ಚಿತ್ರ ವಿಮರ್ಶೆ: ರತ್ನಮಂಜರಿ

By Web DeskFirst Published May 18, 2019, 9:00 AM IST
Highlights

ಇದು ಕನ್ನಡದ ಮತ್ತೊಂದು ‘ರಂಗಿತರಂಗ’.

- ಹಾಗಂತ ಹಿಟ್‌ ಚಿತ್ರದೊಂದಿಗೆ ಬ್ರಾಂಡ್‌ ಮಾಡಿಕೊಂಡಿದ್ದು ‘ರತ್ನಮಂಜರಿ’ ಸಿನಿಮಾ. ಕೊಡಗಿನ ಹಸಿರು ಬೆಟ್ಟ-ಗುಡ್ಡ, ಕಾಡು, ಯಕ್ಷಗಾನ, ದೊಡ್ಡಾಟ, ಹಾರರ್‌, ದೆವ್ವ ಇದೆ ಎನ್ನುವ ನೆರಳು, ಮಾದಕ ನೋಟದ ಮದನಾರಿ, ಗಜ್ಜೆ ಸದ್ದು ಮತ್ತು ಎರಡು ಕೊಲೆ. ಇವೆಲ್ಲಕ್ಕೂ ಕಿರೀಟವಿಟ್ಟಂತೆ ಹಾರರ್‌ ಎಫೆಕ್ಟ್. ಹಿನ್ನೆಲೆ ಸಂಗೀತ ಚಿತ್ರದ ಪ್ರತಿಯೊಂದನ್ನೂ ಹೈಲೈಟ್‌ ಮಾಡುತ್ತಾ ಹೋಗುತ್ತದೆ. ಆ ಮಟ್ಟಿಗೆ ಸೌಂಡು ಇಲ್ಲಿ ಸೂಪರ್‌ ಸ್ಟಾರು.

ಆರ್‌ ಕೇಶವಮೂರ್ತಿ

ಇದು ಪಕ್ಕಾ ಆತ್ಮ- ಪ್ರೇತ ಹಾಗೂ ದೆವ್ವಗಳ ಸಿನಿಮಾ ಎನ್ನುವ ಅಭಿಪ್ರಾಯ ಮೂಡುವುದು ಚಿತ್ರದ ಹೆಸರು ಮತ್ತು ಟ್ರೇಲರ್‌ ನೋಡಿದಾಗ. ಆದರೆ, ಇದು ಅದಲ್ಲ ಎಂದು ಚಿತ್ರದ ಆರಂಭವಾಗಿ ಹತ್ತು ನಿಮಿಷದಲ್ಲೇ ಸಾಬೀತು ಮಾಡಿದ ಮೇಲೆ ನಿರ್ದೇಶಕರು ಮತ್ತೆ ಕಾಣಿಸಿಕೊಳ್ಳುವುದಿಲ್ಲ. ಸಿನಿಮಾ ತನ್ನ ಪಾಡಿಗೆ ತಾನು ಪಯಣಿಸುತ್ತದೆ. ಎಲ್ಲಿಯವರೆಗೂ ಈ ಪಯಣ, ‘ಆ ರತ್ನಮಂಜರಿ ಯಾರು, ದೆವ್ವ ಇದಿಯೋ ಇಲ್ಲವೋ, ಕ್ಲೈಮ್ಯಾಕ್ಸ್‌ ಬೇಗ ತನ್ನಿ’ ಎಂದು ಪ್ರೇಕ್ಷಕರು ಕೊಸರಿಕೊಳ್ಳುವ ತನಕ.

ಕನ್ನಡ ಬೆಳ್ಳಿತೆರೆಯಲ್ಲಿ ಅಮೆರಿಕನ್‌ ಕ್ರೈಮ್‌ ಸ್ಟೋರಿ!

