
ಮೈಸೂರು ಸ್ಯಾಂಡಲ್ ಸೋಪ್ಗೆ ಬಾಲಿವುಡ್ ಬ್ಯೂಟಿ ತಮನ್ನಾ ಭಾಟಿಯಾ (Tamannaah Bhatia) ಅವರನ್ನು ರಾಯಭಾರಿ ಮಾಡಿರುವುದಕ್ಕೆ ಇದಾಗಲೇ ಹಲವಾರು ಕನ್ನಡಿಗರು ಕಿಡಿ ಕಾರುತ್ತಲೇ ಇದ್ದಾರೆ. ತಮನ್ನಾ ಅವರನ್ನು ಇಲ್ಲಿಗೆ ಕರೆಸಿಕೊಳ್ಳುವ ವ್ಯವಸ್ಥೆ, ಐಷಾರಾಮಿ ಹೋಟೆಲ್ ಬುಕಿಂಗ್ ಎಲ್ಲವೂ ಸೇರಿದಂತೆ ಹತ್ತಾರು ಕೋಟಿಗೂ ಅಧಿಕ ಹಣವನ್ನು ವ್ಯಯ ಮಾಡಿರುವ ರಾಜ್ಯ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಸೇರಿದಂತೆ ವಿವಿಧ ಕನ್ನಡ ಸಂಘಟನೆಗಳು ಹಾಗೂ ಕನ್ನಡಿಗರು ಆಕ್ರೋಶ ಹೊರಹಾಕುತ್ತಲೇ ಇದ್ದಾರೆ. ಸರಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ (KSDL) ತಯಾರಿಸುವ ಉತ್ಪನ್ನಗಳ ಮಾರುಕಟ್ಟೆ ಬಲವರ್ಧನೆಯ ಅಂಗವಾಗಿ ತಮನ್ನಾ ಅವರನ್ನು ಎರಡು ವರ್ಷಗಳ ಅವಧಿಗೆ ಪ್ರಚಾರ ರಾಯಭಾರಿಯನ್ನಾಗಿ ನೇಮಿಸಿಕೊಳ್ಳಲಾಗಿರುವುದು ವಿವಾದದ ಕೇಂದ್ರಬಿಂದುವಾಗಿದೆ.
ಇದರ ಬೆನ್ನಲ್ಲೇ ಇದೀಗ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ಈ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ. ಮೈಸೂರಿನಲ್ಲಿ ಮಾತನಾಡಿರೋ ಅವರು, ರಾಜ್ಯ ಸರ್ಕಾರಕ್ಕೆ ಕನ್ನಡಿಗರು ಯಾರೂ ಸಿಕ್ಕಿಲ್ವಾ? ಕನ್ನಡದಲ್ಲಿ ಯಾರೂ ಮಾಡೆಲ್ಗಳೇ ಇಲ್ವಾ ಎಂದು ಕಿಡಿ ಕಾರಿದ್ದಾರೆ. ಹತ್ತಾರು ಕೋಟಿ ರೂಪಾಯಿ ಕೊಟ್ಟು ಅದ್ಯಾರೋ 'ತಮ್ಮಣ್ಣಾ' ಎನ್ನುವವರನ್ನು ಕರೆಸಿಕೊಳ್ಳಲಾಗಿದೆ. ಯಾಕೆ ರಶ್ಮಿಕಾ ಮಂದಣ್ಣ ಇರಲಿಲ್ವಾ ಎಂದು ಪ್ರಶ್ನಿಸಿದ್ದಾರೆ. ರಶ್ಮಿಕಾ ಅವರೂ ತಮನ್ನಾಗಿಂತಲೂ ಫೇಮಸ್ ಆಗಿದ್ರಲ್ವಾ ಎಂದು ಪ್ರಶ್ನಿಸಿರೋ ಅಶೋಕ ಅವರು, ಅಷ್ಟೇ ಏಕೆ, ಯಶ್ ಅವರಿಗೆ ಐದು ಕೋಟಿ ರೂಪಾಯಿ ಕೊಟ್ಟರೆ ಸಾಕಿತ್ತು, ಹೆಂಡ್ತಿ-ಮಕ್ಕಳು ಸಹಿತ ಬಂದಿರೋರು ಎಂದಿದ್ದಾರೆ.
