
ನಾಳೆ, ಅಂದರೆ 01 ಆಗಷ್ಟ್ 2025 ರಂದು 'ಕೊತ್ತಲವಾಡಿ' (Kothalavadi) ಚಿತ್ರ ತೆರೆಗೆ ಅಪ್ಪಳಿಸಲಿದೆ. ಈಗಾಗಲೇ ಕೊತ್ತಲವಾಡಿ ಚಿತ್ರದ ಬಗ್ಗೆ ಬಹಳಷ್ಟು ಕುತೂಹಲ ಸೃಷ್ಟಿಯಾಗಿದೆ. ಕನ್ನಡ ಸಿನಿಮಾ ಪ್ರೇಕ್ಷಕರು ಕೊತ್ತಲವಾಡಿ ಸಿನಿಮಾವನ್ನು ವೀಕ್ಷಿಸಲು ಕಾಯುತ್ತಿದ್ದರೆ, ಚಿತ್ರತಂಡ ಪ್ರೇಕ್ಷಕರ ಒಳ್ಳೆಯ ರೆಸ್ಪಾನ್ಸ್‌ಗಾಗಿ ಕಾಯುತ್ತಿದೆ. ಹಲವಾರು ಸಮೀಕ್ಷೆ, ಸಿನಿಮಾ ಪಂಡಿತರ ಲೆಕ್ಕಾಚಾರದ ಪ್ರಕಾರ, ಸಿನಿಮಾಗೆ ಉತ್ತಮ ಓಪನಿಂಗ್ ಸಿಗಬಹುದು ಎನ್ನಲಾಗುತ್ತಿದೆ.
ಪುಷ್ಪಾ ಅರುಣ್‌ಕುಮಾರ್ (Pushpa Arunkumar) ನಿರ್ಮಾಣ, ಶ್ರೀರಾಜ್ (Sriraj) ನಿರ್ದೇಶನದ 'ಕೊತ್ತಲವಾಡಿ' ಸಿನಿಮಾ ನಾಳೆ, 01 ಆಗಷ್ಟ್ 2025ರಂದು (01 August 2025) ಬಿಡುಗಡೆ ಆಗಲಿದೆ. 'ಕೊತ್ತಲವಾಡಿ' ಚಿತ್ರವು ಶ್ರೀರಾಜ್ ನಿರ್ದೇಶನದ ಮೊಟ್ಟಮೊದಲ ಚಿತ್ರವಾಗಿದೆ. ಈ ಮೊದಲು ಶ್ರೀರಾಜ್ ಅವರು ಕನ್ನಡದ ಖ್ಯಾತ ನಿರ್ದೇಶಕರಾದ ರವಿ ಶ್ರೀವತ್ಸ ಹಾಗೂ ಕೆವಿ ರಾಜು ಬಳಿ ಕೆಲಸ ಮಾಡಿ ಅನುಭವ ಪಡೆದಿದ್ದಾರೆ. ಇದೀಗ ತಮ್ಮ ಮೊಟ್ಟಮೊದಲ ಸಿನಿಮಾ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ ಶ್ರೀರಾಜ್.
ಕೊತ್ತಲವಾಡಿ ನಿರ್ಮಾಪಕಿ ಪುಷ್ಪಾ ಅರುಣ್‌ಕುಮಾರ್ ಬಹುತೇಕರಿಗೆ ಗೊತ್ತಿರುವಂತೆ, ಕನ್ನಡದ ನಟ, ಪ್ಯಾನ್ ಇಂಡಿಯಾ ಸ್ಟಾರ್ ಯಶ್ ಅವರ ತಾಯಿ. ಪುಷ್ಪಾ ಅರುಣ್‌ಕುಮಾರ್ ಹೆಸರಿನ ಶಾರ್ಟ್ ಫಾರಂ 'ಪಿಎ' (PA) ಪ್ರೊಡಕ್ಷನ್ ಹೌಸ್ ಮೂಲಕ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ಕೊತ್ತಲವಾಡಿ ಚಿತ್ರದ ಹೆಚ್ಚಿನ ಭಾಗವನ್ನು ಚಾಮರಾಜನಗರ ಜಿಲ್ಲೆಯ ಕೊತ್ತಲವಾಡಿ ಹಾಗೂ ಗುಂಡ್ಲುಪೇಟೆ ಏರಿಯಾದಲ್ಲಿ ಶೂಟಿಂಗ್ ಮಾಡಲಾಗಿದೆ. ಈ ಚಿತ್ರದ ಲೀಡ್ ರೋಲ್‌ನಲ್ಲಿ ನಟ ಪೃಥ್ವಿ ಅಂಬಾರ್ (Pruthvi Ambaar) ಹಾಗೂ ನಟಿ ಕಾವ್ಯಾ ಶೈವ (Kavya Shaiva) ನಟಿಸಿದ್ದಾರೆ.
