
ಪ್ರಭಾಸ್ ನಟನೆಯ ರಾಜ್ ಸಾಬ್ ಸಿನಿಮಾದ ಹಾಡೊಂದರ ಬಿಡುಗಡೆ ಕಾರ್ಯಕ್ರಮಕ್ಕೆಂದು ಬಂದ ನಟಿ ನಿಧಿ ಆಗರ್ವಾಲ್ ಬೆಚ್ಚಿ ಬೀಳುವಂತಹ ಸನ್ನಿವೇಶ ನಿರ್ಮಾಣವಾಗಿದ್ದು, ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಜೊತೆಗೆ ಸಿನಿಮಾ ನಟ ನಟಿಯರ ಹುಚ್ಚು ಅಭಿಮಾನಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಹಾಗಿದ್ದರೆ ಆಗಿದ್ದೇನು?
ಹೈದರಾಬಾದ್‌ನ ಲುಲು ಮಾಲ್‌ನಲ್ಲಿ ಪ್ರಭಾಸ್ ನಟನೆಯ ಬಹು ನಿರೀಕ್ಷಿತ ರಾಜ ಸಾಬ್ ಸಿನಿಮಾದ ಹಾಡೊಂದರ ಬಿಡುಗಡೆ ಕಾರ್ಯಕ್ರವಿತ್ತು. ಈ ಕಾರ್ಯಕ್ರಮಕ್ಕಾಗಿ ನಟಿ ನಿಧಿ ಆಗರ್ವಾಲ್ ಆಗಮಿಸಿದ್ದರು. ಈ ವೇಳೆ ಅಭಿಮಾನಿಗಳು ಅವರನ್ನು ತೋಳಗಳಂತೆ ಮುತ್ತಿಕೊಂಡಿದ್ದಾರೆ. ಇದರಿಂದ ಸ್ವತಃ ನಟಿ ತೀವ್ರ ಮುಜುಗರದ ಜೊತೆ ಕಿರಿಕಿರಿ ಅನುಭವಿಸಿದ್ದಾರೆ. ಗುಂಪಿನ ಮಧ್ಯೆ ಸಿಲುಕಿ ಆಚೇಗೂ ಹೋಗಲಾಗದೇ ಈಚೆಗೂ ಬರಲಾಗದೇ ಪರದಾಡಿದ ನಿಧಿ ಅವರನ್ನು ಆ ಗುಂಪಿನಿಂದ ಬಿಡಿಸಿಕೊಂಡು ಬಂದು ಕಾರೊಳಗೆ ಹತ್ತಿಸಿ ರಕ್ಷಿಸುವುದಕ್ಕೆ ಅವರ ಬಾಡಿಗಾರ್ಡ್‌ಗೆ ಸಾಕೋ ಸಾಕು ಎಂಬಂತಾಗಿದೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಹುಚ್ಚು ಅಭಿಮಾನಿಗಳ ಈ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಪ್ರಭಾಸ್ ಮುಖ್ಯ ಭೂಮಿಕೆಯಲ್ಲಿರುವ ರಾಜಾ ಸಾಬ್ ಸಿನಿಮಾ ಘೋಷಣೆಯಾದಾಗಿನಿಂದಲೂ ಸಂಚಲನ ಸೃಷ್ಟಿಸಿದ್ದು, ಬುಧವಾರ ಸಿನಿಮಾದ ನಿರ್ಮಾಪಕರು ಈ ರಾಜಾ ಸಾಬ್ ಸಿನಿಮಾದ ಸಹಾನ ಸಹಾನ ಹಾಡನ್ನು ಹೈದರಾಬಾದ್‌ನಲ್ಲಿ ರಿಲೀಸ್ ಮಾಡುವುದಕ್ಕೆ ಪ್ಲಾನ್ ಮಾಡಿದ್ದರು. ಅದರಂತೆ ಲುಲು ಮಾಲ್‌ನಲ್ಲಿ ಈ ಕಾರ್ಯಕ್ರಮ ಆಯೋಜಿಸಲ್ಪಟ್ಟಿತ್ತು. ಈ ಕಾರ್ಯಕ್ರಮಕ್ಕೆ ಬಂದು ವಾಪಸ್ ಹೋಗುವ ವೇಳೆ ಈ ಅವಾಂತರ ನಡೆದಿದೆ.
