ಕಲ್ಪನೆಗೂ ಮೀರಿದ ನಟ 'ಪ್ರಣಯರಾಜ' : 'ಬೆಸುಗೆ' ಕಲಾವಿದನಿಗೆ ಸಿನಿಮಾ ಬದುಕಿನ 50ನೇ ಸಂಭ್ರಮ

Published : Feb 11, 2017, 06:52 PM ISTUpdated : Apr 11, 2018, 12:45 PM IST
ಕಲ್ಪನೆಗೂ ಮೀರಿದ ನಟ 'ಪ್ರಣಯರಾಜ' : 'ಬೆಸುಗೆ' ಕಲಾವಿದನಿಗೆ ಸಿನಿಮಾ ಬದುಕಿನ 50ನೇ ಸಂಭ್ರಮ

ಸಾರಾಂಶ

ಹೃದಯ ಶ್ರೀಮಂತಿಕೆ ಹೊಂದಿರುವ ನಟರ ಪೈಕಿ ಶ್ರೀನಾಥ್ ಕೂಡ ಒಬ್ಬರು. ಅವರ ಅಭಿನಯದ ಒಂದೊಂದು ಚಿತ್ರಗಳು ಮೈಲುಗಲ್ಲು. ಸದಾಭಿರುಚಿಯ ನಟ ಶ್ರೀನಾಥ್ ಅವರ ಬೆಳ್ಳಿ ತೆರೆಯ ಬದುಕಿಗೆ ಐವತ್ತು ವರ್ಷ ತುಂಬಿರುವುದು ಸಂತಸದ ಸಂಗತಿ

ಬೆಂಗಳೂರು(ಫೆ.12): ಅಭಿಮಾನಿಗಳಿಂದ ‘ಪ್ರಣಯ ರಾಜ’ ಎಂಬ ಬಿರುದು ಪಡೆದಿರುವ ಡಾ. ಶ್ರೀನಾಥ್ ಅವರು ಕಲ್ಪನೆಗೂ ಮೀರಿದ ನಟ. ಯಾವ ಪಾತ್ರ ಕೊಟ್ಟರೂ ಹೃದಯಾಂತರಾಳದಿಂದ ಅಭಿನಯಿಸುತ್ತಾರೆ ಎಂದು ಗೀತರಚನೆಕಾರ ಎಂ.ಎನ್.ವ್ಯಾಸರಾವ್ ಶ್ಲಾಘಿಸಿದರು.

ಹಿರಿಯ ನಟ ಡಾ.ಶ್ರೀನಾಥ್ ಅವರ ಸಿನಿಮಾ ಬದುಕಿಗೆ 50 ವರ್ಷ ಸಂದಿದ ಹಿನ್ನೆಲೆಯಲ್ಲಿ ಕಲಾನಮನ ಸಾಂಸ್ಕೃತಿಕ ಸಂಸ್ಥೆಯು ಶನಿವಾರ ಬಸವನಗುಡಿಯ ಕಹಳೆ ಬಂಡೆ ಉದ್ಯಾನದಲ್ಲಿ ಆಯೋಜಿಸಿದ್ದ ‘ಬೆಳ್ಳಿ ತೆರೆಯ ಬೆಸುಗೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪುಟ್ಟಣ್ಣ ಕಣಗಾಲ್ ಅವರು ನಿರ್ದೇಶನದಲ್ಲಿ ಮೂಡಿ ಬಂದ ಶುಭಮಂಗಳ ಚಿತ್ರದಲ್ಲಿ ಶ್ರೀನಾಥ್ ನಾಯಕನ ಪಾತ್ರ ನಿರ್ವಹಿಸುತ್ತಿದ್ದರು. ಈ ಚಿತ್ರಕ್ಕೆ ನಾನು ಎರಡು ಹಾಡು ಬರೆದಿದ್ದೆ. ಅಂದು ಶ್ರೀನಾಥ್ ಅವರು ನನಗೆ ಪರಿಚಿತರಾದರು. ಅಂದು ಆರಂಭವಾದ ನಮ್ಮ ಒಡನಾಟ ಇಂದಿಗೂ ಮುಂದುವರಿದಿದೆ. ಹೃದಯ ಶ್ರೀಮಂತಿಕೆ ಹೊಂದಿರುವ ನಟರ ಪೈಕಿ ಶ್ರೀನಾಥ್ ಕೂಡ ಒಬ್ಬರು. ಅವರ ಅಭಿನಯದ ಒಂದೊಂದು ಚಿತ್ರಗಳು ಮೈಲುಗಲ್ಲು. ಸದಾಭಿರುಚಿಯ ನಟ ಶ್ರೀನಾಥ್ ಅವರ ಬೆಳ್ಳಿ ತೆರೆಯ ಬದುಕಿಗೆ ಐವತ್ತು ವರ್ಷ ತುಂಬಿರುವುದು ಸಂತಸದ ಸಂಗತಿ. ಅವರ ಕಲಾ ಬದುಕು ಮತ್ತಷ್ಟು ಶ್ರೀಮಂತವಾಗಲಿ. ಕಲಾ ಸೇವೆ ಹೀಗೆ ಮುಂದುವರಿಯಲಿ ಎಂದು ಹಾರೈಸಿದರು.

