ಕಳೆದ 60 ವರ್ಷಗಳಲ್ಲಿಯೇ ಹಾಲಿವುಡ್ ಅತಿದೊಡ್ಡ ಮುಷ್ಕರಕ್ಕೆ ಸಾಕ್ಷಿಯಾಗಿದೆ. 1.71 ಲಕ್ಷ ಬರಹಗಾರರು-ಕಲಾವಿದರು ಬೀದಿಗೆ ಇಳಿದಿದ್ದಾರೆ. ಬ್ರಾಡ್ ಪಿಟ್, ಜೆನಿಫರ್ ಲಾರೆನ್ಸ್ ಬೀದಿಗೆ ಇಳಿದಿದ್ದಾರೆ. ಇದಕ್ಕೆ ಕಾರಣವೇನು?
ನವದೆಹಲಿ (ಜು.15): ಹಾಲಿವುಡ್.. ಹೆಸರು ಕೇಳಿದಾಕ್ಷಣ ಕಣ್ಣೆದುರಿಗೆ ಬರುವ ಸಿನಿಮಾಗಳು ಅಲ್ಲಿನ ವರ್ಣರಂಜಿತ ವ್ಯಕ್ತಿತ್ವ ಲೆಕ್ಕವಿಲ್ಲದಷ್ಟು. ಇಂಥಾ ಹಾಲಿವುಡ್‌ಗೆ ಈಗ ಮುಷ್ಕರದ ಬಿಸಿ ತಟ್ಟಿದೆ. ಅಮೆರಿಕದಲ್ಲಿ ಹಾಲಿವುಡ್ ಬರಹಗಾರರ ಎರಡು ತಿಂಗಳ ಮುಷ್ಕರಕ್ಕೆ ಶುಕ್ರವಾರ ನಟರು ಕೂಡ ಕೈಜೋಡಿಸಿದ್ದಾರೆ. ಬಿಬಿಸಿ ವರದಿ ಮಾಡಿರುವ ಪ್ರಕಾರ ಕಳೆದ ಆರು ದಶಕಗಳಲ್ಲಿ ಹಾಲಿವುಡ್‌ನಲ್ಲಿ ನಡೆದಿರುವ ಅತಿದೊಡ್ಡ ಮುಷ್ಕರ ಇದಾಗಿದೆ. ಮುಷ್ಕರದ ಸಮಯದಲ್ಲಿ ಯಾವುದೇ ಚಲನಚಿತ್ರದ ಶೂಟಿಂಗ್ ಅಥವಾ ಪ್ರಚಾರದಲ್ಲಿ ಭಾಗಿಯಾಗುವುದಿಲ್ಲ ಎಂದು ನಟರು ಘೋಷಣೆ ಮಾಡಿದ್ದಾರೆ. ಅವತಾರ್ ಹಾಗೂ ಗ್ಲಾಡಿಯೇಟರ್ ಸರಣಿಯ ಚಿತ್ರಗಳು ಶೂಟಿಂಗ್ ಹಂತದಲ್ಲಿರುವ ಈ ಮುಷ್ಕರ ನಿರ್ಮಾಪಕರ ಆತಂಕಕ್ಕೆ ಕಾರಣವಾಗಿದೆ. ಹಾಲಿವುಡ್‌ನ ಎರಡು ಯೂನಿಯನ್‌ಗಳು ಜಂಟಿಯಾಗಿ ಈ ಮುಷ್ಕರ ಆರಂಭ ಮಾಡಿವೆ. ಇದರಿಂದಾಗಿ ಸಿನಿಮಾ ನಿರ್ಮಾಣ ಹಾಗೂ ಭವಿಷ್ಯದ ಪ್ರಾಜೆಕ್ಟ್‌ಗಳು ಸದ್ಯಕ್ಕೆ ಅರ್ಧಕ್ಕೆ ನಿಂತಿವೆ. ಕ್ರಿಸ್ಟೋಫರ್ ನೋಲನ್‌ರ ಒಪೆನ್‌ಹೈಮರ್ ಚಲನಚಿತ್ರದಲ್ಲಿ ನಟಿಸಿರುವ ಮ್ಯಾಟ್ ಡ್ಯಾಮನ್, ಎಮಿಲಿ ಬ್ಲಂಟ್, ಸಿಲಿಯನ್ ಮರ್ಫಿ ಮತ್ತು ಫ್ಲಾರೆನ್ಸ್ ಪಗ್ ತಮ್ಮ ಚಿತ್ರದ ಪ್ರೀಮಿಯರ್‌ಅನ್ನು ತೊರೆದಿದ್ದಾರೆ. ಲಾಸ್ ಏಂಜಲೀಸ್‌ನಲ್ಲಿರುವ ನೆಟ್‌ಫ್ಲಿಕ್ಸ್ ಕಚೇರಿ ಎದುರು 1.71 ಲಕ್ಷಕ್ಕೂ ಹೆಚ್ಚು ಬರಹಗಾರರು ಮತ್ತು ನಟರು ಪ್ರತಿಭಟನೆ ನಡೆಸುತ್ತಿದ್ದಾರೆ.
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಕೆ ಹೆಚ್ಚಾಗುತ್ತಿರುವುದರಿಂದ ಕೆಲಸ ಸಿಗುತ್ತಿಲ್ಲ ಎನ್ನುವುದು ಒಂದೆಡೆಯಾಗಿದ್ದರೆ, ಇನ್ನೊಂದೆಡೆ ಬರಹಗಾರರಿಗೆ ಕಡಿಮೆ ವೇತನ ನೀಡುತ್ತಿರುವುದು ಮುಷ್ಕರಕ್ಕೆ ಕಾರಣವಾಗಿದೆ. ಇದಕ್ಕಾಗಿ ಹಾಲಿವುಡ್‌ನ ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ (ಎಸ್‌ಎಜಿ) ಮತ್ತು ಲೇಖಕರ ಒಕ್ಕೂಟ ಜಂಟಿಯಾಗಿ ಮುಷ್ಕರಕ್ಕೆ ಕರೆ ನೀಡಿದೆ. ಈ 11 ವಾರಗಳ ಸುದೀರ್ಘ ಬರಹಗಾರರ ಮುಷ್ಕರಕ್ಕೆ ಅನೇಕ ಹಾಲಿವುಡ್ ಸೆಲೆಬ್ರಿಟಿಗಳು ಬೆಂಬಲಿಸಿದ್ದಾರೆ. ಇವುಗಳಲ್ಲಿ ಬ್ರಾಡ್ ಪಿಟ್, ಪ್ರಸಿದ್ಧ ನಟ ಬ್ರ್ಯಾಡ್ ಪಿಟ್, ನಟಿ ಜೆನಿಫರ್ ಲಾರೆನ್ಸ್, ಭಾರತದ ನಟಿ ಪ್ರಿಯಾಂಕಾ ಚೋಪ್ರಾ, ಮೆರಿಲ್ ಸ್ಟ್ರೀಪ್, ಚಾರ್ಲಿಜ್ ಥರಾನ್, ಜೋಕ್ವಿನ್ ಫಿನಾಕ್ಸ್, ಜೇಮೀ ಲೀ ಕರ್ಟಿಸ್, ಒಲಿವಿಯಾ ವೈಲ್ಡ್, ಇವಾನ್ ಮೆಕ್‌ಗ್ರೆಗರ್ ಸೇರಿದ್ದಾರೆ. ಕಳೆದ 24 ಗಂಟೆಗಳಲ್ಲಿ, ಜಾರ್ಜ್ ಕ್ಲೂನಿ, ಜೋನ್ ಕುಸಾಕ್ ಮತ್ತು ಮಾರ್ಕ್ ರುಫಲೋ ಕೂಡ ಈ ಅಭಿಯಾನಕ್ಕೆ ತಮ್ಮ ಬೆಂಬಲವನ್ನು ನೀಡಿದ್ದಾರೆ.
