ಸಿನಿಮಾಗೆ ಕಥೆ ಮುಖ್ಯವೇ, ಸೀಕ್ವೆಲ್ ಮುಖ್ಯವೇ? ಇಲ್ಲಿದೆ ಕನ್ನಡ ಚಿತ್ರರಂಗದ ಹೊಸ ಟ್ರೆಂಡ್ ವಿಶ್ಲೇಷಣೆ!

Published : May 16, 2026, 05:55 PM IST
Sequel Trend

ಸಾರಾಂಶ

ಇಲ್ಲಿಯವರೆಗೆ ಎಲ್ಲವೂ ಸರಿಯಿತ್ತು. ಆದರೆ ಈ ಸಿನಿಮಾಗಳ ಸಕ್ಸಸ್‌, ಎರಡು ಭಾಗಗಳಲ್ಲಿ ಅವು ಮಾಡಿದ ಹಣವನ್ನು ನೋಡಿ ಕಥೆ ಇರಲಿ ಇಲ್ಲದಿರಲಿ ಹೆಚ್ಚಿನ ಚಿತ್ರತಂಡಗಳು ಸಿನಿಮಾವನ್ನು ಎರಡು ಭಾಗಗಳಲ್ಲಿ ತರಲು ಶುರು ಮಾಡಿದರು.

- ಪ್ರಿಯಾ ಕೆರ್ವಾಶೆ

ಕನ್ನಡ ಚಿತ್ರರಂಗಕ್ಕೆ ಸೀಕ್ವೆಲ್‌ ಹೊಸತಲ್ಲ. ಡಾ. ರಾಜ್‌ ಕಾಲದಿಂದಲೂ ‘ಸಿಐಡಿ 999’ ರಂಥಾ ಸರಣಿ ಸಿನಿಮಾಗಳು ಪ್ರೇಕ್ಷಕರನ್ನು ರಂಜಿಸಿವೆ. ಶಂಕರ್‌ನಾಗ್‌ ಅವರ ‘ಸಾಂಗ್ಲಿಯಾನ’ , ‘ಗೋಲ್‌ಮಾಲ್‌’, ‘ಗಂಧದ ಗುಡಿ’ ಹೀಗೆ ಒಂದಿಷ್ಟು ಸಿನಿಮಾಗಳು ಆಸಕ್ತಿಕರ ಕಥೆಯೊಂದಿಗೆ ಎರಡು ಭಾಗಗಳಲ್ಲಿ ಬಂದವು. ಇವುಗಳ ವಿಶೇಷತೆ ಅಂದರೆ ಹೇಳಲಿಕ್ಕೆ ಅಷ್ಟು ಕಥೆ ಇದ್ದ ಕಾರಣ ಈ ಎರಡನೇ ಭಾಗಗಳು ಬಂದವು. ಆದರೆ ಕಳೆದ 20 ವರ್ಷಗಳಲ್ಲಿ ಸಿನಿಮಾದ ಜನಪ್ರಿಯತೆಯನ್ನು ಬಳಸಿಕೊಳ್ಳಲು ಎರಡನೇ ಭಾಗಗಳು ಬಂದವು. ‘ಮುಂಗಾರು ಮಳೆ’, ‘ಗಾಳಿಪಟ’ ದಂಥಾ ಸಿನಿಮಾಗಳು ಇದಕ್ಕೆ ಸಾಕ್ಷಿ.