ಕೊತ್ತಲವಾಡಿ ಚಿತ್ರದ ಹವಾ ಸದ್ಯ ಬಹಳಷ್ಟು ಜೋರಾಗಿದೆ. ನಿರ್ಮಾಪಕಿ ಪುಷ್ಪಾ ಅರುಣ್‌ಕುಮಾರ್, ನಿರ್ದೇಶಕ ಶ್ರೀರಾಜ್, ನಟ ಪೃಥ್ವಿ ಅಂಬಾರ್, ಕಾವ್ಯಾ ಶೈವ ಸೇರಿದಂತೆ ಇಡೀ ಟೀಮ್ ಪ್ರಚಾರಕಾರ್ಯದಲ್ಲಿ ನಿರತವಾಗಿದೆ. ಅದರಲ್ಲೂ ಮುಖ್ಯವಾಗಿ ತಾವು ಶೂಟಿಂಗ್ ಮಾಡಿರುವ ಚಾಮರಾಜನಗರದ 'ಕೊತ್ತಲವಾಡಿ' ಗ್ರಾಮಕ್ಕೆ ಹೋಗಿ ಅಲ್ಲಿನ ಜನರ ಜೊತೆ ಮಾತುಕತೆ ನಡೆಸಿದ್ದಾರೆ. ಅಲ್ಲಿ ನಟ ಪುನೀತ್ ರಾಜ್‌ಕುಮಾರ್ ಅವರ ಫೋಟೋ ಹಿಡಿದು ಪುಷ್ಪಾ ಅರುಣ್ ಕುಮಾರ್ ಅವರು ಸಾಕಷ್ಟು ಗಮನ ಸೆಳೆದಿದ್ದಾರೆ. ಅಲ್ಲಿನ ಸಿನಿಪ್ರಿಯರ ಪ್ರೀತಿ-ಅಭಿಮಾನ ಗಳಿಸಿದ್ದಾರೆ.
ಕೊತ್ತಲವಾಡಿ ಟೀಂ ಏನು ಹೇಳ್ತಿದೆ? ಹೋದಕಡೆಯಲ್ಲೆಲ್ಲಾ ಕೊತ್ತಲವಾಡಿ ಚಿತ್ರತಂಡಕ್ಕೆ ಅಭೂತಪೂರ್ವ ಸ್ವಾಗತ ದೊರಕಿದ್ದು, ಹೊಸಬರ ಹೊಸ ಪ್ರಯತ್ನವನ್ನು ಕನ್ನಡ ಸಿನಿಪ್ರೇಕ್ಷಕರು ಒಪ್ಪಿಕೊಳ್ಳುವ ಎಲ್ಲಾ ಲಕ್ಷಣಗಳು ಗೋಚರಿಸಿವೆ. ಈ ಮೊದಲು ಬಿಡುಗಡೆ ಆಗಿರುವ ಟ್ರೈಲರ್ ಭರವಸೆ ಹುಟ್ಟಿಸಿದೆ. ಇನ್ನೇನು ಮುಂದಿನ ಶುಕ್ರವಾರ (ಆಗಷ್ಟ್ 01) ತೆರೆಯ ಮೇಲೆ ಬಂದು ವಿಜೃಂಭಿಸಲಿದೆ 'ಕೊತ್ತಲವಾಡಿ'. ಈ ಮೂಲಕ 'ಕೊತ್ತಲವಾಡಿ' ಊರು ಗೊತ್ತಿಲ್ಲದ ಎಷ್ಟೋ ಜನಕ್ಕೆ ಪರಿಚಯ ಆಗಲಿದೆ. ಸಿನಿಮಾ ಬಿಡುಗಡೆ ಬಳಿಕ ಈ ಕೊತ್ತಲವಾಡಿ ಗ್ರಾಮ ವಿಶ್ವವಿಖ್ಯಾತಿ ಆದರೂ ಅಚ್ಚರಿಯೇನಿಲ್ಲ.
