ಅಪ್ಪನಿಗೆ ಬೈದ ಅಂಬಿ ಪುತ್ರ

By Web DeskFirst Published Sep 29, 2018, 10:03 AM IST
Highlights

ಅಪ್ಪ ಅಂಬರೀಶ್ ಥರಾನೇ ಮಗ ಅಭಿಷೇಕ್ ಸಿಕ್ಕಾಪಟ್ಟೆ ಲೈವ್ಲೀ. ಯಾವಾಗಲೂ ಎಲ್ಲರೂ ಹ್ಯಾಪಿಯಾಗಿರಬೇಕು ಅನ್ನೋ ಮನೋಭಾವ. ಅಮ್ಮ ಸುಮಲತಾ ಅಂದ್ರೆ ಪ್ರೀತಿ. ತಾನೇ ಹೀರೋ ಆಗಿರುವ ಹೊತ್ತಲ್ಲಿ ತಂದೆ ಹೀರೋ ಆಗಿರುವ ‘ಅಂಬಿ ನಿಂಗ್ ವಯಸ್ಸಾಯ್ತೋ’ ಸಿನಿಮಾ ನೋಡಿ ಭಾವುಕರಾಗಿದ್ದಾರೆ. ಆ ಮಾತುಗಳು ಇಲ್ಲಿವೆ.

‘ಚಿತ್ರದಲ್ಲಿ ಮಗ ತಂದೆಗೆ ಬೈಯುವ ಸೀನ್ ನೋಡಿ ತಕ್ಷಣ ಪಕ್ಕದಲ್ಲಿ ಕೂತಿದ್ದ ಅವರಿಗೊಂದು ಲುಕ್ ಕೊಟ್ಟೆ. ಆ ಸೀನ್ ನೋಡಿಯೇ ನಾನು ಫಿದಾ ಆಗಿಬಿಟ್ಟೆ. ಬಹಳ ಚೆನ್ನಾಗಿ ಮಾಡಿದ್ದಾರೆ. ಅದೆಲ್ಲಾ ಸಿನಿಮಾದಲ್ಲಿ ಮಾತ್ರ ಸಾಧ್ಯ. ನಿಜ ಜೀವನದಲ್ಲಿ ಅಂಬಿಗೆ ಮಗ ಬೈಯುವುದು ದೇವರಾಣೆ ಸಾಧ್ಯ ಇಲ್ಲ. ಈ ಚಿತ್ರ ಅವರ ಬೆಸ್ಟ್ ಪರ್ಫಾರ್ಮೆನ್ಸ್‌ಗಳಲ್ಲಿ ಒಂದು.’

-ಹೀಗೆ ಹೇಳಿದ ಅಭಿಷೇಕ್ ಅಂಬರೀಶ್ ಖುಷಿಯಾಗಿದ್ದಾರೆ. ಇಪ್ಪತ್ತು ವರ್ಷದ ನಂತರ ತಂದೆಯನ್ನು ಹೀರೋ ಪಾತ್ರದಲ್ಲಿ ನೋಡಿ ಭಾವುಕರಾಗಿದ್ದಾರೆ, ಸಂತೋಷವಾಗಿದ್ದಾರೆ ಮತ್ತು ಅಂಬರೀಶ್ ಅವರಿಗೆ ಲೈಟಾಗಿ ಕಾಲೆಳೆದಿದ್ದೂ ಇದೆ. ಪ್ರಸ್ತುತ ‘ಅಮರ್’ ಚಿತ್ರದ ಚಿತ್ರೀಕರಣದಲ್ಲಿರುವ ಅಭಿಷೇಕ್ ತಂದೆಯ ಕುರಿತು, ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದ ಕುರಿತು, ತಮ್ಮ ಬದುಕಿನ ಕುರಿತು ಮಾತನಾಡಿದ್ದು ಇಲ್ಲಿದೆ.

