ಸತ್ತವರ ಆತ್ಮಗಳು ರಿವೇಂಜ್ ತೀರಿಸಿಕೊಳ್ಳುತ್ತವೆಯೇ? ಇಷ್ಟಕ್ಕೂ ಆತ್ಮಗಳು ಇರೋದು ನಿಜನಾ? ಎನ್ನುವ ತರ್ಕಗಳನ್ನು ಬದಿಗಿಟ್ಟು ಆತ್ಮಗಳು ಯಾವುದೋ ಒಂದು ರೂಪದಲ್ಲಿ ಇರುವುದು ನಿಜ ಎಂದು ಸಾಬೀತು ಮಾಡಲು ಸಾಕಷ್ಟುಹೆಣಗಾಡಿರುವ ಸಿನಿಮಾ ‘ಕಮರೊಟ್ಟು ಚೆಕ್‌ಪೋಸ್ಟ್’.
ಕೇಶವ
ಕತ್ತಲು, ಕಾಡು, ಪ್ರಯಾಣ, ನಿಗೂಢ ರೀತಿಯಲ್ಲಿ ಆ್ಯಕ್ಸಿಡೆಂಟ್, ಸದ್ದು ಮಾಡುವ ಹಿನ್ನೆಲೆ ಸಂಗೀತ, ಆಗಾಗ ಕಾಣಿಸಿಕೊಳ್ಳುವ ಯಾವುದಾದರೂ ಪ್ರಾಣಿ... ಇವಿಷ್ಟುಇದ್ದರೆ ಆತ್ಮ, ದೆವ್ವ, ಹಾರರ್ ಚಿತ್ರ ಮಾಡಬಹುದು ಎನ್ನುವ ಧೈರ್ಯ ತುಂಬುವ ಈ ಚಿತ್ರವು ನಾಲ್ಕು ಕೊಲೆ ಮಾಡುವಲ್ಲಿ ಯಶಸ್ವಿ ಆಗುತ್ತದೆ.
ಬೆಂಗಳೂರಿನಲ್ಲಿ ಜಾಹೀರಾತು ಸಂಸ್ಥೆಯಲ್ಲಿ ಕೆಲಸ ಮಾಡುವ ಜೋಡಿ, ಕಮರೊಟ್ಟುನಲ್ಲಿರುವ ತಮ್ಮ ಸ್ನೇಹಿತರ ಮನೆಗೆ ಹೋಗುತ್ತಾರೆ. ಮದುವೆ ಆಗಿರುವ ಮತ್ತು ಮದುವೆ ಆಗದಿರುವ ಎರಡು ಜೋಡಿಗಳು ಕಾಡಿನಲ್ಲಿರುವ ಆ ಮನೆಗೆ ಸೇರಿಕೊಳ್ಳುತ್ತವೆ. ಆದರೆ, ಅಲ್ಲಿ ಇರಬೇಕಾದ ತನ್ನ ಸ್ನೇಹಿತನ ಕುಟುಂಬ ಇರಲ್ಲ. ಸಾವಿನ ಕಾರಣ ಹೇಳಿ ಬೇರೆ ಊರಿಗೆ ಹೋಗಿರುತ್ತಾರೆ. ಯಾರೂ ಪರಿಚಯ ಇಲ್ಲದ ಈ ಊರಿನಲ್ಲಿ ಇವರಿಗೆ ಗಡ್ಡಪ್ಪ ಎದುರಾಗುತ್ತಾರೆ. ‘ಅಯ್ಯೋ ಆ ಮನೆಯಲ್ಲಿ ಉಳಿದುಕೊಂಡಿದ್ದೀರಾ?’ ಎನ್ನುವ ಗಡ್ಡಪ್ಪನ ಮಾತಿನಲ್ಲೇ ಕತೆಯನ್ನು ಪ್ರೇಕ್ಷಕ ಮೊದಲೇ ಊಹೆ ಮಾಡುತ್ತಾನೆ. ಮುಂದೆ ಆ ಮನೆಯಲ್ಲಿ ಏನಾಗುತ್ತದೆ? ಆತ್ಮಗಳು ಯಾರದ್ದು? ಆ ಮನೆಯಲ್ಲಿ ವಾಸಿಸುವವರು ಬದುಕಿದ್ದಾರಾ, ಸತ್ತಿದ್ದಾರಾ? ಸತ್ತಿದ್ದರೆ ಯಾಕೆ ಸತ್ತರು ಎಂಬುದೇ ಚಿತ್ರದ ಕತೆ. ಥ್ರಿಲ್ಲರ್, ಹಾರರ್ ಚಿತ್ರಗಳಲ್ಲಿ ಕತೆ ಪ್ರೇಕ್ಷಕನಿಗೆ ಮೊದಲೇ ಗೊತ್ತಾಗಿಬಿಟ್ಟರೆ ಅದರಲ್ಲಿ ಏನೂ ಕುತೂಹಲ ಉಳಿಯಲ್ಲ. ಹಾಗೆ ಉಳಿಯದೆ ಹೋಗುವುದೇ ‘ಕಮರೊಟ್ಟು ಚೆಕ್‌ಪೋಸ್ಟ್’ ಚಿತ್ರದ ಕೊರತೆ. ಆದರೂ ಒಮೊಮ್ಮೆ ಹಿನ್ನೆಲೆ ಸಂಗೀತ, ಕ್ಯಾಮೆರಾ ಕಣ್ಣಿನ ಮೋಡಿ, ಗ್ರಾಫಿಕ್ಸ್ ಉಸರವಲ್ಲಿ ಕಾಣಿಸಿಕೊಂಡು ಸಾಧ್ಯವಾದಷ್ಟುಚಿತ್ರವನ್ನು ಲಿಫ್ಟ್ ಮಾಡಲು ಪ್ರಯತ್ನಿಸುತ್ತವೆ.