ಕೆಲಸದ ಬಗ್ಗೆ ಶ್ರದ್ಧೆ, ಅನುಭವ ಹಾಗೂ ಸಿನಿಮಾ ಪ್ರೀತಿ ಹೊಂದಿರುವ ಕೊತ್ತಲವಾಡಿ ಟೀಮ್ ಇದೀಗ ಬಿಡುಗಡೆಯ ಕ್ಷಣ ಅನುಭವಿಸುತ್ತಿದೆ. ತಮ್ಮ ಸಿನಿಮಾ ಬಗ್ಗೆ ಇಡೀ ಟೀಂ ಭರವಸೆ ಹೊಂದಿದೆ ಎಂಬುದು ತುಂಬಾ ಸ್ಪಷ್ವವಾಗಿಯೇ ಗೋಚರಿಸುತ್ತಿದೆ. ಸಿನಿಮಾ ನಿರ್ಮಾಣ, ಕಥೆಯ ಆಯ್ಕೆ ಸೇರಿದಂತೆ ಎಲ್ಲಾ ವಿಭಾಗಗಳ ಬಗ್ಗೆ ನಿರ್ಮಾಪಕರಾದ ಪುಷ್ಪಾ ಅರುಣ್‌ಕುಮಾರ್ ಅವರು ಆಳವಾಗಿ ಅಭ್ಯಾಸ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಅವರಿಗೆ ತಮ್ಮ ಸಿನಿಮಾ ಗೆಲ್ಲುವ ಬಗ್ಗೆ ಅಪಾರವಾದ ವಿಶ್ವಾಸವಿದೆ.
ನಿರ್ಮಾಪಕಿ ಪುಷ್ಪಾ ಅವರು ಕ್ಯಾಮೆರಾ ಮುಂದೆ ತುಂಬಾ ಆತ್ಮವಿಶ್ವಾಸದಿಂದ ಮಾತನ್ನಾಡಿದ್ದಾರೆ. ಇನ್ನು ನಿರ್ದೇಶಕ ಶ್ರೀರಾಜ್ ಅವರಿಗೆ ತಮ್ಮ ಕಥೆ ಆಯ್ಕೆ ಹಾಗೂ ನಿರ್ದೇಶನದ ಬಗ್ಗೆಯೂ ಒಳ್ಳೆಯ ಮಾತಿದೆ ಎಂಬ ಖುಷಿ ಇದೆ. ಆದರೆ, ಪ್ರೇಕ್ಷಕರು ತಮ್ಮ ಸಿನಿಮಾವನ್ನು ಹೇಗೆ ಸ್ವೀಕರಿಸಬಹುದು ಎಂಬ ಸಹಜ ಕುತೂಹಲ ಹಾಗು ಆತಂಕವೂ ಇದೆ. ನಟ ಪೃಥ್ವಿ ಅಂಬಾರ್ ಈಗಾಗಲೇ ಹೆಸರು ಮಾಡಿರುವ ನಟ, ಈ ಚಿತ್ರದ ಬಗ್ಗೆ ಪ್ರೀತಿ ಹಾಗೂ ಗೆಲ್ಲುವ ಭರವಸೆ ಇದೆ. ಕಾವ್ಯಾ ಶೈವ ಕೂಡ ಸೀರಿಯಲ್‌ನ ಫೇಮಸ್ ನಟಿ, ಸಿನಿಮಾ ಶ್ರದ್ಧೆ ಎದ್ದು ಕಾಣಿಸುತ್ತಿದೆ.
ಒಟ್ಟಿನಲ್ಲಿ, ನಾಳೆ ತೆರೆಗೆ ಅಪ್ಪಳಿಸಲಿರುವ ಕೊತ್ತಲವಾಡಿ ಚಿತ್ರದ ಬಗ್ಗೆ ಭಾರೀ ಕುತೂಹಲ ಸೃಷ್ಟಿಯಾಗಿದೆ. ಚಿತ್ರತಂಡಕ್ಕಿರುವ ಭರವಸೆ ನಿಜವಾಗಬಹುದೇ? ಫಲಿತಾಂಶ ತಿಳಿಯಲು ಇನ್ನೊಂದೇ ದಿನ ಬಾಕಿ ಇದೆ.. ನಾಳೆ, ಕೊತ್ತಲವಾಡಿ ಸಿನಿಮಾ ನೋಡಿದ ಸಿನಿಪ್ರೇಕ್ಷಕರ ರೆಸ್ಪಾನ್ಸ್ ಹೇಗಿದೆ ಅಂತ ನೋಡಬೇಕಿದೆ..!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.