  • ನನ್ನ ಜನರೇಷನ್ನಿನ ಹುಡುಗರಲ್ಲೇ ನಾನು ಅವರ ಮೊದಲ ಫ್ಯಾನ್. ನನಗೆ ಬುದ್ಧಿ ಬಂದ ನಂತರ ಅವರು ಒಬ್ಬರೇ ಹೀರೋ ಆಗಿ ಅಭಿನಯಿಸಿದ ಚಿತ್ರ ನೋಡಿ ಬಂದು ವಿಸ್ಮಿತನಾಗಿದ್ದೇನೆ. ಎಂಥಾ ಎನರ್ಜಿ. ಕೆಲವು ದೃಶ್ಯಗಳನ್ನು ನೋಡಿಯಂತೂ ನನಗೆ ಇವರು ಹೀಗೆಲ್ಲಾ ಮಾಡಿದ್ದಾರಾ ಅಂತ ಅಚ್ಚರಿ. ಕೆಲವು ಸೀನ್‌ಗಳನ್ನು ನೋಡಿ ತುಂಬಾ ಫನ್ನಿ ಅನ್ನಿಸ್ತು. ಅವರಿಗೆ ವಯಸ್ಸಾಗಿದ್ರೂ ಸಣ್ಣ ವಯಸ್ಸಿನ ಹುಡುಗರ ಲವ್ ಸ್ಟೋರಿ ಇಲ್ಲಿದೆ. ಈ ಚಿತ್ರ ನೋಡಿ ಅವರಿಂದ ಎಷ್ಟೊಂದು ಕಲಿಯುವುದು ಬಾಕಿ ಇದೆ ಅಂತನ್ನಿಸಿದೆ ನಂಗೆ.
  • ನನಗೆ ತುಂಬಾ ಚೆನ್ನಾಗಿ ನೆನಪಿರುವ ಅವರ ಚಿತ್ರ ‘ದೇವರ ಮಗ’. ನಾನು ಅಮ್ಮ ಎಲ್ಲಾ ಮಲ್ಲೇಶ್ವರಂನ ಥಿಯೇಟರ್‌ನಲ್ಲಿ ಸಿನಿಮಾ ನೋಡಿದ್ವಿ. ಅದರಲ್ಲೂ ಒಂದು ಅಪ್ಪ, ಮಗನ ದೃಶ್ಯ ಬರತ್ತೆ. ಅದರಲ್ಲಿ ಎಷ್ಟು ಚೆನ್ನಾಗಿ ಮಾಡಿದ್ರು ಅಂದ್ರೆ ನಂಗೆ ಅಳುವೇ ಬಂದಿತ್ತು. ಅಮ್ಮನೂ ಕಣ್ಣೀರು ಹಾಕಿದ್ರು. ಈ ಚಿತ್ರ ಮುಗಿದ ಮೇಲೆ ಭಾವುಕನಾಗಿ ಅಪ್ಪನನ್ನು ತಬ್ಬಿಕೊಂಡುಬಿಟ್ಟೆ. ಅಪ್ಪನ ಸಿನಿಮಾ ಅಂತ ಬಂದಾಗ ಮೊದಲು ನನಗೆ ನೆನಪಾಗುವುದು ‘ದಿಗ್ಗಜರು’, ‘ದೇವರ ಮಗ’, ‘ಅಂತ’, ‘ಚಕ್ರವ್ಯೆಹ’ ಇತ್ಯಾದಿ. ಇದೀಗ ಅವರ ಸಿನಿಮಾ ಅಂದಾಗ ಮೊದಲು ‘ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರ ಬರತ್ತೆ.
