
ಬೆಂಗಳೂರು(ಫೆ.11): ಮದುವೆಗಳು ಈಗ ಸಂಪ್ರದಾಯಿಕ ಗೋಡೆಗಳನ್ನು ದಾಟಿವೆ. ವೈಯಕ್ತಿಕ ಹಾಗೂ ಮನೆಯ ಸಂಭ್ರಮ ಈಗ ಸಾರ್ವಜನಿಕ ಕಾರ್ಯಕ್ರಮವೂ ಆಗುತ್ತಿದೆ. ಅದಕ್ಕೆ ತಕ್ಕಂತೆ ಮದುವೆಗಳು ಹೇಗೆಲ್ಲ ಆಗಬಹುದು... ಹಾರುತ್ತಿರುವ ವಿಮಾನದಲ್ಲಿ, ಪ್ಯಾರಚೂಟ್‌ನಲ್ಲಿ, ಸ್ಕೈ ಡೈವ್ ಮಾಡುವಾಗ, ತೂಗು ಸೇತುವೆ ಮೇಲೆ, ನೀರಿನಾಳದಲ್ಲಿ ಹೀಗೆ ಭೂ ತಾಯಿಯನ್ನು ಬಿಟ್ಟು ಮದುವೆಗಳು ಸಾಕಷ್ಟುಎತ್ತರಕ್ಕೇರಿವೆ. ವಿದೇಶಗಳಲ್ಲಿ ಮಾತ್ರವಲ್ಲ, ಭಾರತದಂತಹ ಮಡಿವಂತ ದೇಶಗಳಲ್ಲೂ ಮದುವೆಗಳು ಭಿನ್ನ-ವಿಭಿನ್ನವಾಗಿ ನಡೆಯುತ್ತಿವೆ. ಸದ್ಯ ಬೆಂಗಳೂರಿನಲ್ಲೊಂದು ಜೋಡಿ ವಿಭಿನ್ನವಾಗಿ ಮದುವೆಯಾಗುವ ಮೂಲಕ ತಮ್ಮ ಹೊಸ ಜೀವನದ ಮೊದಲ ಹೆಜ್ಜೆಯನ್ನು ನೆನಪಿನ ಬುತ್ತಿಯಾಗಿಟ್ಟುಕೊಳ್ಳುವುದಕ್ಕೆ ಹೊರಟಿದೆ. ಆ ಜೋಡಿಯೇ ನಿರಂಜನ್ ದೇಶಪಾಡೆ ಹಾಗೂ ಯಶಸ್ವಿನಿ ಗಂಗಾಧರ್ ಆಚಾರಿ. ನಿರೂಪಕರಾಗಿ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ನಿರಂಜನ್, ಬಿಗ್ ಬಾಸ್ ಮನೆಗೆ ಹೋಗಿ ಬಂದ ಮೇಲೆ ಸದ್ಯ ಸೆಲಿಬ್ರಿಟಿ ಆಗಿದ್ದಾರೆ. ಈಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬರುತ್ತಿರುವ ‘ಮಜಾಭಾರತ' ಎನ್ನುವ ರಿಯಾಲಿಟಿ ಶೋನ ನಿರೂಪಕರಾಗಿದ್ದಾರೆ.