ಬಾಹುಬಲಿ ಹುಟ್ಟು ಹಾಕಿದ ಟ್ರೆಂಡ್‌

ದಕ್ಷಿಣ ಭಾರತೀಯ ಸಿನಿಮಾಗಳಲ್ಲಿ ಸೀಕ್ವೆಲ್‌ ಅನ್ನು ಟ್ರೆಂಡ್‌ ಆಗಿ ಮಾಡಿದ ಕೀರ್ತಿ ‘ಬಾಹುಬಲಿ’ ಸಿನಿಮಾದ್ದು. ಆ ಅಬ್ಬರದಲ್ಲಿ ಲಾರ್ಜರ್‌ ದ್ಯಾನ್‌ ಲೈಫ್‌ ಮೇಕಿಂಗ್‌ ಮೂಲಕ ‘ಪೊನ್ನಿಯನ್ ಸೆಲ್ವನ್‌’, ‘ಪುಷ್ಪ’, ‘ಕೆಜಿಎಫ್‌’, ಇತ್ತೀಚಿನ ‘ಕಾಂತಾರ’ ದಂತಹ ಚಿತ್ರಗಳು ಈ ಟ್ರೆಂಡ್‌ ಅನ್ನು ಜೀವಂತ ಇಟ್ಟವು. ‘ಲವ್‌ ಮಾಕ್ಟೇಲ್‌’ ಭಾವನಾತ್ಮಕವಾಗಿ ಪ್ರೇಕ್ಷಕನಿಗೆ ಹತ್ತಿರವಾಯಿತು.

ಟ್ರೆಂಡ್‌ ನೆಚ್ಚಿ ಕಥೆ ಕೈ ಬಿಟ್ಟ ನಿರ್ದೇಶಕ

ಇಲ್ಲಿಯವರೆಗೆ ಎಲ್ಲವೂ ಸರಿಯಿತ್ತು. ಆದರೆ ಈ ಸಿನಿಮಾಗಳ ಸಕ್ಸಸ್‌, ಎರಡು ಭಾಗಗಳಲ್ಲಿ ಅವು ಮಾಡಿದ ಹಣವನ್ನು ನೋಡಿ ಕಥೆ ಇರಲಿ ಇಲ್ಲದಿರಲಿ ಹೆಚ್ಚಿನ ಚಿತ್ರತಂಡಗಳು ಸಿನಿಮಾವನ್ನು ಎರಡು ಭಾಗಗಳಲ್ಲಿ ತರಲು ಶುರು ಮಾಡಿದರು. ಆಗ ಶುರುವಾಯ್ತು ನೋಡಿ ಪತನಕಾಲ.

ಎರಡು ಭಾಗಗಳಲ್ಲಿ ಸಿನಿಮಾ ತರಬೇಕು ಎಂಬ ಕಾರಣಕ್ಕೆ ಕಥೆಯಲ್ಲಿ ಜಾಳು ತುಂಬಿಸಿದ ಕಾರಣ ಪ್ರೇಕ್ಷಕ ಮೊದಲ ಭಾಗವನ್ನೇ ನಿರಾಕರಿಸಿಬಿಟ್ಟ. ನಿರ್ಮಾಪಕನಿಗೆ ನಷ್ಟವಾಯ್ತು. ಆಮೇಲೆ ಎರಡನೇ ಭಾಗ ತರುವ ಪ್ಲಾನ್‌ ಕ್ಯಾನ್ಸಲ್‌ ಆಯ್ತು. ಅಲ್ಲಿಗೆ ಈ ಸೀಕ್ವೆಲ್‌ ಟ್ರೆಂಡ್‌ನಿಂದ ಪ್ರೇಕ್ಷಕನಿಗೆ ಗಟ್ಟಿ ಕಥೆಯೂ ಸಿಗಲಿಲ್ಲ. ಅತ್ತ ಸೀಕ್ವೆಲ್‌ ತರುವ ನೆವದಲ್ಲಿ ನಿರ್ದೇಶಕ ತುಂಬಿಸಿಟ್ಟ ಜಾಳನ್ನೇ ಮನರಂಜನೆ ಎಂದುಕೊಳ್ಳಬೇಕಾದ ದರ್ದು ಉಂಟಾಯ್ತು. ‘ತೋತಾಪುರಿ’, ‘ಸಿದ್ಲಿಂಗು 2’ ಸಿನಿಮಾಗಳು ಇದಕ್ಕೆ ಬೆಸ್ಟ್‌ ಎಕ್ಸಾಂಪಲ್‌.