ಇದನ್ನೂ ಓದಿ: 2 ಮಕ್ಕಳಾದ ನಂತರವು ಮುಸ್ಲಿಂ ಸೊಸೆಯ ಒಪ್ಪಿಕೊಳ್ಳದ ಪೋಷಕರು: ವಿಚ್ಛೇದನ ನೀಡಲು ಮುಂದಾದ ಮಗನಿಂದ ಆಯ್ತು ಘೋರ ಅಪರಾಧ
ಈ ಸಿನಿಮಾದಲ್ಲಿ ಪ್ರಭಾಸ್ ಜೊತೆ ನಿಧಿ ಅಗರ್ವಾಲ್ ನಟಿಸಿದ್ದಾರೆ. ಹೀಗಾಗಿ ಹಾಡಿನ ಬಿಡುಗಡೆಗೆ ನಟಿ ಬಂದಿದ್ದರು. ಆದರೆ ಅಲ್ಲಿ ಸೇರಿದ್ದ ಗುಂಪು ಆಕೆಗೂ ಮುಂದೆಯೂ ಹೋಗಲಾಗದಂತೆ ಹಿಂದೆಯೂ ಬರಲಾಗದಂತೆ ಮುತ್ತಿಕ್ಕಿಕೊಂಡಿದ್ದು, ಈ ಗುಂಪಿನ ಮಧ್ಯೆ ಸಿಲುಕಿ ನಟಿ ಪರದಾಡಿದ್ದಾರೆ. ನಂತರ ತಂಡದಲ್ಲಿದ್ದವರು ಹಾಗೂ ನಿಧಿ ಅವರ ಬಾಡಿಗಾರ್ಡ್ ಅವರನ್ನು ಒಂದು ರೀತಿಯಲ್ಲಿ ಎಳೆದುಕೊಂಡೆ ಬಂದು ಕಾರಿಗೆ ಹತ್ತಿಸಿ ಮುತ್ತಿಗೆ ಹಾಕಿದ ಗುಂಪಿನಿಂದ ರಕ್ಷಣೆ ಮಾಡಿದ್ದಾರೆ. ವೈರಲ್ ಆದ ವೀಡಿಯೋದಲ್ಲಿ ಹೀಗೆ ಸುತ್ತುವರಿದ ಗುಂಪನ್ನು ನೋಡಿ ನಟಿ ನಿಧಿ ಅಗರ್ವಾಲ್ ಶಾಕ್‌ಗೆ ಒಳಗಾಗುವುದನ್ನು ಕಾಣಬಹುದಾಗಿದೆ. ಸುತ್ತುವರೆದ ಗುಂಪನ್ನು ಭದ್ರತಾ ಸಿಬ್ಬಂದಿ ದೂರ ತಳ್ಳುತ್ತಿರುವಾಗ ನಿಧಿ ತಮ್ಮ ಶಾಲನ್ನು ಗಟ್ಟಿಯಾಗಿ ಹಿಡಿದುಕೊಂಡಿರುವುದನ್ನು ಕಾಣಬಹುದು.
