
ಬೆಂಗಳೂರು (ಜೂ. 05): ಕೊನೆಗೂ ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ‘ಕೋಟಿಗೊಬ್ಬ 3’ ಚಿತ್ರಕ್ಕೆ ನಾಯಕಿ ಸಿಕ್ಕಿದ್ದಾರೆ. ಈಕೆ ಮಲಯಾಳಿ ಕುಟ್ಟಿ. ಹೆಸರು ಮಡೋನ ಸೆಬಾಸ್ಟಿಯನ್. ತಮಿಳು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಹೆಸರು ಮಾಡಿರುವ ನಟಿ. ಮಲಯಾಳಂನ ಅತ್ಯಂತ ಜನಪ್ರಿಯ ಚಿತ್ರ ‘ಪ್ರೇಮಂ’ನಲ್ಲಿ ಕಾಣಿಸಿಕೊಂಡ ಹುಡುಗಿ ಈಕೆ. ‘ಪವರ್ ಪಾಂಡಿ’, ‘ಕಿಂಗ್ ಲಯರ್’, ‘ಜುಂಗ’ ಮುಂತಾದ ಚಿತ್ರಗಳಲ್ಲಿ ನಟಿಸಿ ಮೆಚ್ಚುಗೆ ಗಳಿಸಿದ ಈ ನಟಿಯನ್ನು ನಿರ್ಮಾಪಕ ಸೂರಪ್ಪ ಬಾಬು ಈಗ ಕನ್ನಡಕ್ಕೆ ಕರೆತರುತ್ತಿದ್ದಾರೆ.
ಕಾರ್ತಿಕ್ ನಿರ್ದೇಶನದ ಈ ‘ಕೋಟಿಗೊಬ್ಬ 3’ ಚಿತ್ರಕ್ಕೆ ಸದ್ಯದಲ್ಲೇ ಚಿತ್ರೀಕರಣ ಶುರುವಾಗಿದೆ. ಈ ‘ಪ್ರೇಮಂ’ ನಾಯಕಿ ಕನ್ನಡಕ್ಕೆ ಬರುವುದಕ್ಕೆ ಕಾರಣ ಅಂಬಿ. ತಮಿಳಿನ ‘ಪವರ್ ಪಾಂಡಿ’ ಚಿತ್ರದ ರಿಮೇಕ್ ‘ಅಂಬಿ ನಿಂಗ್ ವಯಸ್ಸಾಯ್ತೋ’. ಮೂಲ ಚಿತ್ರದಲ್ಲಿ ಮಡೋನ ಸೆಬಾಸ್ಟಿಯನ್ ಮಾಡಿದ ಪಾತ್ರವನ್ನೇ ಕನ್ನಡ ರಿಮೇಕ್‌ನಲ್ಲಿ ಶ್ರುತಿ ಹರಿಹರನ್ ಮಾಡುತ್ತಿದ್ದಾರೆ. ಆ ಚಿತ್ರದಲ್ಲಿ ಸುದೀಪ್ ಕೂಡ ಮುಖ್ಯ ಪಾತ್ರ ಮಾಡುತ್ತಿದ್ದಾರೆ. ಮೂಲ ಚಿತ್ರದಲ್ಲಿ ಮಡೋನ ಅವರ ಅಭಿನಯವನ್ನು ನೋಡಿದ ನಿರ್ದೇಶಕ ಕಾರ್ತಿಕ್ ಹಾಗೂ ಸುದೀಪ್ ‘ಕೋಟಿಗೊಬ್ಬ 3’ ಚಿತ್ರಕ್ಕೆ ಇವರೇ ನಾಯಕಿ ಆಗಲಿ ಎಂದು ನಿರ್ಧರಿಸಿದ್ದಾರೆ.
‘ಕತೆಗೆ ಸೂಕ್ತವಾಗುವಂತಹ ಮುಖ. ಹೋಮ್ಲಿ ಫೇಸ್. ಸುದೀಪ್ ಅವರಿಗೆ ಒಳ್ಳೆಯ ಜೋಡಿ ಆಗುತ್ತಾರೆ. ಜತೆಗೆ ಪ್ರೇಮಂ ಹಾಗೂ ಪವರ್ ಪಾಂಡಿ ಚಿತ್ರಗಳಲ್ಲಿ ಈಕೆಯ ನಟನೆ ನೋಡಿದ ಮೇಲೆ ನಮ್ಮ ಚಿತ್ರಕ್ಕೆ ನಾವು ಹುಡುಕುತ್ತಿದ್ದ ಪ್ರತಿಭಾವಂತ ನಟಿ ಈಕೆಯೇ ಎನ್ನುವ ನಿರ್ಧಾರಕ್ಕೆ ಬರಲಾಯಿತು. ಕತೆಗೆ ಸೂಕ್ತ ಎಂಬುದನ್ನು ನಿರ್ದೇಶಕ ಹಾಗೂ ಚಿತ್ರದ ನಾಯಕ ಸುದೀಪ್ ಅವರು ಒಪ್ಪಿಕೊಂಡ ಮೇಲೆಯೇ ಮಡೋನ ಸೆಬಾಸ್ಟಿಯನ್ ಅವರನ್ನು ಕನ್ನಡಕ್ಕೆ ಕರೆತರುತ್ತಿದ್ದೇವೆ’ ಎನ್ನುತ್ತಾರೆ ನಿರ್ಮಾಪಕ ಸೂರಪ್ಪ ಬಾಬು.
ಜೂನ್ 10 ರಿಂದ 40 ದಿನಗಳ ಕಾಲ ಸರ್ಬಿಯಾ ದೇಶದಲ್ಲಿ ನಡೆಯಲಿರುವ ಚಿತ್ರೀಕರಣದಲ್ಲಿ ಸುಮಾರು ೫೨ ಮಂದಿ ಪಾಲ್ಗೊಳ್ಳಲಿದ್ದಾರೆ. ಈ ಹಂತದಲ್ಲಿ ನಟ ಸುದೀಪ್ ಜತೆ ಮಡೋನ ಸೆಬಾಸ್ಟಿಯನ್ ಕೂಡ ಪಾಲ್ಗೊಳ್ಳಲಿದ್ದಾರೆ. ಒಟ್ಟು ಎರಡು ಅಥವಾ ಮೂರು ಹಂತಗಳಲ್ಲಿ ‘ಕೋಟಿಗೊಬ್ಬ 3’ ಚಿತ್ರಕ್ಕೆ ಶೂಟಿಂಗ್ ನಡೆಯಲಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.