ಸೋತರೆ ಸೀಕ್ವೆಲ್‌ ಬರಲ್ಲ

ಇದನ್ನು ಘಂಟಾಘೋಷವಾಗಿ ಚಿತ್ರತಂಡ ಸಾರಿಹೇಳದಿದ್ದರೂ ಅದೇ ನಡೆಯುತ್ತಿರುವುದು. ಈಗ ಸೀಕ್ವೆಲ್‌ ಘೋಷಣೆಯಾಗಿ ಟೇಕಾಫ್‌ ಆಗದ ಸಿನಿಮಾಗಳದ್ದೆಲ್ಲ ಇದೇ ಕಥೆ. ‘ಕಬ್ಜ’, ‘ಮಾರ್ಟಿನ್‌’, ‘ದಿ ವಿಲನ್‌’, ‘ಅವನೇ ಶ್ರೀಮನ್ನಾರಾಯಣ’, ‘ವಿಕ್ರಾಂತ್‌ ರೋಣ’, ‘ಯುಐ’ ಹೀಗೆ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಬೇಸರದ ಸಂಗತಿ ಎಂದರೆ ನಿಜಕ್ಕೂ ಪ್ರೇಕ್ಷಕ ಎರಡನೇ ಭಾಗಕ್ಕಾಗಿ ಕಾದ ಕೆಲವು ಸಿನಿಮಾಗಳೂ ಇದೇ ರೀತಿ ಕಾಲದ ತೆಕ್ಕೆಯಲ್ಲಿ ಸೇರಿಹೋಯ್ತು. ‘ಉಗ್ರಂ 2’, ಸೂರಿಯವರ ‘ಕೆಂಡಸಂಪಿಗೆ’ ಸರಣಿ ಇದಕ್ಕೆ ಉದಾಹರಣೆ.

ಸದ್ಯಕ್ಕೆ ಪ್ರೇಮ್‌ ನಿರ್ದೇಶನದ ‘ಕೆಡಿ’ ಸಿನಿಮಾದ ಸೀಕ್ವೆಲ್‌ ಘೋಷಣೆಯಾಗಿದೆ. ಆದರೆ ಅದು ಬರುವುದು ಅನುಮಾನ ಎಂಬ ಮಾತು ಕೇಳಿಬರುತ್ತಿದೆ. ಇದು ಕನ್ನಡಕ್ಕಷ್ಟೇ ಸೀಮಿತವಾಗಿಲ್ಲ. ತೆಲುಗಿನಲ್ಲಿ ಘೋಷಣೆಯಾಗಿದ್ದ ‘ದೇವರ 2’, ‘ಸಲಾರ್‌ 2’ನಂಥಾ ಸಿನಿಮಾಗಳು ನಷ್ಟದ ಕಾರಣಕ್ಕೆ ಚಟುವಟಿಕೆ ಮರೆತು ಸ್ತಬ್ದವಾಗಿವೆ.

ಕೆಜಿಎಫ್‌ ಸರಣಿಗೆ ಮಹತ್ವಾಕಾಂಕ್ಷೆಯೇ ತಡೆ

ಕೋಟಿ ಕೋಟಿ ದುಡಿದರೂ ಮೂರನೇ ಭಾಗ ಘೋಷಿಸಿ ಬಹುತೇಕ ಕೈ ಎತ್ತಿದ ಸಿನಿಮಾ ‘ಕೆಜಿಎಫ್‌ 3’. ಯಶ್‌ ಕಣ್ಣು ಬಲು ಎತ್ತರಕ್ಕೆ ನೆಟ್ಟಿದೆ. ಹೀಗಾಗಿ ಅವರು ‘ಕೆಜಿಎಫ್‌’ ಮೂರನೇ ಭಾಗದಲ್ಲಿ ನಟಿಸುವುದು ಅನುಮಾನ ಎನ್ನಲಾಗುತ್ತಿದೆ. ‘ಕಿರಾತಕ 2’ ಬರದೇ ಇರಲೂ ಇದುವೇ ಕಾರಣ ಎನ್ನಲಾಗಿದೆ.

