ಏಷ್ಯಾನೆಟ್‌ ತಂಡದೊಂದಿಗೆ ಗ್ರ್ಯಾಮಿ ವಿಜೇತ: ಸಂಗೀತವನ್ನು ನೋಡುವ ದೃಷ್ಟಿಕೋನ ಬದಲಾಗಬೇಕು ಎಂದ ರಿಕ್ಕಿ ಕೇಜ್‌

By Sharath Sharma  |  First Published Jul 27, 2022, 1:13 PM IST

Ricky Kej with Asianet News: ಸಂಗೀತ ಕ್ಷೇತ್ರದ ದಿಗ್ಗಜ, ಕನ್ನಡಿಗ, ಎರಡು ಬಾರಿ ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕ್ಕಿ ಕೇಜ್‌ ಇಂದು ಏಷ್ಯಾನೆಟ್‌  ಸುವರ್ಣ ನ್ಯೂಸ್‌ ಕಚೇರಿಗೆ ಭೇಟಿ ನೀಡಿದರು. ಸಿಬ್ಬಂದಿಯೊಂದಿಗೆ ಆತ್ಮೀಯವಾಗಿ ಮಾತನಾಡಿದ ಅವರು ಕಮರ್ಷಿಯಲ್‌ ಸಂಗೀತ ಸಂಯೋಜನೆ ನಿಲ್ಲಿಸಿದ ಕಾರಣ ಹಂಚಿಕೊಂಡರು.


ಬೆಂಗಳೂರು: ಸಂಗೀತ ಮನಸಿನ ಆಳದಿಂದ ಬರಬೇಕು. ಸಂಗೀತ ಒಂದು ಕಲೆ ಅದನ್ನು ಕಮರ್ಷಿಯಲ್‌ ಆಗಿ ನೋಡಬಾರದು. ಕಲೆಯನ್ನು ಮಾರಾಟ ವಸ್ತುವಾಗಿ ಮಾಡಲಾಗಿದೆ. ಆದರೆ ಸಂಗೀತ ಮನಸ್ಸಿನ ಆಳದಿಂದ ಹೊರಬರಬೇಕು ಮತ್ತು ದೇಶದಲ್ಲಿ ಸದ್ಯ ಸಂಗೀತವನ್ನು ನೋಡುತ್ತಿರುವ ದೃಷ್ಟಿಕೋನ ಬದಲಾಗಬೇಕು ಎಂದು ಎರಡು ಬಾರಿ ಗ್ರ್ಯಾಮಿ ಪ್ರಶಸ್ತಿ ಗೆದ್ದಿರುವ ರಿಕ್ಕಿ ಕೇಜ್‌ ಅಭಿಪ್ರಾಯಪಟ್ಟರು. ಏಷ್ಯಾನೆಟ್‌ ಸುವರ್ಣ ವಾಹಿನಿಯ ಮನವಿಗೆ ಒಪ್ಪಿ ರಿಕ್ಕಿ ಕೇಜ್‌ ನ್ಯೂಸ್‌ ಜಿಂಗಲ್‌ ಸಂಯೋಜಿಸಿದ್ದಾರೆ. ಇದರ ಕೃತಜ್ಞಾರ್ಥವಾಗಿ ಇಂದು ಕಚೇರಿಗೆ ಆಹ್ವಾನಿಸಲಾಗಿತ್ತು. ಕನ್ನಡ ಪ್ರಭ ಮತ್ತು ಸುವರ್ಣ ನ್ಯೂಸ್‌ನ ಚೀಫ್‌ ಮೆಂಟರ್‌ ರವಿ ಹೆಗಡೆಯವರು ರಿಕ್ಕಿ ಕೇಜ್‌ರನ್ನು ಸ್ವಾಗತಿಸಿದರು. ನಂತರ ರವಿ ಹೆಗಡೆ, ಸುವರ್ಣ ನ್ಯೂಸ್‌ ಮುಖ್ಯ ಸಂಪಾದಕ ಅಜಿತ್‌ ಹನುಮಕ್ಕನವರ್‌ ಮತ್ತು ತಂಡದ ಇತರ ಹಿರಿಯ ಸದಸ್ಯರು ರಿಕ್ಕಿ ಕೇಜ್‌ರಿಗೆ ಸನ್ಮಾನಿಸಿದರು. ಈ ವೇಳೆ ಮನಬಿಚ್ಚಿ ಮಾತನಾಡಿದ ರಿಕ್ಕಿ ಕೇಜ್‌, ಸಂಗೀತವನ್ನು ದೇಶದಲ್ಲಿ ನೋಡುತ್ತಿರುವ ದೃಷ್ಟಿಕೋನ ಬದಲಾಗಬೇಕಿದೆ. ಈ ಬದಲಾವಣೆ ತರುವಲ್ಲಿ ಸುದ್ದಿ ವಾಹಿನಿಗಳ ಪಾತ್ರವೂ ಬಹಳ ಮುಖ್ಯ ಎಂದು ಅಭಿಪ್ರಾಯಪಟ್ಟರು. 

