ಕ್ಯಾಮೆರಾ ಮುಂದೆ ಜಗ್ಗೇಶ್ ಭಾವುಕರಾಗಿದ್ದು ಯಾಕೆ?

By Web DeskFirst Published Oct 1, 2018, 1:27 PM IST
Highlights

ಚಿತ್ರೋದ್ಯಮಕ್ಕೆ ಬಂದು ಹಲವು ವರ್ಷಗಳೇ ಕಳೆದವು. ಎಲ್ಲಾ ರೀತಿಯ ಅನುಭವವೂ ಆಗಿದೆ. ಹಳಬರು ಈಗಲೂ ಹಾಗೆಯೇ ಇದ್ದಾರೆ. ಹೊಸ ಪೀಳಿಗೆಯಲ್ಲಿ ಅಶಿಸ್ತು ಕಾಣುತ್ತಿದೆ. ಅವರೆಲ್ಲ ದುಶ್ಚಟಗಳಲ್ಲೇ ಬದುಕಿದೆ ಎಂದು ಭಾವಿಸಿರುವ ಹಾಗೆ ಕಾಣುತ್ತಿದೆ. ಕಲೆಗೆ ಗೌರವ ನೀಡಬೇಕು. ನಟನೆಗೆ ಶ್ರದ್ಧೆ, ಶಿಸ್ತು ಬೇಕು. ಉದ್ಯಮದ ಗೌರವ ಕಾಪಾಡಬೇಕು- ಜಗ್ಗೇಶ್ 

ಬೆಂಗಳೂರು (ಅ. 01): ಸೆಟ್‌ನಲ್ಲಿದ್ದಾಗ ನಾನೆಲ್ಲೂ ಬಹಿರಂಗವಾಗಿ ತೋರಿಸಿಕೊಂಡಿಲ್ಲ. ಆದ್ರೆ, ಕ್ಯಾಮರಾ ಮುಂದೆ ನಿಂತಾಗ ನನ್ನೊಳಗೆ ನಾನೇ ಕಣ್ಣೀರು ಹಾಕಿದ್ದೇನೆ. ಯಾರಿಗೂ ಕಾಣದ ಹಾಗೆ ಅಳುತ್ತಲೇ ಅಭಿನಯಿಸಿದ್ದೇನೆ !

ನಟ ಜಗ್ಗೇಶ್, ತುಸು ಭಾವುಕರಾಗಿ ಮಾತನಾಡಿದರು. ಸಿನಿಜರ್ನಿಯ ಇಷ್ಟು ವರ್ಷಗಳಲ್ಲಿ ತಮಗೆ ಎಂದು ಆಗದ ಅನುಭವ ಈ ಚಿತ್ರದ ಸೆಟ್‌ಲ್ಲಿ ಆಯಿತು ಅಂತಲೇ ಮಾತಿಗೆ ಮುನ್ನುಡಿ ಬರೆದರು. ಅವರು ಮಾತನಾಡಿದ್ದು ‘ಪ್ರೀಮಿಯರ್ ಪದ್ಮಿನಿ’ ಚಿತ್ರದಲ್ಲಿನ ತಮ್ಮ ಪಾತ್ರದೊಳಗಿನ ಅನುಭವದ ಕುರಿತು. ಈ ಚಿತ್ರಕ್ಕೆ ಜಗ್ಗೇಶ್ ನಾಯಕ ನಟರು. ನಟಿ, ನಿರ್ದೇಶಕಿ ಶ್ರುತಿ ನಾಯ್ಡು ಇದರ ನಿರ್ಮಾಪಕರು.ರಮೇಶ್ ಇಂದಿರಾ ಈ ಚಿತ್ರದ ನಿರ್ದೇಶಕ. ಚಿತ್ರಕ್ಕೆ ಈಗಾಗಲೇ ಮುಕ್ಕಾಲು ಭಾಗದ ಚಿತ್ರೀಕರಣ ಮುಗಿದಿದೆ.