ಆರ್.ಅಶೋಕ ಅವರ ಮಾತಿಗೆ ಬಹಳ ಜನ ಮೆಚ್ಚುಗೆ ಸೂಸಿದ್ದಾರೆ. ಕನ್ನಡದವರು ಎಷ್ಟೊಂದು ಸುಂದರ-ಸುಂದರಿಯರು ಇರುವಾಗ ಈ ರೀತಿ ಪರಭಾಷೆಯವರನ್ನು ತಂದಿರುವುದು ಅತ್ಯಂತ ವಿಷಾದ ಎಂದು ಹಲವರು ಹೇಳಿದ್ದರೆ, ಮತ್ತೆ ಕೆಲವರು, ಈಗ ಐದಾರು ಕೋಟಿ ಕೊಟ್ಟರೆ ಯಾವ ಸ್ಟಾರ್ ನಟರೂ ಬರಲ್ಲ ಬಿಡಿ ಎಂದೂ ಹೇಳಿದ್ದಾರೆ. ರಶ್ಮಿಕಾ ಮಂದಣ್ಣ ಕನ್ನಡಿಗರಿಗೆ ಸಾಕಷ್ಟು ಮೋಸ ಮಾಡಿದ್ದಾರೆ. ಅವರು ಆಗುವುದು ನಮಗೆ ಬೇಕಿಲ್ಲ ಎಂದು ಕೆಲವರು ಹೇಳಿದರೆ, ಯಶ್ ಬಗ್ಗೆ ಹೀಗೆ ಮಾತನಾಡಿರುವುದು ಸರಿಯಲ್ಲ ಎಂದು ಮತ್ತೆ ಕೆಲವರು ಅಸಮಾಧಾನ ಹೊರಹಾಕಿದ್ದಾರೆ.
ಅಂದಹಾಗೆ, ನಟಿ ತಮನ್ನಾ ಅವರನ್ನು ನೇಮಕ ಮಾಡಿಕೊಂಡಿರೋ ರಾಜ್ಯ ಸರ್ಕಾರ, ಕೆ.ಎಸ್.ಡಿ.ಎಲ್. ಸಂಸ್ಥೆಯ ವಾರ್ಷಿಕ ವಹಿವಾಟನ್ನು 2030ರ ಹೊತ್ತಿಗೆ 5 ಸಾವಿರ ಕೋಟಿ ರೂ.ಗಳ ಮಟ್ಟಕ್ಕೆ ಬೆಳೆಸುವ ಗುರಿ ಇಟ್ಟುಕೊಂಡಿದೆ. ಯುವಜನಾಂಗವನ್ನು ತಲುಪಲು ವ್ಯಾಪಕ ಪ್ರಸಾರ ಆಂದೋಲ ನಡೆಸಲಾಗುತ್ತಿದೆ. ಇದಕ್ಕಾಗಿ, ಸೋಷಿಯಲ್ ಮೀಡಿಯಾದಲ್ಲಿ ನಟಿ ತಮನ್ನಾ 30 ಲಕ್ಷಕ್ಕೂ ಹೆಚ್ಚು ಫಾಲೋಯರ್ಸ್ ಹೊಂದಿದ್ದಾರೆ ಎನ್ನುವ ಕಾರಣಕ್ಕೆ ಅವರನ್ನು ನೇಮಕ ಮಾಡಲಾಗಿದೆ ಎಂದಿದೆ. ಈ ಮೂಲಕ ಉತ್ತರ ಭಾರತದಲ್ಲಿ ಕೂಡ ಪ್ರತಿಷ್ಠಿತ ಮೈಸೂರು ಸ್ಯಾಂಡಲ್ ಸೋಪ್ ಸಹಿತ ನಮ್ಮ ಸಂಸ್ಥೆಯ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಸೃಷ್ಟಿಸಿಕೊಳ್ಳಲಾಗುವುದು ಎನ್ನುವುದು ಸರ್ಕಾರದ ಉದ್ದೇಶ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.