
ಸು ಫ್ರಂ ಸೋ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಸ್ವಾಮೀಜಿ ಪಾತ್ರದ ನೋಡಿದವರು ಅವರು ಯಾರಾದರೂ ಸ್ವಾಮೀಜಿಗಳನ್ನು ನಂಬುತ್ತಾರ ಅಂತ ಕೇಳಿದ್ದಾರೆ. ಈ ಪ್ರಶ್ನೆಗೆ ರಾಜ್ ಉತ್ತರಿಸಿದ್ದಾರೆ. ಅವರು ಯೋಗಿಯೊಬ್ಬರ ಪರಮಶಿಷ್ಯ.
ಸಿನಿಮಾ ನಟ, ನಟಿಯರು ಇತ್ತೀಚೆಗೆ ಆಧ್ಯಾತ್ಮದ ಕಡೆಗೆ ಆಕರ್ಷಿತರಾಗುತ್ತಿದ್ದಾರೆ. ಅನೇಕರು ಸದ್ಗರು ಅವರ ಜೊತೆಗೆ ಗುರುತಿಸಿಕೊಂಡಿದ್ದಾರೆ. ಶ್ರೀನಿಧಿ ಶೆಟ್ಟಿ, ಸಮಂತಾ ಮೊದಲಾದ ನಟಿಯರು ಸದ್ಗುರು ಅವರ ಆಶ್ರಮದಲ್ಲಿ ದೇವಿಯ ಪೂಜೆಯಲ್ಲಿ ತೊಡಗಿಸಿಕೊಂಡಿರುವ ದೃಶ್ಯಗಳನ್ನು ಸೋಷಲ್ ಮೀಡಿಯಾದಲ್ಲಿ ನೋಡುತ್ತಲೇ ಇರುತ್ತೇವೆ. ಆದರೆ ರಾಜ್ ಬಿ ಶೆಟ್ಟಿ ಅವರು ಕೊಂಚ ಭಿನ್ನ ಹಾದಿ ಹಿಡಿದಿದ್ದಾರೆ. ಇವರು ಹಿಮಾಲಯ ಯೋಗಿಗಳ ಪರಮ ಶಿಷ್ಯ ಅನ್ನೋ ವಿಚಾರ ಇತ್ತೀಚೆಗೆ ರಿವೀಲ್ ಆಗಿದೆ. ಅದೆಷ್ಟು ಶ್ರದ್ಧೆ, ಪ್ರೀತಿ ಇಟ್ಟುಕೊಂಡಿದ್ದಾರೆ ಅಂದರೆ ಅವರ ಫೋನ್ ಸ್ಕ್ರೀನ್‌ನಲ್ಲೇ ಆ ಯೋಗಿಗಳ ಭಾವಚಿತ್ರ ಇರೋದು ಹಲವರ ಗಮನ ಸೆಳೆದಿದೆ.
ರಾಜ್ ಬಿ ಶೆಟ್ಟಿ ಸದ್ಯ ಉತ್ತರ ಕರ್ನಾಟಕ ಪ್ರವಾಸದಲ್ಲಿದ್ದಾರೆ. ಅವರ ನಟನೆಯ 'ಸು ಫ್ರಂ ಸೋ' ಸಿನಿಮಾ ರಾಜ್ಯ ಮಾತ್ರ ಅಲ್ಲ, ದೇಶದೆಲ್ಲೆಡೆ ಜಯಭೇರಿ ಬಾರಿಸುತ್ತಿದೆ. ಕಾಂತಾರದ ರೀತಿ ಕನ್ನಡದಲ್ಲಿ ಮಾತ್ರ ರಿಲೀಸ್ ಆಗಿರೋ ಸಿನಿಮಾವನ್ನು ದೊಡ್ಡ ದೊಡ್ಡ ಸಂಸ್ಥೆಗಳು ಉತ್ತರ ಭಾರತ, ದಕ್ಷಿಣ ಭಾರತದಲ್ಲಿ ವಿತರಣೆ ಮಾಡಲು ಮುಂದೆ ಬಂದಿವೆ. ಕೆಜಿಎಫ್, ಪುಷ್ಪಾದಂಥಾ ಸಿನಿಮಾ ವಿತರಣೆ ಮಾಡಿದ್ದ ಅನಿಲ್ ಟಂಡಾನಿ ಒಡೆತನ ಎಎ ಫಿಲಂಸ್ ಉತ್ತರ ಭಾರತದಲ್ಲಿ ಈ ಸಿನಿಮಾ ರಿಲೀಸ್ ಮಾಡಿದರೆ, ದಕ್ಷಿಣದಲ್ಲಿ ದುಲ್ಖರ್ ಸಲ್ಮಾನ್ ಒಡೆತನದ ಸಂಸ್ಥೆ ವಿತರಣೆಯ ಹಕ್ಕು ಪಡೆದುಕೊಂಡಿದೆ. ಪಕ್ಕಾ ಕರಾವಳಿ ಸಿನಿಮಾವೊಂದು ರಾಜ್ ಶೆಟ್ಟಿ ಅವರ ದೂರದೃಷ್ಟಿಯ ಪರಿಣಾಮ ಈ ಲೆವೆಲ್‌ನಲ್ಲಿ ಮಿಂಚುತ್ತಿದೆ.