ಚಿತ್ರೀಕರಣದ ಕ್ಸೈಮ್ಯಾಕ್ಸ್ ಹಂತದಲ್ಲಿ ಬೆಂಗಳೂರಿನ ಕಂಠೀರವ ಸ್ಟುಡಿಯೋ ಹುಲ್ಲು ಹಾಸಿನ ಮೇಲೆ ಚಿತ್ರತಂಡ ಮಾಧ್ಯಮದ ಮುಂದೆ ಮಾತಿಗೆ ಕುಳಿತಾಗ, ಜಗ್ಗೇಶ್ ಚಿತ್ರದಲ್ಲಿನ ಪಾತ್ರ, ಚಿತ್ರೀಕರಣದ ಅನುಭವದ ಜತೆಗೆ ತಮ್ಮ ಸಿನಿ ಬದುಕಿನ ಹಲವು ಸಂಗತಿ ಹೇಳಿಕೊಂಡರು.

- ಚಿತ್ರೋದ್ಯಮಕ್ಕೆ ಬಂದು ಹಲವು ವರ್ಷಗಳೇ ಕಳೆದವು. ಎಲ್ಲಾ ರೀತಿಯ ಅನುಭವವೂ ಆಗಿದೆ. ಹಳಬರು ಈಗಲೂ ಹಾಗೆಯೇ ಇದ್ದಾರೆ. ಹೊಸ ಪೀಳಿಗೆಯಲ್ಲಿ ಅಶಿಸ್ತು ಕಾಣುತ್ತಿದೆ. ಅವರೆಲ್ಲ ದುಶ್ಚಟಗಳಲ್ಲೇ ಬದುಕಿದೆ ಎಂದು ಭಾವಿಸಿರುವ ಹಾಗೆ ಕಾಣುತ್ತಿದೆ. ಕಲೆಗೆ ಗೌರವ ನೀಡಬೇಕು. ನಟನೆಗೆ ಶ್ರದ್ಧೆ, ಶಿಸ್ತು ಬೇಕು. ಉದ್ಯಮದ ಗೌರವ ಕಾಪಾಡಬೇಕು.

- ಶೂಟಿಂಗ್ ಶುರುವಾಗುವ ಮುಂಚೆ ಕತೆ ಕೇಳಿದ್ದೆ, ಪಾತ್ರದ ಬಗ್ಗೆಯೂ ತಿಳಿದುಕೊಂಡಿದ್ದೆ. ಆದ್ರೆ ನನಗದು ಆಗ ಅಷ್ಟು ಪ್ರಭಾವ ಬೀರಿರಲಿಲ್ಲ. ಕ್ಯಾಮರಾ ಮುಂದೆ ಹೋಗಿ ನಿಂತಾಗಲೇ ಗೊತ್ತಾಗಿದ್ದು ಅದರ ಮಹತ್ವ. ಆಧುನಿಕ ಬದುಕಿನ ಶೈಲಿಗೆ ಸಿಕ್ಕ ವಿವಾಹಿತ ವ್ಯಕ್ತಿಗಳನ್ನು ಪ್ರತಿನಿಧಿಸುವ ಪಾತ್ರ. ಅನೇಕ ಗೊಂದಲ, ತಾಕಲಾಟ, ತೋಳಲಾಟಗಳು ಅಲ್ಲಿವೆ. ಅಷ್ಟಾಗಿ ತಾಳ್ಮೆ ಕಳೆದುಕೊಳ್ಳದೆ ಎಲ್ಲವನ್ನು ಹೇಗೆಲ್ಲ ನಿಭಾಯಿಸಿ,ಯಶಸ್ಸು ಕಾಣುತ್ತಾನೆ ಅನ್ನೋದನ್ನು ಆ ಪಾತ್ರ ಹೇಳುತ್ತದೆ. ಇಂತಹ ಪಾತ್ರ ಸಿಕ್ಕಿದ್ದು ಇದೇ ಮೊದಲು.

