ಚಿತ್ರ ವಿಮರ್ಶೆ : ಕಿನಾರೆ

By Web DeskFirst Published Sep 29, 2018, 10:20 AM IST
Highlights

ಮುದ್ರ ಭೂಮಿಗೆ ಮುತ್ತಿಕ್ಕುವ ಜಾಗ ಕಡಲ ಕಿನಾರೆ. ಉಕ್ಕಿ ಬರುವ ಅಲೆಗಳು ಭೂಮಿಯನ್ನು ಅಪ್ಪುವಂತೆ ಬಂದು ಹಿಂದೆ ಸಾಗುತ್ತವೆ. ಹಾಗೆಯೇ ಇಲ್ಲಿ ಎರಡು ಮುಗ್ಧ ಜೀವಗಳು ಒಂದಾಗುವ ಹಂತಕ್ಕೆ ಬಂದು ಕಡಲಿನಲ್ಲಿ ಲೀನವಾಗುತ್ತವೆ. ಇದು ಯಾಕೆ? ಎನ್ನುವ ಉತ್ತರಕ್ಕೆ ‘ಕಿನಾರೆ’ಯನ್ನು ಕಣ್ತುಂಬಿಕೊಳ್ಳಬಹುದು

ದೇವರಾಜ್ ಪೂಜಾರಿ ಅವರು ಕತೆ, ಚಿತ್ರಕತೆ, ಸಂಭಾಷಣೆಯ ಜೊತೆಗೆ ನಿರ್ಮಾಣದ ಕಾರ್ಯಕ್ಕೂ ಕೈ ಜೋಡಿಸಿ ಸಿನಿಮಾ ಮಾಡಿರುವುದರಿಂದ ಒಂದಷ್ಟುಗೊಂದಲಗಳು ಇಲ್ಲಿವೆ. ಹೆಸರಿಗೆ ತಕ್ಕಂತೆ ಮಂಗಳೂರು, ಕಾಸರಗೂಡು ಸುತ್ತ ಮುತ್ತ ಚಿತ್ರೀಕರಣಗೊಂಡಿರುವ ಕಿನಾರೆ ಮುಗ್ಧ ನಾಯಕನ ಓಟದಿಂದ ಶುರುವಾಗಿ ಶವವಾಗಿ ಮಲಗುವಲ್ಲಿಗೆ ಕತೆ ಮುಗಿಯುತ್ತದೆ.

ಈ ನಡುವಲ್ಲಿ ತಾಯಿ ಮಕ್ಕಳ ಸೆಂಟಿಮೆಂಟ್, ಮುಗ್ಧ ಹುಡುಗರ ತರಲೆಗಳು, ವಿಜ್ಞಾನ ಮತ್ತು ಮೂಢನಂಬಿಕೆಗಳ ಸೆಣಸಾಟ, ಮುಗ್ಧ ಪ್ರೀತಿ, ಕಣ್ಣಿಗೆ ಕಾಣದ ಕಪಟಗಳೆಲ್ಲದರ ದರ್ಶನವಾಗುತ್ತದೆ. ಯಾರೋ ಮಾಡಿದ
ತಪ್ಪಿನಿಂದಾಗಿ ಊರೊಂದರ ಹತ್ತಾರು ಮಂದಿ ಬುದ್ಧಿಮಾಂದ್ಯರಾಗಿ ಹುಟ್ಟುತ್ತಾರೆ. ಅವರಿಗೆ ಅಂಟಿರುವ ಈ ಸಮಸ್ಯೆಯನ್ನು ವೈಜ್ಞಾನಿಕವಾಗಿ ಪರಿಹರಿಸಬಹುದು ಎಂದು ವೈದ್ಯರ ತಂಡ ಊರಿಗೆ ಬರುತ್ತೆ. ಆದರೆ ಊರಿನಲ್ಲೇ ಇರುವ ಜ್ಯೋತಿಷಿ ಇದಕ್ಕೆ ವಿರೋಧ ಮಾಡುತ್ತಾನೆ. ಕೊನೆಗೆ ಮಕ್ಕಳೆಲ್ಲಾ ಎರಡು ವರ್ಷಗಳ ಕಾಲ ಹೆತ್ತವರನ್ನು ಅಗಲಿ ಚಿಕಿತ್ಸೆಗೆಂದು ತೆರಳುತ್ತಾರೆ. ಅಲ್ಲಿಯೇ ನಾಯಕ ರಂಗ ಮತ್ತು ನಾಯಕಿ ಮೀರಾ ಒಂದಾಗುವುದು. ಮುಗ್ಧ ಪ್ರೀತಿ ಚಿಗುರೊಡೆಯುವುದು.