ಕವಿ ಬಿ.ಆರ್.ಲಕ್ಷ್ಮಣ ರಾವ್ ಮಾತನಾಡಿ, ಕಾಲೇಜು ದಿನಗಳಲ್ಲಿ ನಾನು ಶ್ರೀನಾಥ್ ಅವರ ದೊಡ್ಡ ಅಭಿಮಾನಿಯಾಗಿದ್ದೆ. ಈ ನಡುವೆ ಶುಭಮಂಗಳ ಚಿತ್ರಕ್ಕೆ ಒಂದು ಹಾಡು ರಚಿಸುವಂತೆ ಆಹ್ವಾನ ಬಂದಿತು. ಆಗ ನನಗಾದ ಆನಂದಕ್ಕೆ ಪಾರವೇ ಇರಲಿಲ್ಲ ಎಂದು ಆ ಘಟನೆಯನ್ನು ಮೆಲುಕು ಹಾಕಿದರು. ಮೂರು ದಶಕಗಳಿಗೂ ಮೀರಿದ ಸ್ನೇಹಬಂಧ ನಮ್ಮದು. ಸರಳ-ಸಜ್ಜನಿಯ ವ್ಯಕ್ತಿತ್ವದ ರೂಪಕವಾದ ಶ್ರೀನಾಥ್ ಹಾಗೂ ಅವರ ಕುಟುಂಬದ ಜತೆಗಿನ ಹಲವು ಅವಿಸ್ಮರಣೀಯ ಘಟನೆಗಳು ಸ್ಮತಿಪಟಲದಲ್ಲಿ ಅಚ್ಚಾಗಿವೆ. ಶ್ರೀನಾಥ್ ಅವರ 50 ವರ್ಷದ ಕಲಾ ಬುದುಕು ದೊಡ್ಡ ಸಾಧನೆಯೇ ಸರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ವೇಳೆ ಶ್ರೀನಾಥ್- ಗೀತಾ ದಂಪತಿಯನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಹಿರಿಯ ನಟಿ ಪದ್ಮ ವಾಸಂತಿ, ಸಿನಿಮಾ ಛಾಯಾಚಿತ್ರಗಾರ ಪ್ರಗತಿ ಅಶ್ವತ್ಥ ನಾರಾಯಣ, ಕಲಾನಮನ ಸಂಸ್ಥೆಯ ಸುಜಯ್ ಮತ್ತಿತರರು ಉಪಸ್ಥಿತರಿದ್ದರು.

ಸ್ನೇಹದ ಕಡಲಲ್ಲಿ...

ಬಸವನಗುಡಿಗೂ ನನಗೂ ಅವಿನಾಭಾವ ಸಂಬಂಧವಿದೆ. ಬಾಲ್ಯ, ಶಾಲಾ-ಕಾಲೇಜು ದಿನಗಳ ನೂರಾರು ನೆನಪುಗಳ ಬುತ್ತಿಯಲ್ಲಿ ಬಸವನಗುಡಿಗೆ ಪ್ರಮುಖ ಪಾತ್ರವಿದೆ. ನಾನು ಬಾಲ್ಯದಲ್ಲಿ ಆಡಿ ಬೆಳೆದ ಈ ಪಾರ್ಕ್‌ನಲ್ಲಿ ನನ್ನ ಕಲಾ ಬುದುಕಿಗೆ 50 ವರ್ಷ ತುಂಬಿದ ಮೊದಲ ಕಾರ್ಯಕ್ರಮ ನಡೆಯುತ್ತಿದೆ. ಇದೊಂದು ಕುಟುಂಬದ ಕಾರ್ಯಕ್ರಮದ ಭಾವನೆ ತರುತ್ತಿದೆ. ಇಲ್ಲಿನ ಜನರ ಪ್ರೀತಿ, ವಿಶ್ವಾಸ, ಹಾರೈಕೆಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಈ ಎಲ್ಲ ಪ್ರೀತ್ಯಾದರಗಳಿಗೆ ನಾನು ಚಿರಋಣಿ ಎಂದು ನಟ ಶ್ರೀನಾಥ್ ಭಾವುಕರಾದರು.