ಈ ಸಿನಿಮಾದ ಶೋ ಒಂದರಲ್ಲಿ ರಾಜ್ ಶೆಟ್ಟಿ ಪ್ರೇಕ್ಷಕರ ಜೊತೆಗೆ ಮಾತನಾಡುವಾಗ ಇದ್ದಕ್ಕಿದ್ದಂತೆ ಒಬ್ಬರು, 'ಸಿನಿಮಾದಲ್ಲಿ ಸ್ವಾಮೀಜಿ ಪಾತ್ರ ಮಾಡಿರೋ ನೀವು ಸ್ವಾಮೀಜಿ ಅವರನ್ನು ನಂಬುತ್ತೀರಾ' ಅನ್ನುವ ಪ್ರಶ್ನೆ ಕೇಳಿದ್ದರು. ಅದಕ್ಕೆ ರಾಜ್ ಶೆಟ್ಟಿ ಸಾಕ್ಷಿ ತೋರಿಸಿ ಉತ್ತರ ನೀಡಿದ್ದಾರೆ. ಅವರ ಮೊಬೈಲ್ ಸ್ಕ್ರೀನ್‌ನಲ್ಲಿ ಹಿಮಾಲಯದ ಮಹಾನ್ ಯೋಗಿ ನೀಮ್ ಕರೋಲಿ ಬಾಬಾ ಅವರ ಭಾವಚಿತ್ರವಿದೆ. ನೀಮ್ ಕರೋಲಿ ಬಾಬಾರನ್ನು ರಾಜ್ ಬಿ ಶೆಟ್ಟಿ ಶ್ರದ್ಧೆಯಿಂದ ನಂಬುತ್ತಾರೆ. ಅಷ್ಟಕ್ಕೂ ಈ ನೀಮ್ ಕರೋಲಿ ಬಾಬಾ ಯಾರು ಎಂಬ ಕುತೂಹಲ ಇರಬಹುದು.
ನೀಮ್ ಕರೋಲಿ ಬಾಬಾ ಮೂಲ ಹೆಸರು ಲಕ್ಷ್ಮಣ್ ನಾರಾಯಣ್ ಶರ್ಮಾ ಅಂತ. ಅಕ್ಬರ್‌ಪುರ್ ಎಂಬ ಉತ್ತರ ಪ್ರದೇಶದ ಹಳ್ಳಿಯಲ್ಲಿ ಹುಟ್ಟಿ ಬೆಳೆದವರು. ಬಾಲ್ಯದಿಂದಲೇ ಆಧ್ಯಾತ್ಮದಲ್ಲಿ ಆಸಕ್ತಿ. ಮನೆಯವರ ವಿರೋಧದ ನಡುವೆಯೂ ಮನೆ ಬಿಟ್ಟು ಆಳವಾದ ಆಧ್ಯಾತ್ಮ ಸಾಧನೆಯಲ್ಲಿ ಮುಳುತ್ತಾರೆ. ಹನುಮಾನ್ ಇವರ ಆರಾಧ್ಯ ದೈವ. ಮಹಾರಾಜ್ ಜೀ ಅಂತ ಇವರ ಶಿಷ್ಯರು ಇವರನ್ನು ಕರೆಯುತ್ತಾರೆ. 1990 ರಲ್ಲಿ ಜನಿಸಿದ ಇವರು 1973 ರಲ್ಲಿ ದೇಹ ತ್ಯಜಿಸುತ್ತಾರೆ. ಉತ್ತರ ಭಾರತದ ಹಿಮಾಲಯದ ತಪ್ಪಲಿನ ಕೈಂಚಿ ಧಾಮ್‌ನಲ್ಲಿ ಇವರ ಆಶ್ರಮವಿದೆ. ಇವರ ಹೆಸರಿನಲ್ಲಿ ನೂರಾರು ದೇವಾಲಯಗಳ ನಿರ್ಮಾಣವಾಗಿದೆ. ಇವರು ಮಾಡಿರುವ ಅನೇಕ ಪವಾಡಗಳು ಇವರ ಶಿಷ್ಯರ ವಲಯದಲ್ಲಿ ಮನೆಮಾತಾಗಿದೆ. ಮಹಾನ್ ಅಧ್ಯಾತ್ಮ ಸಾಧಕರಾದ ಈ ಸಂತರು ಇಂದಿಗೂ ತನ್ನನ್ನು ನಂಬಿದವರನ್ನು ಪ್ರೇಮದಿಂದ ಪೊರೆಯುತ್ತಾರೆ ಎಂಬ ನಂಬಿಕೆ ಇದೆ.
ರಾಜ್ ಬಿ ಶೆಟ್ಟಿ ಈ ಹಿಮಾಲಯದ ಯೋಗಿಗಳ ಶಿಷ್ಯರಾಗಿದ್ದು ಹೇಗೆ, ಇವರು ಆಧ್ಯಾತ್ಮದ ಸೆಳೆತದಲ್ಲೇ ಇನ್ನೂ ಮದುವೆ ಆಗಿಲ್ವಾ ಅನ್ನೋ ಪ್ರಶ್ನೆ ಕೇಳಿ ಬರುತ್ತಿದೆ. ಇದಕ್ಕೆಲ್ಲ ರಾಜ್ ಶೆಟ್ಟಿ ಅವರೇ ಉತ್ತರಿಸಬೇಕಿದೆ. ಸದ್ಯಕ್ಕಂತೂ ಅವರು ಸು ಫ್ರಂ ಸೋ ಪ್ರಚಾರದಲ್ಲೇ ಬ್ಯುಸಿ ಆಗಿದ್ದಾರೆ. ಮುಂದೆಂದಾದರೂ ಈ ಬಗ್ಗೆ ಮಾತನಾಡಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.