
ಹಿರಿಯ ಖ್ಯಾತ ನಟಿ ಹಾಗೂ ರಾಜಕಾರಣಿ ಜಯಪ್ರದಾ ಅವರು ತಮ್ಮ ಸುಮಾರು 30 ವರ್ಷಗಳ ಸುದೀರ್ಘ ಸಿನಿಮಾ ಹಾಗೂ ರಾಜಕೀಯ ಜೀವನದ ಹಲವು ರೋಚಕ ಮತ್ತು ಅಪರೂಪದ ನೆನಪುಗಳನ್ನು ಮೆಲಕು ಹಾಕಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ದಿಗ್ಗಜ ನಟ ಶೋಭನ್ ಬಾಬು ಅವರೊಂದಿಗಿನ ಒಡನಾಟ, ಜೂನಿಯರ್ ಎನ್‌ಟಿಆರ್ ಮೇಲಿನ ಗೌರವ, ಹಿರಿಯ ನಿರ್ದೇಶಕ ದಾಸರಿ ನಾರಾಯಣ ರಾವ್ ಜೊತೆಗಿನ ಶೂಟಿಂಗ್ ಅನುಭವ ಹಾಗೂ ಎನ್‌ಟಿಆರ್ ಕರೆಯ ಮೇರೆಗೆ ರಾಜಕೀಯಕ್ಕೆ ಬಂದ ರೋಚಕ ಘಟನೆಗಳನ್ನು ಹಂಚಿಕೊಂಡಿದ್ದಾರೆ.
ತಮ್ಮ ವೃತ್ತಿಪರ ಮೌಲ್ಯಗಳ ಕುರಿತು ಮಾತನಾಡಿದ ಜಯಪ್ರದಾ, "ನಾನು ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ನಿರ್ದೇಶಕ ದಾಸರಿ ನಾರಾಯಣ ರಾವ್ ಅವರ ಚಿತ್ರದ ಈಜುಕೊಳದ (ಸ್ವಿಮ್ಮಿಂಗ್ ಪೂಲ್) ದೃಶ್ಯವೊಂದರಲ್ಲಿ ಬಿಕಿನಿ ಧರಿಸಬೇಕೆಂದು ಕೇಳಲಾಯಿತು. ನಾನಾಗ ಇನ್ನೂ ಚಿಕ್ಕ ಹುಡುಗಿ. ಬಿಕಿನಿ ಧರಿಸಲು ಖಡಾಖಂಡಿತವಾಗಿ ನಿರಾಕರಿಸಿ ಸೆಟ್‌ನಲ್ಲೇ ಕಣ್ಣೀರಿಟ್ಟೆ. ನನ್ನ ಪರಿಸ್ಥಿತಿ ಅರ್ಥಮಾಡಿಕೊಂಡ ದಾಸರಿ ನಾರಾಯಣ ರಾವ್ ಅವರು, ಬಿಕಿನಿ ಬದಲು ನನ್ನನ್ನು ನೀರಿನಲ್ಲಿದ್ದ ದೊಡ್ಡ ರಬ್ಬರ್ ಟೈರ್‌ನಲ್ಲಿ ಕೂರಿಸಿ ಆ ದೃಶ್ಯವನ್ನು ಚಿತ್ರೀಕರಿಸಿದರು. ಅಂದು ನಾನು ತೆಗೆದುಕೊಂಡ ನಿರ್ಧಾರದಿಂದಾಗಿ, ಸುಮಾರು 30 ವರ್ಷಗಳ ನನ್ನ ಸಿನಿ ಜರ್ನಿಯಲ್ಲಿ ಒಂದೇ ಒಂದು ದೃಶ್ಯದಲ್ಲೂ ಅಂತಹ ಅರೆಬರೆ ಉಡುಪು ಧರಿಸಲಿಲ್ಲ" ಎಂದು ತಿಳಿಸಿದ್ದಾರೆ.
ದಿವಂಗತ ನಟ ಶೋಭನ್ ಬಾಬು ತಮ್ಮನ್ನು ಅತ್ಯಂತ ಪ್ರೀತಿಯಿಂದ 'ಅತ್ತೆ' ಎಂದು ಕರೆಯುತ್ತಿದ್ದರು ಎಂದು ಜಯಪ್ರದಾ ನೆನಪಿಸಿಕೊಂಡರು. "ಶೂಟಿಂಗ್ ಸೆಟ್‌ನಲ್ಲಿ ಅವರು ನನ್ನನ್ನು ಕೇವಲ ನಮಸ್ಕಾರಕ್ಕೆ ಸೀಮಿತಗೊಳಿಸದೆ, ಕುಟುಂಬದ ಸದಸ್ಯರಂತೆ ಕಾಣುತ್ತಿದ್ದರು," ಎಂದರು. ಹಾಗೆಯೇ, ಜೂನಿಯರ್ ಎನ್‌ಟಿಆರ್ ಕೂಡ ಹಿರಿಯರ ಬಗ್ಗೆ ಅಪಾರ ಗೌರವ ಹೊಂದಿರುವ ನಟ ಎಂದು ಶ್ಲಾಘಿಸಿದರು.