ದೃಶ್ಯಂ ಸರಣಿ ಸಾರ್ಥಕ ಪ್ರಯತ್ನ

ಕಥೆಯೂ ಇದ್ದು, ಅದ್ಭುತ ತಾರಾಗಣವೂ ಇದ್ದು, ಜನರೂ ಕಾಯುತ್ತಿರುವ ಸಿನಿಮಾ ಮೋಹನ್‌ಲಾಲ್‌ ನಟನೆಯ ‘ದೃಶ್ಯಂ 3’. ಮುಂದಿನ ವಾರ ತೆರೆ ಕಾಣುವ ಈ ಸಸ್ಪೆನ್ಸ್‌ ಕಥೆಗೆ ಲಕ್ಷಾಂತರ ಮಂದಿ ಎದುರು ನೋಡುತ್ತಿದ್ದಾರೆ. ಜೀತು ಜೋಸೆಫ್‌ ಗಟ್ಟಿ ಕಥೆಯಿಟ್ಟು ಅದ್ಭುತವಾಗಿ ಪ್ರಸ್ತುತಪಡಿಸಿದ ದೃಶ್ಯಂ ಸರಣಿ ಸೀಕ್ವೆಲ್‌ನ ಅರ್ಥಪೂರ್ಣತೆಗೆ, ಗಳಿಕೆಗೆ ಗಟ್ಟಿ ಉದಾಹರಣೆ.

ನಮಗೆ ಸೀಕ್ವೆಲ್‌ಗಿಂತ ಕಥೆ ಮುಖ್ಯ ಎಂಬ ಪ್ರೇಕ್ಷಕ

ಸಿನಿಮಾಗಳೇ ಮರೆಯಾಗುತ್ತಿರುವ ಈ ಹೊತ್ತಲ್ಲಿ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಸೀಕ್ವೆಲ್‌ ಮಾಡುತ್ತ ಅದಕ್ಕಾಗಿ ಮೂರ್ನಾಲ್ಕು ವರ್ಷ ಹಾಳು ಮಾಡುವುದರಲ್ಲಿ ಅರ್ಥ ಇಲ್ಲ ಎಂಬುದು ಪ್ರಾಮಾಣಿಕ ಪ್ರೇಕ್ಷಕನ ಮಾತು. ಗಟ್ಟಿ ಕಂಟೆಂಟ್‌ ಇಟ್ಟು ಒಂದೇ ಭಾಗದಲ್ಲಿ ಕಥೆ ಹೇಳಿದರೆ ಸಾಕು, ಸುಮ್ಮನೆ ಸೀಕ್ವೆಲ್‌ ಹೆಸರಲ್ಲಿ ಅತ್ತ ಕಥೆಯನ್ನೂ ಹೇಳದೇ ಇತ್ತ 2 ನೇ ಭಾಗ ಬರುವುದೂ ಸಾಧ್ಯವಾಗದೇ ನಮಗೆ ಟೊಪ್ಪಿ ಹಾಕುವುದನ್ನು ಇನ್ನಾದರೂ ನಿಲ್ಲಿಸಿ ಎಂಬುದು ಪ್ರೇಕ್ಷಕನ ಕಳಕಳಿಯ ಪ್ರಾರ್ಥನೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

CM Vijay Gift to Trisha: ಒಲವಿನ ಗೆಳತಿಗೆ ಭಾರೀ ಉಡುಗೊರೆ ಕೊಟ್ಟ ಸಿಎಂ ವಿಜಯ್; ದಳಪತಿ ದರ್ಬಾರ್‌ಗೆ ಹೌಹಾರಿದ ತಮಿಳುನಾಡು!
Naa Ninna Bidalaare ದುರ್ಗಾಳ ಚಿತೆಯ ಮೇಲೆ ಮಲಗಿಸಿದಾಗ ಆಗಿದ್ದೇನು? ಶೂಟಿಂಗ್​ ವಿಡಿಯೋ ವೈರಲ್​