ವೃತ್ತಿ ಜೀವನ ಆರಂಭಿಸಿದಾಗ ಕಮರ್ಷಿಯಲ್‌ ಸಂಗೀತ ಸಂಯೋಜಿಸುತ್ತಿದ್ದ ಕೇಜ್‌, ಸಾವಿರಾರು ಜಿಂಗಲ್‌ಗಳನ್ನು ಮತ್ತು ಜಾಹಿರಾತುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಮೂರು ಸಾವಿರಕ್ಕೂ ಅಧಿಕ ಕಮರ್ಷಿಯಲ್‌ ಸಂಗೀತ ಸಂಯೋಜನೆ ಮಾಡಿಸಿದ ನಂತರ ಕೇಜ್‌ ಧೃಡ ನಿರ್ಧಾರಕ್ಕೆ ಬಂದಿದ್ದರು. ಸಂಗೀತ ವ್ಯಾಪಾರವಾಗಬಾರದು. ಇನ್ನು ಮುಂದೆ ಸಂಗೀತ ಸಂಯೋಜನೆ ಮನಸ್ಸಿನ ತೃಪ್ತಿಗಾಗಿ ಮತ್ತು ಪರಿಪೂರ್ಣ ಕಲೆಯಾಗಿ ಸ್ವೀಕರಿಸಲು ನಿರ್ಧರಿಸಿದರು. "ಸಂಗೀತ ಒಂದು ಅದ್ಭುತ ಕಲೆ. ಅದನ್ನು ಕಲೆಯಾಗಿಯೇ ನೋಡಬೇಕು. ಹಣಕ್ಕಾಗಿ ಕಮರ್ಷಿಯಲ್‌ ಸಂಗೀತ ಸಂಯೋಜನೆ ಮಾಡಿದ್ದೇನೆ. ಮೈಕ್ರೋಸಾಫ್ಟ್‌ನಿಂದ ಹಿಡಿದು ಪೆಪ್ಸಿ - ಕೋಲಾಗಳ ವರೆಗೆ ಜಾಹೀರಾತುಗಳಿಗೆ ಸಂಗೀತ ನೀಡಿದ್ದೇನೆ. ಕಾರ್ಪೊರೇಟ್‌ ಜಗತ್ತಿಗೆ ಸಂಗೀತದ ಶಕ್ತಿ ಅದಾಗಲೇ ಅರಿವಾಗಿತ್ತು. ಆದರೆ, ಕಮರ್ಷಿಯಲ್‌ ಸಂಗೀತದಿಂದ ದೂರಾಗಲು ನಿರ್ಧರಿಸಿದೆ. ಯಶಸ್ಸು ಸಿಗಲಿದೆಯಾ ಎಂಬ ಬಗ್ಗೆ ಚಿಂತಿಸಲಿಲ್ಲ," ಎಂದು ಕೇಜ್‌ ತಮ್ಮ ವೃತ್ತಿ ಜೀವನದಲ್ಲಿ ತೆಗೆದುಕೊಂಡ ಪ್ರಮುಖ ನಿರ್ಧಾರದ ಬಗ್ಗೆ ತಿಳಿಸಿದರು. 

Tap to resize

Latest Videos

"ರಾಜಾ ರವಿವರ್ಮ, ವ್ಯಾಂಕೋ ಚಿತರ್ಗಳನ್ನು ರಚಿಸುವಾಗ ಎಂದೂ ಇನ್ನೊಂದು ಗ್ಯಾಲರಿಗೆ ಹೋಗಿ ನೋಡುತ್ತಿರಲಿಲ್ಲ. ಅಥವಾ ಟ್ರೆಂಡ್‌ ಏನು, ಯಾವ ಬಣ್ಣಗಳು ಜನಪ್ರಿಯವಾಗಿದೆ ಎಂಬುದನ್ನು ಚಿಂತಿಸುತ್ತಿರಲಿಲ್ಲ. ಅವರ ಆತ್ಮದಿಂದ ಮಂಥನಗೊಂಡು ಚಿತ್ರಗಳು ಜೀವ ತಳೆಯುತ್ತಿತ್ತು. ಆ ಚಿತ್ರಗಳೇ ಅವರ ವ್ಯಕ್ತಿತ್ವವನ್ನು, ಕಲೆಯನ್ನು ತೋರಿಸುತ್ತವೆ. ಅದೇ ರೀತಿ ನಾನೂ ನನ್ನ ಮನಸ್ಸಿನ ಆಳದಲ್ಲಿ ಅನಿಸುವ ಸಂಗೀತ ಸಂಯೋಜಿಸಲು ಮುಂದಾದೆ. ನಾನೊಬ್ಬ ಪರಿಸರ ಪ್ರೇಮಿ. ಅದಕ್ಕಾಗಿಯೇ ನನ್ನ ಸಂಗೀತಗಳು ಪ್ರಕೃತಿಯನ್ನು ಬಿಂಬಿಸುತ್ತವೆ," ಎಂದರು. 

