
ಮಧುಸೂದನ್ ನಿರ್ದೇಶಿಸಿ, ಪದ್ಮಸಾಲಿ ಆರ್ ಚಂದ್ರಶೇಖರ್ ನಿರ್ಮಾಣದ ‘3 ಘಂಟೆ 30 ದಿನ 30 ಸೆಕೆಂಡ್’ ಚಿತ್ರದಲ್ಲಿ ಕಾವ್ಯ ಶೆಟ್ಟಿ ಪತ್ರಕರ್ತೆಯಾಗಿ ಕಾಣಿಸಿಕೊಂಡಿದ್ದಾರೆ. ಕಾವ್ಯ ಶೆಟ್ಟಿ ಈ ಚಿತ್ರದಲ್ಲಿ ಪತ್ರಕರ್ತೆಯಾಗುವುದಕ್ಕೆ ಕಾರಣವಾಗಿರುವುದು ಅರ್ನಾಬ್ ಗೋಸ್ವಾಮಿ. ‘ನಾಯಕ ಲಾಯರ್. ಈ ಲಾಯರ್ ಜತೆ ನಾಯಕಿಗೆ ಸಿಕ್ಕಾಪಟ್ಟೆ ಕೋಪ, ಮುನಿಸು, ಹೋರಾಟ ಇರುತ್ತದೆ. ತರ್ಕವಿಲ್ಲದೆ ವಾದ ಮಾಡುವ ಲಾಯರ್‌ನನ್ನು ಎದುರಿಸುವುದಕ್ಕೆ ನಾಯಕಿಯಾಗಿ ಎಂಥ ಕ್ಯಾರೆಕ್ಟರ್ ಇದ್ದರೆ ಚೆಂದ ಎಂದುಕೊಂಡಾಗ ನೆನಪಿಗೆ ಬಂದಿದ್ದೇ ಅರ್ನಾಬ್ ಗೋಸ್ವಾಮಿ.
ದೃಶ್ಯ ಮಾಧ್ಯಮದಲ್ಲಿ ತಮ್ಮದೇ ಆದ ಸ್ಟಾರ್‌ಡಮ್ ಬೆಳೆಸಿಕೊಂಡಿರುವ ಅರ್ನಾಬ್ ರೀತಿಯಲ್ಲೇ ಕಾವ್ಯ ಶೆಟ್ಟಿ ಅವರ ಪಾತ್ರವನ್ನು ರೂಪಿಸಲಾಗಿದೆ. ಈ ಚಿತ್ರದಲ್ಲಿ ಟಿವಿ ವಾಹಿನಿಯಲ್ಲಿ ಕೆಲಸ ಮಾಡುವ ಕಾವ್ಯ ಶೆಟ್ಟಿ ಅವರು ಅರ್ನಾಬ್ ಅವರಂತೆಯೇ ರೆಬೆಲ್ ಆಗಿರುತ್ತಾರೆ. ಹೀಗಾಗಿ ಚಿತ್ರದಲ್ಲಿ ಕಾವ್ಯ ಶೆಟ್ಟಿ ಲೇಡಿ ಅರ್ನಾಬ್’ ಎನ್ನುತ್ತಾರೆ ನಿರ್ದೇಶಕರು. ಇಂಥದ್ದೊಂದು ಪಾತ್ರ ಸಿಕ್ಕಿರುವುದಕ್ಕೆ ಕಾವ್ಯ ಶೆಟ್ಟಿ ಖುಷಿ ವ್ಯಕ್ತಪಡಿಸುತ್ತಾರೆ.
‘ತುಂಬಾ ಸವಾಲಿನ ಪಾತ್ರವಾಗಿದ್ದು, ಇಷ್ಟಪಟ್ಟು ಪಾತ್ರವನ್ನು ನಿಭಾಯಿಸಿದ್ದೇನೆ’ ಎನ್ನುತ್ತಾರೆ. ‘ಇದು ಮಾಧ್ಯಮಗಳ ಯುಗ. ಕಾರ್ಯಾಂಗ, ನ್ಯಾಯಾಂಗ ಮತ್ತು ಶಾಸಕಾಂಗಗಳನ್ನು ಪ್ರಶ್ನಿಸುವ ಅಧಿಕಾರ ಇರುವುದು ಮಾಧ್ಯಮಗಳಿಗೆ ಮಾತ್ರ.ಮಾಧ್ಯಮಗಳು ಸಾಮಾನ್ಯ ಪ್ರಜೆಯ ದನಿ ಮತ್ತು ಶಕ್ತಿ ಆಗಿರುತ್ತದೆ. ಮಾಧ್ಯಮ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವವರು ಸಿನೆಮಾ ನಟರಿಗಿಂತಲೂ ಜನಪ್ರಿಯರಾಗಿರುತ್ತಾರೆ. ಅಷ್ಟು ಪ್ರಬಲ ಶಕ್ತಿ ಮಾಧ್ಯಮಕ್ಕಿದೆ. ಅಂಥದ್ದೇ ಪ್ರಭಾವಿ ವಾಹಿನಿಯಲ್ಲಿ ಕೆಲಸ ಮಾಡುವ ನನಗೆ ನಾಯಕ ಲಾಯರ್ ರೂಪದಲ್ಲಿ ಎದುರಾಗುತ್ತಾರೆ.