  • ಅಪ್ಪ-ಅಮ್ಮ ಆದ ಮೇಲೆ ನಮ್ಮ ಫ್ಯಾಮಿಲಿಯಿಂದ ನಾನೇ ಮೊದಲು ಚಿತ್ರರಂಗಕ್ಕೆ ಬರುತ್ತಿದ್ದೇನೆ. ತುಂಬಾ ಜನ ಚಿತ್ರರಂಗಕ್ಕೆ ಬಂದು ನಮ್ಮ ಫ್ಯಾಮಿಲಿ ಆದರು. ಈಗ ನಾನೇ ಚಿತ್ರರಂಗಕ್ಕೆ ಬರುತ್ತಿದ್ದೇನೆ. ಅದರಲ್ಲೂ ಅಪ್ಪ- ಅಮ್ಮ ಇಬ್ಬರೂ ಒಳ್ಳೆಯ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅಂಬಿ ಚಿತ್ರದಲ್ಲಿ
  • ಅಪ್ಪನಿಗೆ ವಯಸ್ಸಾದ ತಂದೆಯ ಪಾತ್ರ. ‘ತಾಯಿಗೆ ತಕ್ಕ ಮಗ’ ಚಿತ್ರದಲ್ಲಿ ಅಮ್ಮನಿಗೆ ತುಂಬಾ ಸ್ಟ್ರಾಂಗ್ ಪಾತ್ರ ಇದೆ. ನನ್ನದು ‘ಅಮರ್’ ಚಿತ್ರ. ಈ ಮೂರು ಚಿತ್ರದಲ್ಲಿ ಗರ್ಲ್‌ಫ್ರೆಂಡ್-ಬಾಯ್‌ಫ್ರೆಂಡ್ ಅಂದ್ರೆ ನನ್ನದೇ.
  • ಅಪ್ಪ ನನ್ನ ಸಿನಿಮಾ ಸೀನ್‌ಗಳನ್ನೆಲ್ಲಾ ನೋಡುತ್ತಾರೆ. ಅಚ್ಚರಿ ಅಂದ್ರೆ ಅವರು ತುಂಬಾ ಪ್ರೀತಿಯಿಂದ, ಕಾಳಜಿಯಿಂದ ನನಗೆ ಸಲಹೆ ನೀಡುತ್ತಾರೆ. ಇದೆಲ್ಲಾ ನಂಗೆ ತುಂಬಾ ಹೊಸದು. ಸ್ಕೂಲಿಗೆ ಹೋಗುವಾಗಲೆಲ್ಲಾ ಅವರು ನನಗೆ ಪ್ರೀತಿಯಿಂದ ಹೇಳಿದ್ದೇ ಇಲ್ಲ. ಗದರಿದ್ದೇ ಜಾಸ್ತಿ. ಆದರೆ ಸಿನಿಮಾ ವಿಷಯಕ್ಕೆ ಬಂದಾಗ ಮಾತ್ರ ಎಲ್ಲವೂ ಬದಲಾಗಿದೆ. ಅದೇ ಥರ ಅಪ್ಪನ ಅಭಿಮಾನಿಗಳೂ ಭಾರಿ ಪ್ರೀತಿ ತೋರಿಸುತ್ತಿದ್ದಾರೆ.- ಸಿನಿಮಾ ನೋಡಿ ಬಂದ ಮೇಲೆ ಅಮ್ಮ ತಂದೆಯ ಬಳಿ ನಿಮ್ಮ ಕೆರಿಯರ್‌ನ ಪೀಕ್‌ನಲ್ಲೂ ಇಷ್ಟೊಂದು ಚೆನ್ನಾಗಿ ನಟಿಸಲಿಲ್ಲವಲ್ರೀ ಅಂತ ಕಾಲೆಳೆದರು. ನಾನಂತೂ ಥ್ರಿಲ್ ಆಗಿದ್ದೇನೆ. ಇಡೀ ಟೀಂ ಮೇಲೆ ಪ್ರೀತಿ ಹೆಚ್ಚಾಗಿದೆ. ನಿರ್ದೇಶಕ ಗುರುದತ್ತ ನನ್ನ ಫ್ರೆಂಡ್ ಆಗಿದ್ದಾರೆ. ಸುದೀಪ್, ಸುಹಾಸಿನಿ ಮೇಡಂ, ಶ್ರುತಿ ಹರಿಹರನ್ ಎಲ್ಲರದೂ ಅದ್ಭುತ ನಟನೆ. ಹಾಡುಗಳಂತೂ ಸಕತ್ತಾಗಿದೆ.
click me!