ್ಲಿ ತೋರಿದ ಪ್ರತಿಭೆ, ಪಾತ್ರಗಳ ಮೇಲಿನ ಬದ್ಧತೆ ಮತ್ತು ಪರಿಶ್ರಮದಿಂದ ಅವರಿಗೆ ಬೇಡಿಕೆ ಹೆಚ್ಚಾಯಿತು. ಒಂದು ಹಂತದಲ್ಲಿ 19 ನಾಟಕಗಳ ಪೈಕಿ 17 ನಾಟಕಗಳಿಗೆ ಉಮಾಶ್ರೀ ಅವರನ್ನೇ ಆಯ್ಕೆ ಮಾಡಲಾಗುತ್ತಿತ್ತು ಎಂದು ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದಾರೆ.

ಸಮಾಜದ ಟೀಕೆಗಳಿಗೆ ತಲೆಕೆಡಿಸಿಕೊಳ್ಳಲಿಲ್ಲ!

ರಂಗಭೂಮಿಯಲ್ಲಿ ಕೆಲಸ ಮಾಡುವಾಗ ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಯಿತು. ಕೆಲವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದರು. ಆದರೆ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತಮ್ಮ ಕೆಲಸದ ಕಡೆಗೆ ಗಮನ ಹರಿಸುತ್ತಿದ್ದೆ ಎಂದು ಉಮಾಶ್ರೀ ಹೇಳಿದ್ದಾರೆ. "ನನಗೆ ಬೇಕಾಗಿರೋದು ಕೆಲಸ, ನನಗೆ ಬೇಕಾಗಿರೋದು ದುಡ್ಡು ಅಷ್ಟೇ" ಎಂಬ ಅವರ ಮಾತು ಬದುಕಿನ ಬಗ್ಗೆ ಅವರಿಗಿದ್ದ ಸ್ಪಷ್ಟ ನಿಲುವನ್ನು ತೋರಿಸುತ್ತದೆ.

ರಾಜಕೀಯಕ್ಕೆ ಬರುತ್ತೇನೆ ಎಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ!

ರಂಗಭೂಮಿ ಹಾಗೂ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಉಮಾಶ್ರೀ ಅವರಿಗೆ ರಾಜಕೀಯವೂ ಹೊಸ ಅವಕಾಶ ನೀಡಿತು. ಶಾಸಕಿಯಾಗಿ, ಸಚಿವೆಯಾಗಿ ಸೇವೆ ಸಲ್ಲಿಸಿದ ಅವರು ನಂತರ ವಿಧಾನ ಪರಿಷತ್ತಿನ ಉಪಸಭಾಪತಿ ಹುದ್ದೆಯನ್ನೂ ಅಲಂಕರಿಸಿದರು. ರಾಜಕೀಯಕ್ಕೆ ಬರಬೇಕು, ಇಂತಹದ್ದೊಂದು ಸ್ಥಾನ ಪಡೆಯಬೇಕು ಎಂದು ತಾವು ಎಂದಿಗೂ ಕನಸು ಕಂಡಿರಲಿಲ್ಲ ಎಂದು ಅವರು ಹೇಳಿದ್ದಾರೆ.

"ನಮ್ಮ ಬದುಕಿನ ಸ್ಕ್ರಿಪ್ಟ್ ಈಗಾಗಲೇ ರೆಡಿಯಾಗಿದೆ. ನಾವು ಅದರ ಪಾತ್ರಧಾರಿಗಳು ಅಷ್ಟೇ" ಎಂಬ ಅವರ ಮಾತು ಗಮನ ಸೆಳೆಯುತ್ತದೆ. ಮುಂದೆ ಏನಾಗುತ್ತದೆ ಎಂಬುದು ಯಾರಿಗೂ ತಿಳಿದಿರುವುದಿಲ್ಲ. ಒಳ್ಳೆಯದಾಗಲಿ, ಕೆಟ್ಟದ್ದಾಗಲಿ ಅದನ್ನು ಸ್ವೀಕರಿಸಿ ಮುನ್ನಡೆಯಬೇಕು. ಬದುಕಿನಲ್ಲಿ ಒಂದು ಬಾಗಿಲು ಮುಚ್ಚಿದರೆ ಮತ್ತೊಂದು ದಾರಿ ತೆರೆದುಕೊಳ್ಳುತ್ತದೆ. ಕಷ್ಟ ಎದುರಾದಾಗ ಆತ್ಮಹತ್ಯೆಯಂತಹ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ಬದುಕು ಬಹಳ ವಿಶಾಲವಾಗಿದೆ ಎಂಬ ಕಿವಿಮಾತನ್ನೂ ಉಮಾಶ್ರೀ ನೀಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಅಣ್ಣಯ್ಯ' ಖ್ಯಾತಿಯ ನಿಶಾ ಸಿಎಂ ವಿಜಯ್ ಹೆಸರು ಹೇಳಿದ್ದಕ್ಕೆ "ನೆಕ್ಸ್ಟ್ ಕಾಲಿವುಡ್‌ ಹೀರೋಯಿನ್ ನೀವೇ" ಅಂದ ತಮಿಳು ನಿರೂಪಕಿ!
ಯೋಗದ ಮಾರ್ಗದಲ್ಲಿ ಸಾಗಬೇಕು, ಆಧ್ಯಾತ್ಮಿಕ ಜೀವನ ನಡೆಸಬೇಕು; ಪವನ್ ಕಲ್ಯಾಣ್ ಮಾತು ವೈರಲ್!