ಇಲ್ಲಿ ನನ್ನ ಪಾತ್ರದ ಹೆಸರು ಶರ್ಮಿಳಾ. ತುಂಬಾ ಗಟ್ಟಿ, ಹಠವಾದಿ. ಜೀವನದಲ್ಲಿ ಏನಾದರು ಸಾಧಿಸಬೇಕು ಎಂದುಕೊಳ್ಳುವ ನನ್ನ ಪಾತ್ರ ಸಾಕಷ್ಟು ಭ್ರಷ್ಟರನ್ನು ಬಯಲು ಮಾಡುತ್ತೆ. ಹಾಗೆ ಭ್ರಷ್ಟರ ವಿರುದ್ಧ ಸುದ್ದಿ ಮಾಡುವ ಮತ್ತು ಅಂಥವರ ವಿಚಾರಗಳನ್ನು ನೇರವಾಗಿ ಟಿವಿಯಲ್ಲಿ ಮಾತನಾಡುವುದಕ್ಕೆ ಸಾಧ್ಯವಾಗುವ ಪಾತ್ರ ನನ್ನದು. ಅದಕ್ಕೆ ಅರ್ನಾಬ್ ಗೋಸ್ವಾಮಿ ಅವರ ರೆಬೆಲ್‌ನೆಸ್ ಸ್ಫೂರ್ತಿ. ಇಂಥ ಶರ್ಮಿಳಾಗೆ ಜೀವನದಲ್ಲಿ ಯಾವುದೇ ಗುರಿ, ಉದ್ದೇಶ ಇಲ್ಲದೆ ಕರಿ ಕೋಟ್ ಹಾಕಿಕೊಂಡಿರುವ ನಾಯಕ ಮತ್ತು ನಾನು ಮುಖಾಮುಖಿ ಆದಾಗ ನನ್ನ ಪಾತ್ರದ ಮತ್ತೊಂದು ಜರ್ನಿ ಶುರುವಾಗುತ್ತದೆ. 30 ದಿನದ ಈ ಅಸಲಿ ಜರ್ನಿಗೆ 30 ಸೆಕೆಂಡ್‌ನಲ್ಲಿ ಹೇಗೆ ಪರಿಹಾರ ಸಿಗುತ್ತದೆ ಎಂಬುದು ನನ್ನ ಪಾತ್ರದ ಮೂಲಕ ನೋಡಬಹುದು’ ಎನ್ನುತ್ತಾರೆ ಕಾವ್ಯ ಶೆಟ್ಟಿ. ಕಾವ್ಯ ಶೆಟ್ಟಿ ಅವರಿಗೆ ಇದು 7ನೇ ಸಿನಿಮಾ.
‘3 ಘಂಟೆ 30 ದಿನ 30 ಸೆಕೆಂಡ್’ ಸಿನಿಮಾ ಕಾವ್ಯ ಅವರಿಗೆ ಬಹು ನಿರೀಕ್ಷೆಯ ಚಿತ್ರವಾಗಿದೆಯಂತೆ. ಶ್ರೀಧರ್ ವಿ ಸಂಭ್ರಮ್ ಸಂಗೀತ ಸಂಯೋಜನೆ ಮಾಡಿರುವ ಈ ಸಿನಿಮಾ ಮುಂದಿನ ತಿಂಗಳು 5ಕ್ಕೆ ತೆರೆಗೆ ಬರುತ್ತಿದೆ. ಮಧುಸೂದನ್ ಅವರಿಗೆ ಮೊದಲ ಚಿತ್ರವಾದರೂ ತುಂಬಾ ಕಲರ್‌ಫುಲ್ಲಾಗಿ ಮಾಡಿದ್ದು, ತೆರೆ ಮೇಲೆ ಚಿತ್ರದ ನಾಯಕ ಅರುಣ್ ಗೌಡ ಹಾಗೂ ಕಾವ್ಯ ಶೆಟ್ಟಿ ಕಾಂಬಿನೇಷನ್ ತುಂಬಾ ಚೆನ್ನಾಗಿದೆಯಂತೆ .
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.