- ಪಾತ್ರಕ್ಕಿಲ್ಲಿ ಹಲವು ಮುಖಗಳಿವೆ. ಎಂಥದ್ದೇ ಕಷ್ಟ, ಸಂಕಷ್ಟ ಬಂದರೂ ತಾಳ್ಮೆಯಿಂದ ಎಲ್ಲವನ್ನು ನಿಭಾಯಿಸುವ ಪಾತ್ರದ ಗುಣವೇ ವಿಶೇಷ. ಸಣ್ಣ-ಸಣ್ಣ ಕಾರಣಕ್ಕೆ ಹೆಂಡತಿ ವಿಚ್ಚೇಧನ ಬಯಸಿದಾಗ,ಆಕೆಗೆ ತಾನೇ ಮುಂದೆ ನಿಂತು ವಿಚ್ಚೇದನ ಕೊಡಿಸುವ ಆತನ ರೀತಿಯೇ ವಿಭಿನ್ನ.ಆ ಪಾತ್ರದಲ್ಲಿ ನಾನಾಗಿ ನಿಂತಾಗ ಯಾರಿಗೂ ಗೊತ್ತಿಲ್ಲದೆ ಕಣ್ಣೀರಿಟ್ಟಿದ್ದೇನೆ.

- ಜಗ್ಗೇಶ್ ಇಷ್ಟು ಹೇಳುವ ಮುನ್ನ ಮೊದಲು ಮೈಕ್ ಹಿಡಿದು ಮಾತನಾಡಿದ್ದು ನಿರ್ಮಾಪಕಿ ಶ್ರುತಿ ನಾಯ್ಡು. ಈಗಷ್ಟೇ ಹಿರಿಯ ನಟ ಜಗ್ಗೇಶ್ ಹಾಗೂ ಮಧುಬಾಲ ಪಾತ್ರಗಳ ಶೂಟಿಂಗ್ ಕಂಪ್ಲೀಟ್ ಆಯಿತು. ಚಿತ್ರದ ಈ ಪಾತ್ರಗಳಿಗೆ ಇಂತಹ ಅನುಭವಿ ನಟರು ಸಿಕ್ಕಿದ್ದು ನನ್ನ ಪುಣ್ಯ. ಅವರೆಲ್ಲರ ಅಭಿನಯ ಅತ್ಯಾದ್ಭುತ’ಎಂದರು.

ಆನಂತರದ ಮಾತಿನ ಸರದಿ ಬಹುಭಾಷೆ ನಟಿ ಮಧುಬಾಲ ಅವರದ್ದು. ‘ ಐ ಲವ್ ಕನ್ನಡ..’ ಅಂತಲೇ ಮಾತು ಶುರು ಮಾಡಿದರು. ಕನ್ನಡದಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಿದ್ದೇನೆ ಅಂತ ಖುಷಿ ಆಗಿದೆ ’ಅಂದರು. ನಿರ್ದೇಶಕ ರಮೇಶ್ ಇಂದಿರಾ, ನಟಿ ಹಿತಾ ಚಂದ್ರಶೇಖರ್, ಪ್ರಮೋದ್, ವಿವೇಕ್ ಅವಸರದಲ್ಲೇ ಮಾತನಾಡಿ, ತಮ್ಮ ಪಾತ್ರಗಳ ಬಗ್ಗೆ ಹೇಳಿಕೊಂಡರು. ಅಲ್ಲಿಗೆ ಮಳೆ ಜೋರಾಯಿತು. ಅಲ್ಲಿದ್ದವರೆಲ್ಲರೂ ರಕ್ಷಣೆಗೆ ಕೋಡೆಗಳ ಮೊರೆ ಹೋದರು. ಮಾತು ನಿಂತಿತು, ಮಳೆ ಸುರಿಯ ತೊಡಗಿತು.

click me!