ಅದು ಹೇಗೋ ಕಾರಿನೊಳಗೆ ಬಂದು ಸೇರಿ ಕುಳಿತುಕೊಂಡ ನಿಧಿ ಅಗರ್ವಾಲ್ ಸುಸ್ತಾಗಿರುವುದರ ಜೊತೆ ಶಾಕ್ ಆಗಿರುವುದನ್ನು ವೀಡಿಯೋದಲ್ಲಿ ಕಾಣಬಹುದು. ವೀಡಿಯೋ ನೋಡಿದ ಅನೇಕರು ಜನರ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ತುಂಬಾ ಅತಿಯಾಯ್ತು. ನಿಮಗೆಲ್ಲಾ ನಾಚಿಕೆ ಆಗಬೇಕು. ಇದೊಂದು ತೀರಾ ಕೆಟ್ಟ ಬೆಳವಣಿಗೆ, ನಿಜವಾಗಿಯೂ ಇವರೆಲ್ಲಾ ತೋಳಗಳಿಗಿಂತ ಕಡೆಯಾಗಿ ಕಾಣುತ್ತಿದ್ದಾರೆ. ನಿಮಗೇನು ಕೆಲ ಇಲ್ಲವೇ? ಎಂದು ಅನೇಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೌನ್ಸರ್ ಸರಿಯಾದ ಕೆಲಸ ಮಾಡಿದರು, ಬಾಡಿಗಾರ್ಡ್ ನಿಜವಾಗಿಯೂ ಗ್ರೇಟ್ ಎಂದು ಮತ್ತಿಬ್ಬರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಗುಜರಾತ್‌ನಲ್ಲಿ ಸರ್ದಾರ್ ವಲ್ಲಭಬಾಯ್ ಏಕತಾ ಪ್ರತಿಮೆಯ ಶಿಲ್ಪಿ, ಶತಾಯುಷಿ ರಾಮ್ ಸುತರ್ ಇನ್ನಿಲ್ಲ
ಗಾಯಕಿ ಚಿನ್ಮಯಿ ಶ್ರೀಪಾದ್, ಅವರು ಕೂಡ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದು, ಈ ಪುರುಷರ ಗುಂಪು ಕತ್ತೆ ಕಿರುಬುಗಳಿಗಿಂತ ಕೆಟ್ಟದಾಗಿ ವರ್ತಿಸುತ್ತಿದ್ದಾರೆ. ನಿಜವಾಗಿಯ ಇವರ ಕಾರಣಕ್ಕೆ ಕತ್ತೆ ಕಿರುಬಗಳನ್ನು ಏಕೆ ಅವಮಾನಿಸಬೇಕು. ಇದೊಂದು ಸಮಾನಮನಸ್ಕ ಪುರುಷರ ಗುಂಪು ಅವರು ಮಹಿಳೆಗೆ ಈ ರೀತಿ ಕಿರುಕುಳ ನೀಡುತ್ತಾರೆ. ಯಾಕೆ ದೇವರು ಇಂತಹವರನ್ನೆಲ್ಲಾ ಬೇರೆಡೆ ತೆಗೆದುಕೊಂಡು ಹೋಗಿ ಬೇರೆಯದೇ ಒಂದು ಗೃಹದಲ್ಲಿ ಇಡಬಾರದು ಎಂದು ಅವರು ಪ್ರಶ್ನಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ನಟಿ ನಿಧಿ ಅಗರ್ವಾಲ್ ಪ್ರತಿಕ್ರಿಯಿಸಿದ್ದು, ಕಾರ್ಯಕ್ರಮ ಆಯೋಜಿಸಿದ ಶ್ರೇಯಸ್ ಗ್ರೂಪ್ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಕ್ಸ್ ಖಾತೆಯಲ್ಲಿ ಈ ವೀಡಿಯೋ ಹಂಚಿಕೊಂಡ ನಿಧಿ ಅಗರ್ವಾಲ್, ಶ್ರೇಯಸ್ ಗ್ರೂಪ್‌ನಿಂದ ಇದೊಂದು ಸಂಪೂರ್ಣ ಶೋಚನೀಯವಾದ ಅವ್ಯವಸ್ಥೆ ಸರಿಯಾದ ಭದ್ರತಾ ವ್ಯವಸ್ಥೆ ಶೂನ್ಯ, ನಿರ್ವಹಣಾ ಯೋಜನೆ ಶೂನ್ಯ. ಇಲ್ಲಿ ಆದಂತಹ ಈ ಘಟನೆಯ ಜವಾಬ್ದಾರಿಯನ್ನು ನೀವೆ ಹೊರಬೇಕು ಎಂದು ಅವರು ಬರೆದುಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.