ಅಮೆರಿಕದಲ್ಲಿ ಇಬ್ಬರು ಮಧ್ಯ ವಯಸ್ಸಿನ ದಂಪತಿ ಕೊಲೆಯಾಗುತ್ತದೆ. ಆ ಜೋಡಿ ಕೊಲೆಯಾಗುವಾಗ ನಾಯಕ- ನಾಯಕಿ ಇಂಡಿಯಾದಲ್ಲಿರುತ್ತಾರೆ. ಮರಳಿ ಅಮೆರಿಕಾಗೆ ಹೋಗುವ ಹೊತ್ತಿಗೆ ಆ ಪ್ರಕರಣ ನಾಯಕನ ಕುತ್ತಿಗೆಗೆ ಸುತ್ತಿಕೊಳ್ಳುತ್ತಿರುವಾಗ ತಾನೇ ಅದರ ತನಿಖೆಗೆ ಇಳಿಯುತ್ತಾನೆ. ಅಮೆರಿಕದಿಂದ ಮಡಿಕೇರಿಗೆ ಬರುತ್ತಾನೆ ನಾಯಕ. ಇಲ್ಲಿ ರತ್ನಮಂಜರಿ ಎನ್ನುವ ಎಸ್ಟೇಟ್‌ನಲ್ಲಿ ವಾಸ್ತವ್ಯ. ಅಲ್ಲಿ ದೆವ್ವ ಇದೆ ಎನ್ನುವುದು ಹಲವರ ಭಯ. ಆ ಭಯದ ಹಿಂದೆ ನಾಯಕ ಹೋಗುತ್ತಾನೆ. ಫ್ಲ್ಯಾಷ್‌ ಬ್ಯಾಕ್‌ ತೆರೆದುಕೊಂಡು ಆರ್ಮಿಯಿಂದ ವಾಪಸ್ಸು ಬರುವ ತಂದೆಯನ್ನು ನೋಡಿಕೊಳ್ಳದ ಮಗ ಅಮೆರಿಕ ಸೇರುತ್ತಾನೆ. ಮಗನಿಂದ ದೂರವಾದವರು ಮತ್ತೊಂದು ಮಗುವನ್ನು ದತ್ತು ಪಡೆಯುತ್ತಾರೆ. ನೂರಾರು ಎಕರೆ ಆಸ್ತಿ ಬೇರೆ ಮಾಡಿಕೊಂಡಿದ್ದಾರೆ. ಅಮೆರಿಕದಲ್ಲಿ ಸತ್ತವನು, ದತ್ತು ಮಗ ಇಬ್ಬರ ನಡುವಿನ ಲಿಂಕು, ಎಸ್ಟೇಟ್‌ನಲ್ಲಿ ಆಗಾಗ ಕೇಳಿಸುವ ಕಾಲ್ಗೆಜ್ಜೆಯ ಸೌಂಡು ಇವುಗಳ ನಡುವಿನ ವೈರುಧ್ಯಗಳನ್ನು ಬಿಡಿಸುವ ಹೊತ್ತಿಗೆ ಸಿನಿಮಾ ಮುಕ್ತಾಯವಾಗುತ್ತದೆ.

ತಾರಾಗಣ: ರಾಜ್‌ ಚರಣ್‌, ಅಖಿಲಾ ಪ್ರಕಾಶ್‌, ಪಲ್ಲವಿ ರಾಜು, ಕನ್ನಿಕಾ ಹಾಗೂ ಶ್ರದ್ಧ ಸಾಲಿಯನ್‌

ನಿರ್ದೇಶನ: ಪ್ರಸಿದ್ದ

ನಿರ್ಮಾಣ: ಸಂದೀಪ್‌ ಕುಮಾರ್‌, ಡಾ ನವೀನ್‌ ಕೃಷ್ಣ, ನಟರಾಜ ಹಳೇಬೀಡು

ಛಾಯಾಗ್ರಹಣ: ಪ್ರೀತಂ ಮತ್ತು ಕಿಟ್ಟಿ

ಸಂಗೀತ: ಹರ್ಷವರ್ಧನ ರಾಜ್‌

ವಿರಾಮದ ನಂತರ ಕತೆಯಲ್ಲಿ ಕೊಂಚ ಬಿಗಿತನವಿದೆ. ಆದರೆ, ಕತ್ತಲು, ಹಾರರ್‌, ಗೆಜ್ಜೆಯ ಸೌಂಡನ್ನೇ ನಂಬಿಕೊಂಡು ಚಿತ್ರವನ್ನು ಅನಗತ್ಯವಾಗಿ ಎಳೆದಿದ್ದಾರೆ ನಿರ್ದೇಶಕರು. ಅಮೆರಿಕದಲ್ಲಿ ನಡೆಯುವ ಕತೆ ಬಲವಂತವಾಗಿ ತುರುಕಿದಂತೆ ಕಾಣುತ್ತದೆ. ಹಾರರ್‌ ಮಿಕ್ಸಿಂಗ್‌, ಛಾಯಾಗ್ರಹಣ ಹಾಗೂ ಎರಡು ಹಾಡು ಚಿತ್ರಕ್ಕೆ ಪೂರಕವಾಗಿವೆ. ಕನ್ನಿಕಾ, ಪಲ್ಲವಿ ರಾಜು ಹಾಗೂ ರಾಜ್‌ ಚರಣ್‌ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದು, ಉಳಿದಂತೆ ಆಟಕ್ಕುಂಟು ಲೆಕ್ಕಕ್ಕಿಲ್ಲ.

click me!