ಇದನ್ನೂ ಓದಿ: ಪ್ರಕೃತಿಯ ಒಳಿತಿಗೆ ಒಂದು ದಿರಿಸು ಮತ್ತೆ ಧರಿಸಿ: ರಿಕ್ಕಿ ಕೇಜ್‌

ಮುಂದುವರೆದ ಅವರು, "ವಿಶಾಲ್‌ ದಾದ್ಲಾನಿ ಎಎಪಿ ಪಕ್ಷದಲ್ಲಿ ಗುರುತಿಸಿಕೊಂಡವರು. ಜತೆಗೆ ಸಾಮಾಜಿಕ ಹೋರಾಟಗಳಲ್ಲಿಯೂ ಭಾಗಿಯಾಗುತ್ತಾರೆ. ಆದರೆ ಅವರ ಫೇಮಸ್‌ ಸಾಂಗ್‌ "ಶೀಲಾ ಕಿ ಜವಾನಿ." ಅದರ ಸಂಗೀತ ಮತ್ತು ಸಾಹಿತ್ಯ ಎರಡನ್ನೂ ಅವರೇ ನೀಡಿದ್ದಾರೆ. ದೇಶದ ಮಹಾನ್‌ ಪ್ರತಿಭೆ ಶಂಕರ್‌ ಮಹದೇವನ್‌. ಅವರ ಫೇಮಸ್‌ ಸಾಂಗ್‌ "ಕಜರಾರೇ, ಕಜರಾರೇ". ಈ ಹಾಡಿನಲ್ಲಿ ಹೆಣ್ಣನ್ನು ಕೆಟ್ಟ ರೀತಿಯಲ್ಲಿ ಚಿತ್ರಿಸಲಾಗಿದೆ. ಸಮಸ್ಯೆ ಏನಾಗಿದೆಯೆಂದರೆ, ಹಣ ನೀಡಿದ ನಂತರ ಸಂಗೀತ ರಚಿಸಲಾಗುತ್ತಿದೆ. ಆದರೆ ಕಲಾವಿದರು ಸಂಗೀತ ಮೊದಲು ರಚಿಸಬೇಕು, ನಂತರ ಅದನ್ನು ಮಾರಲಿ. ಅದರಿಂದ ಹಣ ಮಾಡಲಿ," ಎಂದು ರಿಕ್ಕಿ ಕೇಜ್‌ ಅಭಿಪ್ರಾಯಪಟ್ಟರು. 

ಇದನ್ನೂ ಓದಿ: Ricky Kej: ಗ್ರ್ಯಾಮಿ ವಿಜೇತ ರಿಕ್ಕಿ ಕೇಜ್‌ ಕನ್ನಡದ ಹೆಮ್ಮೆ: ಸಿಎಂ ಬೊಮ್ಮಾಯಿ

ರಿಕ್ಕಿ ಕೇಜ್‌ ಅವರ ಮಾತಿಗೆ ಪ್ರತಿಕ್ರಿಯಿಸಿದ ರವಿ ಹೆಗಡೆ, "ರಿಕ್ಕಿ ಕೇಜ್‌ ಅವರು ಮಿತಭಾಷಿ ಎಂದುಕೊಂಡಿದ್ದೆವು. ಆದರೆ ಅವರ ಸಿದ್ಧಾಂತವನ್ನು ಮತ್ತು ನಂಬಿದ ಆದರ್ಶಗಳನ್ನು ಸ್ಪಷ್ಟವಾಗಿ ಹೊರ ಹಾಕಿದ್ದಾರೆ. ಅವರ ಚಿಂತನೆಗಳು ನಮಗೆಲ್ಲರಿಗೂ ಮಾದರಿ. ಯಶಸ್ಸು ಸಿಗಲಿದೆ ಎಂಬ ಆಸೆಯಿಲ್ಲದೆ, ತಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಿದರೆ ಯಶಸ್ಸು ತಾನಾಗಿಯೇ ಹುಡುಕಿ ಬರುತ್ತದೆ ಎಂಬುದಕ್ಕೆ ರಿಕ್ಕಿ ಕೇಜ್‌ ಸಾಕ್ಷಿ. ಅವರ ಯಶಸ್ಸು ಇನ್ನೂ ಉತ್ತುಂಗಕ್ಕೆ ಹೋಗಲಿ," ಎಂದು ಆಶಿಸಿದರು.

click me!