ಜೊತೆಯಲ್ಲೇ ಓಡಾಟ, ಲಾಲಿಪಪ್ಪಿನ ಎಕ್ಸ್‌ಚೆಂಜ್, ಕಾಮವರಿಯದ ಶುದ್ಧ ಪ್ರೀತಿ, ಒಬ್ಬರನ್ನೊಬ್ಬರು ಬಿಟ್ಟಿರಲಾಗದಷ್ಟು ಪ್ರೀತಿ ಬೆಳೆದು ನಿಲ್ಲುತ್ತದೆ. ಆದರೆ ಈ ಪ್ರೀತಿ ಒಂದಾಗಲು ಹುಡುಗಿ ತಂದೆ ಊರಿನ ಅಧ್ಯಕ್ಷ ಬಿಡುವುದಿಲ್ಲ. ಯಾಕೆ ಬಿಡುವುದಿಲ್ಲ ಎನ್ನವುದರ ಹಿಂದೆ ಒಂದು ಕತೆ ಇದೆ. ಒಂದಾಗಲು ಓಡಿ ಹೋಗುವಾಗ ಜೋಡಿ ಕಡೆಗೆ ಕೊಲೆಯಾಗುತ್ತಾರೆ. ಯಾಕೆ ಕೊಲೆಯಾದರು, ಎನ್ನುವುದರ ಹಿಂದೂ ಒಂದು ಕತೆ ಇದೆ.

ಹೀಗೊಂದು ಸ್ವಂತವಾದ ಕತೆಯನ್ನಿಟ್ಟುಕೊಂಡು ಚಿತ್ರ ಮಾಡಲು ಹೊರಟ ನಿರ್ದೇಶಕ ದೇವರಾಜ್ ಪೂಜಾರಿ ಚಿತ್ರಕ್ಕೆ ಹೆಚ್ಚು ಎನ್ನುವಷ್ಟು ವೇಗ ಕೊಡಬೇಕಿತ್ತು. ಸೆಂಟಿಮೆಂಟ್‌ಗೆ ಜಾಗವಿದ್ದರೂ ಅದು ಗಟ್ಟಿಯಾಗಿಲ್ಲ. ನಾಯಕ ಸತೀಶ್ ರಾಜ್ ಮತ್ತು ನಾಯಕಿ ಗೌತಮಿ ಮುಗ್ಧರ ಪಾತ್ರ ನಿರ್ವಹಿಸಲು ಸಾಕಷ್ಟು ಶ್ರಮ ಹಾಕಿದ್ದಾರಾದರೂ ಇನ್ನಷ್ಟು ಪಕ್ವತೆ ಬೇಕಿತ್ತು. ಸುರೇಂದ್ರನಾಥ್ ಸಂಗೀತ, ಅಭಿಷೇಕ್ ಕ್ಯಾಮರಾ ಒಂದಷ್ಟು ಹಿತವಾಗಿವೆ.

ಚಿತ್ರ: ಕಿನಾರೆ
ತಾರಾಗಣ: ಸತೀಶ್ ರಾಜ್, ಗೌತಮಿ ಜಾಧವ್, ಅಪೇಕ್ಷಾ, ದತ್ತಣ್ಣ, ದಿನೇಶ್ ಮಂಗಳೂರು, ವೀಣಾ ಸುಂದರ್, ಸಿಹಿಕಹಿ ಚಂದ್ರು, ಕುರಿ ಪ್ರತಾಪ್

ನಿರ್ದೇಶನ: ದೇವರಾಜ್ ಪೂಜಾರಿ

ಸಂಗೀತ: ಸುರೇಂದ್ರನಾಥ್
ಛಾಯಾಗ್ರಹಣ: ಅಭಿಷೇಕ್ ಕಾಸರಗೋಡು
ರೇಟಿಂಗ್: **

click me!