ಚಿತ್ರ ವಿಮರ್ಶೆ: ಒಮ್ಮೆ ನಿಶ್ಯಬ್ದ ಒಮ್ಮೆ ಯುದ್ಧ
ತೀರಾ ಸಾಧಾರಣ ನಟನೆ, ಸಪ್ಪೆ ನಿರೂಪಣೆಯಿಂದ ಇಡೀ ಸಿನಿಮಾ ತೆವಳುತ್ತ ಸಾಗುತ್ತದೆ. ಒಂದು ಹಂತದಲ್ಲಿ ಖಾಸಗಿ ವಾಹಿಗಳಲ್ಲಿ ಬರುವ ಜನ್ಮಾಂತರ ಹಾಗೂ ಭವಿಷ್ಯ ನಡಿಯುವ ಕಾರ್ಯಕ್ರಮದಂತೆ ಸಿನಿಮಾ ಭಾಸವಾಗುತ್ತದೆ. ಯಾಕೆಂದರೆ ಹಾರರ್ ಚಿತ್ರಗಳಲ್ಲಿ ಮಾತು ಕಡಿಮೆ ಇರಬೇಕು. ಆದರೆ, ನಿರ್ದೇಶಕರು ಸಂವಾದಕ್ಕೆ ಮೊರೆ ಹೋಗುತ್ತಾರೆ. ಆತ್ಮಗಳು ಇದ್ದಾವಾ? ಇಲ್ವಾ? ಎನ್ನುವ ಚರ್ಚೆಯತ್ತ ಪಾತ್ರದಾರಿಗಳನ್ನು ಮುನ್ನಡೆಸುತ್ತಾರೆ. ಇನ್ನೂ ಗಡ್ಡಪ್ಪ ಪಾತ್ರ ಬಂದಾಗ ಸುಮ್ ಸುಮ್ನೆ ನಗುವ ಅಹಲ್ಯಾ ಪಾತ್ರವನ್ನು ಸಹಿಸಿಕೊಳ್ಳುವುದೇ ಕಷ್ಟ. ಇನ್ನೂ ಈ ಗಡ್ಡಪ್ಪ ಪಾತ್ರವನ್ನು ನಿರ್ದೇಶಕರು ಯಾಕೆ ತರುತ್ತಾರೆ ಅನ್ನೋದೇ ಗೊತ್ತಾಗಲ್ಲ. ‘ಏನ್ ನಿನ್ ಪ್ರಾಬ್ಲಮ್ಮು, ಈ ಕತೆ ನಿಜವೋ ಅಥವಾ ರಾತ್ರಿ ಕಂಡ ಕನಸೋ’ ಎಂದು ಪದೇ ಪದೇ ಅದೇ ಎರವಲು ಡೈಲಾಗ್‌ಗಳನ್ನು ಹೇಳಿಸಿರುವುದು ನೋಡಿದರೆ ಗಡ್ಡಪ್ಪ, ಕತೆಗಿಂತ ನಿರ್ದೇಶಕರಿಗೆ ಮಾತ್ರ ಬೇಕಿತ್ತು ಅನಿಸುತ್ತದೆ. ಈ ಚಿತ್ರದಲ್ಲಿ ಹೆದರಿಸುವ ಏಕೈಕ ಭೂತ ಗಡ್ಡಪ್ಪ ಎಂಬ ಗಡ್ಡದ ಭೂತ ಒಬ್ಬರೇ. ತಾಂತ್ರಿಕ ವಿಭಾಗಕ್ಕೆ ಕೊಟ್ಟಗಮನ ಕತೆ, ಪಾತ್ರದಾರಿಗಳ ನಟನೆ ಹಾಗೂ ಕುತೂಹಲಕಾರಿ ನಿರೂಪಣೆ ಕಡೆಗೂ ಕೊಡಬೇಕಿತ್ತು.