
Yash talk on Ravana in Aap Ki Adalat video goes viral: 'ನಾನೇ ಬೆಸ್ಟ್ ರಾವಣ' ಎಂದ ಯಶ್; ಆಪ್ ಕಿ ಅದಾಲತ್ ಯಶ್ ಸಂದರ್ಶನ ಸಖತ್ ವೈರಲ್!
ಪ್ಯಾನ್ ಇಂಡಿಯಾ ಸ್ಟಾರ್, ಸ್ಯಾಂಡಲ್‌ವುಡ್‌ನ ಹೆಮ್ಮೆ ರಾಕಿಂಗ್ ಸ್ಟಾರ್ ಯಶ್ ಎಂದರೆ ಅಲ್ಲಿ ಒಂದು ರೀತಿಯ 'ಖದರ್' ಇರುತ್ತದೆ. 'ಕೆಜಿಎಫ್' ಮೂಲಕ ಇಡೀ ವಿಶ್ವದ ಗಮನ ಸೆಳೆದ ಯಶ್, ಈಗ 'ಟಾಕ್ಸಿಕ್' ಮತ್ತು ಬಹುನಿರೀಕ್ಷಿತ 'ರಾಮಾಯಣ' ಸಿನಿಮಾಗಳ ಮೂಲಕ ಬಾಕ್ಸ್ ಆಫೀಸ್ ಧೂಳೀಪಟ ಮಾಡಲು ಸಜ್ಜಾಗುತ್ತಿದ್ದಾರೆ. ಆದರೆ, ಇತ್ತೀಚೆಗೆ ಎಲ್ಲರನ್ನೂ ಕಾಡುತ್ತಿದ್ದ ಒಂದು ದೊಡ್ಡ ಪ್ರಶ್ನೆಯೆಂದರೆ, "ಯಶ್ ಅವರು ರಾಮಾಯಣದಲ್ಲಿ ರಾಮನ ಪಾತ್ರ ಮಾಡದೆ, ರಾವಣನ ಪಾತ್ರವನ್ನೇ ಯಾಕೆ ಆಯ್ಕೆ ಮಾಡಿಕೊಂಡರು?" ಎಂಬುದು.
ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಈಗ ಖುದ್ದು ಯಶ್ ಅವರೇ ಅತ್ಯಂತ ಪವರ್‌ಫುಲ್ ಶೈಲಿಯಲ್ಲಿ ಉತ್ತರ ನೀಡಿದ್ದಾರೆ!
ಖ್ಯಾತ ಪತ್ರಕರ್ತ ರಜತ್ ಶರ್ಮಾ ಅವರ ಜನಪ್ರಿಯ ಕಾರ್ಯಕ್ರಮ 'ಆಪ್ ಕಿ ಅದಾಲತ್'ನಲ್ಲಿ ಭಾಗವಹಿಸಿದ್ದ ಯಶ್, ಅಲ್ಲಿ ಕೇಳಲಾದ ಪ್ರತಿಯೊಂದು ಗುಗ್ಲಿ ಎಸೆತಕ್ಕೂ ಸಿಕ್ಸರ್ ಬಾರಿಸಿದ್ದಾರೆ. ರಜತ್ ಶರ್ಮಾ ಅವರು ನೇರವಾಗಿಯೇ ಕೇಳಿದರು, "ಯಶ್ ಅವರೇ, ನೀವೇ ಈ ಸಿನಿಮಾಗೆ ಪ್ರೊಡ್ಯೂಸರ್ ಕೂಡ ಹೌದು. ಇಡೀ ಸಿನಿಮಾದ ಮೇಲೆ ನಿಮ್ಮ ಹಿಡಿತ ಇರುವಾಗ, ನೀವು ರಾಮನ ಪಾತ್ರವನ್ನೇ ಮಾಡಬಹುದಿತ್ತಲ್ಲವೇ? ಈ ರಾವಣನ ಕಾಟ ನಿಮಗೇಕೆ?" ಎಂದು.
ಇದಕ್ಕೆ ಯಶ್ ಕೊಟ್ಟ ಉತ್ತರ ಕೇಳಿದರೆ ಯಾರಾದರೂ ಬೆರಗಾಗಬೇಕು. "ನೋಡಿ, ಒಬ್ಬ ಹೀರೋನ ಗೆಲುವು ಎಷ್ಟು ದೊಡ್ಡದಾಗಿ ಕಾಣಬೇಕು ಎಂಬುದು ಎದುರಾಳಿ ವಿಲನ್ ಎಷ್ಟು ಪ್ರಬಲವಾಗಿದ್ದಾನೆ ಎನ್ನುವುದರ ಮೇಲೆ ನಿರ್ಧಾರವಾಗುತ್ತದೆ. ಪರದೆಯ ಮೇಲೆ ಶ್ರೀರಾಮನ ದೈವತ್ವ ಮತ್ತು ಶಕ್ತಿ ಜನರಿಗೆ ಸರಿಯಾಗಿ ಮನದಟ್ಟಾಗಬೇಕೆಂದರೆ, ಎದುರಿಗಿರುವ ರಾವಣ ಅಷ್ಟೇ ಅಜೇಯನಾಗಿರಬೇಕು. ಬ್ರಹ್ಮಾಂಡದ ಶಕ್ತಿಗಳನ್ನೆಲ್ಲಾ ಮೈಗೂಡಿಸಿಕೊಂಡಿರುವ, ಯಾರಿಂದಲೂ ಸೋಲಿಸಲು ಸಾಧ್ಯವಿಲ್ಲದ ರಾವಣನನ್ನು ಶ್ರೀರಾಮ ಸಂಹರಿಸಿದಾಗ ಸಿಗುವ ಆ ರೋಮಾಂಚನವೇ ಬೇರೆ. ಆ ಕಿಕ್ ಕೊಡಲು ರಾವಣನ ಪಾತ್ರ ಪವರ್‌ಫುಲ್ ಆಗಿರಲೇಬೇಕು," ಎಂದು ತರ್ಕಬದ್ಧವಾಗಿ ವಿವರಿಸಿದರು.
