
ಬೆಂಗಳೂರು (ಅ. 04): ‘ದುರ್ಗದ ಹುಲಿ’ ಎಂಬ ಪವರ್‌ಫುಲ್ ಟೈಟಲ್ ಈಗಾಗಲೇ ರಿಜಿಸ್ಟರ್ ಆಗಿದೆ. ಅದೇ ಹೆಸರಲ್ಲಿ ಚಿತ್ರದುರ್ಗದ ಇತಿಹಾಸ ಹೇಳುವ ಕತೆ ಹೆಣೆಯಲಾಗುತ್ತಿದೆ. ಮಾತುಗಳನ್ನು ಪೋಣಿಸಲಾಗುತ್ತಿದೆ. ಈ ಚಿತ್ರದ ನಾಯಕನ ಪಾತ್ರದಲ್ಲಿ ಹುಲಿ ಮೀಸೆ ತಿರುವಲಿರುವುದು ಕಿಚ್ಚ ಸುದೀಪ್. ಇಂಟರೆಸ್ಟಿಂಗ್ ಅಂದರೆ ಈ ಚಿತ್ರದ ನಿರ್ದೇಶನದ ಹೊಣೆಯನ್ನೂ ಸುದೀಪ್ ಹೊತ್ತುಕೊಂಡಿದ್ದಾರೆ ಎನ್ನಲಾಗಿದೆ.
ಅಭಿಮಾನಿಗಳಿಗೆ ಶಿವಣ್ಣ ಖಡಕ್ ವಾರ್ನಿಂಗ್ !
ಇದು ಈಗ ಶುರುವಾದ ಹೊಸ ಯೋಜನೆ ಅಲ್ಲ. ‘ವೀರ ಮದಕರಿ’ ಚಿತ್ರದ ಸಮಯದಲ್ಲೇ ಈ ಚಿತ್ರಕ್ಕೆ ಕಿಚ್ಚ ಪ್ಲಾನ್ ಮಾಡಿಕೊಂಡಿದ್ದು, ಅದರ ಕೆಲಸಗಳನ್ನು ಕೆಲವು ತಿಂಗಳ ಹಿಂದಷ್ಟೇ ಶುರು ಮಾಡಿಕೊಂಡಿದ್ದಾರೆ. ಹಳೆಯ ಯೋಜನೆ ಪ್ರಕಾರ 2019ಕ್ಕೆ ಚಿತ್ರಕ್ಕೆ ಚಾಲನೆ ಕೊಟ್ಟು, 2020ರಲ್ಲಿ ಕೊನೆಯಲ್ಲಿ ಚಿತ್ರವನ್ನು ಬಿಡುಗಡೆ ಮಾಡಬೇಕಾಗಿತ್ತು. ಅದಕ್ಕೆ ತಕ್ಕಂತೆ ಕೆಲಸಗಳು ನಡೆಯುತ್ತಿವೆ. ಮುಂಬೈನ ನಿರ್ಮಾಣ ಸಂಸ್ಥೆ ಜತೆಗೆ ಚಿತ್ರದ ನಿರ್ಮಾಣದ ಕುರಿತು ಈಗಾಗಲೇ ಮಾತುಕತೆ ಕೂಡ ಮಾಡಲಾಗಿದೆ.
ಚಿತ್ರಕ್ಕೆ ‘ದುರ್ಗದ ಹುಲಿ’ ಅಥವಾ ‘ನಾಯಕ’ ಎನ್ನುವ ಹೆಸರುಗಳು ಇಡುವ ಸಾಧ್ಯತೆ ಇದ್ದು, ಬಹುತೇಕ ‘ದುರ್ಗದ ಹುಲಿ’ ಎನ್ನುವ ಟೈಟಲ್ ಅಂತಿಮಗೊಳ್ಳುವ ಸಾಧ್ಯತೆಗಳಿವೆ. ಐದಾರು ತಿಂಗಳುಗಳಿಂದ ಈ ಚಿತ್ರದ ಕತೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆಯುವ ಕೆಲಸ ನಡೆಯುತ್ತಿದೆ.
ದುರ್ಗದ ಹುಲಿಗೆ ಗೊಂದಲ ಯಾಕೆ?