HBO ನ ಸಕ್ಸೆಷನ್ ಸರಣಿಯ ಮುಖ್ಯ ನಟ ಬ್ರಿಯಾನ್ ಕಾಕ್ಸ್ ಈ ಬಗ್ಗೆ ಮಾತನಾಡಿದ್ದು, ಈ ಮುಷ್ಕರ ಇಡೀ ವರ್ಷ ಇರುವ ಸಾಧ್ಯತೆ ಇದೆ. ಚಲನಚಿತ್ರಗಳು ಹಾಗೂ ಸಿರೀಸ್‌ಗಳ ಪ್ರಸಾರದಲ್ಲಿ ಸಾಕಷ್ಟು ಹಣವಿದೆ. ಆದರೆ, ಪ್ರೊಡಕ್ಷನ್ ಹೌಸ್‌ಗಳು ಈ ಲಾಭವನ್ನು ಬರಹಗಾರರು ಮತ್ತು ನಟರೊಂದಿಗೆ ಹಂಚಿಕೊಳ್ಳುತ್ತಿಲ್ಲ. ಈ ಲಾಭದಿಂದ ನಮ್ಮನ್ನು ಹೊರಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ. ಪ್ರೊಡಕ್ಷನ್ ಹೌಸ್ ಗಳ ಅವ್ಯವಹಾರದಿಂದಾಗಿ ಉದ್ಯಮದಲ್ಲಿ ಬದುಕು ಕಟ್ಟಿಕೊಳ್ಳಲು ಪರದಾಡುವಂತಾಗಿದೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ. ನಟಿ ಫೆಲಿಸಿಯಾ ಡೇ ಮಾತನಾಡಿದ್ದು, ಇದೀಗ ಬದುಕಲು ಸಹ ಸಾಧ್ಯವಾಗದ ಪರಿಸ್ಥಿತಿ ಬಂದಿದೆ. ಹಣದ ಕೊರತೆಯಿಂದ ಮನೆಯಿಲ್ಲದ ಸಂಕಷ್ಟ ಎದುರಿಸುತ್ತಿದ್ದೇವೆ' ಎಂದು ಹೇಳಿದ್ದಾರೆ.
Artificial Intelligence: ಸಬ್ಯಸಾಚಿ ಉಡುಗೆಯಲ್ಲಿ ಹ್ಯಾರಿ ಪಾಟರ್ ತಂಡ..
ರೈಟರ್ಸ್ ಗಿಲ್ಡ್ ಆಫ್ ಅಮೇರಿಕಾ (WGA) ನಿಂದ 11,500 ಕಾರ್ಮಿಕರು ಮತ್ತು ಸ್ಕ್ರೀನ್ ಆಕ್ಟರ್ಸ್ ಗಿಲ್ಡ್-ಅಮೇರಿಕನ್ ಫೆಡರೇಶನ್ ಆಫ್ ಟೆಲಿವಿಷನ್ ಮತ್ತು ರೇಡಿಯೋ ಕಲಾವಿದರ ಒಕ್ಕೂಟದ (Seg-AFTRA) 1.60 ಲಕ್ಷ ಕಾರ್ಮಿಕರು ಮುಷ್ಕರದಲ್ಲಿದ್ದಾರೆ. ಹಾಲಿವುಡ್‌ನ ಹಲವು ಹಿರಿಯ ನಟರು ಕೂಡ ಅವರಿಗೆ ಬೆಂಬಲ ನೀಡಿದ್ದಾರೆ. ನೆಟ್‌ಫ್ಲಿಕ್ಸ್‌ನಂತಹ ಪ್ಲಾಟ್‌ಫಾರ್ಮ್‌ಗಳು ಅಮೆಜಾನ್, ಆಪಲ್‌ನೊಂದಿಗಿನ ಸ್ಟ್ರೀಮಿಂಗ್ ವಿವಾದವು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ ಎಂದು ಹೇಳಿವೆ.