ಇಷ್ಟೆಲ್ಲಾ ವರ್ಷಗಳ ಕಾಲ ನಟಿಸಿದರೂ, ಇಂದಿಗೂ ಪರದೆಯ ಮೇಲೆ ತನ್ನನ್ನು ತಾನು ನೋಡಿಕೊಳ್ಳುವಾಗ 'ನ್ಯೂ ಕಮರ್' (ಹೊಸಬರಂತೆ) ಟೆನ್ಷನ್ ಆಗುತ್ತದೆ. ತನ್ನ ಸೀರೆ, ಕೇಶವಿನ್ಯಾಸ ಹೇಗಿದೆಯೋ ಎಂದು ಆತಂಕಗೊಳ್ಳುವುದಾಗಿ ಅವರು ಮುಕ್ತವಾಗಿ ಒಪ್ಪಿಕೊಂಡರು. ಜೊತೆಗೆ, ಕೆ. ಬಾಲಚಂದರ್ ಅವರ ‘ಸುಜಾತಾ’ ಚಿತ್ರ ತನ್ನ ಮನಸ್ಸಿಗೆ ಅತ್ಯಂತ ಹತ್ತಿರವಾದ ಭಾವನಾತ್ಮಕ ಚಿತ್ರವಾಗಿದ್ದು, ಇಂದಿಗೂ ಆ ಚಿತ್ರದ ಹಾಡು ಕೇಳಿದರೆ ಕಣ್ಣಲ್ಲಿ ನೀರು ಬರುತ್ತದೆ ಎಂದರು.
ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿದ ಜಯಪ್ರದಾ, "ಹಿರಿಯ ಎನ್‌ಟಿಆರ್ ಅವರೇ ನನ್ನ ರಾಜಕೀಯ ಪ್ರವೇಶಕ್ಕೆ ಪ್ರೇರಣೆ. ಅವರು ಅಧಿಕಾರ ಕಳೆದುಕೊಂಡಿದ್ದ ಕಷ್ಟದ ಸಮಯದಲ್ಲಿ, ನಾನು ಬೆಂಗಳೂರಿನಲ್ಲಿ ಶೂಟಿಂಗ್‌ನಲ್ಲಿದ್ದಾಗ ಬೆಳಗಿನ ಜಾವ 5 ಗಂಟೆಗೆ ಅವರ ಕಚೇರಿಯಿಂದ ಕರೆ ಬಂತು. ಸಂಜೆ ಅವರನ್ನು ಭೇಟಿಯಾಗಲು ಹೋದಾಗ, ಬೇಗ ಮಲಗುವ ಅಭ್ಯಾಸವಿದ್ದ ಎನ್‌ಟಿಆರ್ ಅವರು ನನಗಾಗಿ ನಿದ್ದೆಯಿಂದ ಎದ್ದು ಬಂದು ಮಾತನಾಡಿದರು. ಅವರ ಕರೆಯ ಮೇರೆಗೆ ನಾನು ತೆಲುಗು ದೇಶಂ ಪಕ್ಷ (ಟಿಡಿಪಿ) ಸೇರಿದೆ" ಎಂದು ವಿವರಿಸಿದರು.
"ನೀವು ರಾಜಕೀಯಕ್ಕೆ ಹೋದರೆ ಸಿನಿಮಾ ಅವಕಾಶಗಳು ಕೈತಪ್ಪುತ್ತವೆ ಎಂದು ನಿರ್ಮಾಪಕರು ನನ್ನನ್ನು ಹೆದರಿಸಿದ್ದರು. ಆದರೆ, ಎನ್‌ಟಿಆರ್ ಅವರಿಗೆ ಮಾತು ಕೊಟ್ಟಿದ್ದರಿಂದ ನಾನು ಯಾವುದೇ ತ್ಯಾಗಕ್ಕೂ ಸಿದ್ಧವಾಗಿ ಅವರೊಂದಿಗೆ ನಿಂತೆ. ಎನ್‌ಟಿಆರ್ ಅವರ ಚೈತನ್ಯ ರಥ ಬಸ್ ಯಾತ್ರೆ ಹಾಗೂ ಜನರಿಗೆ ₹2 ಕ್ಕೆ ಒಂದು ಕೆಜಿ ಅಕ್ಕಿ ನೀಡಿದ ಯೋಜನೆಗಳು ನನ್ನ ಮೇಲೆ ಅಪಾರ ಪ್ರಭಾವ ಬೀರಿದವು. ಆ ಸ್ಫೂರ್ತಿಯಿಂದಲೇ ನಾನು ಉತ್ತರ ಪ್ರದೇಶದ ರಾಂಪುರದಲ್ಲಿ ಯಾವುದೇ ಬೆಂಬಲವಿಲ್ಲದೆ ಒಂಟಿಯಾಗಿ ಹೋರಾಡಿ ಸಂಸದೆಯಾಗಿ ಗೆದ್ದೆ. ಇದು ನನ್ನ ಆತ್ಮಕಥೆಯ ಅತ್ಯಂತ ಪ್ರಮುಖ ಅಧ್ಯಾಯವಾಗಲಿದೆ" ಎಂದು ಜಯಪ್ರದಾ ಹೆಮ್ಮೆಯಿಂದ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.