ಈ ನಡುವೆ ರಾಕ್‌ಲೈನ್ ನಿರ್ಮಾಣದಲ್ಲಿ, ರಾಜೇಂದ್ರಸಿಂಗ್‌ಬಾಬು ನಿರ್ದೇಶನದಲ್ಲಿ ‘ಗಂಡುಗಲಿ ಮದಕರಿ ನಾಯಕ’ ಸಿನಿಮಾ ಸೆಟ್ಟೇರುತ್ತಿದೆ. ಈ ಚಿತ್ರಕ್ಕೆ ದರ್ಶನ್ ಅವರೇ ನಾಯಕ ಎಂಬುದನ್ನು ಈಗಾಗಲೇ ರಾಕ್‌ಲೈನ್ ವೆಂಕಟೇಶ್ ಅವರೇ ಘೋಷಿಸಿದ್ದಾರೆ.
ಈಗ ಅದೇ ದುರ್ಗದ ಕೋಟೆಯ ಮದಕರಿ ನಾಯಕನ ಕತೆಯನ್ನು ಮುಂದಿಟ್ಟುಕೊಂಡು ‘ದುರ್ಗದ ಹುಲಿ’ ಮಾಡಲಿಕ್ಕೆ ಹೊರಟಿರುವ ಸುದೀಪ್ ಅವರಲ್ಲಿ ‘ಗಂಡುಗಲಿ ಮದಕರಿ ನಾಯಕ’ ಚಿತ್ರದ ಘೋಷಣೆಯಿಂದ ಗೊಂದಲ ಶುರುವಾಗಿದೆಯಂತೆ. ಆದರೂ ಚಿತ್ರದುರ್ಗದ ಪಾಳೆಗಾರರ ಮೇಲೊಂದು ಸಿನಿಮಾ ಮಾಡುವುದು ಸುದೀಪ್ ಅವರ ಮಹದಾಸೆ. ತಮ್ಮ ಈ ಮಹದಾಸೆ ಮತ್ತೊಬ್ಬ ಸ್ಟಾರ್ ನಟನಿಗೆ ಸ್ಪರ್ಧೆ ಎನ್ನುವಂತೆ ಬಿಂಬಿತವಾಗುವ ಅಪಾಯಗಳಿದ್ದು, ಆ ಬಗ್ಗೆ ಕೂಡ ಸುದೀಪ್ ಯೋಚಿಸುತ್ತಿದ್ದಾರೆಂಬುದು ಅವರ ಆಪ್ತ ಮೂಲಗಳ ಮಾಹಿತಿ.
ಒಟ್ಟಿನಲ್ಲಿ ಬೇರೆ ಬೇರೆ ಹೆಸರಿನಲ್ಲಿ ಇಬ್ಬರು ಸ್ಟಾರ್‌ಗಳ ನಡುವೆ ಮದಕರಿ ನಾಯಕ ಸದ್ದು ಮಾಡುತ್ತಿದ್ದಾರೆ. ಯಾರಿಗೆ ಒಲಿಯುತ್ತಾರೆ ಈ ಪಾಳೆಗಾರ ಎನ್ನುವ ಕುತೂಹಲದ ಜತೆಗೆ ಇಬ್ಬರು ಸ್ಟಾರ್‌ಗಳು ಒಬ್ಬರೇ ಪಾಳೆಗಾರನ ಜೀವನ ಚರಿತ್ರೆಯನ್ನು ಬೇರೆ ಬೇರೆ ರೀತಿಯಲ್ಲಿ ತೋರಿಸುವುದಕ್ಕೆ ಹೊರಟಿದ್ದಾರೆಯೇ ಎನ್ನುವ ಚರ್ಚೆಯೂ ಇದೆ. ಇದರ ನಡುವೆ ಸಾಹಿತಿ ಬಿಎಲ್ ವೇಣು ಅವರ ಕಾದಂಬರಿ ಆಧರಿಸಿ ಅಧಿಕೃತವಾಗಿ ಪ್ರಕಟಣೆಯಾಗಿರುವ ‘ಗಂಡುಗಲಿ ಮದಕರಿ ನಾಯಕ’ ಚಿತ್ರಕ್ಕೆ ಬಿ ಎಲ್ ವೇಣು ಅವರೇ ಚಿತ್ರಕತೆ, ಸಂಭಾಷಣೆ ಬರೆಯುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.