ನಾನು ಈ ಮಟ್ಟಕ್ಕೆ ಬೆಳೆಯಲು ಬಸವನಗುಡಿ, ಬೆಂಗಳೂರು ಸೇರಿದಂತೆ ಇಡೀ ಕರ್ನಾಟಕದ ಜನತೆ ತೋರಿದ ಪ್ರೀತಿಯೇ ಕಾರಣ. ಅಂತೆಯೆ ನನ್ನ ಸುಖ-ದು:ಖ, ನೋವು-ನಲಿವುಗಳನ್ನು ಸಮನಾಗಿ ಹಂಚಿಕೊಂಡು ನನ್ನ ಪ್ರತಿ ಹೆಜ್ಜೆಗೂ ಬೆನ್ನೆಲುಬಾಗಿರುವ ಪತ್ನಿಯ ಗೀತಾಳ ಸಹಕಾರ ಮರೆಯಲು ಸಾಧ್ಯವಿಲ್ಲ. ಇದೇ ಪ್ರೀತಿ-ವಿಶ್ವಾಸದಿಂದ ಸ್ನೇಹದ ಕಡಲಿನಲಿ... ನೆನಪಿನ ದೋಣಿಯಲಿ... ಗೀತೆಯಂತೆ ಇನ್ನು ಮುಂದೆಯೂ ಪಯಣಿಗರಾಗಿ ಸಾಗೋಣ ಎಂದು ಧನ್ಯವಾದ ಅರ್ಪಿಸಿದರು.

ಗೀತೆಗಳ ರಸದೌತಣ...

‘ಬೆಳ್ಳಿ ತೆರೆಯ ಬೆಸುಗೆ’ ಕಾರ್ಯಕ್ರಮದಲ್ಲಿ ನಟ ಶ್ರೀನಾಥ್ ಅಭಿನಯದ ಕೆಲ ಚಲನಚಿತ್ರಗಳ ಸೂಪರ್ ಹಿಟ್ ಗೀತೆಗಳ ಗಾಯನ ಪ್ರೇಕ್ಷಕರ ಕಿವಿ ತಂಪಾಗಿಸಿತು. 70, 80ರ ದಶಕದ ಉಪಾಸನೆ, ಅನಿರೀಕ್ಷಿತ, ನಾ ಮೆಚ್ಚಿದ ಹುಡುಗ, ಪಾವನಾ ಗಂಗಾ, ಮಾನಸ ಸರೋವರ ಮೊದಲಾದ ಚಿತ್ರಗಳ ಗೀತೆಗಳು ಖ್ಯಾತ ಗಾಯಕರಾದ ನಾಗಚಂದ್ರಿಕಾ ಭಟ್, ಎಚ್.ಕೆ.ರಘು, ಶ್ರೀನಿವಾಸಮೂರ್ತಿ, ದಾಕ್ಷಿಯಿಣಿ ಅವರ ಸುಮಧುರ ಕಂಠದಲ್ಲಿ ಮೂಡಿ ಬಂದವು. ಆಕರ್ಷಕ ಕಂಠದ ಗಾಯಕರು ಪ್ರೇಕ್ಷರ ಮೆಚ್ಚುಗೆ ಪಾತ್ರರಾದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ದಳಪತಿ ವಿಜಯ್ 'ಜನ ನಾಯಗನ್' ಚಿತ್ರದ ಕಥೆ ಇದೇನಾ? ಲೀಕ್ ಆದ ಸ್ಟೋರಿ.. ಶಾಕ್ ಆಯ್ತು ಚಿತ್ರತಂಡ!
ನಾನು ಅವಳಲ್ಲ.. ಕಾಳ್ಗಿಚ್ಚಿನಂತೆ ಹರಡಿದ ಎಐ ಫೋಟೋ: ರಶ್ಮಿಕಾ, ಶ್ರೀಲೀಲಾ ಬಳಿಕ ಸಿಟ್ಟಾದ ನಿವೇತಾ ಥಾಮಸ್