"ಇದು ನನ್ನ ಗುತ್ತಿಗೆ!"
ರಜತ್ ಶರ್ಮಾ ಅವರು ನಗುತ್ತಲೇ, "ಹಾಗಾದರೆ ಕೆಟ್ಟತನವನ್ನು ತೋರಿಸುವ ಗುತ್ತಿಗೆಯನ್ನು ನೀವೇ ಪಡೆದಿದ್ದೀರಾ?" ಎಂದು ಕಾಲೆಳೆದಾಗ, ಯಶ್ ಪಕ್ಕಾ 'ರಾಕಿ ಭಾಯ್' ಶೈಲಿಯಲ್ಲೇ ಉತ್ತರಿಸಿದರು. "ಖಂಡಿತವಾಗಿಯೂ ಹೌದು! ಆ ರಾವಣನ ಅಹಂಕಾರ, ಪ್ರಭಾವ ಮತ್ತು ಆ ಪ್ರಬಲ ವ್ಯಕ್ತಿತ್ವವನ್ನು ನನಗಿಂತ ಉತ್ತಮವಾಗಿ ಯಾರೂ ತೆರೆಯ ಮೇಲೆ ತರಲು ಸಾಧ್ಯವಿಲ್ಲ ಎಂಬ ನಂಬಿಕೆ ನನಗಿದೆ. ನಾನು ಪಾಸಿಟಿವ್ ಪಾತ್ರ ಮಾಡಿದರೂ ಅಷ್ಟೇ, ನೆಗೆಟಿವ್ ಪಾತ್ರ ಮಾಡಿದರೂ ಅಷ್ಟೇ; 'ಇದನ್ನು ನನಗಿಂತ ಚೆನ್ನಾಗಿ ಯಾರೂ ಮಾಡಲು ಸಾಧ್ಯವಿಲ್ಲ' ಎಂಬ ಆತ್ಮವಿಶ್ವಾಸದಲ್ಲೇ ನಾನು ಕೆಲಸ ಮಾಡುತ್ತೇನೆ. ಆಗ ಮಾತ್ರ ಔಟ್‌ಪುಟ್ ಅದ್ಭುತವಾಗಿ ಬರುತ್ತದೆ," ಎಂದರು.
ಅಹಂ ಬದಿಗಿಟ್ಟು ಭಾರತದ ಮಹಾಕಾವ್ಯಕ್ಕೆ ಸಾಕ್ಷಿ!
ಕೇವಲ ನಟನೆ ಮಾತ್ರವಲ್ಲದೆ, ಈ ಸಿನಿಮಾವನ್ನು ವಿಶ್ವದರ್ಜೆಯಲ್ಲಿ ತರಲು ಇಡೀ ತಂಡ ಶ್ರಮಿಸುತ್ತಿದೆ ಎಂದು ಯಶ್ ತಿಳಿಸಿದ್ದಾರೆ. "ನಾವು ಯಾರು ದೊಡ್ಡವರು, ಯಾರು ಚಿಕ್ಕವರು ಎಂಬ ವೈಯಕ್ತಿಕ ಅಹಂಗಳನ್ನು ಬದಿಗಿಟ್ಟು ಕೆಲಸ ಮಾಡುತ್ತಿದ್ದೇವೆ. ರಾಮಾಯಣ ಅನ್ನೋದು ನಮ್ಮ ದೇಶದ ಹೆಮ್ಮೆ. ಅದನ್ನು ಅಷ್ಟೇ ಭಕ್ತಿಯಿಂದ ಮತ್ತು ಅದ್ದೂರಿಯಾಗಿ ತೆರೆಯ ಮೇಲೆ ತರುತ್ತಿದ್ದೇವೆ," ಎಂದು ಯಶ್ ಹೇಳುವಾಗ ಅವರ ಕಣ್ಣಿನಲ್ಲಿ ಒಂದು ದೊಡ್ಡ ಕನಸು ಕಾಣುತ್ತಿತ್ತು.
ಸದ್ಯ ಯಶ್ ಅವರ ಈ ಖಡಕ್ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು "ನಮ್ಮ ರಾವಣನೇ ಬೆಸ್ಟ್!" ಎಂದು ಸಂಭ್ರಮಿಸುತ್ತಿದ್ದಾರೆ. ಯಶ್ ಅವರ ಈ ಹೊಸ ಅವತಾರ ನೋಡಲು ಈಗ ಇಡೀ ಭಾರತವೇ ಕಾತರದಿಂದ ಕಾಯುತ್ತಿದೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.