ಇದೇ ಮಜಾಭಾರತ ಶೋನಲ್ಲಿ ನಿರಂಜನ್ ಹಾಗೂ ಯಶಸ್ವಿನಿ ಅವರು ಹೊಸ ಜೀವನಕ್ಕೆ ಕಾಲಿಡುವ ನಿರ್ಧಾರ ಕೈಗೊಂಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಅವರು ಕೂಡ ತಮ್ಮ ವಾಹಿನಿಯ ರಿಯಾಲಿಟಿ ಶೋನಲ್ಲಿ ಮದುವೆಯಾಗುವ ನಿರಂಜನ್ ಅವರ ತೀರ್ಮಾನಕ್ಕೆ ಒಪ್ಪಿಗೆ ಕೊಟ್ಟಿದ್ದಾರೆ. ಮಾಚ್‌ರ್ ತಿಂಗಳಲ್ಲಿ ಇಬ್ಬರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಮಜಾಭಾರತ ರಿಯಾಲಿಟಿ ಶೋನ ವೇದಿಕೆಯಲ್ಲೇ ಕಲ್ಯಾಣ ಮಂಟಪ ನಿರ್ಮಾಣ ಮಾಡಿ ಮದುವೆ ಆಗಲಿದ್ದಾರೆ. ಇಷ್ಟಕ್ಕೂ ಒಂದು ರಿಯಾಲಿಟಿ ಶೋನಲ್ಲೇ ಮದುವೆಯಾಗುವಂತಹ ನಿರ್ಧಾರ ತೆಗೆದುಕೊಂಡಿದ್ದು ಯಾಕೆ? ‘ನನಗೆ ಜೀವನ ಕೊಟ್ಟಿದ್ದೇ ಕಿರುತೆರೆಯ ವೇದಿಕೆ. ನಿರಂಜನ್ ದೇಶಪಾಂಡೆ ಎನ್ನುವ ಹೆಸರು ಗೊತ್ತಾಗಿತ್ತು ಟಿವಿಯಿಂದಲೇ. ಅದರಲ್ಲೂ ಬಿಗ್ ಬಾಸ್‌ಗೆ ಹೋಗಿ ಬಂದ ಮೇಲೆ ನನ್ನ ಹೆಸರು ರಾಜ್ಯದ ಮೂಲೆ ಮೂಲೆಗೂ ತಲುಪಿದೆ. ಹೀಗೆ ನನಗೆ ವೃತ್ತಿ ಪಯಣದಲ್ಲಿ ಹೊಸ ಜೀವನ ತಂದುಕೊಟ್ಟಕಿರುತೆರೆಯ ವೇದಿಕೆಯಲ್ಲೇ ನನ್ನ ವೈಯಕ್ತಿಕ ಬದುಕಿನ ಹೊಸ ಹೆಜ್ಜೆಯನ್ನು ಯಾಕೆ ಮುಂದುವರೆಸಬಾರದು? ಎಂದು ಯೋಚಿಸಿದಾಗ ನಾನೇ ನಡೆಸಿಕೊಡುವ ಮಜಾಭಾರತ ರಿಯಾಲಿಟಿ ಶೋನಲ್ಲಿ ವಿವಾಹ ಆಗುವುದಕ್ಕೆ ನಿರ್ಧರಿಸಿದೆ. ನನ್ನ ಈ ನಿಲುವನ್ನು ಯಶಸ್ವಿನಿ ಕೂಡ ಒಪ್ಪಿಕೊಂಡಿದ್ದು, ಎರಡೂ ಮನೆಯವರೂ ನಮ್ಮ ಈ ನಡೆಗೆ ಬೆಂಬಲ ಸೂಚಿಸಿದ್ದಾರೆ. ಇನ್ನು ಕಲರ್ಸ್ ಕನ್ನಡ ವಾಹಿನಿ ಕೂಡ ಇದಕ್ಕೆ ಒಪ್ಪಿಗೆ ಕೊಟ್ಟಿದೆ. ಮಜಾಭಾರತ ಶೋನ ಒಂದು ಎಫಿಸೋಡ್ ಅನ್ನು ನನ್ನ ಮದುವೆಗಾಗಿ ಸೀಮಿತ ಮಾಡಿದ್ದಾರೆ' ಎನ್ನುತ್ತಾರೆ ನಿರಂಜನ್ ದೇಶಪಾಂಡೆ.
ಹಾಗೆ ನೇಡಿದರೆ ನಿರಂಜನ್ ಅವರು ಬಿಗ್‌ಬಾಸ್ ಶೋನಲ್ಲಿ ಭಾಗವಹಿಸಿದ್ದರಿಂದ ತಮ್ಮ ಮದುವೆಯ ದಿನಾಂಕವನ್ನೇ ಮುಂದೂಡಿದ್ದರು. ಯಾವ ವಾಹಿನಿಯ ಕಾರ್ಯಕ್ರಮಕ್ಕಾಗಿ ಮದುವೆ ದಿನಾಂಕವನ್ನು ಮುಂದೂಡಿದ್ದರೋ ಅದೇ ವಾಹಿನಿಯ ಕಾರ್ಯಕ್ರಮದಲ್ಲಿ ಮಾಚ್‌ರ್ ತಿಂಗಳಲ್ಲಿ ಮದುವೆ ಆಗುತ್ತಿದ್ದಾರೆ. ಆ ಮೂಲಕ ಹೊಸ ಬದುಕು ಕೊಟ್ಟು ಕ್ಷೇತ್ರದಲ್ಲೇ ಹೊಸ ಜೀವನಕ್ಕೂ ಕಾಲಿಡುತ್ತಿದ್ದಾರೆ ನಿರಂಜನ್ ಹಾಗೂ ಯಶಸ್ವಿನಿ ಜೋಡಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.