ಯಶ್, ಪುನೀತ್ ರಾಜ್ ಕುಮಾರ್ ಸೇರಿ ಈ ಸುಂದರರನ್ನು ಸನ್ಯಾಸಿ ಮಾಡಿದ್ರೆ ಹೇಗಿರಬಹುದು?
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಹಾಯದಿಂದ ಹಾಲಿವುಡ್‌ನಲ್ಲಿ ಹೊಸ ಆಲೋಚನೆಗಳು, ಕಥೆಯ ಸಾಲುಗಳು, ಸಂಭಾಷಣೆಗಳು ಮತ್ತು ಸ್ಕ್ರಿಪ್ಟ್ ಬರವಣಿಗೆಯನ್ನು ಮಾಡಲಾಗುತ್ತಿದೆ. ಇದರಿಂದ ಬರಹಗಾರರಿಗೆ ಕೆಲಸ ಸಿಗುತ್ತಿಲ್ಲ. ರೈಟರ್ಸ್ ಯೂನಿಯನ್ ಮುಖ್ಯಸ್ಥ ಫ್ರಾನ್ ಡ್ರೆಸ್ಚರ್ ಪ್ರತಿ ದಿನ ಒಂದಲ್ಲಾ ಒಂದು ಪ್ರೊಡಕ್ಷನ್ ಹೌಸ್‌ನಿಂದ ಬರಹಗಾರರು ವಜಾಗೊಳ್ಳುತ್ತಿದ್ದಾರೆ. ಕೆಲಸ ಸಿಗುವುದು ಕೂಡ ಕಡಿಮೆಯಾಗಿದೆ. ರೈಟರ್‌ಗಳನ್ನು ಗಿಗ್ ವರ್ಕರ್ (ಡೆಲಿವರಿ ಬಾಯ್ಸ್) ರೀತಿ ನೋಡಲಾಗುತ್ತಿದೆ ಎಂದಿದ್ದಾರೆ. ಅದರೊಂದಿಗೆ ಹೆಚ್ಚಿನ ಪ್ರೊಡಕ್ಷನ್ ಹೌಸ್‌ಗಳು ಹಿನ್ನಲೆ ನಟರ ಪಾತ್ರಗಳನ್ನು ಎಐ ಕಾರಣದಿಂದಾಗಿ ಕತ್ತರಿಸುತ್ತಿವೆ. ಎಐ ಮೂಲಕ ಇವರ ಚಿತ್ರಗಳನ್ನು ಸ್ಕ್ಯಾನ್ ಮಾಡಿಕೊಂಡು ಒಂದು ದಿನದ ವೇತನ ನೀಡುತ್ತದೆ. ಆ ಬಳಿಕ, ಕಂಪನಿಗಳು ಚಿತ್ರದಲ್ಲಿ ಎಲ್ಲಿ ಬೇಕಾದರಲ್ಲಿ ಅವರ ಸ್ಕ್ಯಾನ್ ಎಐ ಕಾಪಿಗಳನ್ನು ಬಳಸಿಕೊಳ್ಳುತ್ತಿದೆ. ಇದಕ್ಕಾಗಿ ಒಮ್ಮೆ ಮಾತ್ರ ಅವರ ಒಪ್ಪಿಗೆ ಸಿಕ್ಕರೆ ಸಾಕಾಗಿರುತ್ತದೆ. ಪ್ರತಿ ಬಾರಿ ಅವರಿಗೆ ಹಣ ನೀಡಬೇಕಾದ ಪರಿಸ್ಥಿತಿಯೂ ಎದುರಾಗೋದಿಲ್ಲ.